:: ಗೋಹತ್ಯೆ ನಿಷೇದ ಕಾಯ್ದೆ ಬಗ್ಗೆ ಮಧುಚಂದ್ರ ಅಭಿಪ್ರಾಯ ::
ಇತ್ತೀಚೆಗೆ ಕರ್ನಾಟಕದಲ್ಲಿ "ಗೋಹತ್ಯೆ ನಿಷೇಧ ಕಾಯ್ದೆ" ಒಂದು ಬಗೆಯ ಚರ್ಚೆಗೆ ಆಸ್ಪದ ನೀಡಿದೆ. ಸ್ಪಂದನ ಅವರ ಲೇಖನವೂ ಅದರ ಒಂದು ತುಣುಕು. ಗೋಹತ್ಯೆಯ ಬಗ್ಗೆ ನಮ್ಮ ಸಂವಿಧಾನದಲ್ಲಿ ಹೇಳಿರುವ ವಿಚಾರ, ಧಾರ್ಮಿಕ ಹಿನ್ನೆಲೆಯಲ್ಲಿ ಗೋಹತ್ಯೆ ಯಾಕೆ ಕೂಡದು ಎಂಬ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೀರಾ..ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಸಂವಿಧಾನವು ನಿಮಗೆ ನೀಡಿದೆ. ಆದರೆ ಈ ಬಗ್ಗೆ ನನ್ನ ಕೆಲವು ತಕರಾರುಗಳಿವೆ ಅದನ್ನು ನಾನು ಹೇಳಲು ಇಚ್ಚಿಸುತ್ತೇನೆ :
ಗೋವು,ಗೋಮಾತೆ,ಗೋಸಗಣಿ,ಗೋಮೂತ್ರ ಇವಲ್ಲವೂ ನಮಗೆ ದೇವರ ಸಮಾನ, ಅದರಿಂದ ನಾವು ಬೇಕಾದಷ್ಟು ಅನುಕೂಲವನ್ನು ಪಡೆಯುತ್ತೇವೆ.ಮಾನವೀಯ ಹಿನ್ನೆಲೆಯಲ್ಲಿ ನೋಡಿದಾಗಲೂ 'ಗೋವನ್ನು ಮಾತ್ರ' ಸಾಯಿಸುವುದನ್ನು ಮಾತ್ರ ನಿಷೇದ ಮಾಡಬೇಕು ಎಂಬಂತೆ ಏಕರೀತಿಯಲ್ಲಿ ವಾದಿಸಿದ್ದಾರೆ. ಆಯ್ತು ಗೋಹತ್ಯೆ ಮಾತ್ರ ನಿಷೇದ ಮಾಡೋಣ ಆದರೆ ನಿಮ್ಮ ದೃಷ್ಢಿಯಲ್ಲಿ ಬೇರೆ ಪ್ರಾಣಿಗಳು ಜೀವಿಗಳಲ್ಲವೇ? ಅವುಗಳಿಗೂ ಜೀವ ಅನ್ನೋದು ಇರುತ್ತದೆಯಲ್ಲವೇ,ಜೀವ ಅಥವಾ ಉಸಿರು ಎನ್ನುವುದು ಗೋವು ಮತ್ತು ಇತರ ಜೀವಿಗಳಿಗೂ ಅಂದರೆ ಕುರಿ,ಕೋಳಿ ಇನ್ನಿತರ ಬೇರೆ ಬೇರೆಪ್ರಾಣಿಗಳಿಗೆ ಬೇರೆ ಬೇರೆ ಇದಿಯೇ ಅನ್ನುವುದು ಯೋಚಿಸಬೇಕಾದ ವಿಚಾರ.
ಬಸವಣ್ಣನವರ "ಧಯೆ ಇರಬೇಕು ಸಕಲ ಪ್ರಾಣಿಗಳಲ್ಲಿ..."ಎಂಬ ವಾಕ್ಯ ಗೋವಿಗೆ ಸ್ವಲ್ಪ ಜಾಸ್ತಿ ಧಯೆ ಇರಲಿ ಅಂತಾ ಏನಾದ್ರೂ ಹೇಳಿದ್ದಾರೆಯೆ? ಹೀಗೆ ಮಾಡಿದರೆ "ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ನ" ಅಂದಂತಾಗುವುದಿಲ್ಲವೇ?ಮಾಡುವುದಿದ್
ಸಭೆ ಸಮಾರಂಭಗಳಲ್ಲಿ ನಿಂತು ಗೋವುಗಳ ಬಗ್ಗೆ ಕೇವಲ ಮಾತನಾಡುವವರಿಗೆ,ಎಲ್ಲೋ ಒಂದುಕಡೆ ಗೋವುಗಳ ಹೆಸರೇಳಿಕೊಂಡು ನೂರಿನ್ನೂರು ಹಸುಗಳಿಗೆ ಒಂದು ಮಠ ಕಟ್ಟಿಕೊಂಡು ಹಸುಗಳಿಗೆ ಶೃಂಗಾರ ಮಾಡಿಕೊಂಡು ಅವುಗಳ ಹೆಸರಲ್ಲೇ ಬೇಳೆ ಬೇಯಿಸಿಕೊಂಡು ಬೆಳದುಕೊಂಡಿರುವ ಮಠಾಧೀಶರ ಗೋವಿನ ಕಾಳಜಿ,ಪ್ರೀತಿಗಳು ಹಳ್ಳಿಯಲ್ಲಿ ದಿನನಿತ್ಯ ಅವುಗಳ ಒಡನಾಟದಲ್ಲೆ ಬೆಳೆಯುವ ಗ್ರಾಮೀಣ ಜನರು ಗೋವನ್ನು ಸಾಕುವಾಗ ಪಡುವ ಕಷ್ಟ,ಸುಖ ಅವುಗಳ ಮೇವಿಗೆ ಪರದಾಡುವ ಪರಿಸ್ಥಿತಿ ಎಂತದ್ದು ಎನ್ನುವುದಕ್ಕೆ ನಮ್ಮ ಮನೆಯಲ್ಲೇ ನಡೆದ ಒಂದು ಘಟನೆ ನೆನಪಾಗುತ್ತಿದೆ..ಈಗ್ಗೇ ಏಳೆಂಟು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಸುಮಾರು 25 ರಾಸು ದನಗಳು ಇದ್ದವು ಒಮ್ಮೆ ಮೇವಿಗಾಗಿ ಬೇರೊಬ್ಬರ ಜಮೀನಿಗೆ ನಮ್ಮ ಒಂದು ಹಸು ಮೇಯಲು ಹೋಗಿತ್ತು ಅದನ್ನು ನೋಡಿದ ಆ ಜಮೀನಿನ ಮಾಲೀಕ ಆ ಹಸುವಿಗೆ ದೊಣ್ಣೆಯಲ್ಲಿ ಬಾರಿಸಿದ ಹೊಡೆದ ರಭಸಕ್ಕೆ ಅದರ ಒಂದು ಮುಂಗಾಲು ಮುರಿದು ಯಾವುದೇ ರಿತಿಯ ಚಿಕಿತ್ಸೆಗೂ ವಾಸಿಯಾಗಲಿಲ್ಲ ಇದನ್ನು ನೋಡಿದ ನಮ್ಮ ತಂದೆ ಹಸುಗಳನ್ನು ಸಾಕುವ ಕಾರ್ಯಕ್ಕೆ ತಿಲಾಂಜಲಿ ಇಟ್ಟರು" ಈ ಸ್ತಿತಿಗೆ ಕಾರಣರಾರು?ಕಾಲು ಮುರಿದ ಹಸುವನ್ನು ಇಟ್ಟುಕೊಂಡು ಏನು ಮಾಡುವುದು? ಅದೂ ಅಲ್ಲದೇ ಹಸುವಿನ ಕಾಲು ಮುರಿದ ಜಮೀನಿನ ಮಾಲೀಕ ಗೋವಿನ ಬಗ್ಗೆ ಗಂಟೆ ಗಟ್ಟಲೆ ಮಾತನಾಡುವ ಒಂದು ಪಕ್ಷದ ಕಾರ್ಯಕರ್ತ ಎಂಬುದು ಒಂದು ಚೋದ್ಯದ ಸಂಗತಿ.ಎಷ್ಟೋಜನ ಮೇವಿನ ಕೊರತೆಯಿಂದ ಜಾನುವಾರು ಗಳನ್ನು ಮಾರುತ್ತಿರುವುದು ಒಂದು ನೋವಿನ ಸಂಗತಿ.ಇದರ ಬಗ್ಗೆ ಸರ್ಕಾರ ಗಮನ ಹರಿಸಿದೆಯಾ? ಇರುವ ಗೋಮಾಳಗಳನ್ನೆ ನೆಲಗಳ್ಲರು ನುಂಗಿಹಾಕಿದ್ದಾರೆ.ಗೋವಿನ ಬಗ್ಗೆ ಮಾತನಾಡುವ ಜನರು ಎಷ್ಟು ಜನ ಗೋವನ್ನು ಸಾಕಿದ್ದಾರೆ.ಅಷ್ಟೊಂದು ಇಚ್ಚೆ ಇದ್ದರೇ ಗೋವುಗಳನ್ನು ದತ್ತು ತೆಗೆದುಕೊಂಡು ಸಾಕಲಿ.
ಗೋಹತ್ಯೆ ಬಗ್ಗೆ ಮಾತನಾಡುವಾಗ ವಾಸ್ತವ ಸ್ಥಿತಿಯನ್ನು ತಿಳಿದುಕೋಡು ಮಾತಾನಾಡುವುದು ಒಳಿತು.ವಯಸ್ಸಾದ,ನಿರುಪಯುಕ್ತ ಗೊಡ್ಡು ದನಗಳನ್ನು ಇಟ್ಟುಕೊಂಡು ರೈತರು ಏನು ಮಡುವುದು?ಇಂತಹ ದನಗಳನ್ನು ಕೇವಲ ಸಗಣಿಗೋಸ್ಕರ ಇಟ್ಟುಕೊಂಡರೆ ಅವುಗಳನ್ನು ಜೀವಮಾನವಿಡಿ ಸಾಕಲು ರೈತರು ಏನು ಮಾಡಬೇಕು? ಇವುಗಳ ಬಗ್ಗೆಯೂ ಯೋಚಿಸಬೇಕಾಗುತ್ತದೆ.
ಈಗಿನ ಸ್ಥಿತಿಯಲ್ಲಿ 1ಕಿಲೊ ಕೋಳಿ ಮಾಂಸ 100ರೂ,ಕುರಿ ಮತ್ತು ಮೇಕೆ ಮಾಂಸ 250ರಿಂದ 300ರೂಗಳು ಗ್ರಾಮೀಣ ಜನರ ಒಂದು ದಿನದ ಕೂಲಿ 60 ರೂಗಳು ,ಇವರು ಪಡೆಯುವ ಕೂಲಿ ಅವತ್ತಿನ ತುತ್ತಿಗೆ ಸಮ.ಇಂಥದ್ದರಲ್ಲಿ ಬಡ ಜನರು ಅಷ್ಟು ಬೆಲೆ ತೆತ್ತು ಬೇರೆ ಮಾಂಸಹಾರವನ್ನು ಸೇವಿಸಲು ಸಾದ್ಯವೇ ಅಥವಾ ಇಂಥಹವರಿಗೆ ಗೋಹತ್ಯೆ ನಿಷೇದ ಮಾಡಿರುವ ಸರ್ಕಾರ ರಿಯಾಯ್ತಿ ಧರದಲ್ಲಿ ಕುರಿ,ಕೋಳಿ ಮಾಂಸವನ್ನು ಪೂರೈಸುತ್ತದೆಯೇ? ಅಥವಾ ನಾವ್ಯಾಕೆ ಕೊಡಿಸಬೇಕು ಎಂದರೆ ಪರೋಕ್ಷವಾಗಿ ಅವರ ಆಹಾರದ ಹಕ್ಕನ್ನು ಕಿತ್ತುಕೊಂಡಂತೆ ಆಗುವುದಿಲ್ಲವೇ? ಅಖಂಡ ಸ್ವತಂತ್ರ ಭಾರತದಲ್ಲಿ ಮೂಲಭೂತ ಅವಶ್ಯಕವಾದ ಆಹಾರದ ಸ್ವಾತಂತ್ರ್ಯವನ್ನು ಕಸಿದಂತಾಗುವುದಿಲ್ಲವೇ?
ಈಗಿನ ಪರಿಸ್ತಿತಿಯಲ್ಲಿ ಗೋಹತ್ಯೆ ನಿಷೇದ ಮಾಡಿದರೆ ಗೋಮಾಂಸದ ಕೊರತೆಯನ್ನು ಕುರಿ,ಕೋಳಿ ಮಾಂಸಗಳಿಂದ ಜನರಿಗೆ ಬೇಕಾದ ಮಾಂಸವನ್ನು ಒದಗಿಸಬಹುದೆ? ಇದನ್ನೆ ನಂಬಿಕೊಂಡ ಮತ್ತು ಚರ್ಮೋದ್ಯಮವನ್ನೆ ಬದುಕಾಗಿಸಿಕೊಂಡ ಜನರ ಗತಿಯೇನು?
ಒಂದುವೇಳೆ ಗೋವುಗಳನ್ನು ಸಾಯುವವರೆಗೂ ಮನೆಯಲ್ಲಿಟ್ಟುಕೊಂಡರೆ ಅವುಗಳಿಗೆ ಆಹಾರವನ್ನು ಯಾವ ರೀತಿ ಪೂರೈಸುವುದು,ಜನಗಳಿಗೆ ಆಹಾರದ ಕೊರತೆ ಉಂಟಾಗಿರುವಾಗ ಜನರ ಜೊತೆ ಪ್ರಾಣಿಗಳ ಗೋಳನ್ನು ಹೇಗೆ ಸಹಿಸುವುದು.ಇದರಿಂದ ಪರಿಸರದ ಮೇಲೆ ಒಂದು ತರಹದ inbalance ಉಂಟಾಗುವುದಿಲ್ಲವೇ?
ಆಳುವ ಸರ್ಕಾರ ಗೋಹತ್ಯೆ ನೀಷೇದ ಮಾಡಿರುವುದು ಒಂದು ತರಹ ಸಾರಾಯಿ ನಿಷೇದ ಮಾಡಿರುವ ರೀತಿಯಾಗಿದೆ.ಹೇಗೆಂದರೆ ಸಾರಾಯಿ ನಿಷೇದ "ಸಂಪೂರ್ಣ ಪಾನ ನಿಷೇದ"ವಾಗಲಿಲ್ಲ ಸರ್ಕಾರಕ್ಕೆ ಇಚ್ಚೆಯಿದ್ದಲ್ಲಿ ಎಲ್ಲಾ ರೀತಿಯ ಮದ್ಯವನ್ನು ನಿಷೇದ ಮಾಡಲಿ ಅದೇ ತರಹ ಸಂಪೂರ್ಣ ಮಾಂಸಹಾರವನ್ನು ನಿಷೇದ ಮಾಡಲಿ.ಅದು ಬಿಟ್ಟು ಕೇವಲ ಗೋಮಾಂಸವನ್ನು ನಿಷೇದ ಮಾಡುವುದಕ್ಕೆ ನನ್ನ ವಿರೋದವಿದೆ.
ಸರಿಯಾಗಿ ಜನರಿಗೆ ರೇಷನ್ ಕಾರ್ಡ್ ಕೊಡದ ಸರ್ಕಾರ ಗೋಹತ್ಯೆಗೆ ಯಾಕೆ ಇಷ್ಟೊಂದು ಪ್ರಾಮುಖ್ಯ ನೀಡುತ್ತಿದಿಯೊ ಗೊತ್ತಿಲ್ಲ.ಸಂವಿದಾನದಲ್ಲಿ ಉಲ್ಲೇಖಿಸಿದ ಗೋವಿನ ಬಗ್ಗೆ ಯೋಚಿಸುವ ಸರ್ಕಾರ ಮತ್ತು ಜನರು ಇನ್ನಿತರ ಅಂಶಗಳಾದ ಸಮಾನತೆ,ಜಾತ್ಯತೀತತೆ,ಅಶ್ಪ್ರಸ್ಯತೆ ನಿರ್ಮೂಲನೆ ಬಗ್ಗೆ ಯಾಕೆ ನೈಜ ಕಾಳಜಿ ವಹಿಸುತ್ತಿಲ್ಲ .ಗೋವುಗಳ ಬಗ್ಗೆ ವಿಪರೀತ ಕಾಳಜಿ ತೋರಿಸುವ ಮಠಾಧೀಶರು ಮೇಲಿನ ಸಮಸ್ಯೆಗಳ ನಿರ್ಮೂಲನೆಗೆ ಎಷ್ಟು ಪ್ರಾಮಾಣಿಕಾವಾಗಿ ಪ್ರಯತ್ನಿಸಿದ್ದಾರೆ. ಅಥವಾ ಅವರುಗಳ ಲೆಕ್ಕದಲ್ಲಿ ಇವುಗಳೆಲ್ಲಾ ಸಮಸ್ಯೆಗಳೇ ಅಲ್ಲವೇ?
ಕೆಲವು ರಾಜಕೀಯ ಪಕ್ಷಗಳಿಗೆ 'ಗೋಹತ್ಯೆ ನಿಷೇದ' ಮತ್ತು ರಾಮ ಮಂದಿರ ವಿಷಯಗಳೆ ರಾಜಕೀಯದ ಪ್ರಣಾಳಿಕೆಗಳಾಗಿವೆ ಇವುಗಳ ಮೂಲಕ ಹಿಂದೂ ಮತ ಬ್ಯಾಂಕನ್ನು ಓಲೈಸುವ ,ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ರಾಜಕೀಯ ಲಾಭ ಪಡೆಯುವ ಒಂದು ಹುನ್ನಾರವಾಗಿದೆ.ಇವು ಸಮಾಜದ ಸ್ವಾಸ್ತ್ಯವನ್ನು ಹದಗೆಡಿಸುತ್ತಿವೆ. ಸರ್ಕಾರಕ್ಕೆ ಹಾಸಿ ಹೊದ್ದುಕೊಳ್ಲುವಷ್ಟು ಸಮಸ್ಯೆಗಳಿರುವಾಗ ಕೆಲಸಕ್ಕೆ ಬಾರದ ಇಂತಹ ವಿಷಯಗಳ ಗಮನ ಕೊಡುತ್ತಿರುವುದು ಸಮಾಜದ ಶೋಚನೀಯ ಸ್ಥಿತಿ ಎನ್ನದೇ ಬೇರೆ ವಿಧಿಯಿಲ್ಲ..
- ಮಧುಚಂದ್ರ ಬಿ.ಆರ್.
ಕಿರಿಯ ಸಹಾಯಕ, ಒಳಾಡಳಿತ ಇಲಾಖೆ
ಕಿರಿಯ ಸಹಾಯಕ, ಒಳಾಡಳಿತ ಇಲಾಖೆ
( madhu.chndr@gmail.com )

