ಮೆಟ್ಟಿಲುಗಳು....
ಕಾಡುತ್ತಿವೆ ನನಗೆ
ಈ ಮೆಟ್ಟಿಲುಗಳು.
ಸುರುಳಿ, ಸುರುಳಿಯಾಗಿ ಮೇಲೇರಿ
ನಭಕೆ ಚುಂಬಿಸುತ್ತಿವೆ.
ಹತ್ತಲಾರೆನೆಂದು ಅಡಿಯಲ್ಲಿದ್ದೆ.
ಅಶಕ್ತ ಕೈಗಳಾಸರೆಯಲಿ ಹತ್ತಿಬಿಟ್ಟ.
ಹತ್ತಿದವನೊಬ್ಬ ಸುಲಭದಲಿ ಇಳಿದು;
ಮತ್ತೆ ಹತ್ತಿದ.
ನನ್ನೊಡನಿದ್ದವರು;
ನನ್ನಿಂದೆ ಬಂದವರು ಎಲ್ಲರೂ
ಮೆಟ್ಟಿಲುಗಳ ಏರಿ, ಮೀರಿ
ಮುಗಿಲೆಡೆ ಇದ್ದರು.
ನಾ ಮಾತ್ರ ಇದ್ದಲೇ ಇದ್ದೆ.
ದಿಟ್ಟಿಸುತ್ತಿದ್ದೆ ಅವನ್ನೇ,
ಮೂರ್ತವಾದ ಇವು
ಅಮೂರ್ತವಾದದ್ದೇನೋ ಹೇಳುತ್ತಿದ್ದವು.
ಅಮೂರ್ತವ ಅರ್ಥೈಸಿಕೊಳ್ಳುವುದರಲ್ಲಿ
ಮೀರಿತ್ತು ಮೆಟ್ಟಿಲೇರುವ ಸಮಯ.
******
ಕುರುಡ...
ರೈಲಿನಲ್ಲಿ ನಿದ್ದೆಯಲ್ಲಿದ್ದೆ,
ಇಂಪಾದ ಧ್ವನಿಯೊಂದು ತೇಲಿ ಬಂತು.
ಗಾನ ಕುರುಡನದು; ಬಿಕ್ಷೆಗಾಗಿ.
ಜನರು ಜಾಸ್ತಿ,
ಎದ್ದರೆ ಸ್ಥಾನ ವಂಚನೆಯ ಭಯ.
ಅಂತರಾತ್ಮ ಮರಗುತ್ತಿತ್ತು.
ತೊಳಲಾಟದಲ್ಲಿ ಅಂತಾತ್ಮ ಸೋತಿತು.
ನೋಡುತ್ತಿದ್ದೆ ಅವನನ್ನೇ...
ಇವುಗಳನ್ನೆಲ್ಲವ ಮೀರಿ ಮುಂದೆ ಸಾಗುತಿದ್ದ...
***** ಸಂತೋಷ್ ಸಿಹಿಮೊಗೆ