06 April 2013

ದಿನಾಂಕ: 6.4.2013ರ ಸಭೆಯ ನಡವಳಿ

ಮಾನ್ಯ ಸದಸ್ಯರೆ,
ಬಹಳ ದಿನಗಳ ನಂತರ ಮನನ ತಂಡದ ಬಹುತೇಕ ಸದಸ್ಯರು ಇಂದು ಸಭೆ ಸೇರಿದ್ದರ ವಿಶೇಷದೊಂದಿಗೆ ಅತ್ಯುತ್ತಮ ವಿಷಯಗಳು ಚರ್ಚೆಗೆ ಬಂದಿದ್ದು ನಿಜಕ್ಕೂ ಮನನದ ಜೀವಂತಿಕೆಗೆ ಸಾಕ್ಷಿಯಾಗಿತ್ತು. ಜ್ಞಾನದ ಒರತೆ ಸದಾ ಬತ್ತದಿರಲೆಂಬ ನಮ್ಮ ಆಶಯಕ್ಕೆ ಹೊಸ ಚೈತನ್ಯ ಮೂಡಿದ್ದಂತೂ ನಿಜ.

ಮೊದಲಿಗೆ ಹೊಸ ಸದಸ್ಯರಾದ ಆರಾಧ್ಯ, ರಾಜಶೇಖರ್ ಹಾಗೂ ಈರಪ್ಪ ರವರುಗಳನ್ನು ಸ್ವಾಗತಿಸಲಾಯಿತು.

ಮೊದಲಿಗೆ ದೇವನೂರುಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಕೃತಿಯ 'ನನ್ನ ದೇವರು' ಎಂಬ ಲೇಖನವನ್ನು ಮಂಜುರವರು ಓದಿದರು. 

ನಂತರ ಮೊದಲಿಗೆ ಮಾತನಾಡಿದ ನಮ್ಮ ತಂಡದ ವಾಗ್ಮಿಗಳೂ ಆದ ಶಾಂತರಾಮ್ ಅವರು 'ಮನನ' ಅಧ್ಯಯನವನ್ನು ಜೀವಪರವಾಗಿಸುವ ನಿಟ್ಟಿನಲ್ಲಿ ದಿನಪತ್ರಿಕೆಗಳಲ್ಲಿ ವಿಶೇಷವಾಗಿ 'ಪ್ರಜಾವಾಣಿ'ಯಲ್ಲಿ ಚರ್ಚೆಗೊಳಗಾಗುತ್ತಿರುವ 'ಜಾತಿ ಸಂವಾದ' 'ವಚನ ಚಳವಳಿ' ಹಾಗೂ ಮಹಿಳಾ ವಿಷಯಗಳ ಬಗೆಗಿನ ಚರ್ಚೆಯ ಲೇಖನಗಳನ್ನು ಓದಿ ಅವುಗಳ ಬಗ್ಗೆ ಅಧ್ಯಯನ / ಚರ್ಚೆ ನಡೆಸುವುದು ಸೂಕ್ತವಾಗಿರುವುದಾಗಿ ತಿಳಿಸಿದರು. ಹಾಗೆಯೇ ಅವರು ಓದಿದ ಮಹಿಳಾ ಸಂವೇದನೆ ಕುರಿತ ಲೇಖನದಲ್ಲಿ 'ಮನೆ ಕೆಲಸ ಹೊರೆಯಲ್ಲ' ಎನ್ನುವ ಲೇಖನದ ಬಗ್ಗೆ ಮಾತನಾಡುತ್ತಾ ಇದು ದುಡಿಯುವ ಮಹಿಳೆಯರಲ್ಲಿ ಹೆಚ್ಚು ಕಾಡುತ್ತಿರುವ ವಿಷಯವಾಗಿದ್ದು ಮನೆಯಲ್ಲಿ ಗಂಡಸರೂ ಸಹ ಮನೆಕೆಲಸದಲ್ಲಿ ನೆರವಾದರೆ ಅಂತಹ ಕೆಲಸ ಯಾವತ್ತೂ ಹೊರೆಯಾಗುವುದಿಲ್ಲ... ಹೀಗೆ ನಾವು ನಮ್ಮನ್ನು ಕಾಡುವ ವಿಷಯಗಳ ಬಗ್ಗೆ ಸಾಮಾಜಿಕ ಪರಿಭಾಷೆಯಲ್ಲಿ ಅರ್ಥೈಸುವ ಪ್ರಯತ್ನಪಟ್ಟಲ್ಲಿ ಸಮಾಜಮುಖಿ ಚರ್ಚೆಗಳಿಗೆ ಮತ್ತಷ್ಟು ನಾವು ವಿಸ್ತಾರಗೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಸೀನುರವರು 'ಸೇವೆ ಮಾಡುವವರಿದ್ದರೆ ಸುಮ್ಮನೆ ಕೂತಿರುವವರಿಗೂ ಮಂಡಿ ನೋವು' ಎಂಬ ಗಾದೆಯಂತೆ ಕೆಲವು ಮನೆಗಳಲ್ಲಿ ನೆರವಾದಾಕ್ಷಣಕ್ಕೇ ಅವಲಂಬನೆ ಹೆಚ್ಚಾಗಿಬಿಡುವು ಸಾಧ್ಯತೆಗಳಿರುವುದಾಗಿ ತಿಳಿಸಿದರು. ಇದಕ್ಕೆ ಮನನದ ಇತರ ಸದಸ್ಯರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ವೈಯಕ್ತಿಕವಾದ ಸಮಸ್ಯೆಗಳನ್ನು ಸಾರ್ವಜನಿಕ ನೆಲೆಗಟ್ಟಿನಲ್ಲಿ ಚರ್ಚಿಸುವುದು ಸೂಕ್ತವಾಗಿರುವುದಿಲ್ಲವಾದ್ದರಿಂದ ಮತ್ತು ಪ್ರತಿ ವೈಯಕ್ತಿಕ ಸಮಸ್ಯೆಗಳೂ ಸಹ ಏಕ ರೀತಿಯ ಪರಿಹಾರಗಳನ್ನು ಹೊಂದಿರುವುದಿಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸದ ಮಂಜುರವರು 'ವುಮೆನಿಸಮ್' ಅಥವಾ ಮಹಿಳಾ ಸಮಸ್ಯೆಗಳೆನ್ನುವುದು ದೇಶದ ಸಾಮಾಜಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಒಳನೋಟಗಳನ್ನು ಹೊಂದಿದ್ದು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರಕರಣವನ್ನು ನಾವು ನಮ್ಮ ಮನೆಗಳಲ್ಲಿಯೇ ಹೇಗೆ ಚರ್ಚಿಸುತ್ತಿದ್ದೇವೆ ಅದಕ್ಕೆ ಯಾವ ರೀತಿಯ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದೇವೆ ಮತ್ತು ನಿಜಕ್ಕೂ ಗಂಭೀರ ಸಮಸ್ಯೆಗಳನ್ನು ನಾವು ನಮ್ಮ ಮನೆಯ ಹೆಣ್ಣು / ಗಂಡು ಮಕ್ಕಳ ಜೊತೆ ಚರ್ಚಿಸುತ್ತಿದ್ದೇವೆಯೇ ಎಂಬ ಪ್ರಶ್ನೆಗಳನ್ನು ಎತ್ತಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಂತರಾಮ್ ರವರು ಸಮಾಜವು ಕುಟುಂಬಗಳಿಂದ ರೂಪುಗೊಂಡಿರುವುದರಿಂದ ಮೊದಲು ನಾವು ನಮ್ಮ ಮನೆಯ ಒಳಗೆ ಸಮಾನತೆಯ ವಾತಾವರಣವನ್ನು ನಿರ್ಮಿಸಿದಲ್ಲಿ ಇದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ್ ರವರು ಇಂದಿನ ನಾಗರಿಕ ಪ್ರಪಂಚದಲ್ಲಿ ಎಲ್ಲರೂ ಒಂದು ರೀತಿಯ ಕಂಫರ್ಟ್ ವಲಯವನ್ನು ಆಶ್ರಯಿಸುತ್ತಿರುವುದರಿಂದ ಗಂಭೀರ ಸಮಸ್ಯೆಗಳತ್ತ ಮುಖಮಾಡದೆ ಕೇವಲ ವೈಯಕ್ತಿಕ ಸಮಸ್ಯೆಗಳನ್ನೇ ಅಥವಾ ವೈಯಕ್ತಿಕ ಕ್ಷೇಮವನ್ನಷ್ಟೇ ನೋಡುತ್ತಿದ್ದಾರೆಂದು ತಿಳಿಸಿದರು.

ನಂತರ ಮಾತನಾಡಿದ ರಾಜಶೇಖರ್ ರವರು ಇದಕ್ಕೆಲ್ಲಾ ಗ್ಲೋಬಲೈಜೇಷನ್, ಲಿಬರಲೈಜೇಷನ್ ಮತ್ತು ಪ್ರೈವಟೈಜೇಷನ್ ಕಾರಣವಾಗಿದ್ದು ಅಗತ್ಯಗಳನ್ನು ಹೆಚ್ಚು ಮಾಡಿಕೊಳ್ಳುತ್ತಾ ಒಬ್ಬರೊಬ್ಬರ ನಡುವೆ ಅಂತರವನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆಯೆ ಹೊರತು ಕೂಡಿಬಾಳುವ ಸಂಸರ್ಗದಿಂದ ಹೊರತಾಗುತ್ತಿದ್ದೇವೆ ಎಂದು ತಿಳಿಸಿದರು.

ನಂತರ ಮಾತನಾಡಿದ ರೇವಪ್ಪ, ಅವರು ಗಮನಿಸುತ್ತಿರುವಂತೆ ಇತ್ತೀಚೆಗೆ ವ್ಯಕ್ತಿಯ ಗುಣವಿಶೇಷಗಳಿಂದ ಅಭಿವ್ಯಕ್ತಿಗೊಳಿಸುವುದು ಸಾಧ್ಯವಾಗುತ್ತಿಲ್ಲವಾದ್ದರಿಂದ ಇದರ ಬಗ್ಗೆ ಹೆಚ್ಚು ನಮ್ಮನ್ನು ಚರ್ಚೆಗೆ ಒಡ್ಡಿಕೊಳ್ಳುವುದು ಸೂಕ್ತವೆಂದು ತಿಳಿಸಿದರು. ಅಂದರೆ ನಮ್ಮ ನಡುವೆಯಿರುವ ಜನರಲ್ಲಿ ಗುಣವಿಶೇಷಗಳಿಂದ ಪಡಿಮೂಡುವ ಒಂದು ವ್ಯಕ್ತಿತ್ವದ ಕೊರತೆ ಎದ್ದುಕಾಣುತ್ತಿರುವುದು ಮತ್ತು ಎಲ್ಲರೂ ಏಕತನಾತೆಯಿಂದ ಬಳಲುತ್ತಿರುವುದು ಕಂಡುಬರುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಸಂಬಂಧಿಸಿದಂತೆ ಸೀನು, ಗುರುಸ್ವಾಮಿ, ಲಕ್ಷ್ಮಣ್, ಗುರುಪ್ರಕಾಶ್ ಎಲ್ಲರೂ ಸಹ 'ಹಾಗೆ ಭಿನ್ನವಾಗಿ ರೂಪಿತಗೊಳ್ಳುವುದಕ್ಕೆ ಇಂದು ಯಾರ ವ್ಯಕ್ತಿತ್ವವು ಸಹ ಸಮಾಜಮುಖಿಯಾಗಿಯಾಗಲಿ ಅಥವಾ ಇನ್ನಾವುದೋ ರೂಪದಲ್ಲಿ ಆದರ್ಶಪ್ರಾಯವಾಗಿ ಕಾಣುತ್ತಿಲ್ಲ. ಎಲ್ಲರೂ ಸಹ ತಮ್ಮ ತಮ್ಮ ವೈಯಕ್ತಿಕ ನೆಲಗಟ್ಟಿನಲ್ಲಿಯೇ 'ಅಗತ್ಯ'ಗಳನ್ನು ಪೂರೈಸಿಕೊಳ್ಳಲು ಹೆಣಗಾಡುತ್ತಿರುವುದರಿಂದ ಮೌಲ್ಯಗಳನ್ನು ರೂ'ಢಿಸಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲವಾದ್ದರಿಂದ 'ಐಕಾನ್'ಗಳು ಕಾಣಸಿಗುತ್ತಿಲ್ಲವೆಂಬ ಕ್ರೂಢೀಕೃತ ಅಭಿಪ್ರಾಯವನ್ನು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಂಜುರವರು ವ್ಯಕ್ತಿತ್ವದ ಗುಣವಿಶೇಷಣಗಳು ವ್ಯಕ್ತಿಯಲ್ಲಿ ರೂಪುಗಳ್ಳುತ್ತಿಲ್ಲವೆಂದಲ್ಲ ನಾವು ಗುರುತಿಸುತ್ತಿಲ್ಲ; ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಈಗಲೂ ಸಹ ಎಷ್ಟೋ ಜನರು ತಮ್ಮ ತಮ್ಮ ಕಾಯಕ ತತ್ವದಲ್ಲಿಯೇ ಗುಣವಿಶೇಷಗಳನ್ನು ಮೌಲ್ಯಗಳನ್ನು ರೂಢಿಸಿಕೊಂಡಿದ್ದಾರೆಂದು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಆರಾಧ್ಯರವರು ತಮ್ಮ ಊರಿನ ಬಸ್ ಡ್ರೈವರ್ ಒಬ್ಬರು ಹಿಂಬರುವ ಬೇಗನೆ ಹೋಗಬೇಕೆಂದಿರುವ ಸೈಕಲ್ ಸವಾರನಿಗೂ ಸಹ ಬೇಸರಿಸಿಕೊಳ್ಳದೆ ದಾರಿಬಿಟ್ಟು ನಂತರ ತಾನು ಹೊರಡುವಂತಹ ಕಾಯಕತತ್ವವುಳ್ಳ ಜನರು ನಮ್ಮ ನಡುವೆ ಇದ್ದಾರೆ ಎಂದು ತಿಳಿಸಿದರು.

ನಂತರ ಮಾತನಾಡಿದ ಮಂಜುರವರು ಮನನ ಅಧ್ಯಯನ ಸಭೆಯನ್ನು ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರದಂದು ನಡೆಸಲು ಸದಸ್ಯರೆಲ್ಲರ ಒಪ್ಪಿಗೆಯಿದ್ದ; ಅಧ್ಯಯನವನ್ನು ಕ್ರಿಯಾಶೀಲವನ್ನಾಗಿಸಲು ಸಲಹೆ ನೀಡುವಂತೆ ಕೋರಿದರು ಮತ್ತು ಯಾವ ವಿಷಯವನ್ನು ಆಧ್ಯಯನಕ್ಕೆ ಒಳಪಡಿಸಬಹುದೆಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮಂಜುಳ ಮತ್ತು ಶ್ರೀಲಕ್ಷ್ಮಿರವರು ಸೇವಾ ವಲಯದಲ ವಿಷಯಗಳನ್ನು ಅಧ್ಯಯನಕ್ಕೆ ಒಳಪಡಿಸಿ ಚರ್ಚೆ ನಡೆಸಬಹುದು ಮತ್ತು ಇದರಿಂದ ಕ್ರಿಯಾವಂತಿಕೆಯನ್ನು ಕಾಪಾಡಿಕೊಳ್ಳಬಹುದೆಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಂತರಾಮ್ ಮತ್ತು ಇತರೆ ಸದಸ್ಯರು ಸೇವಾ ವಿಷಯಗಳನ್ನು ನಿರಂತರವಾಗಿ ಅಭ್ಯಸಿಸುವುದು ಮನನ ತಂಡದ ಒಂದು ಭಾಗವಾಗಿದ್ದು ಮುಂದೆ ಬರುವ ಸಭೆಯಲ್ಲಿ 'ಚುನಾವಣಾ ವಿಷಯ'ವನ್ನು ಅಧ್ಯಯನಕ್ಕೆ ಒಳಪಡಿಸಬಹುದಾಗಿದ್ದು, ಅದನ್ನು ಮೂರು ಆಯಾಮಗಳಲ್ಲಿ ಚರ್ಚಿಸಬಹುದಾಗಿದ್ದು 'ಸಂವಿಧಾನ', 'ಜಾತಿ', 'ಹಣ' ಹೀಗೆ ಅಧ್ಯಯನವನ್ನು ವಿಸ್ತರಿಸಿ ಹೆಚ್ಚು ಚರ್ಚೆಗೆ ಒಳಪಡಿಸಬಹುದಾಗಿ ತಿಳಿಸಿದರು.

ಇದಕ್ಕೆ ಉಳಿದ ಸದಸ್ಯರಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು; ಚುನಾವಣೆ ಎಂದರೆ ಅದು ವಿಸ್ತಾರ ಚರ್ಚೆಗೆ ಎಡೆಮಾಡಿಕೊಡುವುದರಿಂದ ಅದನ್ನು ಇತರೆ ವಿಷಯಗಳ ಜೊತೆ ಜೊತೆಯಾಗಿಯೇ ಅಭ್ಯಾಸ ಮಾಡಬಹುದೆಂದು ತಿಳಿಸಿದರು. 

ನಂತರ ಮಾತನಾಡಿದ ಸೀನುರವರು 'ಮನನ ತಂಡ'ದಿಂದ ಮಹಿಳೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ 'ನಾಟಕ'ವೊಂದನ್ನು ರಚಿಸಿ ಪ್ರಯೋಗಕ್ಕೆ ಒಳಪಡಿಸಬೇಕೆಂದು ತಿಳಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿದರು ಮತ್ತು ಇದು ಸುಮಾರು ಆರೇಳು ತಿಂಗಳ ಸತತ ಪ್ರಯತ್ನವಾದ್ದರಿಂದ ಮುಂಬರುವ ಸಭೆಗಳಲ್ಲಿ ಇದನ್ನು ಚರ್ಚಿಸಿ ನಾಟಕ ರಚನೆ ಮತ್ತು ಇತರೆ ತಾಂತ್ರಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಸಭೆಗೆ ತಿಳಿಸುವಂತೆ ಕೋರಲಾಯಿತು.

ನಂತರ ಮಂಜುರವರು ಮುಂದಿನ ಸಭೆಗೆ ಎಲ್ಲರೂ ಕನ್ನಡದ ಒಂದು ಸಣ್ಣಕತೆಯನ್ನು ಓದಿ ಸಭೆಯಲ್ಲಿ ಮಂಡಿಸುವಂತೆ ತಿಳಿಸಿದರು ಮತ್ತು ಆ ಕತೆಗಳಲ್ಲಿ ಒಂದನ್ನು ಆಯ್ದುಕೊಂಡು ಚರ್ಚೆಗೆ ಒಳಪಡಿಸಬಹುದೆಂದು ತಿಳಿಸಲಾಗಿ ಎಲ್ಲರೂ ಇದಕ್ಕೆ ಸಮ್ಮತಿಸಿದರು. ಮತ್ತು ಇದಕ್ಕೆ ಪೂರಕವಾಗಿ ರೇವಪ್ಪರವರು ಒಂದು ಸಣ್ಣ ಕತೆಯ ಹೇಳಿದರು. ಅದು ಹೀಗಿದೆ 'ಒಬ್ಬ ತಾಯಿ ತೀರಿಹೋಗಿದ್ದಾಳೆ. ಎಲ್ಲರೂ ಅವಳು ತೀರಿಹೋಗಿದ್ದಕ್ಕೆ ದುಃಖಿಸಿ ಅಳುತ್ತಿದ್ದರೆ ಪಕ್ಕದಲ್ಲಿದ್ದ ಮಗು ಹಸಿವಿನಿಂದ ಅಳುತ್ತಿತ್ತು'. ಕತೆಯನ್ನು ಎಲ್ಲರೂ ಮೆಚ್ಚಿಕೊಂಡರು. ನಂತರ ಮಂಜುರವರು ತೆಲುಗಿನ ಒಂದು ಸಣ್ಣ ಕತೆಯನ್ನು ಸಭೆಗೆ ಹೇಳಿದರು. ಕತೆ ಹೀಗಿದೆ : 'ಬಹಳ ದೊಡ್ಡ ಆಪರೇಷನ್, ತಾಯ ಗರ್ಭದಲ್ಲಿರುವಾಗಲೇ ಮಗು ತಿರುಗಿಬಿದ್ದಿತ್ತು. ಸುಧಾರಿಸಿಕೊಳ್ಳಲು ತಾಯಿಗೆ ಎರಡುಮೂರು ವರ್ಷಗಳೇ ಬೇಕಾದವು. ಈಗ ಇಪ್ಪತ್ತು ವರ್ಷಗಳ ನಂತರ ಮಗು ಮತ್ತೆ ತಿರುಗಿಬಿದ್ದಿದೆ. ಈಗ ಹೇಗೆ ತಾನೆ ಸಹಿಸಿಕೊಂಡಾಳು. 

ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು. 

ಸಭೆಯಲ್ಲಿ ಹಾಜರಿದ್ದವರು :
ಮಂಜುಳ, ಶ್ರೀಲಕ್ಷ್ಮಿ, ನಳಿನಾಕ್ಷಿ, ನಾಗರತ್ನ, ಗುರುಸ್ವಾಮಿ, ಲಕ್ಷ್ಮಣ್, ಮಹೇಂದ್ರ, ಮಂಜು, ಸೀನು, ರಾಜಶೇಖರ್, ಶಾಂತರಾಮ್, ರೇವಪ್ಪ, ಈರಪ್ಪ, ಆರಾಧ್ಯ, ದತ್ತರಾಜ್, ಗುರುಪ್ರಕಾಶ್, ಪರಶುರಾಮ್.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago