28 July 2010

ಗೋಹತ್ಯೆ ನಿಷೇದ ಕಾಯ್ದೆ ಬಗ್ಗೆ ಮಧುಚಂದ್ರ ಅಭಿಪ್ರಾಯ


:: ಗೋಹತ್ಯೆ ನಿಷೇದ ಕಾಯ್ದೆ ಬಗ್ಗೆ ಮಧುಚಂದ್ರ ಅಭಿಪ್ರಾಯ ::

ಇತ್ತೀಚೆಗೆ ಕರ್ನಾಟಕದಲ್ಲಿ "ಗೋಹತ್ಯೆ ನಿಷೇಧ ಕಾಯ್ದೆ" ಒಂದು ಬಗೆಯ ಚರ್ಚೆಗೆ ಆಸ್ಪದ ನೀಡಿದೆ.  ಸ್ಪಂದನ ಅವರ  ಲೇಖನವೂ ಅದರ ಒಂದು ತುಣುಕು. ಗೋಹತ್ಯೆಯ ಬಗ್ಗೆ ನಮ್ಮ ಸಂವಿಧಾನದಲ್ಲಿ ಹೇಳಿರುವ ವಿಚಾರ, ಧಾರ್ಮಿಕ ಹಿನ್ನೆಲೆಯಲ್ಲಿ ಗೋಹತ್ಯೆ ಯಾಕೆ ಕೂಡದು ಎಂಬ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೀರಾ..ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಸಂವಿಧಾನವು ನಿಮಗೆ ನೀಡಿದೆ. ಆದರೆ ಈ ಬಗ್ಗೆ ನನ್ನ ಕೆಲವು ತಕರಾರುಗಳಿವೆ ಅದನ್ನು ನಾನು ಹೇಳಲು ಇಚ್ಚಿಸುತ್ತೇನೆ :

ಗೋವು,ಗೋಮಾತೆ,ಗೋಸಗಣಿ,ಗೋಮೂತ್ರ ಇವಲ್ಲವೂ ನಮಗೆ ದೇವರ ಸಮಾನ, ಅದರಿಂದ ನಾವು ಬೇಕಾದಷ್ಟು ಅನುಕೂಲವನ್ನು ಪಡೆಯುತ್ತೇವೆ.ಮಾನವೀಯ ಹಿನ್ನೆಲೆಯಲ್ಲಿ  ನೋಡಿದಾಗಲೂ 'ಗೋವನ್ನು ಮಾತ್ರ' ಸಾಯಿಸುವುದನ್ನು ಮಾತ್ರ ನಿಷೇದ ಮಾಡಬೇಕು ಎಂಬಂತೆ ಏಕರೀತಿಯಲ್ಲಿ ವಾದಿಸಿದ್ದಾರೆ. ಆಯ್ತು ಗೋಹತ್ಯೆ ಮಾತ್ರ ನಿಷೇದ ಮಾಡೋಣ ಆದರೆ ನಿಮ್ಮ ದೃಷ್ಢಿಯಲ್ಲಿ ಬೇರೆ ಪ್ರಾಣಿಗಳು ಜೀವಿಗಳಲ್ಲವೇ? ಅವುಗಳಿಗೂ ಜೀವ ಅನ್ನೋದು ಇರುತ್ತದೆಯಲ್ಲವೇ,ಜೀವ ಅಥವಾ ಉಸಿರು ಎನ್ನುವುದು ಗೋವು  ಮತ್ತು ಇತರ ಜೀವಿಗಳಿಗೂ ಅಂದರೆ ಕುರಿ,ಕೋಳಿ ಇನ್ನಿತರ ಬೇರೆ ಬೇರೆಪ್ರಾಣಿಗಳಿಗೆ ಬೇರೆ ಬೇರೆ  ಇದಿಯೇ ಅನ್ನುವುದು ಯೋಚಿಸಬೇಕಾದ ವಿಚಾರ.

 ಬಸವಣ್ಣನವರ "ಧಯೆ ಇರಬೇಕು ಸಕಲ ಪ್ರಾಣಿಗಳಲ್ಲಿ..."ಎಂಬ ವಾಕ್ಯ ಗೋವಿಗೆ ಸ್ವಲ್ಪ ಜಾಸ್ತಿ ಧಯೆ ಇರಲಿ ಅಂತಾ ಏನಾದ್ರೂ ಹೇಳಿದ್ದಾರೆಯೆ? ಹೀಗೆ ಮಾಡಿದರೆ "ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ನ" ಅಂದಂತಾಗುವುದಿಲ್ಲವೇ?ಮಾಡುವುದಿದ್ದರೇ ಎಲ್ಲಾ ಪ್ರಾಣಿಗಳ ಹತ್ಯೆಯನ್ನು ನಿಷೇದ ಮಾಡಲಿ ಅದೇಗೆ ಬರಿ ಗೋಹತ್ಯೆಯನ್ನು ಮಾತ್ರ ನಿಷೇದ ಮಾಡುತ್ತಾರೆ.ಕೇವಲ ಪುರಾಣಗಳಿಗೆ ಜೋತುಬಿದ್ದು ದೇಶದ 'ಆಹಾರ ಪದ್ದತಿ'ಯನ್ನೇ ಬದಲಿಸಬೇಕು ಎನ್ನುವುದರಲ್ಲಿ ಅರ್ಥವಿದೆಯಾ?

ಸಭೆ ಸಮಾರಂಭಗಳಲ್ಲಿ ನಿಂತು ಗೋವುಗಳ ಬಗ್ಗೆ ಕೇವಲ ಮಾತನಾಡುವವರಿಗೆ,ಎಲ್ಲೋ ಒಂದುಕಡೆ ಗೋವುಗಳ ಹೆಸರೇಳಿಕೊಂಡು ನೂರಿನ್ನೂರು ಹಸುಗಳಿಗೆ ಒಂದು ಮಠ ಕಟ್ಟಿಕೊಂಡು ಹಸುಗಳಿಗೆ ಶೃಂಗಾರ ಮಾಡಿಕೊಂಡು ಅವುಗಳ ಹೆಸರಲ್ಲೇ ಬೇಳೆ ಬೇಯಿಸಿಕೊಂಡು ಬೆಳದುಕೊಂಡಿರುವ ಮಠಾಧೀಶರ ಗೋವಿನ ಕಾಳಜಿ,ಪ್ರೀತಿಗಳು ಹಳ್ಳಿಯಲ್ಲಿ ದಿನನಿತ್ಯ ಅವುಗಳ ಒಡನಾಟದಲ್ಲೆ ಬೆಳೆಯುವ ಗ್ರಾಮೀಣ ಜನರು ಗೋವನ್ನು ಸಾಕುವಾಗ ಪಡುವ ಕಷ್ಟ,ಸುಖ ಅವುಗಳ ಮೇವಿಗೆ ಪರದಾಡುವ ಪರಿಸ್ಥಿತಿ ಎಂತದ್ದು ಎನ್ನುವುದಕ್ಕೆ ನಮ್ಮ ಮನೆಯಲ್ಲೇ ನಡೆದ ಒಂದು ಘಟನೆ ನೆನಪಾಗುತ್ತಿದೆ..ಈಗ್ಗೇ ಏಳೆಂಟು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಸುಮಾರು 25 ರಾಸು ದನಗಳು ಇದ್ದವು ಒಮ್ಮೆ ಮೇವಿಗಾಗಿ ಬೇರೊಬ್ಬರ ಜಮೀನಿಗೆ ನಮ್ಮ ಒಂದು ಹಸು ಮೇಯಲು ಹೋಗಿತ್ತು ಅದನ್ನು ನೋಡಿದ ಆ ಜಮೀನಿನ ಮಾಲೀಕ ಆ ಹಸುವಿಗೆ ದೊಣ್ಣೆಯಲ್ಲಿ ಬಾರಿಸಿದ ಹೊಡೆದ ರಭಸಕ್ಕೆ ಅದರ ಒಂದು ಮುಂಗಾಲು ಮುರಿದು ಯಾವುದೇ ರಿತಿಯ ಚಿಕಿತ್ಸೆಗೂ ವಾಸಿಯಾಗಲಿಲ್ಲ ಇದನ್ನು ನೋಡಿದ ನಮ್ಮ ತಂದೆ ಹಸುಗಳನ್ನು ಸಾಕುವ ಕಾರ್ಯಕ್ಕೆ ತಿಲಾಂಜಲಿ ಇಟ್ಟರು" ಈ ಸ್ತಿತಿಗೆ ಕಾರಣರಾರು?ಕಾಲು ಮುರಿದ ಹಸುವನ್ನು ಇಟ್ಟುಕೊಂಡು ಏನು ಮಾಡುವುದು? ಅದೂ ಅಲ್ಲದೇ ಹಸುವಿನ ಕಾಲು ಮುರಿದ ಜಮೀನಿನ ಮಾಲೀಕ ಗೋವಿನ ಬಗ್ಗೆ ಗಂಟೆ ಗಟ್ಟಲೆ ಮಾತನಾಡುವ ಒಂದು ಪಕ್ಷದ ಕಾರ್ಯಕರ್ತ ಎಂಬುದು ಒಂದು ಚೋದ್ಯದ ಸಂಗತಿ.ಎಷ್ಟೋಜನ ಮೇವಿನ ಕೊರತೆಯಿಂದ ಜಾನುವಾರು ಗಳನ್ನು ಮಾರುತ್ತಿರುವುದು ಒಂದು ನೋವಿನ ಸಂಗತಿ.ಇದರ ಬಗ್ಗೆ ಸರ್ಕಾರ ಗಮನ ಹರಿಸಿದೆಯಾ? ಇರುವ ಗೋಮಾಳಗಳನ್ನೆ ನೆಲಗಳ್ಲರು ನುಂಗಿಹಾಕಿದ್ದಾರೆ.ಗೋವಿನ ಬಗ್ಗೆ ಮಾತನಾಡುವ ಜನರು ಎಷ್ಟು ಜನ ಗೋವನ್ನು ಸಾಕಿದ್ದಾರೆ.ಅಷ್ಟೊಂದು ಇಚ್ಚೆ ಇದ್ದರೇ ಗೋವುಗಳನ್ನು ದತ್ತು ತೆಗೆದುಕೊಂಡು ಸಾಕಲಿ.
ಗೋಹತ್ಯೆ ಬಗ್ಗೆ ಮಾತನಾಡುವಾಗ ವಾಸ್ತವ ಸ್ಥಿತಿಯನ್ನು ತಿಳಿದುಕೋಡು ಮಾತಾನಾಡುವುದು ಒಳಿತು.ವಯಸ್ಸಾದ,ನಿರುಪಯುಕ್ತ ಗೊಡ್ಡು ದನಗಳನ್ನು ಇಟ್ಟುಕೊಂಡು ರೈತರು ಏನು ಮಡುವುದು?ಇಂತಹ ದನಗಳನ್ನು ಕೇವಲ ಸಗಣಿಗೋಸ್ಕರ ಇಟ್ಟುಕೊಂಡರೆ ಅವುಗಳನ್ನು ಜೀವಮಾನವಿಡಿ ಸಾಕಲು  ರೈತರು ಏನು ಮಾಡಬೇಕು? ಇವುಗಳ ಬಗ್ಗೆಯೂ ಯೋಚಿಸಬೇಕಾಗುತ್ತದೆ.
ಈಗಿನ ಸ್ಥಿತಿಯಲ್ಲಿ 1ಕಿಲೊ ಕೋಳಿ ಮಾಂಸ 100ರೂ,ಕುರಿ ಮತ್ತು ಮೇಕೆ ಮಾಂಸ 250ರಿಂದ 300ರೂಗಳು ಗ್ರಾಮೀಣ ಜನರ ಒಂದು ದಿನದ ಕೂಲಿ 60 ರೂಗಳು ,ಇವರು ಪಡೆಯುವ ಕೂಲಿ ಅವತ್ತಿನ ತುತ್ತಿಗೆ ಸಮ.ಇಂಥದ್ದರಲ್ಲಿ ಬಡ ಜನರು ಅಷ್ಟು ಬೆಲೆ ತೆತ್ತು ಬೇರೆ ಮಾಂಸಹಾರವನ್ನು ಸೇವಿಸಲು ಸಾದ್ಯವೇ ಅಥವಾ ಇಂಥಹವರಿಗೆ ಗೋಹತ್ಯೆ ನಿಷೇದ ಮಾಡಿರುವ  ಸರ್ಕಾರ ರಿಯಾಯ್ತಿ ಧರದಲ್ಲಿ ಕುರಿ,ಕೋಳಿ ಮಾಂಸವನ್ನು ಪೂರೈಸುತ್ತದೆಯೇ? ಅಥವಾ ನಾವ್ಯಾಕೆ ಕೊಡಿಸಬೇಕು ಎಂದರೆ ಪರೋಕ್ಷವಾಗಿ ಅವರ ಆಹಾರದ ಹಕ್ಕನ್ನು ಕಿತ್ತುಕೊಂಡಂತೆ ಆಗುವುದಿಲ್ಲವೇ? ಅಖಂಡ ಸ್ವತಂತ್ರ ಭಾರತದಲ್ಲಿ ಮೂಲಭೂತ ಅವಶ್ಯಕವಾದ ಆಹಾರದ ಸ್ವಾತಂತ್ರ್ಯವನ್ನು ಕಸಿದಂತಾಗುವುದಿಲ್ಲವೇ?
ಈಗಿನ ಪರಿಸ್ತಿತಿಯಲ್ಲಿ ಗೋಹತ್ಯೆ ನಿಷೇದ ಮಾಡಿದರೆ ಗೋಮಾಂಸದ ಕೊರತೆಯನ್ನು ಕುರಿ,ಕೋಳಿ ಮಾಂಸಗಳಿಂದ ಜನರಿಗೆ ಬೇಕಾದ ಮಾಂಸವನ್ನು ಒದಗಿಸಬಹುದೆ? ಇದನ್ನೆ ನಂಬಿಕೊಂಡ ಮತ್ತು ಚರ್ಮೋದ್ಯಮವನ್ನೆ ಬದುಕಾಗಿಸಿಕೊಂಡ ಜನರ ಗತಿಯೇನು?
ಒಂದುವೇಳೆ ಗೋವುಗಳನ್ನು ಸಾಯುವವರೆಗೂ ಮನೆಯಲ್ಲಿಟ್ಟುಕೊಂಡರೆ ಅವುಗಳಿಗೆ ಆಹಾರವನ್ನು ಯಾವ ರೀತಿ ಪೂರೈಸುವುದು,ಜನಗಳಿಗೆ ಆಹಾರದ ಕೊರತೆ ಉಂಟಾಗಿರುವಾಗ ಜನರ ಜೊತೆ ಪ್ರಾಣಿಗಳ ಗೋಳನ್ನು ಹೇಗೆ ಸಹಿಸುವುದು.ಇದರಿಂದ ಪರಿಸರದ ಮೇಲೆ ಒಂದು ತರಹದ inbalance   ಉಂಟಾಗುವುದಿಲ್ಲವೇ?
ಆಳುವ ಸರ್ಕಾರ ಗೋಹತ್ಯೆ ನೀಷೇದ ಮಾಡಿರುವುದು ಒಂದು ತರಹ ಸಾರಾಯಿ ನಿಷೇದ ಮಾಡಿರುವ ರೀತಿಯಾಗಿದೆ.ಹೇಗೆಂದರೆ ಸಾರಾಯಿ ನಿಷೇದ "ಸಂಪೂರ್ಣ ಪಾನ ನಿಷೇದ"ವಾಗಲಿಲ್ಲ ಸರ್ಕಾರಕ್ಕೆ ಇಚ್ಚೆಯಿದ್ದಲ್ಲಿ  ಎಲ್ಲಾ ರೀತಿಯ ಮದ್ಯವನ್ನು ನಿಷೇದ ಮಾಡಲಿ ಅದೇ ತರಹ ಸಂಪೂರ್ಣ ಮಾಂಸಹಾರವನ್ನು ನಿಷೇದ ಮಾಡಲಿ.ಅದು ಬಿಟ್ಟು ಕೇವಲ ಗೋಮಾಂಸವನ್ನು ನಿಷೇದ ಮಾಡುವುದಕ್ಕೆ ನನ್ನ ವಿರೋದವಿದೆ.
ಸರಿಯಾಗಿ ಜನರಿಗೆ ರೇಷನ್ ಕಾರ್ಡ್ ಕೊಡದ ಸರ್ಕಾರ ಗೋಹತ್ಯೆಗೆ ಯಾಕೆ ಇಷ್ಟೊಂದು ಪ್ರಾಮುಖ್ಯ ನೀಡುತ್ತಿದಿಯೊ ಗೊತ್ತಿಲ್ಲ.ಸಂವಿದಾನದಲ್ಲಿ ಉಲ್ಲೇಖಿಸಿದ ಗೋವಿನ ಬಗ್ಗೆ ಯೋಚಿಸುವ ಸರ್ಕಾರ ಮತ್ತು ಜನರು ಇನ್ನಿತರ ಅಂಶಗಳಾದ ಸಮಾನತೆ,ಜಾತ್ಯತೀತತೆ,ಅಶ್ಪ್ರಸ್ಯತೆನಿರ್ಮೂಲನೆ  ಬಗ್ಗೆ ಯಾಕೆ ನೈಜ ಕಾಳಜಿ ವಹಿಸುತ್ತಿಲ್ಲ .ಗೋವುಗಳ ಬಗ್ಗೆ ವಿಪರೀತ  ಕಾಳಜಿ ತೋರಿಸುವ ಮಠಾಧೀಶರು ಮೇಲಿನ ಸಮಸ್ಯೆಗಳ ನಿರ್ಮೂಲನೆಗೆ ಎಷ್ಟು ಪ್ರಾಮಾಣಿಕಾವಾಗಿ ಪ್ರಯತ್ನಿಸಿದ್ದಾರೆ. ಅಥವಾ  ಅವರುಗಳ ಲೆಕ್ಕದಲ್ಲಿ ಇವುಗಳೆಲ್ಲಾ ಸಮಸ್ಯೆಗಳೇ  ಅಲ್ಲವೇ?
ಕೆಲವು ರಾಜಕೀಯ ಪಕ್ಷಗಳಿಗೆ 'ಗೋಹತ್ಯೆ ನಿಷೇದ' ಮತ್ತು ರಾಮ ಮಂದಿರ ವಿಷಯಗಳೆ ರಾಜಕೀಯದ ಪ್ರಣಾಳಿಕೆಗಳಾಗಿವೆ ಇವುಗಳ ಮೂಲಕ ಹಿಂದೂ ಮತ ಬ್ಯಾಂಕನ್ನು  ಓಲೈಸುವ ,ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ರಾಜಕೀಯ ಲಾಭ ಪಡೆಯುವ ಒಂದು ಹುನ್ನಾರವಾಗಿದೆ.ಇವು ಸಮಾಜದ ಸ್ವಾಸ್ತ್ಯವನ್ನು ಹದಗೆಡಿಸುತ್ತಿವೆ.  ಸರ್ಕಾರಕ್ಕೆ ಹಾಸಿ ಹೊದ್ದುಕೊಳ್ಲುವಷ್ಟು ಸಮಸ್ಯೆಗಳಿರುವಾಗ ಕೆಲಸಕ್ಕೆ ಬಾರದ ಇಂತಹ ವಿಷಯಗಳ ಗಮನ ಕೊಡುತ್ತಿರುವುದು ಸಮಾಜದ ಶೋಚನೀಯ ಸ್ಥಿತಿ ಎನ್ನದೇ ಬೇರೆ ವಿಧಿಯಿಲ್ಲ..
- ಮಧುಚಂದ್ರ ಬಿ.ಆರ್.
ಕಿರಿಯ ಸಹಾಯಕ, ಒಳಾಡಳಿತ ಇಲಾಖೆ
( madhu.chndr@gmail.com )

4 comments:

Unknown said...

ಜಾನುವಾರುಗಳ ಒಡನಾಟದಲ್ಲಿ ರೈತರ ವಾಸ್ತವ ಬದುಕಿನ ಚಿತ್ರಣವನ್ನು ನೀಡಿದ್ದೀರಿ. ಮೂಳೆ ಮುರಿತಕ್ಕೊಳಗಾದ, ಖಾಯಿಲೆಪೀಡಿತ ಹಾಗೂ ಗೊಡ್ಡು ದನಗಳ ನಿರ್ವಹಣೆಯು ಒಬ್ಬ ಸಣ್ಣ ರೈತನಿಗೆ ಎಷ್ಟು ಕಷ್ಟಕರವೆಂಬುದರ ಆಧಾರದಲ್ಲಿ ಗೋಹತ್ಯೆ ನಿಷೇಧವು ರೈತ ವಿರೋಧಿ ನೀತಿಯಾಗುತ್ತದೆಂದು ಹೇಳಿದರೆ ಕೆಲವರು ಇಡೀ ರೈತ ಸಮುದಾಯವೇ ಗೋಹತ್ಯೆಗಾಗಿ ದನಗಳನ್ನು ಮಾರಾಟ ಮಾರಾಟ ಮಾಡುತ್ತದೆ ಎನ್ನುವಂತೆ ಹುಯಿಲಿಡುತ್ತಾರೆ. ಅಂತಹವರಿಗೆ ರೈತನ ಬವಣೆಯನ್ನು ಮನವರಿಕೆ ಮಾಡಿಕೊಟ್ಟಿದ್ದೀರಿ. ಹಸುಗಳಿಂದ ಲಾಭ ಪಡೆದು ಅವುಗಳು ಕೆಲಸಕ್ಕೆ ಬಾರದಾದಾಗ ಮಾರಾಟ ಮಾಡುವುದು ಮಹಾಪಾಪವೆಂದು ಬೊಬ್ಬಿಡುವವರು ಗಮನಸಿಬೇಕಾದ ಅಂಶವೆಂದರೆ, ಒಂದು ವೇಳೆ ಗೋವಿನಿಂದ ಅಷ್ಟೆಲ್ಲಾ ಉಪಯೋಗಗಳು ಇರದಿದ್ದರೆ ನೀವು ಅದನ್ನು ಮಾತೆ ಸಮಾನ ಎಂದು ಹೇಳ್ತಾ ಇದ್ರಾ? ಗೃಹಪ್ರವೇಶಕ್ಕೆ ಗೋವನ್ನು ಮನೆಯೊಳಗೆ ಬಿಟ್ಟುಕೊಳ್ಳೋ ಜನ ಆ ದಿನ ಗೋವು ಮನೆಯೊಳಗೆ ಸಗಣಿ ಹಾಕಿದ್ರೆ ಬಹಳ ಒಳ್ಳೆಯದಾಗುತ್ತದೆಂದು ಹೇಳುತ್ತಾರೆ. ಅದೇ ಗೋವು ಮಾಮೂಲಿ ದಿನಗಳಲ್ಲಿ ಅವರ ಮನೆ ಮುಂದೆ ಸಗಣೆ ಹಾಕಿದ್ರೆ ಅದನ್ನು ಸಾಕಿದವನಿಗೆ ಶಾಪ ಹಾಕ್ತಾರೆ. ರೈತ ಹೇಗೆ ಜಾನುವಾರು ಸಾಕಾಣಿಕೆಯಲ್ಲಿ ತಮ್ಮ ಜೀವನಾಧಾರವನ್ನು ಲೆಕ್ಕ ಹಾಕ್ತಾನೋ ಹಾಗೆ ಅದರಿಂದ ಬರೋ ಪ್ರಯೋಜನಕ್ಕೆ ಮಾತ್ರ ಅದನ್ನು ಮಾತೆ ಅಂತ ಹೇಳ್ತಾರೆ. ಇವರಿಗೆ ಪ್ರಯೋಜನಗಳು ಮಾತ್ರ ಬೇಕು, ನಿರ್ವಹಣೆ ಬೇಡ.
ಗೋಹತ್ಯೆ ನಿಷೇಧಕ್ಕೆ ಸಂಬಂಧಪಟ್ಟಂತೆ ಸಂವಿಧಾನವನ್ನು ಚಾಚೂ ತಪ್ಪದೇ ಪಾಲಿಸಬೇದೆಂದು ಹೇಳೋ ಮಂದಿ ಗೋಹತ್ಯೆ ನಿಷೇಧ ಹೊರತಾದ ವಿಷಯಗಳಲ್ಲಿ ಸಂವಿಧಾನವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರಾ? ಒಂದು ನಾಲ್ಕು ದಿನ ಹಳ್ಳಿಗೆ ಹೋಗಿ ಕಾಲು ಮುರ್ಕೊಂಡು ಬಿದ್ದಿರೋ ಒಂದು ಗೋವಿನ ಚಿಕಿತ್ಸೆ ಮಾಡಿ ಬರಲಿ, ಆ ಗೋವಿನ ನರಕಯಾತನೆಯನ್ನು ಅವರು ಕೂಡ ಅನುಭವಿಸಿ ಬರಲಿ. ನಂತರ ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡಲಿ.

Ferojasha said...

ಮಧು ನಿನ್ನ ಅಭಿಪ್ರಾಯ ತುಂಬಾ ಚನ್ನಾಗಿದೆ, ಸರಕಾರ ಗೋಹತ್ಯ ನಿಷೇಧಿಸಲು ಹೊರಟಿದೆ ಆದರೆ ನೀನು ಸರಕಾರಕ್ಕೆ ರಿಯಾಯ್ತಿ ದರದಲ್ಲಿ ಮಾಂಸಕ್ಕೆ ಬೇಡಿಕೆ ಇಟ್ಟಿರುವುದು ಸಸ್ಯಾಹಾರ ಸರಕಾರಕ್ಕೆ ಅವಮಾನಿಸಿದಂತೆ. ಹಾಗಾಗಿ ನಿನ್ನ ಅಭಿಪ್ರಾಯವನ್ನು ವಿಸ/ವಿಪ ಅಧಿವೆಶನಗಳಲ್ಲಿ ಈ ಬಗ್ಗೆ ಚರ್ಚಿಸುವಂತೆ ನಿಮ್ಮ ಭಾಗದ ಶಾಸಕ/ಸಚಿವರಲ್ಲಿ ಮನವಿ ಸಲ್ಲಿಸುವುದು ಒಳಿತು.

spandana said...

ನಮ್ಮ ದೇಶ ಪಾಶ್ವಿಮಾತ್ಯ ದೇಶಗಳಿಗಿಂತ ವಿಭಿನ್ನವಾಗಿ ಗುರುತಿಸಲ್ಪಡುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ದೇಶದ ಸಂಸ್ಕೃತಿ. ಇಲ್ಲಿನ ಆಚಾರ-ವಿಚಾರಗಳ ವೈಶಿಷ್ಟ್ಯತೆಯಿಂದಾಗಿ ನಮ್ಮ ದೇಶದ ಸಂಸ್ಕೃತಿ ಎಂತಹವರನ್ನೂ ಆಕರ್ಷಿಸುತ್ತಿದೆ ಎಂದರೆ ತಪ್ಪಾಗಲಾರದು.


ಈ ಮೇಲ್ಕಂಡ ಕಾರಣದಿಂದಾಗಿಯೇ ನಮ್ಮ ಸಂವಿಧಾನ ರಚಿಸಿದ ಮಹನೀಯರು ನಮ್ಮ ದೇಶದ ಸಂಸ್ಕ್ರತಿ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದ ರೀತಿ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಸಂವಿಧಾನವನ್ನು ರಚಿಸಿದ್ದಾರೆ. ಯಾಕೆಂದರೆ ನಮ್ಮದು ವಿವಿಧ ಭಾಷೆ, ಸಂಸ್ಕೃತಿ, ಆಚರಣೆಗಳುಳ್ಳ ದೇಶ. ನಾವು ಎಲ್ಲಾ ರೀತಿಯ ಪಶುಗಳನ್ನು ಹತ್ಯೆ ಮಾಡುವುದು ಸರಿಯಲ್ಲ ಎಂದು ಹೇಳಬಹುದು. ಇದರಿಂದಾಗಿ ಬೇರೆಯವರ ಮನೋ ಭಾವನೆಗಳಿಗೆ ಧಕ್ಕೆ ಉಂಟುಮಾಡಿದಂತಾಗುತ್ತದೆ. ನೀವೇ ಹೇಳುವ ಪ್ರಕಾರ ಜನರ ಆಹಾರ ಸ್ವಾತಂತ್ರ್ಯ ಹಕ್ಕನ್ನು ಕಸಿದಂತಾಗುತ್ತದೆ. ಎಲ್ಲೂ ಯಾವ ಕಾನೂನಿನಲ್ಲೂ ಇಂತಹದೇ ಆಹಾರ ಸೇವನೆ ಮಾಡಬೇಕು ಎಂದು ಹೇಳಲಾಗಿಲ್ಲ. ಈ ಆಹಾರ ಪದ್ಥತಿಯನ್ನು ರೂಢಿಸಿಕೊಂಡವರು ನಾವು. ಮಾಂಸಹಾರಕ್ಕಾಗಿ ಪಶುಗಳನ್ನು ಹತ್ಯೆ ಮಾಡಿ ತಿನ್ನುವುದಾದರೆ ಅದು ವೈಯಕ್ತಿಕವಾಗಿ ಅವರವರ ಆಹಾರ ಪದ್ದತಿ. ನಮ್ಮ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡೇ ವಿಶೇಷವಾಗಿ ಗೋಹತ್ಯೆ ನಿಷೇಧ ಕುರಿತಂತೆ ಕಾನೂನು ಮಾಡಲಾಗಿದೆ. ಗೋಹತ್ಯೆ ನಿಷೇಧ ಕುರಿತಂತೆ ಸ್ಪಷ್ಟವಾಗಿ ಕಾನೂನಿರಬೇಕಾದರೆ ಅದನ್ನು ಹತ್ಯೆ ಮಾಡಿ ತಿನ್ನುವುದು ಅಪರಾಧವೇ. ಇಷ್ಟು ದಿನ ಈ ಅಪರಾಧವನ್ನು ಮುಂದುವರಿಸಿಕೊಂಡು ಬಂದಿರುವುದಲ್ಲದೇ ಈಗ ನಮ್ಮ ಆಹಾರ ಪದ್ದತಿಯನ್ನು ನಿಷೇಧಿಸಲಾಗಿದೆ ಎಂದು ಹೋರಾಡುವುದು ಎಷ್ಟು ಸರಿ? ಇದರಿಂದಾಗಿ ಇತರೆ ಮಾಂಸದ ಬೆಲೆ ಹೆಚ್ಚಾಗುವುದಕ್ಕೆ ಯಾರೂ ಹೊಣೆಗಾರರಲ್ಲ. ಯಾಕಂದರೆ ಇದು ಅವರಾಗಿ ಅವರೇ ರೂಢಿಸಿಕೊಂಡ ಆಹಾರ ಪದ್ದತಿ. ಇನ್ನು ಬಸವಣ್ಣನವರು ಹೇಳುರುವಂತೆ "ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ". ಇದನ್ನು ತೋರಬೇಕಾದವರು ಯಾರು? ನಾವೇ ಅಲ್ಲವೇ? ವೈಯಕ್ತಿಕವಾಗಿ ಪ್ರತಿಯೊಬ್ಬರು ಈ ಬಗ್ಗೆ ಕಾಳಜಿವಹಿಸಬೇಕು. ಈಗ ಬರೀ ಗೋಹತ್ಯೆ ಮಾತ್ರ ನಿಷೇಧ ಮಾಡಿದ್ದಕ್ಕೆ ಇಷ್ಟೇಲ್ಲಾ ವಿರೋಧಿಸುತ್ತಿರುವವರು ಇನ್ನೂ ಸಂಪೂರ್ಣವಾಗಿ ಮಾಂಸಾಹಾರ ಪದ್ದತಿಯನ್ನೇ ನಿಷೇಧಿಸಿದ್ದರೆ ಇನ್ನೆಂತಹ ವಿರೋಧಗಳು ವ್ಯಕ್ತವಾಗುತ್ತಿತ್ತು ಎಂಬುದನ್ನ ಯಾರಾದರೂ ಊಹಿಸಬಹುದು. ಯಾವುದೇ ಕಾನೂನನ್ನು ಜಾರಿಗೆ ತಂದಾಗ ಅದು ಸಂಪೂರ್ಣವಾಗಿ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರ ಸಹಕಾರೂ ಇದಕ್ಕೆ ಅಗತ್ಯವಾಗಿರುತ್ತದೆ.

ನಿಮ್ಮ ಗೋವಿನ ಬಗ್ಗೆ ನೀವು ಉದಾಹರಣೆ ಕೊಟ್ಟೀದ್ದೀರಿ ಅದನ್ನು ಹೊಡೆದದ್ದು ಆ ಜಮೀನಿನ ಮಾಲೀಕನ ಕ್ರೂರತನವನ್ನು ತೋರಿಸುತ್ತದೆ. ಇದಕ್ಕು ನಿಷೇಧ ಕಾಯಿದೆಗೂ ಸಂಬಂಧ ಹೇಗೆ? ಗೋವುಗಳನ್ನು ಖರೀದಿಸುವಾಗ ಅವುಗಳಿಗೆ ಮೇವು ಹೊಂದಿಸಲು ಸಾಧ್ಯವಿಲ್ಲವೆಂದು ತಿಳಿದೂ ನೀವು ಖರೀದಿಸುತ್ತೀರಾ? ಅವುಗಳಿಗೆ ಯಾವುದೇ ಖಾಯಿಲೆ/ಕುಂಟುತನ ಇನ್ನಾವುದೋ ಊನ ಉಂಟಾದಾಗ ಅಥವಾ ಗೊಡ್ಡು ಹಸುಗಳನ್ನು ನಿಮಗೆ ನೋಡಿಕೊಳ್ಳಲಾಗದಿದ್ದರೆ ಗೋಸಂರಕ್ಷಣಾ ಕೇಂದ್ರಗಳಿಗೆ ಕಳುಹಿಸಿ. ಗೋಹತ್ಯೆ ನಿಷೇಧ ಕಾಯಿದೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ದಯವಿಟ್ಟು ಒಮ್ಮೆ ಗಮನಿಸಿ. ಇಲ್ಲಿ ವಿಷಯ ಇರುವುದು ಗೋವುಗಳನ್ನು ದತ್ತು ತೆಗೆದುಕೊಂಡು ಸಾಕುವುದಲ್ಲ. ಇರುವ ಗೋವುಗಳನ್ನು ಸಂರಕ್ಷಿಸುವುದು ಹೇಗೆ ಎಂಬುದರ ಬಗ್ಗೆ.

ಈ ವಿಷಯದಲ್ಲಿ ಯಾವುದೇ conspiracy ಆಗಲೀ, ರಾಜಕೀಯ ಮಾಡುವುದಾಗಲೀ ಸರಿಯಲ್ಲ ಎಂಬುದನ್ನು ನನ್ನ ಲೇಖನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೇ ಇವೆಲ್ಲವುಗಳನ್ನು ಹೊರತು ಪಡಿಸಿ, ಮಾನವೀಯತೆ ಹಾಗೂ ವಿಶಾಲ ಮನೋಭಾವದಿಂದ ನೋಡಬೇಕಾಗಿದೆ.

madhu.br said...

...ಬರೀ ಗೋಹತ್ಯೆ ಮಾತ್ರ ನಿಷೇಧ ಮಾಡಿದ್ದಕ್ಕೆ ಇಷ್ಟೇಲ್ಲಾ ವಿರೋಧಿಸುತ್ತಿರುವವರು ಇನ್ನೂ ಸಂಪೂರ್ಣವಾಗಿ ಮಾಂಸಾಹಾರ ಪದ್ದತಿಯನ್ನೇ ನಿಷೇಧಿಸಿದ್ದರೆ ಇನ್ನೆಂತಹ ವಿರೋಧಗಳು ವ್ಯಕ್ತವಾಗುತ್ತಿತ್ತು ಎಂಬುದನ್ನ ಯಾರಾದರೂ ಊಹಿಸಬಹುದು...ಎಂಬ ಸ್ಪಂದನರವರ ಹೇಳಿಕೆಯಲ್ಲಿಯೇ ಅವರು ಸಂಪೂರ್ಣ ಮಾಂಸಹಾರ ಏಕೆ ಸಾದ್ಯವಿಲ್ಲಾ ಎಂಬುದನ್ನು ಅವರೇ ಹೇಳಿದ್ದಾರೆ.ಏಕೆಂದರೆ ಈ ದೇಶದಲ್ಲಿ ಸುಲಭವಾಗಿ ಸಿಕ್ಕುವವರು ಬಡವರು,ದೀನ ದಲಿತರು,ಅಲ್ಪಸಂಖ್ಯಾತರು ಮಾತ್ರ.ಇವರ ಮೇಲೆ ಯಾವ ರೀತಿ ಬೇಕಾದರು ಕಾಯ್ದೆಗಳನ್ನು ಹೇರಬಹುದು ಹೇರಿ ಜೈಸಿಕೊಳ್ಳುವುದು ಬಹಳ ಸುಲಭ ಸಂಪೂರ್ಣ ಮಾಂಸ ನಿಷೇದ ಮಾಡಿದರೆ ಬಹು ಸಂಖ್ಯಾತ ಹಿಂದೂಗಳನ್ನು ಎದುರು ಹಾಕಿಕೊಳ್ಳುವ ತಾಕತ್ತಿಲ್ಲ..
ನಮ್ಮ ದೇಶದ ಸಂಸ್ಕೃತಿ ಕೇವಲ ಆಹಾರ ಪದ್ದತಿಯಿಂದ ಶ್ರೇಷ್ಟವಾಗಿಲ್ಲ ಎಂದು ನಾನಾದರೂ ಭಾವಿಸುತ್ತೇನೆ.ಕೇವಲ ಗೋಹತ್ಯೆಯಿಂದ ನಮ್ಮ ಸಂಸ್ಕೃತಿ ಹಾಳಗುತ್ತದೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ.
ಬೇರೆಯವರ ಮನೋಭಾವಕ್ಕಿಂತ ಇನ್ನೊಬ್ಬರ ಜೀವನದ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ.ಅದನ್ನೆ ನಂಬಿಕೊಂಡವರ ಬಗೆಗೂ ಯೋಚಿಸಬೇಕಾಗುತ್ತದೆ.
ಇನ್ನು ನಮ್ಮ ಗೋವಿನ ಬಗ್ಗೆ ಹೇಳಿರುವುದು ನಿಮಗೆ ಅಸಂಬದ್ದ ಎನಿಸಿರುವುದು ಸೋಜಿಗವೆನಿಸಿದೆ.ಬರಿ ಕಾಯ್ದೆ ಕಾನೂನುಗಳ ಬಗ್ಗೆ ಹೇಳಿರುವ ನಿಮಗೆ ಹಳ್ಳಿಯಲ್ಲಿನ ಹಸು ಸಾಕಾಣೆ ಮಾಡುವವರ ಸ್ಥಿತಿಯ ಬಗ್ಗೆಯೂ ಸ್ವಲ್ಪ ಅರಿವಿರಲಿ ಎಂದು ತಿಳಿಸಿದ್ದೇನೆ.
ಮೇವಿಗೆ ಸಂಬಂದಿಸಿದಂತೆ ನೀವು ಹೇಳಿರುವ ವಿಚಾರ ತುಂಬಾ ಬಾಲಿಶವಾಗಿದೆ ಏಕೆಂದರೆ ಉದಾ:ಒಬ್ಬ ರೈತ ತಾನು ಪಶುಗಳನ್ನು ಕೊಳ್ಳುವಾಗ 2 ಹಸುಗಳನ್ನು ಸಾಕುವ ಸಾಮರ್ಥ್ಯ,ಸ್ಥಳಾವಕಾಶ ಹೊಂದಿರುತ್ತಾನೆ ಅಂದುಕೊಳ್ಳೋಣ ಆನಂತರದ ದಿನಗಳಲ್ಲಿ ಅವುಗಳ ಸಂತತಿ ಜಾಸ್ತಿಯಾದಾಗ ಏನು ಮಾಡಬೇಕು? ಅವನು ಅದನ್ನು ನೇರವಾಗಿ ಸಂತೆಗೆ ಒಯ್ಯುತ್ತಾನೆ ಅಲ್ಲಿ ಅದನ್ನು ಯಾರಾದರು ಕೊಳ್ಳಬಹುದು.ಅದನ್ನು ಕಡುಕರೇ ಕೊಳ್ಳುತ್ತಾರೆ ಎಂದು ಹೇಳುವುದಕ್ಕಾಗುವುದಿಲ್ಲ ಹಾಗೇನಾದರೂ ಅವರೇ ಕೊಳ್ಳುತ್ತಿದ್ದಾರೆ ಎಂಬ ಗುಮಾನಿ ಬಂದರೆ ಗೋವಿನ ಮೇಲೆ ಪ್ರೀತಿಯಿರುವವರು ಅದನ್ನು ಆ ಬೆಲೆಗೆ ಖರೀದಿಸಲಿ.
ಇನ್ನು ನೀವು ಹೇಳಿರುವ ಗೋಸಂರಕ್ಷಣಾ ಕೇಂದ್ರಗಳ ಬಗ್ಗೆ ನಾನು ಈವರೆಗು ಕೇಳಿಲ್ಲ.ಅಂತಹ ಕೇಂದ್ರಗಳು ಎಲ್ಲಿ ಇವೆಯೊ ಅದು ಗೊತ್ತಿಲ್ಲಾ.ಅವು ಸರ್ಕಾರದವೋ ಖಾಸಗಿಯವರದೋ? ನಮ್ಮ ಮೈಸೂರು ಪ್ರಾಂತ್ಯದಲ್ಲೂ ಅಂತಹ ಕೇಂದ್ರಗಳನ್ನು ನಾನು ಇದುವರೆವಿಗೂ ಕಂಡಂತಿಲ್ಲ.ಹಾಗೇನಾದರೂ ಇದ್ದರೇ ದಯವಿಟ್ಟು ತಿಳಿಸಿ ವಿಚಾರಿಸೋಣ.
ಇನ್ನುಳಿದಂತೆ ಈ ವಿಷಯ ಧಾರ್ಮಿಕ,ರಾಜಕೀಯಕ್ಕೋಸ್ಕರವಾಗಿಯೇ ಬಳಕೆಯಾಗುತ್ತಿದೆಯಂದು ಎಲ್ಲರಿಗೂ ಗೊತ್ತಿರುವಂಥದ್ದೆ...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago