11 January 2013

ದಿನಾಂಕ:10-01-2013 ರ ಸ್ನೇಹಕೂಟದ ನಡಾವಳಿಗಳು

ದಿನಾಂಕ:10-01-2013 ರ ಸ್ನೇಹಕೂಟದ ನಡಾವಳಿಗಳು


ದಿನಾಂಕ: 10-01-2013 ರಂದು ಗುರುವಾರ  ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ನಮ್ಮ 2007ನೇ ತಂಡದ ಕಿರಿಯ ಸಹಾಯಕರ 2ನೇ 'ಸ್ನೇಹ ಕೂಟ' ಯಶಸ್ವಿಯಾಗಿ ಜರುಗಿತು.  ಸಮಯ 1:15 ರಿಂದಲೇ  ಪ್ರಾರಂಭಮಾಡಬೇಕು ಅಂತ ಅಂದುಕೊಂಡಿದ್ದರೂ ಸಹ ಸ್ನೇಹ ಕೂಟದ ಮೊದಲ ಘಟ್ಟ 'ಔತಣ' ಶುರುವಾದದ್ದು  1:45 ಕ್ಕೆ. ಅಂದರೆ ಸರಿಸುಮಾರು ಅರ್ಧ ಗಂಟೆಗಳ ತರುವಾಯ. ಸಮಯ ಮೀರಿದ್ದರೂ ಯಾವುದೇ ಗಡಿಬಿಡಿ ಇಲ್ಲದೆ ಮಿತ್ರರೆಲ್ಲಾ ಸಾವಧಾನದಿಂದಲೇ ಸರತಿ ಸಾಲಿನಲ್ಲಿ ಸಾಗಿ ಉಟೋಪಚಾರ ಸಾಂಗವಾಗಿ ನೆರವೇರಲು ಸಹಕರಿಸಿದರು. ಈ ಬಾರಿಯ ಔತಣದ ವಿಶೇಷತೆ ಎಂದರೆ ಉತ್ತರ ಕರ್ನಾಟಕದ ರೊಟ್ಟಿ. ಅಡಿಕೆ ಹಾಳೆಯ ತಟ್ಟೆಯೊಳಗೆ ಮೊತ್ತಮೊದಲಿಗೆ ಬಿದ್ದಿದ್ದು ಉತ್ತರ ಕರ್ನಾಟಕದ ಸ್ಪೆಷಲ್ ಖಡಕ್ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಹೆಸರು ಕಾಳಿನ ಕೋಸಂಬ್ರಿ, ಸವಿಯಾದ ಸಿಹಿ ಹೋಳಿಗೆ, ಮೇಲೊಂದಿಷ್ಟು ಘಮಘಮಿಸುವ ತುಪ್ಪ.! ಖಡಕ್ ರೊಟ್ಟಿ ಒಲ್ಲೆ ಎಂದವರಿಗೆ ಚಪಾತಿ ಸವಿಯುವ ವ್ಯವಸ್ಥೆ ಮಾಡಿದ್ದುದು ವಿಶೇಷತೆಯಲ್ಲಿ ವಿಶೇಷವಾಗಿತ್ತು. ಇವಿಷ್ಟೇ ಅಲ್ಲದೆ ರೈಸ್ ಬಾತ್, ಅನ್ನ-ರಸಂ, ಅನ್ನ-ಮೊಸರು, ಜೊತೆಗೆ ಹಸೀಸೊಪ್ಪು ಹಾಗೇ ತರಕಾರಿಗಳಾದ ಹೆಚ್ಚಿದ ಈರುಳ್ಳಿ, ಸೌತೆಕಾಯಿ, ಕ್ಯಾರೇಟ್,  ಮತ್ತು ಕಡಿ ಮಾವಿನ ಉಪ್ಪಿನ ಕಾಯಿ ಸಹ ಸಾತ್ ನೀಡಿ ಭೋಜನ ಪ್ರಿಯರ ಸಂತೃಪ್ತಿಗೆ ಕಾರಣವಾದವು. ಹೀಗೆ ಸವಿಯಾದ ಊಟದೊಂದಿಗೆ ನಮ್ಮ ಸ್ನೇಹ ಕೂಟದ ಮೊದಲ ಘಟ್ಟ ಸಮಾಪ್ತಿಗೊಂಡಿತು.

ಸ್ನೇಹಿತರೆಲ್ಲರ ಊಟದ ತರುವಾಯ ಸರಿಸುಮಾರು 2:30 ಕ್ಕೆ ಸ್ನೇಹಕೂಟದ ಎರಡನೇ ಘಟ್ಟ 'ಸಭಾ ಕಾರ್ಯಕ್ರಮ' ಶುರುವಾಯಿತು. ಇಲ್ಲಿ ಸಭಾ ಕಾರ್ಯಕ್ರಮ ಎನ್ನುವುದು ತುಂಬಾ ಹಿರಿದಾಯಿತೋ ಏನೋ, ಆಸಕ್ತರಿಂದ ಅಭಿಪ್ರಾಯ ಪಡೆಯುವ ಒಂದು ಪುಟ್ಟ ವೇದಿಕೆ ಕಾರ್ಯಕ್ರಮ ಶ್ರೀಮತಿ ಶ್ರೀವಾಣಿಯವರ ಕಂಠಸಿರಿಯ ಗಾನವಾಣಿಯೊಂದಿಗೆ ಪ್ರಾರಂಭವಾಯಿತು. ನಿರೂಪಣೆಯ ಹೊಣೆ ಹೊತ್ತುಕೊಂಡಿದ್ದ ರೇವಪ್ಪ, ಮಾತನಾಡ ಬಯಸುವವರ ಪಟ್ಟಿಯನ್ನು ಮೊದಲೇ ಸಿದ್ದಪಡಿಸಿಟ್ಟುಕೊಂಡಿದ್ದರಿಂದ 'ನೀ ಹೇಳು, ನೀ ಹೇಳು' ಎಂದು ಒತ್ತಾಯಪಡಿಸಿ ಅಭಿಪ್ರಾಯ ಹೇಳಿಸಬೇಕಾದ ಗೋಜಲು ಇರಲಿಲ್ಲ.

ನಿರೂಪಕರ ಅಣತಿಯಂತೆ ಎರಡು ಮಾತನಾಡಲು ಮೊದಲು ಬಂದವರು ವಿಜಯ ಕುಮಾರ್. "ಅನ್ನದಾತ ಸುಖೀಭವಃ" ಎಂದು ಅನ್ನದಾತರನ್ನು ನೆನೆದು, 'ಹೊಟ್ಟೆಗೆ ಸವಿಯೂಟ ಸೇರಿ, ರಾಸಾಯನಿಕ ಕ್ರಿಯೆಗಳ ಪರಿಣಾಮದಿಂದ ಮನಸ್ಸಿಗೆ ನಿದ್ರೆ ತರಿಸುತ್ತಿರುವ ಈ ಸಂದರ್ಭದಲ್ಲಿ ನನ್ನ ಭಾಷಣ, ಭೂಷಣವಲ್ಲ' ಎಂದು ಅಳುಕುತ್ತಲೇ ಮಾತು ಆರಂಭಿಸಿದ ವಿಜಯಕುಮಾರ್ ಹೇಳಬೇಕೆಂದಿದ್ದನ್ನು ಅಚ್ಚುಕಟ್ಟಾಗಿ ಹೇಳತೊಡಗಿದರು. ಕಿರಿಯ ಸಹಾಯಕರ ತಂಡದ ಒಗ್ಗಟ್ಟಿನ ಬಗ್ಗೆ ಒತ್ತಿ ಹೇಳಿದ ವಿಜಯಕುಮಾರ್ ಈ ಒಗ್ಗಟ್ಟು ನಿರಂತರವಾಗಿರಬೇಕಾದರೆ ಒಬ್ಬನೇ ನಾಯಕನಿಂದ ಸಾಧ್ಯವಿಲ್ಲ. ಹಾಗೆಯೇ ಪ್ರತಿಯೊಬ್ಬರೂ ನಾಯಕರಾಗುವುದರಿಂದಲೂ ಸಾಧ್ಯವಿಲ್ಲ. ಆದುದರಿಂದ ಇಲಾಖೆಗೊಬ್ಬರಂತೆ ಮುಂದಾಳುಗಳನ್ನು ನೇಮಿಸುವ ಅಗತ್ಯತೆ ಇದೆ ಎಂದರು. ಕಿರಿಯ ಸಹಾಯಕರ ಈ ಸ್ನೇಹ ಕೂಟಕ್ಕೆ 'ಜೇನು ಮನೆ' ಎಂದು ನಾಮಕರಣ ಮಾಡುವ ಸಲಹೆಯನ್ನಿತ್ತರು. ಕೇವಲ ಊಟಕ್ಕೋಸ್ಕರ ಒಗ್ಗಟ್ಟಾಗಿರುವುದರಲ್ಲಿ ಅರ್ಥವಿಲ್ಲ ಈ ಊಟಕ್ಕೂ ಮೀರಿದ ಇನ್ನಿತರ ಕಾರ್ಯ ಚಟುವಟಿಕೆಗಳಲ್ಲಿ ಜೇನ್ನೊಣಗಳಂತೆ ನಾವು ತೊಡಗಿಕೊಂಡು ಸಚಿವಾಲಯದಲ್ಲೇ ಈ ತಂಡ ಒಂದು ಉತ್ತಮ ಹೆಸರನ್ನು ಗಳಿಸಿ ಮಿಂಚುವಂತಾಗಬೇಕು ಎಂದು ಆಶಿಸಿದರು.

ನಂತರ ನೂರ್ ಹಾಜಿರಾ ರವರು ಮಾತನಾಡಿ ವಿಜಯಕುಮಾರ್ ರವರ ಮಾತುಗಳನ್ನು ಅನುಮೋದಿಸಿದರು. ನಮ್ಮ ಒಗ್ಗಟ್ಟಿನ ಬಗೆಗೆ ಸಂತಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಮುನಿರಾಜು ರವರು  ಪರಿಚಯಸ್ತ ಕಿರಿಯ ಸಹಾಯಕರಿಂದಲೇ ಈ ಮೊದಲು ಅವರಿಗಾದ ಕಹಿ-ಸಿಹಿ ಅನುಭವಗಳನ್ನು ಹಂಚಿಕೊಂಡರು. ಮುಂದೆ ಈ ರೀತಿಯ ಕಹಿ ಅನುಭವಗಳಿಗೆ ಆಸ್ಪದವಾಗದಂತೆ ನಮ್ಮೆಲ್ಲ ಮಿತ್ರರು ಸೌಜನ್ಯದಿಂದ ನಡೆದುಕೊಳ್ಳಬೇಕೆಂದು ಕೋರಿದರು. 

ನಂತರ ಹರೀಶ್ ರವರು ಮಾತನಾಡಿ, ಸಚಿವಾಲಯದಲ್ಲಿ ಅಸ್ತಿತ್ವದಲ್ಲಿರುವ ಭಾಷಾಂತರಕಾರರ ಹುದ್ದೆಗಳಿಗೆ ಗ್ರೂಪ್-ಸಿ ವರ್ಗದ ಅರ್ಹ ನೌಕರರನ್ನೇ ಭರ್ತಿಮಾಡಬೇಕು ಎಂಬ ಬಗ್ಗೆ  ಹೋರಾಟ ನಡೆಯುತ್ತಲಿದ್ದು  ಮುಂದಿನ ದಿನಗಳಲ್ಲಿ ನಮ್ಮ ತಂಡದ ಕಿರಿಯ ಸಹಾಯಕರು  ಇಂತಹ ಸೇವಾ ವಿಷಯಗಳ ವಿಚಾರವಾಗಿ ನಡೆಯುವ ಹೊರಾಟಗಳಿಗೆ  ಸಂಪೂರ್ಣ ಸಹಕಾರವನ್ನು ನೀಡಲು ಅಣಿಯಾಗಬೇಕು ಎಂದರು.

ಕಾರ್ಯಕ್ರಮದ ಅಂತ್ಯದಲ್ಲಿ ಇತ್ತೀಚೆಗೆ ಬ್ರಹ್ಮಚರ್ಯದಿಂದ ಗೃಹಸ್ತಾಶ್ರಮಕ್ಕೆ ಕಾಲಿರಿಸಿದ ಮಿತ್ರರಾದ ದತ್ತರಾಜ್ ಮಠದ್ ಹಾಗೂ ಪ್ರಕಾಶ್.ಎನ್. ಇವರಿಗೆ ಸ್ನೇಹ ಕೂಟದ ಪರವಾಗಿ ಶೀತಲ್ ಕುಮಾರ್ ಹಾಗೂ ಯಶವಂತ್ ರವರು ಕಿರುಕಾಣಿಕೆಗಳನ್ನು ನೀಡಿ ಗೌರವಿಸಿದರು.

ಸರಿಯಾಗಿ 3:00 ಗಂಟೆಯ ವೇಳೆಗೆ ನಮ್ಮ ಸ್ನೇಹಕೂಟದ ಎರಡನೇ ಘಟ್ಟವೂ ಸಮಾಪ್ತಿಗೊಂಡಿತು.

ಈ ಬಾರಿ ವಿಶೇಷವಾಗಿ ನಮ್ಮೊಂದಿಗೆ 2007 ರಲ್ಲಿ ಕಿರಿಯ ಸಹಾಯಕರಾಗಿ ಆಯ್ಕೆಯಾಗಿದ್ದು ತರುವಾಯ ಪಿ.ಡಿ.ಓ. ಆಗಿ ನೇರನೇಮಕ ಗೊಂಡು ಪ್ರಸ್ತುತ ಕೋಲಾರದಲ್ಲಿ ಪಿ.ಡಿ.ಓ. ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಬು ಶೇಷಾದ್ರಿ ಯವರು ಆಗಮಿಸಿದ್ದರು.

ಈ ಬಾರಿಯ ಸ್ನೇಹ ಕೂಟದ ಉಸ್ತುವಾರಿಯನ್ನು ಶಿವಕುಮಾರ್, ವೇಣುಗೋಪಾಲ್, ಪರಶುರಾಮ.ಕೆ., ಮಧುಚಂದ್ರ.ಬಿ.ಆರ್, ಫಿರೋಜ್ ಷಾ ಸೋಮನಕಟ್ಟೆ, ವಿಠ್ಠಲ ಮಾಲಿಕಗೊಂಡ, ಹೇಮಂತ್ ಕುಮಾರ್, ಗುರುರಾಜ ಎಸ್.ಆರ್., ದತ್ತರಾಜ ಮಠದ್, ರಾಮಗಣಪತಿ ಭಟ್, ಪ್ರಕಾಶ್ ಎನ್. ಹಾಗೂ ಫಣಿರಾಜಕುಮಾರ್ ಯು.ಎಲ್.ಎನ್. ಮೊದಲಾದ 12 ಮಂದಿ ಸ್ನೇಹಿತರು ವಹಿಸಿಕೊಂಡಿದ್ದರು.

ಇನ್ನು ಮುಂದಿನ ಬಾರಿಯಿಂದ  ತಲಾ ಇಪ್ಪತ್ತಿಪ್ಪತ್ತು ಮಂದಿ ಸಂಭ್ರಮದ ದಿನದ ಜವಾಬ್ದಾರಿಯನ್ನು ವಹಿಸಿಕೊಂಡು ನಮ್ಮ ಸೇವೆಯಾಧ್ಯಂತ ಹೀಗೇ ಮುಂದುವರೆಸಿಕೊಂಡು ಹೋಗುವಂತೆ ತಿಳಿಸಲಾಯಿತು.ಅಂದಹಾಗೆ ನಮ್ಮ ತಂಡದಲ್ಲಿನ ಸ್ನೇಹಿತರು ಹಾಗೂ ಈ ಬಾರಿ ಪಾಲ್ಗೊಂಡು ಸ್ನೇಹ ಕೂಟಕ್ಕೆ ಕಳೆತಂದವರ ಸಂಖ್ಯಾ ವಿವರ ಹೀಗಿದೆ.
ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಯಾದ 139 ಜನರಲ್ಲಿ
118 ಜನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದು.
--
ತದನಂತರದಲ್ಲಿ 31 ಜನ ಬೇರೆ ಹುದ್ದೆಗೆ ಪರೀಕ್ಷೆ ಬರೆದು ಆಯ್ಕೆಯಾಗಿ ಮುಂದೆ ಸಾಗಿದ್ದಾರೆ.
--
02 ಜನ ವಯಸ್ಸಲ್ಲದ ವಯಸ್ಸಲ್ಲಿ ಇಹಲೋಕ ತ್ಯಜಿಸಿದ್ದಾರೆ.
--
ಈಗ 139+12(ಹೆಚ್ಚುವರಿ ಆಯ್ಕೆ ಪಟ್ಟಿ) ಜನ ಕಿರಿಯ ಸಹಾಯಕರಾಗಿ ಆಯ್ಕೆಯಾಗಿ ಬಂದ ನಾವುಗಳು 
ಇದೀಗ 10.01.2013ರಲ್ಲಿದ್ದಂತೆ 86 ಜನ ಕಿರಿಯ ಸಹಾಯಕರಾಗಿ ಉಳಿದುಕೊಂಡಿದೀವಿ.
(86 ಜನರ ಪೈಕಿ 54 ಜನ ಸಹಾಯಕರಾಗಿ ಮುಂಬಡ್ತಿ ಪಡೆದಿದ್ದು 22+9=31 ಜನರಿಗೆ ಇನ್ನೇನು ಬಡ್ತಿ ಸಿಗಲಿದೆ.)
--
ಇಂತಿಪ್ಪ 86 ಜನ ಕಿರಿಯ ಸಹಾಯಕರುಗಳ ಪೈಕಿ ನಿನ್ನೆ ಹಾಜರಾಗಿದ್ದು 70 ಜನ.
ಜೊತೆಗೆ
ಬೇರೆ ಪರೀಕ್ಷೆ ಬರೆದು ಆಯ್ಕೆಯಾಗಿ ಮುಂದೆ ಸಾಗಿದ್ದ 07 ಜನ ನಮ್ಮ ಸಂಗಡ ನಿನ್ನೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಹೀಗಾಗಿ 10.01.2013 ರ ಸಂಭ್ರಮಕ್ಕೆ ಭರ್ತಿ 77 ಜನ ಸಾಕ್ಷಿಯಾದಂತಾಯ್ತು.

-ರೇಣುಕಾತನಯ
ಸಂಖ್ಯಾವಿವರ: ರೇವಪ್ಪ

1 comment:

ADM - nistrator said...

ಉತ್ತಮ ಪದ ನಿರೂಪಣೆ ಪರಶುರಾಂ.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago