29 November 2012

ಕಾಪಿ-ಪೇಸ್ಟ್


ಕಾಪಿ-ಪೇಸ್ಟ್
ಮೊನ್ನೆ ಶನಿವಾರ ಬೆಂಗ್ಳೂರಲ್ಲಿ ಮಳೆ ಬಿದ್ದ ಮುಂಜಾನೆ ಗಂಟೆ ಹತ್ತಾಗಿದ್ರೂ ಹೊರಗೆ ಮಬ್ಬು ಸರಿದಿರಲಿಲ್ಲ. ಮುಸುಕಿದ ಮೋಡದ ಬೆಸುಗೆಗೆ ಅಂಜಿದವನಂತೆ ರವಿವರ್ಯ ತನ್ನ ಕಿರಣಗಳನ್ನು ಧರೆಯೆಡೆಗೆ ಕಳುಹಿಸಲು ಹರಸಾಹಸ ಪಡುತ್ತಿದ್ದ. ಶ್ವೆಟರ್ ಒಳಗೆ ಮೈತೂರಿಸಿ, ಬಿಸಿ ಚಹಾಕ್ಕೆ ತುಟಿ ಆನಿಸಿ, ಶೆಟ್ಟರ್ ಭಾಷಣ ಕೇಳಿ, ಸ್ಪೋಟಕ ಸುದ್ಧಿಯೇನಾದರೂ ಬರಬಹುದೇನೋ ಎಂಬ ಕುತೂಹಲದಿಂದ ಗರಹಿಡಿದವರಂತೆ ಅರಚುವ ಸುದ್ದಿವಾಹಿನಿಗಳೊಂದೊಂದನ್ನೇ ಬದಲಿಸಿ ಬದಲಿಸಿ ನೋಡುತ್ತಿದ್ದ ನಾನು ಅದ್ಯಾವ ಮಾಯೆಯಿಂದಲೋ ಬಂದ ಸೂರ್ಯ ರಶ್ಮಿಯೊಂದು ಮೈತಾಕಿದಂತಾಗಿ ರೋಮಾಂಚನಗೊಂಡು ಹೊರ ನೋಡಿದೆ. ಮೋಡಗಳ ಬೆಸುಗೆಯನ್ನೇ ಇನಿತಿನಿತು ಕರಗಿಸಿ ಕರಗಿಸಿ ದಿನಕರನು ಮಬ್ಬಿನ ಮುಸುಕನ್ನು ಸರಿಸುತ್ತಲಿದ್ದ. ಇಂತಹ ಸವಿಸಮಯದಲ್ಲಿ ಹೊರಗೆ ಸುತ್ತಾಡುವ ಮನಸಾಗಿ ಚಪ್ಪಲಿ ಮೆಟ್ಟಿ ಬೀದಿಗಿಳಿದೆ.

ಬೀದಿಗಿಳಿದು ತುಸು ದೂರ ನಡೆಯುವಷ್ಟರಲ್ಲಿ  ಗೆಳೆಯ ಮಾದೇಸನ ನೆನಪಾಯಿತು. ಬೀದಿಯ ಕೊನೆಗಿದ್ದ ಅವನ ಮನೆಯೆಡೆಗೆ ದೂರದಿಂದಲೇ ದೃಷ್ಠಿ ಬೀರಿದೆ. ಅವನ ಮನೆಯೆದುರು ಮೋಡಗಳ ಮರೆಯಿಂದ ಇಣುಕಿ ಇಣುಕಿ ಮರೆಯಾಗುತ್ತಿದ್ದ ಬಿಸಿಲಿನ ಝಳಕ್ಕೆ ಮೈಯೊಡ್ಡಿ,  ಚಪ್ಪಡಿ ಕಲ್ಲಿನ ಮೇಲೆ ಕುಳಿತ ಆಕೃತಿಯೊಂದು ದೂರದಿಂದಲೇ ಅಸ್ಪಷ್ಟವಾಗಿ ಕಾಣಿಸಿತು. ಅವನು ಮಾದೇಸನೇ ಇರಬೇಕೆಂದು ಬಗೆದೆನಾದರೂ ಮಾದೇಸನೋ ಅಥವಾ ಅವನ ತಮ್ಮ ಸೀಲಿಂಗನೋ ಎಂಬ ಸಣ್ಣ ಕನ್ಪ್ಯೂಸನ್ನು ಮನಸ್ಸಿನಲ್ಲಿ  ಶುರುವಾಯಿತು.

ಸೀಲಿಂಗ ಮಾದೇಸನ ಚಿಕ್ಕಪ್ಪನ ಮಗ. ಹುಟ್ಟಿದಾಗ ಅವನಿಗಿಟ್ಟ ಹೆಸರು 'ಶ್ರೀಲಿಂಗ' ಅಂತ. ಅದು ಅವರಜ್ಜಿಯ ಬಾಯಲ್ಲಿ ಸೀಲಿಂಗ ಆಗಿ ಎಲ್ಲರೂ ಹಾಗೇ ಕರೆಯೋದೇ ರೂಢಿ ಆಗಿತ್ತು. ಅದಕ್ಕೆ ಶ್ರೀಲಿಂಗನದೇನೂ ಆಕ್ಷೇಪವಿರಲಿಲ್ಲ ಆದರೆ  ಕೆಲವರು 'ಸ್ತ್ರೀಲಿಂಗ' ಎಂದು ಕರೆದು ರೇಗಿಸಿದಾಗ ಅವನ ಕೋಪ ನೆತ್ತಿಗೇರುತ್ತಿತ್ತು. ತನ್ನೆಸರಿನ ಬಗ್ಗೆ  ಅವನಿಗೇ ಜಿಗುಪ್ಸೆ ಮೂಡುತ್ತಿತ್ತು. ಇಂತಹ ಸೀಲಿಂಗನಿಗೆ ನಿನ್ನೆ ತಾನೇ ನಾನು " ಸೀಲಿಂಗು ಸ್ವಲ್ಪ ಕೆಲ್ಸ ಐತೆ, ನಾಳೆ ಮನೆ ಹತ್ರ ಬಾರೋ" ಅಂದದ್ದಕ್ಕೆ " ಇಲ್ಲಣ್ಣೋ ನಾಳೆ ನಂಗೆ ಹಿಸ್ಟ್ರಿ ಎಕ್ಸಾಂ ಐತಿ, ಓದ್ಕೋಬೇಕೂ, ಎಕ್ಸಾಂ ಮುಗುದ್ ಮೇಲೆ ಬತ್ತೀನಿ ಬೇಕಾರೆ" ಎಂದು ಬರಲಾಗದಿದ್ದಕ್ಕೆ ಕಾರಣ ಹೇಳಿದ್ದ. ಇದೆಲ್ಲಾ ನೆನಪಾಗಿ ಕಲ್ಲು ಚಪ್ಪಡಿಯ ಮೇಲೆ ಕುಳಿತಿದ್ದ ಆಕೃತಿ ಸೀಲಿಂಗನದಲ್ಲ ಮಾದೇಸನದೇ ಅಂತ ಡಿಸೈಡು ಮಾಡಿ ಹತ್ರತ್ರ ಹೋಗಿ ನೋಡ್ತೀನಿ, ಅವನು ಮಾದೇಸನಲ್ಲ.  ಸೀಲಿಂಗ! ಕಯ್ಯಲ್ಲೊಂದು ಮೋಟುದ್ದ ಕಡ್ಡಿ ಹಿಡಿದು, ನೆಲ ಕೆದರ್ತಾ ಕುಂತಿದ್ದ.! 'ಎಲಾ ಇವ್ನಾ..?, ನಿನ್ನೆ ನನಗೇ ಸುಳ್ಳು ಹೇಳಿ ಟಾಂಗ್ ಕೊಟ್ನಲ್ಲ.! ಅಂತ ಮನಸ್ಸಲ್ಲೇ ಎಣಿಸಿ ಹತ್ತಿರ ಹೋದವನೇ " ಏನ್ಲಾ ಬಡ್ಡೆತ್ತದ್ದೇ, ಹಿಸ್ಟ್ರಿ ಎಕ್ಸಾಂ ಐತಿ ಅಂತ ಸುಳ್ಳು ಬೊಗಳಿ, ಇಲ್ಲಿ ಕುಕ್ಕರಿಸಿಕೊಂಡಿದೀಯಾ? ಅಂತ ಥೇಟು ಸಿನಿಮಾ ಆ್ಯಕ್ಟ್ರು ದೊಡ್ಡಣ್ಣನ ಸ್ಟೈಲಲ್ಲಿ ದಬಾಯಿಸತೊಡಗಿದೆ. ಎಷ್ಟು ಬೈದ್ರೂ, ಏನಂದ್ರೂ ಮಾತೇ ಇಲ್ಲ! ಕೆಳಗಿಳಿಸಿದ ಮುಖ ಮೇಲೆತ್ತದೆ, ನೆಲದ ಮೇಲೆ ಚಿತ್ತಾರ ಬರಿತಾನೇ ಇದ್ದ. ಯಾಕೋ ಉಸಾರಿಲ್ಲಿರಬೇಕು ಅಂದ್ಕೊಂಡು "ಯಾಕ್ಲಾ ಉಸಾರಿಲ್ವೇನ್ಲಾ?" ಎನ್ನುತ್ತ ಅವನೆದುರು ಹೋಗಿ ಕುಂತು ಅವನ ಗಲ್ಲಕ್ಕೆ ಕೈ ಹಾಕಿ ಮುಖ ಮೇಲೆತ್ತಿದೆ. ಕಣ್ಣು ಕೆಂಪಾಗಿತ್ತು!, ಮುಖ ಕಪ್ಪಾಗಿತ್ತು!. ನನ್ನ ಕೈ ಸ್ಪರ್ಷವಾದೊಡನೆ "ನಾನೇನೂ ಸುಳ್ಳು ಹೇಳುಲ್ಲ" ಎಂದು ಕೈ ಕೊಡವಿ ಎದ್ದು ನಿಂತ.

ಮತ್ಯಾಕೆ ಎಕ್ಸಾಂಗೆ ಹೋಗಿಲ್ಲ?

ಹೋಗಿದ್ದೆ...ಎಂದು ಕ್ಷೀಣ ಧ್ವನಿಯಲ್ಲೇ ಉಸುರಿದ.

ಅವನ ಸುಳ್ಳನ್ನು ನಂಬಲಾರದವನಾಗಿದ್ದ ನಾನು "ಅಯ್ಯೋ ತಮ್ಮಾ.. ನನ್ನತ್ರ ಡ್ರಾಮಾ ಮಾಡ್ಬೇಡ. ಅದ್ಯಾವಾಗ ಹೋಗಿದ್ದೆ? ನೂರು ಮಾರ್ಕ್ಸಿಗೆ ಬರ್ದು ಮುಗ್ಸಿ ಇಷ್ಟು ಬೇಗ ಬಂದ್ಬಿಟ್ಯಾ ನೋಡು ಟೈಮೆಸ್ಟು? ಎನ್ನುತ್ತಾ ನನ್ನ ತುಂಬ ತೋಳಿನ ಸ್ವೆಟರ್ ಒಳಗೆ ಹುದುಗಿದ್ದ ಕೈ ಗಡಿಯಾರವನ್ನು ಅವನ ಮುಖದೆದುರು ಹಿಡಿದೆ.

ಹನ್ನೊಂದು ಗಂಟೆ... ಎಂದ.

ಹ್ಞೂಂ ನಂಗೊತ್ತು, ಇಷ್ಟು ಬೇಗ, ಅದೂ ಹಿಸ್ಟ್ರಿ ಎಕ್ಸಾಂ ಬರೆದು ಬರುವಂತಹ ಅಸಾಮಿ ನೀನಲ್ಲ. ಹ್ಞೂಂ ಏನಾಯ್ತೇಳು? ಎಂದು ಅವನ ಬಗ್ಗೆ ಅವನಿಗಿಂತಲೂ ಹೆಚ್ಚಿಗೆ ಅರಿತಿರುವವನಂತೆ ಪ್ರಶ್ನಿಸಿದೆ. 

ಕ್ಷಣ ಹೊತ್ತು ಮಾತನಾಡಲಿಲ್ಲ, ಕೊನೆಗೊಮ್ಮೆ ಕ್ಷೀಣ ಸ್ವರದಲ್ಲಿ "ಸ್ಕ್ವಾಡ್ ಬಂದು ಡಿಬಾರ್ ಮಾಡಿದ್ರು" ಎಂದ. ಅವನ ಮಾತಿನಲ್ಲಿ ಅವಮಾನದ ಚುಳುಕಿತ್ತು. ಕೋಪದ ನಂಜಿತ್ತು.

"ಅಯ್ಯೋ... ನಿನಗೇನು ಬಂದಿತ್ತೋ ದೊಡ್ಡ ರೋಗ? ಅದೇನು ಕಾಪಿ ಹೊಡಿದೆ ? ಎಂದು ಸ್ವಲ್ಪ ಬಿರುಸಾಗಿಯೇ ಕೇಳಿದೆ. ಈ ಕಾಪಿ ಹೊಡಿಯೋದು, ಹೊಡೆದೊರನ್ನು ಸಮರ್ಥಿಸೋದು ನನಗೆ ಹಿಡಿಸದು. ಆದರೂ ಏನ್ ಮಾಡೋದು, ಕಂಪ್ಯೂಟರ್ ಎಂಬ ಮಾಯಾಂಗನೆಯಿಂದ ಕೆಲಸ ತೆಗೆಸಿಕೊಳ್ಳುವಾಗ ಶಾರ್ಟ್ ಕಟ್ ನಲ್ಲಿ  'ಕಾಪಿ-ಪೇಸ್ಟ್' ಮಾಡದೆ ಇರೋದು ಸಾಧ್ಯವಿಲ್ಲ. ನಾನು ಎರಡೆರಡು ಬಾರಿ "ಸೀಲಿಂಗ, ಅದ್ಹೇಂಗೆ ಕಾಪಿ ಹೊಡ್ದು, ಸಿಕ್ಕು ಬಿದ್ದೆ  ಹೇಳು" ಎಂದು ದಬಾಯಿಸಿದಾಗ, "ಏನೂ ಇಲ್ಲ ನೋಡಣ್ಣೋ, ಎಂದು ತನ್ನ ಎಡಗೈ ಹಸ್ತವನ್ನು ಮುಂದು ಮಾಡಿದ. ನೋಡಿದೆ, ಅದರಲ್ಲಿ ಹೈದರಾಲಿ ಸತ್ತಿದ್ದು, ಟಿಪ್ಪು ಹುಟ್ಟಿದ್ದು, ಕೃಷ್ಣದೇವರಾಯ ಆಳಿದ್ದು, ಹೀಗೆ ಏನೇನೋ ಹತ್ತಾರು ಇಸ್ವಿಗಳ ಚಿಕ್ಕ ಚಿಕ್ಕ ಅಕ್ಷರಗಳಿದ್ವು. "ಇದಿಷ್ಟಕ್ಕೇ ಬಡ್ಡಿಮಕ್ಳು ಈ ಹಾಳು ಇಸ್ಟ್ರೀನ ಇನ್ನೂ ಒಂದು ವರ್ಸ ಓದೋ ಹಂಗೆ ಮಾಡಿದ್ರು" ಅಂತ ಏನೇನೋ ಬಯ್ಯಲಾರಂಬಿಸಿದ. ಇಷ್ಟು ಹೊತ್ತು ಸುಪ್ತವಾಗಿದ್ದ ಅವನ ಅಸಹನೆ ನನ್ನೆದುರು ಅನಾವರಣಗೊಳ್ಳತೊಡಗಿತು. ಅವನ ಬಯ್ಗುಳಗಳ ಸ್ಪೀಡಿಗೆ ಬ್ರೇಕು ಹಾಕುವಂತೆ ನಾನು "ನೋಡು, ಕಡ್ಡಿಯಲ್ಲಿ ತಿಂದ್ರೂ ಕಕ್ಕಾನೇ, ಕೈಯಲ್ಲಿ ತಿಂದ್ರೂ ಕಕ್ಕಾನೇ, ಯಾಕ್ ಮಾಡ್ಬೇಕಾಗಿತ್ತು ಇಂತ ಹಲ್ಕಾ ಕೆಲ್ಸ ಎಂದೆ.

ಮಾತನಾಡಲಿಲ್ಲ.....

"ನಿಮ್ ಮುಸುಡಿಗೆ ಬೆಂಕಿ ಹಾಕಾ.. ಓದೋ ಟೈಮಲ್ಲಿ ಓದೋಲ್ಲ, ಕಾಲೇಜ್ ಟೇಮಲ್ಲಿ ಕಾಲೇಜಿಗೋಗೊಲ್ಲ, ಕಿವಿಗೊಟ್ಟು ಪಾಠ ಕೇಳೋದಂತೂ ನಿಮ್ ಹಣೇಬರದಲ್ಲೇ ಇಲ್ಲ. ಯಾವುದಾದ್ರೂ ಒಂದು ಹುಡ್ಗಿ ಕಿಸಕ್ ಅಂತ ಹಲ್ಲು ಬಿಟ್ರೆ ಅವಳ ಹಿಂದೆ ಬಸ್ ಸ್ಟ್ಯಾಂಡು, ರೈಲು ಟೇಸನ್ನು ಅಲಿತೀರಿ, ಈಗ ಕಾಪಿ ಹೊಡಿಯೋದಲ್ದೇ ಮತ್ತೇನ್ ಆಗ್ತೈತಿ ನಿಮ್ಮಿಂದ" ಎಂದು ಜೋರು ಜೋರಾಗಿ ದಬಾಯಿಸತೊಡಗಿದೆ.
ಒಂದು ಹದದ ಧೈರ್ಯದಿಂದಲೇ ನನ್ನೆಡೆ ನೋಡುತ್ತಿದ್ದ ಸೀಲಿಂಗ "ಅಣ್ಣಾ... ಸ್ಟಾಪ್, ಸ್ಟಾಪ್, ಸ್ಟಾಪ್ ನಿನ್ ಅನುಭವನೆಲ್ಲಾ ನಂಗೆ ಹೇಳ್ಬೇಡಾ.." ಎನ್ನುತ್ತಾ ನನ್ನ ಜಂಘಾಬಲವನ್ನೇ ಹುದುಗಿಸುವ ಪ್ರಯತ್ನ ಮಾಡಿ, "ಈ ಹಾಳಾದ್ ಹಿಸ್ಟ್ರಿ ನನ್ ತಲಿಗೆ ಹೋಗೋದೇ  ಇಲ್ಲ, ಅದ್ಕೇ.... ಅಂತ ರಾಗ ಎಳೆದ.

"ಅದ್ಕೆ ಕೈಯಲ್ಲಿ ಗೀಚ್ಕೊಂಡು ಹೋಗೋದಾ..? ನಾಚ್ಕೆ ಆಗ್ಬೇಕು ನಿಮಗೆ" ಎಂದು ಅವನ ತಪ್ಪನ್ನು ಅವನಿಗೆ ಅರಿವು ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೆ. "ನಂಗೆ ಯಾಕ್ ನಾಚ್ಕೆ ಆಗ್ಬೇಕು, ಆ ಸ್ಕ್ವಾಡ್ ನನ್ ಮಕ್ಳಿಗೆ ನಾಚ್ಕೆ ಆಗ್ಬೇಕು" ಎನ್ನುತ್ತಾ "ನಿನ್ನೇದು ಪೇಪರ್ ನೋಡಿದ್ಯಾ? ಎಂದ. ದಿನ ಪತ್ರಿಕೆಯನ್ನು  ಇಂಚಿಂಚು ಬಿಡದೆ ಓದುವ ನಾನು "ಹ್ಞೂಂ  ಯಾಕೆ ?" ಎಂದು ದೊಡ್ಡ ಪ್ರಶ್ನಾರ್ಥಕದ ರೂಪದಲ್ಲಿ ಅವನ ಮುಖ ನೋಡಿದೆ. 
"ಅದ್ಯಾವನೋ ಮೈಲಾರಪ್ಪ ಅಂತ ಬೆಂಗ್ಳೂರು ಯೂನಿವರ್ಸಿಟಿಗೇ ರಿಜಿಸ್ಟ್ರರ್ರು ಅಂತೆ. ಅಂತವುನೇ ಕಾಪಿ ಹೊಡುದು ಪಿಹೆಚ್ಡಿ ಪಡ್ದು, ತನ್ನ ಸಿಸ್ಯನಿಗೂ ತನ್ನ ಪ್ರಬಂಧದ್ದೇ ನೂರಿಪ್ಪತ್ತು ಪುಟ ಮಕ್ಕಿ ಕಾ ಮಕ್ಕಿ ಮಾಡ್ಸಿ ಪಿಹೆಚ್ಡಿ  ಕೊಡ್ಸಿದಾನಂತೆ. ಇಂತಹ ದೊಡ್ ದೊಡ್ಡೋರೇ ಕಾಪಿ ಹೊಡ್ದು ದೊಡ್ಡೋರಾಗಿ ಮೆರಿತಿದಾರಂತೆ ಅಂತದ್ರಲ್ಲಿ ಅಂಗೈ ನೋಡಿ ಕಾಪಿ ಹೊಡೆದ ನಾನೇನು ಮಹಾ!?" ಎಂಬಿತ್ಯಾದಿ ದೊಡ್ಡ ದೊಡ್ಡ ವಿಚಾರ ಎತ್ತಿ ಸೀಲಿಂಗು ಬಡಬಡಾಯಿಸತೊಡಗಿದ.

ಸೀಲಿಂಗನ ಮಾತಿಗೋ, ಏರುತ್ತಿರುವ ಬಿಸಿಲಿನ ತಾಪಕ್ಕೋ ಗೊತ್ತಿಲ್ಲ ನನ್ನ ಸ್ವೆಟರ್ ಒಳಗಿನ ಬನಿಯನ್ ಒದ್ದೆಯಾಗುತ್ತಿತ್ತು.


-ರೇಣುಕಾತನಯ

2 comments:

ADM - nistrator said...

ಅಕ್ಷರ ಪಯಣ ಪುನರಾರಂಭಿಸಿದ ಪರಶುರಾಂಗೆ ಅಭಿನಂದನೆಗಳು !!
ನಿಮ್ಮ ಬರಹ ಎಂದಿನಂತೆ ಆಪ್ತವಾಗಿದೆ.
ಈ ಕೃತಿಚೌರ್ಯ ಧಾಟಿಯ ಕೆಲಸಗಳು ಇತ್ತಿಚೆಗೆ ತುಂಬ ಹೆಚ್ಚುತ್ತಿವೆ. ರೀಮೇಕ್ ಸಿನಿಮಾ ತೆರನಲ್ಲಿ ಬೇರೆ ಮೂಲದಿಂದ ಯಥಾವತ್ ಭಟ್ಟಿ ಇಳಿಸಿದ ಬರಹ - ಪ್ರಬಂಧ ಗಳನ್ನು ತಮ್ಮದೆಂದು ಹೇಳಿಕೊಳ್ಳುವ ಜನ ಹೆಚ್ಚುತ್ತಿದ್ದಾರೆ.

ಮುಂಚೂಣಿ ಕನ್ನಡ ಪತ್ರಿಕೆಗಳ ಕೆಲವು ಭಟ್ಟರುಗಳು ದಿನವೂ ಬೈಟು ಕಾಫಿ ಕುಡಿಸುತ್ತೇವೆ ಎಂದು ಹೇಳಿ, ಆಂಗ್ಲಭಾಷೆಯ ಯಥಾವತ್ ತರ್ಜುಮೆಗಳನ್ನ ನೀಡುತ್ತಿದ್ದಾರೆ. ಆ್ಯಪಲ್ ನಂಥ ಸೃಜನಶೀಲ ಕಂಪೆನಿಗಳನ್ನು ಕೊಂಡಾಡುವ ಅವರು ತಮ್ಮ ಸೃಜನಶೀಲತೆಯನ್ನು ಪೂರ್ತಿ ಸೂರ್ಯಶಿಕಾರಿ ಮಾಡುವ ಹುಮ್ಮಸ್ಸಿನಲ್ಲಿ ಕಳೆದುಕೊಳ್ಳುತ್ತಿದ್ದಾರೆ ಎಂಬ ಸಂಶಯ. ಅವರಿಗೆ ಚಾಲಾಕು ಬುದ್ಧಿಯ ಸಿಂಹಗಳೂ ಕೈಜೋಡಿಸಿವೆ ಎಂಬುದು ನಿಮಗೆಲ್ಲ ತಿಳಿದ ವಿಚಾರ. ಇತ್ತೀಚಿನ ದಿನಗಳಲ್ಲಿ ಕನ್ನಡ ದಿನಪತ್ರಿಕೆಗಳಲ್ಲಿ ಕ್ರೈಂ & ರಾಜ್ಯದ ಸುದ್ದಿಗಳನ್ನು ಹೊರತುಪಡಿಸಿದರೆ, ಬಹುತೇಕ ಸುದ್ದಿಗಳು ಸ್ವಯಂ ಪ್ರತಿನಿಧಿಯ ಸುದ್ದಿ ಸಂಪಾದನೆ ಬದಲಿಗೆ ಆಂಗ್ಲ ಅವತರಣಿಕೆಯ ಯಥಾವತ್ ವರದಿಗಳಾಗಿರುತ್ತವೆ. ಪತ್ರಿಕಾ ಪ್ರತಿನಿಧಿಗಳು ಅನುವಾದಕರಾಗಿ ಬದಲಾಗುತ್ತಿದ್ದಾರೇನೋ ಎಂಬ ಸಂಶಯ ಮೂಡದೇ ಇರದು.

ಇಂಥದೊಂದು ಗಂಭೀರ ವಿಚಾರವನ್ನು ತೆಳುಹಾಸ್ಯದ ಜೊತೆಗೆ ತಳುಕು ಹಾಕಿ ನೆನಪಿಸಿಕೊಟ್ಟ ಪರಶುರಾಂ ಅಭಿನಂದನಾರ್ಹರು !!

ಪರಶು.., said...

ಯಸ್ ರೇವಪ್ಪಾ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..
ನೀವು ಹೇಳುವಂತೆ ಇಂದಿನ ಪತ್ರಿಕೆ, ದೂರದರ್ಶನ ಮೊದಲಾದ ಸಮೂಹ ಮಾಧ್ಯಮಗಳ ಹಲವು 'ಐಟಂ' ಗಳು ಎಲ್ಲೆಲ್ಲಿಂದಲೋ ಎತ್ತಿಕೊಂಡಿರುವಂತಹವೇ ಆಗಿವೆ. ಸೃಜನ ಶೀಲತೆ ಮರೀಚಿಕೆ ಯಾಗಿದೆ. ಇದನ್ನು ಭಟ್ಟರು ಸಹ ಕಳೆದವಾರದ ತಮ್ಮ ನೂರೆಂಟು ನೋಟದಲ್ಲಿ ಒಪ್ಪಿಕೊಂಡಿದ್ದಾರೆ ಅವರೇ ಹೇಳುವಂತೆ ಹಿಂದೆಲ್ಲಾ ಒಂದು ಲೇಖನ ತಯಾರಿಸಲು ಮಾಹಿತಿಗಾಗಿ ಲೇಖಕ ತುಂಬಾ ಕಷ್ಟಾ ಪಡಬೇಕಾಗಿತ್ತು. ಹಲವು ಪುಸ್ತಕಗಳನ್ನು ಓದಬೇಕಾಗಿತ್ತು. ಈಗ ಅಂತಹ ತಾಪತ್ರಯಗಳೇ ಇಲ್ಲ ಕೈಯಲ್ಲೊಂದು ಲ್ಯಾಪ್ ಟಾಪೋ, ಪಾಮ್ ಟಾಪೋ ಇದ್ರೆ ಸಾಕು. ಅಂತರ್ಜಾಲದಲ್ಲಿ ಮಾಹಿತಿಗೇನೂ ಬರವಿಲ್ಲವಲ್ಲ. ಭಟ್ಟರು-ಶೆಟ್ಟರು ಯಾರಿಗಾದ್ರೂ ಭಟ್ಟಿ ಇಳಿಸುವ ಸೃಜನಶೀಲತೆಯೊಂದಿದ್ರೆ ಸಾಕು ಅಲ್ವೇ..

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago