03 May 2010

ಗ್ರಾಂಪಚಾಯ್ತಿ ಯಲಕ್ಸನ್ನಾಗೆ ಗೆದ್ದೋರೇನು ಮಂತ್ರಿ ಆಗ್ತಾರಾ..?


ಗ್ರಾಂಪಚಾಯ್ತಿ ಯಲಕ್ಸನ್ನಾಗೆ ಗೆದ್ದೋರೇನು ಮಂತ್ರಿ ಆಗ್ತಾರಾ..?

ನಿನ್ನೆ ರಾತ್ರಿ ಅಕಾಲಿಕವಾಗಿ ಬಂದ ಮಳೆ ಕೆಲವೊತ್ತು ಸುರಿದು ಶಾಂತವಾಗಿತ್ತಾದರೂ, ಮಳೆಗಿಂತಲೂ ಮೊದಲೇ ಶುರುವಾದ ಗಾಳಿ ಮಾತ್ರ ತಡರಾತ್ರಿಯವರೆಗೂ ನಿಂತಿರಲಿಲ್ಲ. ಗಾಳಿಯ ಸೆಳೆತಕ್ಕೆ ಸಿಕ್ಕು ಎಳೆಯ ಮಾವಿನ ಕಾಯಿಗಳಷ್ಟೇ ಅಲ್ಲದೇ ದೊಡ್ಡ ದೊಡ್ಡ ಬೊಕ್ಕೆ ಹಲಸಿನ ಕಾಯಿಗಳೂ ಉದುರಿ ಬಿದ್ದಿದ್ದವು. ಆಚೆ ಬೀದಿಯ ಮನೆಯೊಂದರ ಮೇಲೆ ಪಕ್ಕದ ಮನೆಯ ತೆಂಗಿನ ಮರದ 'ಹ್ಯಾಡ' ಕಳಚಿ ಬಿದ್ದಿದ್ದರಿಂದ ಬೆಳ್ಳಂಬೆಳಿಗ್ಗೆ ಅವೆರಡೂ ಮನೆಗಳ ಮಂದಿಯ ನಡುವೆ 'ಬೈಯ್ಗುಳ ಸಮರ' ನಡೆದು ತಣ್ಣಗಾಗಿತ್ತು. ಗಾಳಿಯ ಅವಾಂತರದ ಬೇಸರಕ್ಕಿಂತಲೂ ಮಳೆಯ ಆಗಮನಕ್ಕೆ ಖುಷಿಗೊಂಡು ರತ್ನಕ್ಕನ ಚಹಾದಂಗಡಿಯ ಕಟ್ಟೆಯ ಮೇಲೆ ಬೀಡಿ ಬಸಿಯನನ್ನು ಹೊರತುಪಡಿಸಿ ಎಲ್ಲರೂ ಪವಡಿಸಿದ್ದರು. ಬಸಿಯನೂ ರತ್ನಕ್ಕನ ಚಹಾದಂಗಡಿಯ ಕಡೆ ಮುಖಮಾಡಿ ಹೊರಟಿದ್ದನಾದರೂ ಅರ್ಧ ದೂರ ಬಂದಿರುವಾಗ ಬೆಳಿಗ್ಗೆ ಬೈಗುಳಗಳು ಕೇಳುತ್ತಿದ್ದ ಮನೆಯ ನೆನಪಾಗಿ 'ಏನಾಗಿರಬಹುದು?' ಎಂಬ ಅಸ್ಪಷ್ಟ ಪ್ರಶ್ನೆಯೊಂದು ಮನದಲ್ಲಿ ಮೂಡಿದ್ದರಿಂದ ಕಡೆ ನಡೆದಿದ್ದ. ದೂರದಿಂದಲೇ ಮನೆಯ ಮೇಲೆ ಕಣ್ಣಾಡಿಸಿ ಮಳೆಯಿಂದಾಗಿರುವ ಅವಾಂತರವನ್ನು ಕಣ್ಣಲ್ಲೇ ಅಂದಾಜಿಸಿ ಮತ್ತೆ ಚಹಾದಂಗಡಿಗೆ ವಾಪಸ್ಸಾದ....


-----


ಡೋಂಟಿ : ಏನ್ ಬಸ್ಯಣ್ಣಾ ಯಾಕ್ ಲೇಟು..? ಬೆಳ್ ಬೆಳಿಗ್ಗೆ ಎತ್ತಾ ಹೋಗಿದ್ದೆ..?

 

ಬಸ್ಯ : ಎಲ್ಲಿ ಹೋಗ್ಲಿ ಸಾಯಾಕೆ... ಬೆಳಿಬೆಳಿಗ್ಗೆ ರಾಮಕ್ಕ ಬೊಬ್ಬೆ ಹೊಡ್ಕಂತಿದ್ಲು ಅದೇನಾತು ನೋಡಾನ ಅಂತ ಹೋಗಿದ್ದೆ...
 

ಸೀತೆ : ತಂಪು ಹೊತ್ನಾಗೆ ಅದೆಂತ ಸಾಯಾ ಮಾತಾಡ್ತೀಯ ಬಸ್ಯಣ್ಣ, ರಾತ್ರೆ ಅಸ್ಟೆ ಮಳೆ ಬಿದೈತಿ, ಈಗ ಸತ್ರೆ ನಿನ್ನ ಹೆಣ ಸುಡೋದು ಕಷ್ಟ... ಬಿಡ್ತು ಅನ್ನು... ರಾಮಕ್ಕನಿಗೇನಾಗಿತ್ತು, ಬೆಳಿಬೆಳಿಗ್ಗೆ ಬಡಕೊಳ್ಳಾಕೆ..? 

ಬಸ್ಯ : ನಿಂಗೆ ಗೊತ್ತಿಲ್ಲೇನು ಸೀತಕ್ಕಾ... ಅವುರು ಪಕ್ಕದ ಮನೆ ಗುಜ್ಜಾಣಿಯ ತಂಗಿನ ಮರದ ಹಸಿ ಹ್ಯಾಡ ರಾತ್ರಿ ಬಂದ ಗಾಳಿಗೆ ರಾಮಕ್ಕನ ಮನೆ ಮೇಲೆ ಬಿದೈತಿ, ರಾಮಕ್ಕನ ಮನೇವು ಹತ್ತದಿನೈದು ಹಂಚು ಪುಡಿಗುಟ್ಟಿ ಹೋಗ್ಯಾವು.. 

ರತ್ನಿ : ಹೋ ಹೋ ಹೋ ಸರಿ ಹೋತು ಬಿಡು... ಅಲೆಕಣೆ ಬಾಯಿಗೆ ಕಬ್ಬು ಕೊಟ್ಟಂಗಾತು...  

ಡೋಂಟಿ : ಅಂದ್ರೆ..? 

ರತ್ನಿ : ಬಯ್ಯೋಕೆ ಯಾರೂ ಸಿಗ್ದೆ ರಾಮಕ್ಕ ಬಡವಾಗಿದ್ಲು.... ಇನ್ನು ಗುಜ್ಜಾಣಿ ಸಿಕ್ಕಿದ್ನ.. ಇನ್ನೊಂದು ವರ್ಸ ಆದ್ರೂ ಬಯ್ತಾನೆ ಇರ್ತಾಳೆ... 

ಸಣ್ಣೀರ : ಹ್ಹ ಹ್ಹ ಹ್ಹ ಹ್ಹ ಹೌದು ರತ್ನಕ್ಕಾ ನನ್ಗೂ ಬೆಳ್ಗೆ ಕೇಳಿಸ್ತು... ತೆಂಗಿನ ಮರ ನಟ್ಟೋರ್ನ, ನಟ್ಟೋರ ಅಪ್ಪುನ್ನ, ಅವ್ವುನ್ನ, ಅವುರ ಮಕ್ಳುನ್ನ ಎಲ್ರೂನು ಸೇರ್ಸಿ ಸುಪ್ರಭಾತ ಹಾಡ್ತಾ ಇದ್ಲು ರಾಮಕ್ಕ..! 

ಬೀರ : ಗುಜ್ಜಾಣಿ ಅಪ್ಪ ಬೇಕುಪ್ಪಂಗೆ ಅವತ್ತೇ ಹೇಳಿದ್ದೆ... ಮನೆ ಪಕ್ಕಕೆ ತಂಗಿನ ಮರ ನಡಬ್ಯಾಡ, ದೊಡ್ಡುಕಾದು ಮ್ಯಾಲೆ ಅಕ್ಕಪಕ್ಕದರಿಗೆ ತೊಂದ್ರೆ ಆಗ್ತೈತಿ, ನಡುಬೇಕು ಅಂತಿದ್ರೆ ಮನೆ ಮುಂದುಕ್ಕೆ ಮುವತ್ತು ಗಜ ಬಿಟ್ಟು ನಡು ಅಂತ... ನನ್ನ ಮಾತು ಕೇಳ್ಬೇಕಲ್ಲ. ಹೋಗ್ಲಿ ಬಿಡು ಈಗ ಅನುಭವುಸ್ಲಿ... 

ಸೋಮ : ಈಗ ಅನುಭವಿಸುಕ್ಕೆ ಅವುನೆಲ್ಲಿದಾನೆ ಬೀರ್ಮಾಂವಾ... ಗೊಟುಕ್ ಅಂದು ಆಗ್ಲೆ ಹತ್ತೊರ್ಸಾತು...! 

ಸೀತೆ : ಹೌದು ಚಿಗಪ್ಪಾ, ಮನೆ ಮುಂದುಕ್ಕೆ ಅಸ್ಟು ಜಾಗ ಇತ್ತಲ್ಲ... ಪಕ್ಕಕೆ ಹೋಗಿ ಯಾಕೆ ನಟ್ಟ ಮುದುಕ..!? 

ಬೀರ : ಹಾಸಿಗಿಂದ ಎದ್ದು ತಕ್ಸಣ ಕಿಡಿಕಿಕಂಡ್ಯಾಗೆ ತೆಂಗಿನ ಸಸಿ ಕಾಣ್ಬೇಕ್ ಅಂತ ಅಲ್ಲಿ ನಟ್ಟ... 

ಸಣ್ಣೀರ : ಈಗ ರಾಮಕ್ಕನ ಬಯ್ಗುಳ ಕೇಳಾಕಾಗ್ದೆ ಗುಜ್ಜಾಣಿ ಹೆಂಡ್ತಿ ಕಿಡಿಕಿ ಕಂಡೀನ ಬಂದ್ ಮಾಡ್ಯಾಳಂತೆ.....! 

ಡೋಂಟಿ : ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ವೆರಿ ನೈಸ್.... ವೆರಿ ನೈಸ್... ಮೇಲೆ 

ಬಸ್ಯ : ಈಗ ಮನೆ ರಿಪೇರಿ ಮಾಡಿಕೊಡು ಇಲ್ಲಾಂದ್ರೆ ಕರ್ಚು ಕೊಡು ಅಂತ ಗುಜ್ಜಾಣಿನ ಪೀಡಿಸ್ತಿದಾಳಂತೆ ರಾಮಕ್ಕ... 

ಸೋಮ : ಬಿಡ್ತಾಳ ಮತ್ತೆ...? 

ಸೀತೆ : ಪಾ ಅಪ್ಪ ಮಾಡಿದ ತಪ್ಪಿಗೆ ಮಗ ದಂಡ ಕೊಡ್ಬೇಕಾ....? 

ರತ್ನಿ : ಹೂ ಮತ್ತೆ ಸತ್ತೋದ ಅಪ್ಪ ಎದ್ದು ಬಂದು ಕೊಡಾಕಾಗ್ತೈತಾ..!? 

ಬೀರ : ರಾಮಕ್ಕ ಗಟ್ಟಿಗಿತ್ತಿ, ದಂಡ ಕಕ್ಕುಸ್ದೆ ಬಿಡೋಳಲ್ಲ ತಿಳ್ಕ...! 

ಡೋಂಟಿ : ಹೋಯ್ ಚಿಗಪ್ಪಾ ಒಂದು ಗುಡ್ ಐಡ್ಯಾ.... ಸರಿ ಎಲಕ್ಞನ್ನಿಗೆ ರಾಮಕ್ಕನ ನಿಲ್ಸಿದ್ರೆ ಹ್ಯಾಂಗೆ....?? 

ಬೀರ : ಯಾರ್ನಾದ್ರೂ ನಿಲ್ಸಿಕಳ್ರಪ್ಪಾ... ಯಲಕ್ಸನ್ ಸುದ್ದೀನೇ ಬ್ಯಾಡ..... ಯಲಕ್ಸನ್ ಬಂದ್ ಮ್ಯಾಲೇ ಊರೆಲ್ಲಾ ಹಾಳಾಗೋಯ್ತು... 

ಸಣ್ಣೀರ : ನಮ್ಮೂರು ಒಂದೇ ಅಲ್ಲ ದೊಡಪ್ಪಾ.... ಎಲ್ಲಾ ಊರು ಹಿಂಗೇ... ಆದ್ರೆ ಸರ್ಕಾರ ಯಲಕ್ಸನ್ ತಂದಿರೋದು ಊರು ಹಾಳಾಗ್ಲಿ ಅಂತ ಅಲ್ಲ ಉದ್ದಾರಾಗ್ಲಿ ಅಂತ ದೊಡಪ್ಪಾ...ಆದ್ರೆ...  

ಡೋಂಟಿ : ಹೌದು ಚಿಗಪ್ಪಾ ಎಗ್ಜಾಕ್ಟ್ ಲಿ ಕರೆಕ್ಟ್..... ಜನ್ರ ಕೈಗೆ ಅಧಿಕಾರ ಸಿಗ್ಬೇಕು, ಜನ್ರ ಕೆಲ್ಸ ಬೇಗ್ ಬೇಗ ಆಗ್ಬೇಕು ಅಂತ ಸರ್ಕಾರನೇ ಗ್ರಾಮ್ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಅಂತ ಮಾಡೈತಿ.... ಎಲ್ಲಾ ಕೆಲ್ಸುಕ್ಕೂ ವಿಧಾನ ಸೌಧುಕ್ಕೆ ಹೋಗಾಕಾಗ್ತೈತಾ ನೀನೇ ಹೇಳು..? 

ಬೀರ : ಅದೇನೋ ಸರಿ ಕಣ್ರೋ... ನಮ್ ಕಾಲ್ದಾಗೆ ಸಣ್ಣ ಪುಟ್ಟ ಜಗಳ, ಹೊಡದಾಟ ಎಲ್ಲಾ ನ್ಯಾಯ ಪಂಚಾತಿಗೆ ಬಂದ್ರೆ ಇಲ್ಲೇ ಅರಳಿಕಟ್ಟೆ ಬುಡದಾಗೋ, ಬೀರಪ್ಪ ದೇವರ ಗುಡ್ಯಾಗೋ ತಿರ್ಮಾನ ಆಗೋವು... ಈಗ ಕೋರ್ಟು, ಕಚೇರಿ ಅಂತ ಅಲ್ದಾಡ್ತಾವು... ಆದ್ರೂ ಬಗೆಹರಿಯಾದಿಲ್ಲ ಇದ್ಕೇನಂತಿರಾ.. ? 

ರತ್ನಿ : ಹೌದೌದೌದು  

ಸಣ್ಣೀರ : ಅದ್ಹಂಗೇ ದೊಡಪ್ಪಾ, 'ಅಮ್ಮನವ್ರು ಪಟ್ಟಕ್ಕೆ ಬಂದಾಗ, ಅಯ್ಯನವ್ರು ಚಟ್ಟಕ್ಕೆ ಹೋದ್ರಂತೆ' ಜನ್ರೆಲ್ಲ ಬುದ್ದಿವಂತ್ರಾದಂಗೆ ಬದಲಾಗ್ತಾ ಹೋಗ್ತಾರೆ, ಹಳೇದ್ನಲ್ಲಾ ಬಿಡ್ತಾ ಬರ್ತಾರೆ...  

ಸೀತೆ : ಅಂದ್ರೆ ಹಿಂದಿನ ಕಾಲ್ದೋರೆಲ್ಲಾ ದಡ್ರೂ, ಇಂದಿನವುರು ಮಾತ್ರ ಬುದ್ದಿವಂತ್ರು ಅಂತಾನಾ...? 

ಸಣ್ಣೀರ : ಹಂಗ್ಯಲ್ಲ ಸೀತಕ್ಕಾ....  

ರತ್ನಿ : ಮತ್ಯಂಗೆ..?? 

ಡೋಂಟಿ : ಹೇಯ್ ಹೋಗ್ಲಿ ಬಿಡ್ರಿ... ಈಗ ಎಲಕ್ಸನ್ನು ಹ್ಯಾಂಗೆ ಮಾಡಾನ ಹೇಳ್ರೀ.... 

ರತ್ನಿ : ಬೀರ್ಮಾಂವಾ ಸರಿ ನೀನೇ ಒಂದ್ ಕೈ ನೋಡು...ಎಲಕ್ಸನ್ನಿಗೆ ನಿಂತು ಬಿಡು..!. 

ಬೀರ : ಹೇಯ್ ರತ್ನಿ ಏನ್ ಮಾತು ಅಂತ ಆಡ್ತೀಯಾ....ಊರು ಹೋಗು ಅಂತೈತಿ, ಕಾಡು ಬಾ ಅಂತೈತಿ ಈಗ ನಾನು... ಯಲಕ್ಸನ್ನಿಗೆ... 

ಡೋಂಟಿ : ಯಾಕ್ ನಿಲ್ಬಾರ್ದು ಚಿಗಪ್ಪಾ.... ನಿಂದೇನ್ ಮಹಾ ವಯ್ಸು.... ನಮ್ ದ್ಯಾವೇಗೌಡ್ರು, ಬಂಗಾರಪ್ಪಗಿಂತ ದೊಡ್ಡೋನಾ ನೀನು... ವಯಸಿಗೂ ಅವುರು ಹ್ಯಾಂಗೆ ರಾಜಕೀಯ ಮಾಡ್ತಾರೆ ನೋಡು... 

ಬಸ್ಯ : ಅವುರ ಕುಲಕಸುಬೆ ಅದು...! 

ಸಣ್ಣೀರ : ಹ್ಹ ಹ್ಹ ಹ್ಹ ಹೋಗ್ಲಿ ಬಿಡು.... ರತ್ನಕ್ಕಾ ಸರಿ ಲೇಡಿಸ್ ಸೀಟಿಗೆ ನೀನೇ ನಿಂತ್ಕ, ಜನ್ರಲ್ ಸೀಟಿಗೆ ಡೋಂಟ್ವರಿ ನಿಂತ್ಕಳ್ಲಿ  

ಸೋಮ : ಮತ್ತೆ ರಾಮಕ್ಕನ ನಿಲ್ಸಾನ ಅಂದ ಡೋಂಟ್ವರಿ...!? 

ಸಣ್ಣೀರ : ಹ್ಹ ಹ್ಹ ಹ್ಹ ಹ್ಹ ರತ್ನ್ಕನ ಬದ್ಲಿಗೆ ರಾಮಕ್ಕನ ನಿಲ್ಸಾನ ಅಂತನಾ.... ಹಂಗೇನಾದ್ರೂ ಆದ್ರೆ ಗ್ರಾಮ್ ಪಂಚಾಯ್ತಿ ತುಂಬ ಗದ್ಲೋ ಗದ್ಲ..!! 

ಸೀತೆ : ಹೇಯ್ ಡೋಂಟಿ ಹಂಗೇನಾರೂ ಮಾಡಿ ಬಿಟ್ಟಿಯಾ... ಹುಷಾರ್.. ರತ್ನಕ್ಕನ ಬಿಟ್ಟು ಯಾರು ನಿಂತ್ರು ನಾನು ಓಟು ಹಾಕಾದಿಲ್ಲ ತಿಳ್ಕ...! 

ರತ್ನಿ : ಹೋಗ್ಲಿ ಬಿಡೆ ಸೀತೆ... ಅವುರಿಗೆ ಬೇಕಾದೋರ್ನೆ ನಿಲ್ಲಿಸ್ಲಿ.. ಗ್ರಾಂಪಚಾಯ್ತಿ ಯಲಕ್ಸನ್ನಗೆ ಗೆದ್ದೋರೇನು ಮಂತ್ರಿ ಆಗ್ತಾರಾ..? 

ಡೋಂಟಿ : ಡೋಂಟ್ವರಿ ಸೀತಕ್ಕಾ.. ಸುಮ್ನೆ ತಮಾಸೆಗೆ ಅಂದೆ... ರತ್ನಕ್ಕನ ಬಿಟ್ರೆ ಊರಾಗೆ ಯಾರಿದಾರೆ ಹೇಳು ಎಬಿಲಿಟಿ ಇರೋರು...! 

ಬಸ್ಯ : ಎಗ್ ಜಾಕ್ಟ್ ಲಿ ಕರೆಕ್ಟ್...!!! 

ಸಣ್ಣೀರ : ಡೋಂಟೀ ನಿನ್ ಗಾಳಿ ಬಸಿಯನ ಮೇಲೆ ಬೀಸಿದೆ ನೋಡು... 

ರತ್ನಿ : ಹ್ಹ ಹ್ಹ ಹ್ಹ ಹ್ಹ 

ಡೋಂಟಿ : ಬಸ್ಯಣ್ಣಾ.. 'ಸದರಕೊಟ್ರೆ ಪದರಕ್ಕೆ ಕೈ ಹಾಕ್ದ' ಅನ್ನೋಹಂಗೆ ನನ್ನನ್ನೇ ಅಣಕಿಸ್ತೀಯಾ...? 

ಬಸ್ಯ : ಛೇ ಛೇ ಹಂಗೇನಿಲ್ಲ... ನಾನೂ ಇಂಗ್ಲೀಸು ಕಲಿತಿದೀನಿ...! 

ಸೀತೆ : ಹ್ಹ ಹ್ಹ ಹ್ಹ ಹ್ಹ ಜನ್ರು ಬುದ್ದಿವಂತ್ರಾಗ್ತಿದಾರೆ ಡೋಂಟ್ವರಿ.....!!   ಅಹ್ಹ ಹ್ಹ ಹ್ಹಾ
 

? 

ಕಟ್ಟೇಶ.  
kattematu@gmail.com

1 comment:

ಮಂಜು said...

ಕಟ್ಟೆ ಮ್ಯಾಲಿನ ಮಾತು ಹದಿನೈದು ದಿನಕ್ಕೊಮ್ಮೆಯಾದ್ರು ಬರ್ತಿರೋದಕ್ಕೆ ಖುಷಿಯಿದೆ. ಪ್ರಚಲಿತ ವಿಷಯಗಳನ್ನೇ ಇಟ್ಟುಕೊಂಡು ಗ್ರಾಮ್ಯ ಸೊಗಡಿನಲ್ಲಿ ಮುಗ್ಧ ಪಾತ್ರಗಳಿಂದಲೇ
ಸೂಕ್ಷ್ಮವಾಗಿ ಹೇಳಬೇಕಾದ್ದನ್ನು ಹೇಳುವ ಜಾಣ್ಮೆಗೆ ನಮ್ಮ ಅಭಿನಂದನೆಗಳು. ಹೆಚ್ಚು ತೀಕ್ಷ್ಣವಾಗಿ ಪ್ರಬಲವಾಗಿ ವಿಷಯ ಮಂಡಿಸುವ ಕೆಲಸ ಇನ್ನು ನಿರಂತರವಾಗಿ ಸಾಗಲಿ. ಇದನ್ನೇ ಒಂದು ಸಂಕಲನ ಮಾಡಿ ಪ್ರಕಟಿಸಲು ನಾನು ಪ್ರಯತ್ನಿಸುವೆ. ಬರೀತಿರಿ ಸಾರ್.

-ಮಂಜು
ಮನನ ತಂಡದ ಪರವಾಗಿ.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago