19 April 2010

'ಕಟ್ಟೆ ಮ್ಯಾಲಿನ ಮಾತು'


ಪ್ರಿಯ ಓದುಗರೆ, 
ಬೀರ, ಬಸ್ಯ, ರತ್ನಿ, ಸೀತೆ, ಸೋಮ, ಡೋಂಟ್ವರಿ, ಸಣ್ಣೀರ ಇವರ ಪರಿಚಯ ನಿಮಗಿದೆಯಾ..? ನೀವು ಈ ಬ್ಲಾಗ್ ನ ಹೊಸ ವೀಕ್ಷಕರಾದರೆ  ಇವರ ಪರಿಚಯ ನಿಮಗೆ ಇರಲಿಕ್ಕಿಲ್ಲ. ಹಳಬರಾದರೆ ಖಂಡಿತ ಇವರನ್ನು ನೀವು ಮರೆತಿರಲಿಕ್ಕಿಲ್ಲ. ತುಂಬಾ ದಿನಗಳ ನಂತರ  ಇವರ 'ಕಟ್ಟೆ ಮ್ಯಾಲಿನ ಮಾತು' ಮತ್ತೆ ಮುಂದುವರೆಯುತ್ತಿದೆ...  ನಿಮ್ಮ ಟೀಕೆ-ಟಿಪ್ಪಣಿ, ಸಲಹೆ-ಸೂಚನೆಗಳಿಗೆ ಅನುವಾಗಲೆಂದು ಇ-ಮೇಲ್ ವಿಳಾಸ kattematu@gmail.com ಸಹ ನೀಡಲಾಗಿದೆ... ಓದಿ ಅನಿಸಿದ್ದನ್ನು ತಿಳಿಸಿ... 

" ಗುಂಡಿ ತೋಡಿ ಹುಗುದು ಅದರ ಮ್ಯಾಲೊಂದು ಗಿಡ ನೆಟ್ರಾತು..... "
ಚೈತ್ರ ಮಾಸದ ಬಿರುಬಿಸಿಲಿನಿಂದ ತಪ್ಪಿಸಿಕೊಳ್ಳಲೋ ಎಂಬಂತೆ  ಸೀತೆ, ಸೋಮ, ಡೋಂಟ್ವರಿ, ಸಣ್ಣೀರ ಎಲ್ಲರೂ ರತ್ನಕ್ಕನ ಚಹಾದಂಗಡಿಯ ನೆರಳಿನಲ್ಲಿ ಆಸೀನರಾಗಿದ್ದರು. ಅಲ್ಲಿ ಬೀರಮಾವನ ಆಗಮನ ಇನ್ನೂ ಆಗಿರಲಿಲ್ಲವಾದ್ದರಿಂದ ಇವರ ಮಾತಿಗೊಂದು ಮಿತಿ ಇರಲಿಲ್ಲ. ಹೀಗೆ ಮನಸ್ಸಿಗೆ ತೋಚಿದ್ದನ್ನು  ಕಚಪಚ ಹರಟುತ್ತಿರುವಾಗಲೇ  ಬೀರ ಮತ್ತು  ಅವನೊಂದಿಗೆ ಬೀಡಿ ಬಸ್ಯನೂ ಬಂದು ರತ್ನಕ್ಕನ ಚಹಾದಂಗಡಿಯ ಕಟ್ಟೆಯ ಮೇಲೆ ಕುಳಿತರು. ಬಿಸಿಲಿನಿಂದ ತುಂಬಾ ಬಳಲಿದಂತೆ ಕಂಡ ಬೀರ ಮಾವ ತನ್ನ ಹಣೆ ಮತ್ತು ಕೆನ್ನೆಯ ಮೇಲೆ ಹರಿಯಲೆತ್ನಿಸುತ್ತಿದ್ದ ಬೆವರಿನ ಹನಿಗಳನ್ನು ತನ್ನ ಕೆಂಪು ಚೌಕದಿಂದ ಒರೆಸಿಕೊಳ್ಳುತ್ತಿದ್ದಾಗಲೇ ರತ್ನಕ್ಕ ಅವನನ್ನು ಮಾತಿಗೆಳೆದಳು.


ರತ್ನಿ : ಮಾಂವಾ.. ಈ ಬಿರು ಬಿಸ್ಲಾಗೆ ಎಲ್ಲಿಗೋಗಿದ್ದೆ...? ಒಂದ್ ಲೋಟ ಚಾ ಮಾಡಿ ಕೊಡ್ಲಾ....?

ಬೀರ : ಎಲ್ಲಿಗೋಗೋದು,  ಇಲ್ಲೆ ಗದ್ದೆ ತಗ್ಗಲ್ಲಿದ್ದೆ.... ಏಯ್ ರತ್ನಿ  ಈ ಬೆಂಕಿ ಹಂಗೆ ಸುಡೋ ಬಿಸ್ಲಾಗೆ ಬಿಸಿ ಚಾ ಕುಡಿಸಿ ನಮ್ಮನ್ನ ಏನು ಮಾಡ್ಬೇಕು ಅಂತ ಮಾಡೀಯಾ..? ಒಳ್ಳೆ ಹೆಸ್ರು ಕಾಳು ಇದ್ರೆ ತಣ್ಣಗೆ ತಂಪು ಮಾಡಿಕೊಡು ಸಾಕು..

ಬಸ್ಯ : ಹೌದು ರತ್ನಕ್ಕಾ... ಈ ಬೇಸ್ಗೆ ಕಾಲ ಮುಗಿಯೋ ವರ್ಗೂ ಚಾ,  ಕಾಪಿ ಇದ್ಯಾವುದೂ ಮಾಡಾಕೋಗ್ಬೇಡ.. ಒಳ್ಳೆ ನಿಂಬೆಹಣ್ಣಿನ ಪಾನಕಾನೋ, ಹೆಸರು ಕಾಳು ಶರಬತ್ತೋ, ನೀರು ಮಜ್ಜಿಗೆನೋ.. ಯಾವುದಾದ್ರೂ ಆತು, ಕುಡುದ್ರೆ ಒಳ್ಳೆ ತಣ್ಣಗ್ ಐಸ್ ತಿಂದಂಗಾಗ್ಬೇಕು ಅಂತಾದ್ದು ಮಾಡಿಕೊಡು...

ಡೋಂಟಿ : ಕರೆಕ್ಟ್,  ಕರೆಕ್ಟ್  ಕಾಲಕ್ಕೆ ತಕ್ಕಾಂಗೆ ನೀನೂ ಚೇಂಜ್ ಆಗ್ಬೇಕು ರತ್ನಕ್ಕಾ...?

ರತ್ನಿ : ಆಯ್ತಾಯ್ತ, ಇನ್ಮೇಲೆ ಹಂಗೇ ಮಾಡಿದ್ರಾಯ್ತು... ಬೀರ್ಮಾಂವಾ ಇಷ್ಟೊತ್ನಾಗೆ ಗದ್ಯಾಗೆನ್ಮಾಡ್ತಿದ್ದೆ ?

ಬೀರ : ಏನೂ ಇಲ್ಲ... ಈ ಕಳ್ಳ ಸೋಮನ ದನ ನಿನ್ನೆ ಕಬ್ಬಿನ ಗದ್ದಿಗೆ ನುಗ್ಗಾಕೋಗಿ ಬೇಲಿ ಮುರ್ದುತ್ತು, ಅದುಕ್ಕೊಂದಿಷ್ಟು ಮುಳ್ಳು ಮುಚ್ಚಾನ ಅಂತಿದ್ದೆ ಈ ಬಿಸ್ಲು ಬಿಡ್ಬೇಕಲ್ಲ.... ಅಷ್ಟ್ರಲ್ಲಿ ಬಸ್ಯ ಬಂದ ಇಬ್ರೂ ಸೇರಿ ಮುಚ್ಚಿ ಬಂದ್ವಿ....

ಸೀತೆ : ಏನ್ ದೊಡಪ್ಪಾ  ನಮ್ ದನನಾ..!?...

ಬಸ್ಯ : ಅಲ್ಲಲ್ಲ ನಮ್ಮ ಸೋಮಣ್ಣನ ದನ..!!

ಸಣ್ಣೀರ : ಅಹ್ಹಹ್ಹಹ್ಹ  ಏನ್ ಸೀತಕ್ಕಾ ನೀವ್ ಗಂಡ-ಹೆಂಡ್ತಿ ಬೇರೆ ಬೇರೆನೇ  ದನ ಸಾಕ್ತಿದೀರಾ...!?

ಸೀತೆ : ಏಯ್ ಹಂಗೇನಿಲ್ಲ ಬಿಡು, ಇರೋದೆ ಒಂದು ದನ. ಈ ಬಸ್ಯಣ್ಣ ಚೇಷ್ಟೆ ಮಾಡ್ತಾನೆ ಅಸ್ಟೇ..

ಬಸ್ಯ : ನಾನ್ಯಾಕೆ ಚೇಷ್ಟೆ ಮಾಡ್ಲಿ, ಸೋಮ ನೀನೇ ಹೇಳು, ಆ ದನ ಯಾರ್ದು ? ನಿಂದೋ, ಸೀತಕ್ಕಂದೋ ?

ಡೋಂಟಿ : ಯಾಕ್ ಸೋಮಣ್ಣಾ ಸುಮ್ನೇ ಕುಂತು ಬಿಟ್ಟೆ, ನಾವು ಇಷ್ಟು ಮಾತಾಡಿದ್ರೂ ತುಟಿಪಿಟಿಕ್ ಅನ್ನಾದಿಲ್ಲ. ಡೋಂಟ್ವರಿ ಸೋಮಣ್ಣ ಚಿಗಪ್ಪೇನು ನಿನ್ನ ದನ ಅವ್ನ ಗದ್ದೆಬೇಲಿ ಮುರ್ದುದ್ಕೆ  ದಂಡ ಹಾಕಾದಿಲ್ಲ ಮಾತಾಡು.....

ಸೋಮ : ದಂಡದ ಪ್ರಶ್ನೆ ಅಲ್ಲ ಡೋಂಟಿ. ದನ ಹ್ಯಾಂಗೆ ಮಾವನ  ಗದ್ದಿಗೆ ಹೋತು ಅಂತ ಯೋಚ್ನೆ ಮಾಡ್ತಾ ಇದೀನಿ....

ಬೀರ : ಹ್ಯಾಂಗೆ ಹೋತು ಅಂದ್ರೆ..? ನೀನು ನೆಟ್ಟಗೆ ನಿಗಾ ನೋಡೋದಿಲ್ಲ ಹೋಗ್ದೆ ಏನು ಮಾಡ್ತೈತಿ...

ಸೀತೆ : ಹೌದು ದೊಡಪ್ಪಾ... ನೀನೇ ಸ್ಚಲ್ಪ ಬುದ್ದಿ ಹೇಳು, ನಾನೇನಾರೂ ಹೇಳಾಕೋದ್ರೆ ಅದ್ನ  "ದನಾ ಕಡಿಯೋರಿಗೆ  ಹುಟ್ಟಿದೊಷ್ಟಕ್ಕೆ ಕೊಟ್ಟು ಹಾಕ್ತೀನಿ" ಅಂತಾರೆ...!

ರತ್ನಿ : ಕೊಡ್ಲಿ ಬಿಡು, ನೀನ್ಯಾಕೆ ಅಡ್ಡ ಆಗ್ತೀಯಾ..? ಅಂತಾ ತುಡುಗು ದನ ಇದ್ದೇನು ಉಪಯೋಗ...

ಸೀತೆ : ಹಂಗ್ಯಲ್ಲ ರತ್ನಿ.. ಅದು ನಮ್ಮ ಮನ್ಯಾಗೆ ಹುಟ್ಟಿರೋದು... ಅದರ ಅವ್ವ, ಅದರ ಅವ್ವನ ಅವ್ವ ಎಲ್ಲ ಮುದಿ ಆಗೋ ವರ್ಗೂ ನಮ್ಮನೇಲೇ ಇದ್ದು ಸತ್ತೋದುವು ಗೊತ್ತಾ..?

ಸಣ್ಣೀರ : ಹಂಗೇ ಇದೂ ನಿಮ್ಮನ್ಯಾಗೇ ಕೊನೆ ತಂಕ ಇರ್ಬೇಕು ಅನ್ನೋದು ನಿನ್ನ ಆಸೆನಾ ಸೀತಕ್ಕಾ...?

ಸೀತೆ : ಹೌದು ಸಣ್ಣೀರಾ.... ನಿಂಗೊತ್ತಾ.... ನಮ್  ಕಿರೇ ಹುಡ್ಗ ಹುಟ್ದಾಗ ಅದೂ ಚೊಚ್ಚಲ ಕರ ಹಾಕಿತ್ತು.. ನಮ್ಮುಡುಗುಂಗೆ ಒಂದು ತಿಂಗ್ಳಾಗಿದ್ದಾಗ  ನನ್ನೆದೆ ಹಾಲು ಬತ್ತೋಗಿದ್ರಿಂದ ಅದರ ಹಾಲನ್ನೇ ಕುಡುದು ನಮ್ ಹುಡುಗ ಬೆಳ್ದ.... ಸುಳ್ಳಂದ್ರೆ ಕೇಳು ನಮ್ ದೊಡಪ್ಪುನ್ನ

ಬೀರ : ಹೌದೌದೌದು.... ಆ ಹುಡುಗ ಹುಟ್ದಾಗ ಇವುಳಿಗೇನೋ ಜೊರ ಬಡುದು ಎದೆ ಹಾಲೇ ಬತ್ತೋಗಿತ್ತು.. ಹಾಲಿಲ್ದೆ ಆ ಹುಡುಗ ಸಾಯಂಗೆ ಆದಾಗ ಆ ದನದ ಹಾಲ್ನೇ ಕುಡುಸ್ಬೇಕಾಯ್ತು.... ಸೀತೆ ನಸೀಬ ಚೆನ್ನಾಗಿತ್ತು ಆ ಟೇಮಾಗೇ ಈ ದನಾನೂ ಕರ ಹಾಕಿತ್ತು...!

ಬಸ್ಯ : ಹೋ ಹೋ ಇದಾ ವಿಸ್ಯ...!

ರತ್ನಿ : ಅಂದ್ರೆ ನಿಮ್ ದನ ನಿನ್ನ ಮಗನಿಗೆ ಎರಡನೇ ಅವ್ ಇದ್ದಾಂಗೆ ಅನ್ನು...

ಸೀತೆ : ಹುಂ ಹಂಗೇ...

ಸಣ್ಣೀರ : ಅದ್ಕೇ ಸೀತಕ್ಕಾ ಗೋವುನ್ನ ಗೋಮಾತೆ ಅನ್ನೋದು...

ಡೋಂಟಿ : ಎಕ್ಜಾಕ್ಟ್ ಲಿ ಕರೆಕ್ಟ್ ...  ಹುಟ್ಟಿದ ಮನ್ಸ ಹೆತ್ತತಾಯಿ ಹಾಲು ಕುಡಿಯೋದು ನಿಲ್ಸಿದ ಮ್ಯಾಲೆ  ಇಂತ ಗೋವಿನ ಹಾಲನ್ನೇ ಕುಡಿಯೋದು, ಹಂಗಾಗಿ  ಗೋವುಗಳು ಎಲ್ರಿಗೂ 'ಗೋತಾಯಿ' ಸೀತಕ್ಕಾ...

ಬೀರ : ಇಂತ ತಾಯೀನ ಹೆಂಗೆ ಸಾಕ್ ಬೇಕು ಅಂತ ಗೊತ್ತಿಲ್ಲಲ್ಲ  ಈ ಕಳ್ಳ ಸೋಮಂಗೆ..?

ಸೋಮ : ಹಂಗ್ಯಲ್ಲ ಮಾಂವಾ...  ಮೊನ್ನೆ ಸೀತೆ ಊರಿಗೆ ಹೋಗಿದ್ಲಲ್ಲ.. ಅವತ್ತು ರಾತ್ರಿ  ದನದ ಕಟುವಾಯಿಗೆ ಹುಲ್ಲು ಹಾಕೋದು ಮರ್ತು ಬಿಟ್ಟೆ.. ಬೆಳಿಗ್ಗೆ ಎದ್ದಾಗ ನೆನ್ಪಾತು... ಎದ್ದು ನೋಡ್ತೀನಿ ದನ ಇಲ್ಲ. ಸುತ್ತ-ಮುತ್ತ ಹುಡುಕ್ದೆ ಎಲ್ಲೂ ಕಾಣ್ನಿಲ್ಲ.... ಆಗ್ಲೇ ಎಲ್ಲೋ  ಹೋಗಿ ನಿನ್ ಗದ್ದಿಗೆ ನುಗ್ಗಿರ್ಬೇಕು. ಕೊನಿಗೆ ತನ್ನಿಂತಾನೆ ಕೊಟ್ಗಿಗೆ ಬಂತು..! ನನಿಗೇನು ಗೊತ್ತಾಗ್ಬೇಕು ಹಿಂಗೆ ಮಾಡಿ ಬಂತಂತ...!?

ಬೀರ :  ನಾನು ಹೋಗೋದು ತಡ ಆಗಿದ್ರೆ ಮೊನ್ನೆ ಮೊನ್ನೆ  ಹುಟ್ಟಿದ ಕಬ್ಬಿನ ಸುಳಿ ನಿನ್ನ ದನಿನ ಹೊಟ್ಟೆ ಸೇರಿರ್ತಿತ್ತು ಗೊತ್ತಾ..?

ಸೀತೆ : ನೋಡು ದೊಡಪ್ಪಾ ಒಂದು ದಿನ ನಾನು ಮನೇಲಿಲ್ಲ ಅಂದ್ರೆ ಏನೇನಲ್ಲಾ ಕತೆ ಆಗ್ತೈತಿ...

ಬಸ್ಯ : ಸೀತಕ್ಕಾ  ನಿಂಗೆ ವಿಸ್ಯ ಗೊತ್ತಾ...? ಮೊನ್ನೆ ಸೋಮ ನನ್ನತ್ರ ಈ ದನಾನ ಕೊಡಬೇಕು ಅಂತ ಮಾಡೀನಿ ಯಾರಾದ್ರೂ ಗಿರಾಕಿ ಇದ್ರೆ ಹೇಳು ಅಂತಿದ್ದ. ಅದ್ಕೆ ನಾನು ಸೀತಕ್ಕ ಬಯ್ಯೋದಿಲ್ಲೇನು  ಅಂದ್ರೆ. ಅವುಳುದೇನಲ್ಲ ಇದು,  ನಾನೇ ಸಾಕಿದ್ದು ಅಂತಿದ್ದ..!

ರತ್ನಿ : ಓ ಹೋ ಹೋ ಅದ್ಕಾ ನೀನು ಸೋಮಣ್ಣನ್  ದನ, ಸೋಮಣ್ಣನ್ ದನ ಅಂತ ಎರಡೆರಡು ಸಾರಿ ಹೇಳಿದ್ದು..!!

ಸೀತೆ : ಹಾ ಹಾ ನೋಡಿದ್ಯಾ ದೊಡಪ್ಪಾ... ಇವರ ಹಿಕಾಮತ್ತು..!!

ಸೋಮ : ಹಂಗೇನಿಲ್ಲ ಮಾಂವಾ... ಸುಮ್ನೆ ಬಸ್ಯನ ಕೇಳ್ದೆ ಅಸ್ಟೇ... ನಾನು ಸೀತೆನ ಕೇಳ್ದೇ ಯಾವ್ದಾದ್ರೂ ಯವಾರ ಮಾಡೀನಾ ಕೇಳು....
ಏ ಬಸ್ಯ ಗಂಡ ಹೆಂಡ್ತಿ ನಡ್ವೆ ಕೊಳ್ಳಿ ಇಡೋ ಕೆಲ್ಸ ಮಾಡ್ಬೇಡಾ ನೀನು...

ಬಸ್ಯ : ಅದೇನೋ ಹೇಳ್ತಾರಲ್ಲ 'ಇದ್ದಿದ್ದು ಇದ್ದಂಗೆ ಹೇಳ್ದ್ರೆ ಎದ್ದು ಬಂದು ಎದಿಗೆ ಒದ್ದಿದ್ರಂತೆ' ನಾನೇನು ಕಟ್ಕೊಂದು ಹೇಳಿದ್ನ್ಯಾ..? ನೀನು ಹೇಳಿದ್ದು ನಾನು ಹೇಳ್ದೆ ಅಸ್ಟೇ... ತಪ್ಪಾ ಚಿಗಪ್ಪಾ ನೀನೇ ಹೇಳು... ಸೀತಕ್ಕಾ ನೀನೂ ಹೇಳು

ರತ್ನಿ : ಅಯ್ಯೋ ಅದೇನು ಕಚ್ಚಾಡ್ತೀರ ಸುಮ್ನಿರಿ....

ಡೋಂಟಿ : ಹ್ಹ ಹ್ಹ ಹ್ಹ ರತ್ನಕ್ಕಾ ಡೋಂಟ್ವರಿ ಕಚ್ಚಾಡ್ಲಿ ಬಿಡು.... ರಾತ್ರಿ ನಾರಾಣಪ್ಪನ ಗಡಂಗದಲ್ಲಿ ಬಾಟ್ಲಿ ಎದ್ರಿಗೆ ಇಬ್ರೂ ಮಾತಾಡಿದ ಗುಟ್ಟು ಈಗ ರಟ್ಟಾಗ್ತಾ ಐತಿ ಅಷ್ಟೇ...!

ಸಣ್ಣೀರ : ಏಯ್ ಸೋಮಾ ಇನ್ಮೇಲೆ ದನ ಕಡಿಯೋರಿಗೆಲ್ಲಾ ನಿಮ್ಮ ಹಸು ಕರುನೆಲ್ಲ ಮಾರೋ ಹಂಗಿಲ್ಲ ಗೊತ್ತಾ..?

ಸೀತೆ : ಯಾಕೆ ಸಣ್ಣೀರಾ..!!?

ಸಣ್ಣೀರ : ಸರ್ಕಾರದೋರು ಒಂದು ಕಾಯ್ದೆ ಮಾಡ್ತಾ ಇದಾರೆ ಸೀತಕ್ಕಾ....

ಬೀರ : ಎಂತಾ ಕಾಯಿದೇನಾಪ್ಪಾ ಅದು...

ಸಣ್ಣೀರ : ಗೋ ಹತ್ಯೆ ನಿಷೇಧ ಕಾಯ್ದೆ ಅಂತ ದೊಡಪ್ಪಾ.... ಯಾರೂ ಇನ್ಮೇಲೆ ಗೋವುಗಳನ್ನೆಲ್ಲ ತಿನ್ನೋಕಾಗ್ಲಿ, ತಿನ್ಸೋಕಾಗ್ಲಿ ಕೊಂದೋ ಹಾಂಗಿಲ್ಲಂತೆ...

ಡೋಂಟಿ : ಹೋ ಹೋ ನೆನಪಾತು, ನೆನಪಾತು... ಇದ್ಕೆ  ಇರ್ಬೇಕು... ಮೊನ್ನೆ ಮೊನ್ನೆ  ಬೆಂಗ್ಳೂರಾಗೆ ಕಾಲೇಜು ಹುಡುಗ್ರೆಲ್ಲಾ ಕಾಲೇಜಾಗೇ ದನದ ಬಾಡು ತಿಂದ್ರಂತೆ  ಹೌದಾ..?

ರತ್ನಿ : ಶ್ಶಿ ಶ್ಶಿ ಎಂತದು...? ಕಾಲೇಜಾಗೇ ದನದ ಮಾಂಸ ತಿಂದ್ರಾ...?

ಸೀತೆ : ಏನು ನಮ್ಮೂರ ಮಿಡ್ಲಿಸ್ ಸ್ಕೂಲಾಗೆ ಬಿಸಿ ಊಟ ಹಾಕ್ದಂಗೆ ಅವ್ರಿಗೂ ಬಾಡೂಟ ಹಾಕಿದ್ರಾ ಹ್ಯೆಂಗೆ...!?.

ಸಣ್ಣೀರ : ಛೇ.. ಛೇ... ಹಂಗ್ಯಲ್ಲ ಸೀತಕ್ಕಾ.. ಈ ಕಾನೂನು ಜಾರಿಗೆ ಬಂದ್ರೆ ನಮ್ಗೆಲ್ಲಾ ಊಟಕ್ಕೆ ತೊಂದ್ರೆ ಆಗ್ತೈತಿ, ಇಂತ ಕಾಯ್ದೆ ತರೋದು ಬೇಡ, ನಮ್ಮಿಷ್ಟ ನಾವು ತಿಂತೀವಿ ನೀವೇನು ಮಾಡ್ತೀರಾ ಅಂತ ಸರ್ಕಾರಕ್ಕೆ ತೋರ್ಸಾಕೆ  ಸ್ವಲ್ಪ ಓದಿದೋರೆಲ್ಲಾ ಸೇರಿ ಕಾಲೇಜಾಗೇ ಕುಳ್ತು ಬಾಡೂಟ ಮಾಡಿದ್ರಂತೆ  ಅಷ್ಟೆ...

ಬಸ್ಯ : ಒಂದು ದಿನ ಅಸ್ಟೆನಾ...?

ಸೋಮ : ಮತ್ತೇನು ದಿನಾ ತಿನ್ನಾಕಾದಾತಾ...?

ಬಸ್ಯ : ಹ್ಯಾಂಗೆ ಹೇಳ್ತೀಯಾ... ಓದಿದೋರು..!?!

ಬೀರ : ಅದ್ಸರಿ ಕಣಾ... ವಯಸ್ಸಾದವುನ್ನೆಲ್ಲಾ ಎಂತಾ ಮಾಡೋದು.... ಸುಮ್ನೆ ಗೊಡ್ಡು ಬಿದ್ದೋವ್ನೆಲ್ಲಾ ಮನ್ಯಾಗೆ ಇಟ್ಕೊಂದು ಸಾಕಾಕಾದಾತಾ...

ಸಣ್ಣೀರ : ಸಾಕಬೇಕು ದೊಡಪ್ಪಾ.... ಲಾಭ ಇದ್ದಾಗ ಬೇಕು, ಇಲ್ದಾಗ ಬ್ಯಾಡ ಅಂದ್ರೆ ಆಕ್ತೈತಾ ನೀನೇ ಹೇಳು...? ಗೊಡ್ಡಾದ್ರೇನು ಸಗಣಿ ಹಾಕೋದಿಲ್ಲೇನು ಅದು...

ರತ್ನಿ : ಅದ್ಸರಿ ಸಣ್ಣೀರಾ.. ಈಗ ವಯಸ್ಸಾದ ಅಪ್ಪ ಅವ್ವುನ್ನೇ ಕೊನೆ ತಂಕ ಸಾಕೋದಿಲ್ಲ ಹುಟ್ಸಿದ ಮಕ್ಳು... ಇನ್ನು ಆ ಮೂಕ ಪ್ರಾಣಿನ ಕಾಯ್ದಿಗೆ ಹೆದ್ರಿ ಸಾಕ್ತಾರಂತೀಯಾ...

ಸಣ್ಣೀರ :  ".............."

ಸೀತೆ : ಸಾಯೋವರ್ಗೂ ಸಾಯ್ಸೋ ಹಂಗಿಲ್ಲ ಆದ್ರೆ  ವಯಸ್ಸಾಗಿ ಸತ್ತೋದವುಗಳ್ನ ಏನು ಮಾಡ್ಬೇಕಂತೆ..?

ಡೋಂಟಿ : ಹ್ಹ ಹ್ಹ ಹ್ಹ ಇಟ್ ಇಸ್ ವೆರಿ ಸಿಂಪಲ್ ಸೀತಕ್ಕಾ.... ಗುಂಡಿ ತೋಡಿ ಹುಗುದು ಅದರ ಮ್ಯಾಲೊಂದು ಗಿಡ ನೆಟ್ರಾತು.....

"............"
 


ಕಟ್ಟೇಶ
kattematu@gmail.com

5 comments:

spandana said...

ಕಟ್ಡೆ ಮ್ಯಾಲಿನ ಮಾತು- ಇದರಡಿಯಲ್ಲಿ ಪ್ರಸ್ತುತ ಪ್ರಚಲಿತದಲ್ಲಿರುವ ಗೋಹತ್ಯೆ ನಿಷೇಧ ಕುರಿತು ಗ್ರಾಮೀಣ ಸೊಗಡಿನಿಂದ (ಓದಲು ನಮ್ಮಂತವರಿಗೆ ಸ್ಪಲ್ಪ ಕಷ್ಟವಾದರೂ) ಕೂಡಿರುವ ಬರಹ ಚೆನ್ನಾಗಿದೆ.

ಸುಧಾ.

Anamika said...

ಕಟ್ಟೆ ಮೇಲೆ ಮತ್ತೆ ಮಾತಿಗೆ ಕೂತಿದ್ದು ಖುಷಿಯಾಯ್ತು...ಆದರೆ ಈ ಸಾರಿ ಸಂಭಾಷಣೆ ಇನ್ನೂ ಸ್ವಲ್ಪ ತೀಕ್ಷ್ಣತೆಯಿಂದ ಕೂಡಿದ್ದರೆ ಚೆನ್ನಾಗಿತ್ತು ಅನಿಸುತ್ತೆ...ಮುಂದಿನ ಸಂಭಾಷಣೆಗಳಲ್ಲಿ ಆ ಬಗ್ಗೆ ಗಮನ ಹರಿಸಿದರೆ ಖುಷಿ...

- ರೇವಪ್ಪ

madhura said...

'ಕಟ್ಟೆ ಮ್ಯಾಲಿನ ಮಾತು' ಚೆನ್ನಾಗಿದೆ. ಕಟ್ಟೆ ಮ್ಯಾಲಿನ ಮಾತಿಗೆ ಈ ರೀತಿಯ ಒಳಗಿನ ಸೂಕ್ಷ್ಮ ಪಂಚ್ ನೀಡಿರುವುದು ಖುಷಿ ಕೊಟ್ಟಿದೆ.
ಪ್ರಸ್ತುತ ವಿಷಯಗಳನ್ನು ಇದೆ ರೀತಿಯ ಪಾತ್ರಗಳಿಂದ ಅದರ ಮುಗ್ದ ನೋಟದಿಂದಲೇ ಸಂಭಾಷಣೆಯ ತೀವ್ರತೆಯನ್ನು ಹಿಡಿದಿಡುವುದು ನಿಮಗೆ ಒಲ್ದಿರುವ ಹಾಗೆ ತೋರಿದೆ.
ಸಂಭಾಷಣೆಯನ್ನು ಹಾಸ್ಯದ ಲೇಪನದಲ್ಲೇ ಗ೦ಭೀರವಾಗಿಸುವುದು ಬರಹಗಾರನಿಗಿರುವ ಸವಾಲು ಕೂಡ. ನೀವು ಹೀಗೆ ಬರೆಯುತ್ತಿದ್ದಾರೆ ವೈ.ಏನ್.ಕೆ. ರೀತಿಯ ವಿಷಯ ಸೂಕ್ಷ್ಮತೆಯನ್ನು ಸಾಧಿಸಬಹುದು. ಆಲ್ ದ ಬೆಸ್ಟ್. ಬರೀತಿರಿ ನಾವು ಓದುವವರು ಇದ್ದೆ ಇದ್ದಿವಿ.
-ಮಂಜು.

madhura said...

ಪ್ರತಿ ವಾರ ಈರೀತಿಯ ಒಂದು ವಿಷಯದ ಬಗೆಗಿನ 'ಕಟ್ಟೆ ಮಾತಿ'ಗಾಗಿ ಕಾಯುತ್ತೇವೆ ಸಾರ್.
-ಮಂಜು

ಕಟ್ಟೆಮಾತು said...

ಪ್ರತಿ ವಾರ ಸಾಧ್ಯವಾಗಲಾರದೇನೋ ಆದರೆ ಹದಿನೈದು ದಿನಕ್ಕೊಮ್ಮೆ ಪ್ರಕಟಿಸಲು ಪ್ರಯತ್ನಿಸುವೆ...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago