20 April 2010

ಕ್ರೌರ್ಯ!!


:: ಕ್ರೌರ್ಯ!! ::


ಅಬ್ಬಾ ಈ ಹೆಸರೇ ಎಷ್ಟೊಂದು ಭಯಾನಕ! ಈ ಪದ ಕಿವಿ ಮೇಲೆ ಬಿದ್ದ ತಕ್ಷಣವೇ ನಮ್ಮ ಸ್ಮೃತಿ ಪಟಲದಲ್ಲಿ ನಿರ್ದಯಿ, ಕ್ರೂರ, ಹಿಂಸೆ ಅನ್ನೋ synonymous ಪದಗಳೊಂದಿಗೆ ಅವುಗಳ ಚಿತ್ರಣಗಳು ಹಾಗೆ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ ಅಲ್ಲವೇ...ಈ ಕ್ರೌರ್ಯವನ್ನು  ಸಣ್ಣ ಪ್ರಮಾಣದಲ್ಲಿ ಮಾಡಿದರೂ ಅಥವಾ ದೊಡ್ಡ ಪ್ರಮಾಣದಲ್ಲಿ ಮಾಡಿದರೂ  ಅದು ಕ್ರೌರ್ಯವೇ.



ನಮ್ಮ ದೇಶಕ್ಕೆ ಎಷ್ಟೋ ವರ್ಷಗಳ ಇತಿಹಾಸವಿದೆ. ಇದನ್ನು  ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಹೀಗೆ ಎರಡು ವಿಧಗಳಾಗಿ ವಿಂಗಡಿಸಬಹುದು.  ಈ ಹಿಂದಿನಿಂದಲೂ ನಮ್ಮ ದೇಶದಲ್ಲಿ ಈ ಅಸಮಾನತೆ, ದೌರ್ಜನ್ಯ, ಶೋಷಣೆ  ಹಾಗೂ ತಾರತಮ್ಯ ನೀತಿಗಳು ನಮ್ಮ ಸಮಾಜದ ಒಂದು ಭಾಗವೇನೋ ಎಂಬ ಮಟ್ಟಿಗೆ ಅಂಟಿಕೊಂಡೇ ಬರುತ್ತಿವೆ. ನಾವು ಪ್ರಜಾಪ್ರಭತ್ವ ವ್ಯವಸ್ಥೆಯಲ್ಲೂ ಇಂತಹ ಅಸಮಾನತೆಯೊಂದಿಗೇ ಬದುಕುತ್ತಿರುವುದು ನಮ್ಮ ದೌರ್ಭಾಗ್ಯವೇ ಸರಿ.

ಈ ನಿಟ್ಟಿನಲ್ಲಿ ಕೆಲವರು ತಮಗೆ ಅನ್ಯಾಯವಾದಾಗ, ತುಳಿತ/ದೌರ್ಜನ್ಯಕ್ಕೊಳಪಟ್ಟಾಗ ನ್ಯಾಯದ ಮೊರೆ ಹೋಗುವುದು ಸಹಜ. ಈ ನ್ಯಾಯ ದೊರಕಿಸಿಕೊಳ್ಳುವ ವಿಷಯದಲ್ಲಿ  ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.ನ್ಯಾಯಾಲಯದಲ್ಲಿ legal ಆಗಿ ಹೋರಾಡಿ ನ್ಯಾಯ ಪಡೆಯುವುದು ಒಂದು ರೀತಿಯಾದರೆ, ತಮ್ಮಂತೆ ದೌರ್ಜನ್ಯಕ್ಕೊಳಗಾದವರ ಜೊತೆ ಸೇರಿ ತಮ್ಮದೇ ಆದ ಸಂಘ-ಸಂಸ್ಥೆ ಕಟ್ಟಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ಹೋರಾಡುವುದು ಇನ್ನೊಂದು ರೀತಿ. ಇವಲ್ಲದೆ ಇನ್ನೊಂದು ವರ್ಗದ ಜನರಿದ್ದಾರೆ ಅವರು ತಮ್ಮ ಕೈಗೇ ಕಾನೂನನ್ನು  ತೆಗೆದುಕೊಂಡು "ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ"  ಅನ್ನೋ ಮಂತ್ರದಲ್ಲಿ ನಂಬಿಕೆಯಿಟ್ಟವರಂತೆ ವರ್ತಿಸುತ್ತಿರುವವರು. ಇಂತಹ ಸಾಲಿಗೆ ಸೇರುವವರು ಈ ನಕ್ಸಲೇಟ್ಸ್(ಅವರ ಪ್ರಕಾರ).  ನಾನಿಲ್ಲಿ ಹೇಳೊಕೆ ಹೊರಟಿರೋದು ಈ ನಕ್ಸಲೇಟ್ಸ್, ಟೆರರಿಸ್ಟ್ ಅನ್ನೊದಕ್ಕಿಂತ ಅವರುಗಳು ಆಯ್ದುಕೊಂಡಿರುವ ಮಾರ್ಗಗಳು, ಅನುಸರಿಸುತ್ತಿರುವ ಹೋರಾಟದ ರೀತಿಗಳು ಅನ್ನೊದು ಮಾತ್ರ. ಈ ಹೋರಾಟದ ರೂಪವೇ "ಕ್ರೌರ್ಯ".  ಇದು ನಿಜಕ್ಕೂ ಖಂಡನೀಯ.  ನಾನು ಇಲ್ಲಿ ಹೇಳುತ್ತಿರುವ ವಿಷಯಗಳು ನನ್ನ ಅನಿಸಿಕೆಯುಳ್ಳ ಬರಹವೇ ಹೊರತು ಯಾವುದೇ ವಾದ-ವಿವಾದ ನಡೆಸುವ ಉದ್ದೇಶದೊಂದಿಗೆ ಬರೆದ ಲೇಖನವಲ್ಲ.


ಈ ನಕ್ಸಲೇಟ್ಸ್ ಗಳ ಉಗಮ ಯಾವುದೇ ಕಾರಣಕ್ಕಾದರೂ ಆಗಿರಬಹುದು. ಆದರೆ ಮುಖ್ಯವಾಗಿ ಕಂಡುಬರುವ ಸಾಮಾನ್ಯವಾದ ಒಂದು ಕಾರಣವೆಂದರೆ "ಅನ್ಯಾಯ".  ಈ ಅನ್ಯಾಯದ ವಿರುದ್ದ ಹೋರಾಡೋ ನಿಟ್ಟಿನಲ್ಲಿ ಅವರು ತಮ್ಮದೇ ಆದ ಮಾರ್ಗಗಳನ್ನು  ಅನುಸರಿಸುತ್ತಾ, ಸಮಾಜದಿಂದ/ನಾಡಿನಿಂದ, ಜನ ಸಂಪರ್ಕದಿಂದ ದೂರ ಉಳಿದು ಎಲ್ಲೋ ವಾಸ್ತವ್ಯ ಪಡೆದು ತಲೆಮರಿಸಿಕೊಂಡು ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾಗಿ  ಇಷ್ಟೆಲ್ಲಾ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸುತ್ತಿರುವುದು ಯಾವುದಕ್ಕಾಗಿ? ತಮಗಾಗಿರೋ ಅನ್ಯಾಯ/ತಮ್ಮಂತೆ ಅನ್ಯಾಯಕ್ಕೊಳಗಾಗುವವರಿಗೆ ನ್ಯಾಯ ಸಿಗಬೇಕು ಎಂಬ ಮನೋಭಾವದಿಂದ ತಾನೇ?(ಅವರ ಪ್ರಕಾರ) ಆದರೆ........ ಅದು ಅವರಿಗೆ ಸಿಕ್ಕಿದೆಯೇ? ಈ ಶೋಷಣೆ ದೌರ್ಜನ್ಯ ಸಂಪೂರ್ಣವಾಗಿ ನಿಂತಿದೆಯೇ? ಅವರು ಅಂದುಕೊಂಡ ಉದ್ದೇಶಗಳೆಲ್ಲವೂ ಕೈಗೂಡಿದೆಯೇ??   ಇಂತಹ ಪ್ರಶ್ನೆಗಳಿಗೆ ಉತ್ತರ ಬಹುಷ:  ಅವರಿಗೆ ಗೊತ್ತಿರಬೇಕು.   ಆದರೆ ಗೊತ್ತಿರುವ ಸತ್ಯ ಎಂದರೆ ಅವರಾರೂ ಇನ್ನೂ ಕಷ್ಟದಿಂದ ಪಾರಾಗಿಲ್ಲ. Yes. They are "Not out of the woods yet".

ಜನರು ತಮ್ಮ ಶ್ರಮಕ್ಕೆ ತಕ್ಕ ಬೆಲೆ(ಕೆಲವೊಮ್ಮೆ ಅದಕ್ಕಿಂತಲೂ ಕಡಿಮೆ) ಕೇಳಿದಾಗ,  ಬಲವಂತವಾಗಿ ಸಜೀವವಾಗಿ ದಹನ ಮಾಡೋದಾಗಿರಬಹುದು/ಇನ್ಯಾವುದೋ ಬಲವಾದ ಕಾರಣಗಳು ಇವರುಗಳನ್ನು ಇಂಥ ಹೋರಾಟಕ್ಕೆ ಪ್ರೇರೆಪಿಸಿರಬಹುದು ( ಈ ವಿಷಯದಲ್ಲಿ ಎಂಥ ಮನ್ನುಷ್ಯನಿಗೂ ಸಿಡಿದೇಳಬೇಕು ಅನ್ನೋ ಮನೋಭಾವ ಉಂಟಾಗುವುದು ಸಹಜ. ಇಂತಹ ಘಟನೆಗಳನ್ನು ಖಂಡಿಸುವುದು ಮನೋಧರ್ಮ). ಆದರೆ...ನಮ್ಮ ಕಡೆಯವರನ್ನು ಸುಟ್ಟರು/ಅಥವಾ ಕೊಲೆ ಮಾಡಿದ್ರೂ ಅಂತ ನಾವು ಅದೇ ಮಾರ್ಗ ಅನುಸರಿಸುವುದು ಎಷ್ಟು ಸರಿ? ಕ್ರೌರ್ಯಕ್ಕೆ ಕ್ರೌರ್ಯವೇ ಮದ್ದೇ?  " Pay one back in his own coin" ಅನ್ನೋ ರೀತಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಮಾರಣಹೋಮ ಮಾಡುವುದು ಎಲ್ಲದಕ್ಕೂ ಪರಿಹಾರವೇ?  ಇಂತಹ ಹೋರಾಟದಲ್ಲಿ ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ಎದುರಾಳಿಗಳ ರುಂಡವನ್ನು ಚೆಂಡಾಡುವುದು ಎಂತಹ ಹೇಯ ಕೃತ್ಯವೆಂದು ಯಾರಿಗಾದರೂ ಅನ್ನಿಸದೇ ಇರದು... 

ಇಂತಹ ಮನೋಭಾವವನ್ನು Nip in the bud ಅನ್ನೋ ರೀತಿ ಆರಂಭದಲ್ಲೇ ಚಿವುಟು ಹಾಕೋ ಪ್ರಯತ್ನ ಮಾಡಬೇಕಾಗಿತ್ತು. ಆದರೆ, Better late than never ಅನ್ನೋ ರೀತಿ ಇನ್ನು ಮುಂದೆಯಾದರು ಚಿವುಟಿ ಹಾಕುವ ಪ್ರಯತ್ನ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ, ಆತಂಕದ ದಿನಗಳನ್ನು ಎದುರುನೋಡುತ್ತಾ ಬದುಕುವ ಸ್ಥಿತಿ ನಿರ್ಮಾಣವಾಗಬಹುದು.  ಶಾಂತಿ, ಅಹಿಂಸೆಗಾಗಿ ಹೋರಾಡಿ ಮಡಿದ ಮಹಾತ್ಮರು ಜನಿಸಿದ ನಾಡಲ್ಲಿ ಇಂತಹ ಹಿಂಸಾತ್ಮಕ ಕೃತ್ಯಗಳು ಎಡೆಬಿಡದೆ ಎಲ್ಲೆಡೆಯೂ ನಡೆಯುತ್ತಿರುವುದು ನಿಜಕ್ಕೂ ಶೋಚನೀಯವಲ್ಲವೇ.....ಇವುಗಳ ಬಗ್ಗೆ ನಾವೆಲ್ಲರೂ ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಂಡು ಯೋಚಿಸಬೇಕಾದ ವಿಷಯ... ಉತ್ತರ ನಿಮಗೆ ಬಿಟ್ಟಿದು. 

ಇನ್ನೊಂದು ವಿಷಯ ನಾವು ಯಾವುದೇ ಕೆಲಸ ಮಾಡಿದರೂ ನಮಗೆ ಆತ್ಮ ತೃಪ್ತಿ, ಸಮಾಧಾನ ಸಿಗಬೇಕು. ಕಡೆಪಕ್ಷ ನಮ್ಮ ಕಷ್ಟಕ್ಕೆ ತಕ್ಕ ಬೆಲೆಯಾದರೂ ಸಿಗಬೇಕು.

ಭಗವತ್ಗೀತೆಯ ಎರಡನೇ ಅಧ್ಯಾಯದಲ್ಲಿ ಒಂದು ಶ್ಲೋಕ ಈ ರೀತಿ ಹೇಳುತ್ತದೆ.

ಕ್ರೋಧಾದ್ಭವತಿ ಸಂಮೋಹ, ಸಂಮೋಹಾತ್ ಸ್ಮೃ ತಿ ವಿಭ್ರಮ:!
ಸ್ಮೃತಿ ಭ್ರಂಶಾದ್ಭುದ್ದಿನಾಶೋ, ಬುದ್ದಿನಾಶಾದ್ ವಿನಶ್ಯತಿ!!

ಇದರರ್ಥ ಹೀಗಿದೆ : "ಸಿಟ್ಟಿನ ಮರಿ ಅವಿವೇಕ. ಅವಿವೇಕದಿಂದ ಧರ್ಮ- ಅಧರ್ಮಗಳ ಮರೆವು. ಇಂಥ ಮರೆವಿನಿಂದ ಬುದ್ದಿ ಕೆಡುತ್ತದೆ. ಬುದ್ದಿ ಕೆಡುವುದೇ ಎಲ್ಲ ಅನರ್ಥದ  ಮೂಲ. "


ಸುಧಾ

10 comments:

Anamika said...

ಒಬ್ಬ ವ್ಯಕ್ತ ತನ್ನ ಅಭಿಪ್ರಾಯಗಳನ್ನ ಅತ್ಯಂತ ಸರಳವಾಗಿ ಆದರೂ ಮನಮುಟ್ಟುವ ಹಾಗೆ ಅಭಿವ್ಯಕ್ತಸುವ ಪರಿಯನ್ನ ನಾವಿಲ್ಲಿ ಕಾಣಬಹುದು.

- ರೇವಪ್ಪ

ಮಂಜು said...

ಮೊದಲಿಗೆ ನೀವು ಬರವಣಿಗೆಗೆ ತೊಡಗಿದ್ದಕ್ಕೆ ಧನ್ಯವಾದಗಳು. ನೀವು ವಿಶ್ಲೇಷಿಸಿರುವ ವಿಷಯ ಪ್ರುಥ್ವಿಯು ಹೇಗೆ ತನ್ನ ಕಕ್ಷೆಯಲ್ಲಿಯೇ ಪರಿಭ್ರಮಿಸುತ್ತಲೇ ಗುರುತ್ವಾಕರ್ಷದಿಂದ ಬೆರಗಾದೆ ತಾನೇ ತಿರುಗುತ್ತಿದ್ದೇನೆ ಎಂಬ ಭ್ರಮೆಗೆ ಒಳಗಾಗದಿರುವ ಹಾಗೆಯೇ ನಮ್ಮ ಸುತ್ತಲು ನಾವು ಬಯಸುವ ಶಾಂತಿಯ ಗುರುತ್ವಾಕರ್ಷವಿದ್ದರು ಸಹ ನಾವು ಭ್ರಮೆಗೆ ಒಳಗಾಗಿರುವ ಲೋಕವೇ ಬೇರೆಯದು. ಐನ್ ಸ್ಟೀನ್ ಹೇಳಿರುವಂತೆ "ಶಾಂತಿ ಎಂಬುದು ತತ್ವಜ್ಞಾನಿಗಳ ಕನಸು, ಯುದ್ದ ಐತಿಹಾಸಿಕ ಸತ್ಯ" ನಮ್ಮ ನುಡುವಿನ ಅಸಮಾನತೆಗಳನ್ನು ಖಂಡಿಸುತ್ತಲೇ ಸಮಾನತೆಯ ಭರವಸೆ ಹೊಂದಿರುವ ನಿಮಗೆ ನನ್ನ ವಂದನೆಗಳು.
ಇನ್ನೊಂದು ವಿಷಯ : ನೀವು ಈ ಅಂಕಣ ಬರಯುತ್ತಿದ್ದಾಗಲೇ ಕುಮಟ ತಾಲೂಕಿನ ಮಾಸೂರು ಗ್ರಾಮದ 'ನಾಗೇಶ್ ಗಣು' ಎಂಬ ದಲಿತನೊಬ್ಬ ಕೂಲಿ ೩೦೦ ರು. ಕೇಳಿದ್ದಕ್ಕೆ ಅಗ್ನೆಲ್ farnandeez ಎಂಬವ ಕಾಲು ಕತ್ತರಿಸಿದ ಘಟನೆ ನಡೆದಿದೆ. ಪ್ರಸಂಗ ಇದೀಗ ಕೋರ್ಟ್ನಲ್ಲಿದೆ. ಆದರೆ ಇಂತಹ ಕೃತ್ಯಗಳು ನಡೆಯುತ್ತಲೇ ಇದೆ. ಕಾರಣಗಳು ಅನೇಕ.
-ಮಂಜು

ADM - nistrator said...

ವ್ಯಕ್ತಿಯ ಹೆಸರು ನಾಗೇಶ್ ಗಣು ಅಂತ ಹೇಳಿದ್ದು ಸಾಕಿತ್ತು.. ಅವರನ್ನು Brand ಮಾಡಿ ಚರ್ಚೆಯಲ್ಲಿ ಅಸಮಾನತೆ ತರುವುದು ಸರಿಯಲ್ಲ ಅಂತ ನನ್ನ ಅನಿಸಿಕೆ. ಇಂಥದೇ ಕೃತ್ಯ ನಡೆದು ನಾಗೇಶ್ ಒಬ್ಬ ( ನಿಮ್ಮ ಪ್ರಕಾರ ) ದಲಿತೇತರ ಮೇಲ್ವರ್ಗದ ಮನುಷ್ಯನಾಗಿದ್ದರೆ ಅವನ ಕುಲ ಗೋತ್ರ ಉಲ್ಲೇಖಿಸುತ್ತಿದ್ದಿರಾ ಮಂಜುನಾಥ್ ?

ಇಲ್ಲಿ ಆಗಿರುವ ಅನ್ಯಾಯ ಖಂಡಿಸುವುದು ಮುಖ್ಯ... ಅಸಮಾನತೆಯನ್ನ ಎತ್ತರೆತ್ತರಕ್ಕೇರಿಸುವುದು ನಮ್ಮ ಮಟ್ಟವನ್ನ ನಿರ್ಧರಿಸುವ ಸಾಧ್ಯತೆಯಿರುತ್ತದೆ ಅನ್ನೋದು ನನ್ನ ಅನಿಸಿಕೆ...

ವಿದ್ಯಾವಂತ ಅಂತ ಒಬ್ಬ ವ್ಯಕ್ತಿ ಅನ್ನಿಸಿಕೊಳ್ಳೋದು ಯಾವಾಗ ?

ಏನಂತೀರಿ ?

M.B.Lavanya said...

ಕಾರಣಗಳಿಗೆ ಪರಿಹಾರ ಹುಡುಕಬೇಕು. ಆದರೆ, ಕಾರಣಗಳೇ ಸಮಸ್ಯೆಗೆ ಕಾರಣವಾಗಬಾರದು. ಅನ್ಯಾಯ ಆಗಿದೆ ಎಂದಾಕ್ಷಣ ಹಿಂಸಾ ಮಾರ್ಗ ಹಿಡಿದರೆ ಬಹುಶ: ನ್ಯಾಯಕ್ಕೆ ಅರ್ಥವೇ ಇರುತ್ತಿರಲಿಲ್ಲವೇನೋ, ಶಾಂತಿಯ ಪದವೇ ಇರುತ್ತಿರಲಿಲ್ಲ.
ಸಂಪನ್ಮೂಲಗಳು ಕೆಲವರಲ್ಲಿ ಶೇಖರಿಸಿಟ್ಟುಕೊಳ್ಳದೇ ಹಂಚಿ ತಿನ್ನುವುದನ್ನು ರೂಢಿಸಿಕೊಂಡಲ್ಲಿ 'ಇಸಂ'ಗಳಿಗೆ ಆಸ್ಪದವೇ ಇರುತ್ತಿರಲಿಲ್ಲ. ಹಾಗಗದಿರುವುದು ದುರಾದೃಷ್ಟಕರ. ಶಾಂತಿ ಎಂಬುದು ಕನಸಾದರೇ, ಆ ಕನಸನ್ನು ನನಸು ಮಾಡೋಣ. ಐತಿಹಾಸಿಕ ಸತ್ಯ ನಮ್ಮ ಬೆನ್ನಿಗಿರಲಿ. ನಮ್ಮ ಮುಂದಿನ ಗುರಿ ಸ್ಪಷ್ಟ ಹಾಗೂ clean ಆಗಿರಲಿ. ಗುರಿ ಒಂದೇ ಮುಖ್ಯವಲ್ಲ, ಆಯ್ದುಕೊಂಡ ಮಾರ್ಗ ಕೂಡ countable.
- ಎಂ.ಬಿ.ಲಾವಣ್ಯ

ಮಂಜು said...

ಖಂಡಿತ ದಲಿತೇತರ ವ್ಯಕ್ತಿ ಆಗಿದ್ದರು ಸಹ ನಾನು ಅವರ ಕುಲ ಹೇಳುತ್ತಿದೆ. ಕುಲ ನಿರಾಕರಣೆಯ ತತ್ವದ ಉದ್ದೇಶ ಆಶಯಕ್ಕಾಗಿ ನಾನು ಕೂಡ ಮುಡುಪಾಗಿದ್ದೇನೆ ಆದರೆ ರೇವಪ್ಪ ನಿಮಗೂ ಗೊತ್ತಿದೆ ನನಗು ಗೊತ್ತಿದೆ ನಮ್ಮ ಇಡಿ ಭಾರತೀಯ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಶೋಷಣೆಗೆ ಒಳಗಾಗಿರುವವರು ಕೆಳ ವರ್ಗದವರೇ ಹೊರತು ಮೇಲ್ವರ್ಗದವರಲ್ಲ. ಇಲ್ಲಿ ನಾಗೇಶ್ ಗಣು ಆಗಲಿ, ಆಗ್ನೆಲ್ ಆಗಲಿ ಅಲ್ಲ ; ಮನುಷ್ಯ ಮನುಷ್ಯನಾಗಿ ನೋಡುವ ವಿಷಯವಾಗಿದ್ದರು ಅದು ಹಾಗಾಗುತ್ತಿರಲಿಲ್ಲ. ಇಲ್ಲಿ ನಾನು ಆತಂಕ ಪಡುತ್ತಿರುವ ವಿಷಯ ನಾನು ಮೇಲು ನೀನು ಕೀಳು ಎಂಬ ಅವೈಜ್ಞಾನಿಕ ಮತ್ತು ಅಮಾನವೀಯ ವಿಕೃತವೆ ಹೊರತು ನೀವುಹೇಳಿರುವ ಸರ್ವ ಸಮಾನ ತತ್ವದ ಆಶಯದ ಹೊರಬಂದು ಮಾತನಾಡಿಲ್ಲ. ಮತ್ತು ವಿಷಯ ಅಷ್ಟು ಸರಳವಾಗಿಲ್ಲ.

ಗಾಯ ಆದವರನ್ನು ಕೆಳುವುದಲ್ಲ ಗಾಯ ಮಾಡಿದವರನ್ನು ಕೇಳಿದರೆ ಗೊತ್ತಾಗುತ್ತೆ ಯಾಕೆ ಗಾಯ ಮಾಡಿದರು ಎಂದು.
ನಿಮಗೆ ಸಾದ್ಯವಾದರೆ 'ಖೈರ್ಲಂಜಿ' ದಲಿತ ಭಾರತ ಕಥನ ಓದಿದರೆ ನಿಮಗೆ ತಿಳಿಯುತ್ತದೆ. ನಾವು ಕೆನೆ ಪದರ ರೀತಿಯಲ್ಲಿ ಮಾತನಾಡುವ ನೀತಿಯೇ ಜ್ವಲಂತವಾದದ್ದು.

ಈ ಬಗ್ಗೆ ನಾವಿಬ್ಬರು ಹೆಚ್ಹು ತಿಳಿಯಲು ಪ್ರಯತ್ನಿಸೋಣ. ನನ್ನ ಅನಿಸಿಕೆ ತಪ್ಪೆನ್ನುವಂತೆ ನೀವು ಸಮರ್ತಿಸಿದರೆ ನಿಮಗಿಂತ ಸಂತೋಷ ನನಗೆ.
-ಮಂಜು.

© ಹರೀಶ್ said...

ಹಣ್ಣಾದ ಎಲೆಗಳು
ಉದುರಿದಾಗ
ಚಿಗುರೆಲೆಯ ನೋಡಿ
ಮರಕೆ ಕೊಡಲಿ ಇಟ್ಟವು

Anamika said...

ನಾವೆಲ್ಲ ಭಾರತೀಯ ಸಂಸ್ಕೃತಿಯ ಶಿಶುಗಳೇ ಆದರೂ ಹಿಂದಿನಿಂದ ನಡೆದು ಬಂದಿರುವ ಕುಲ ಉದ್ಧರಿಸುವ ಕೆಲಸವನ್ನ ನಮ್ಮ ಹಿಂದಿನ ಪೀಳಿಗೆಯೇ ಕೊನೆಯಾಗುವ ಹಾಗೆ ನೋಡಿಕೊಳ್ಳುವಂತಾಗಲು ನಮ್ಮ ಪ್ರಯತ್ನ ಅವಶ್ಯ ಅನ್ನೋದು ನನ್ನ ಅಭಿಮತ.

ಸರಿ. ನಿಮ್ಮ ಆಶಯ ತಲುಪಿತು ನನಗೆ. ನಡೆದು ಬಂದಿರುವುದೆಲ್ಲ ನಡೆದುಕೊಂಡು ಹೋಗಲಿ ಅನ್ನೋದನ್ನ ನಾವು ಬಿಡೋಣ. ಹಾಗೆ ನಡೆದುಕೊಂಡು ಬಂದದ್ದನ್ನ ತಡೆದು ನಿಲ್ಲಿಸಿ, ಮಾತಾಡಿಸಿ, ಸರಿ - ತಪ್ಪು ವಿಮರ್ಶಿಸಿ, ಮುನ್ನಡೆಯೋಣ.

- ರೇವಪ್ಪ

ಪರಶು.., said...

ಬೆಳಿಗ್ಗೆ ರೈಂಬೋದಲ್ಲಿ ಒಂದು ಕಾರ್ಯಕ್ರಮ ಬರುತ್ತಿತ್ತು. ಅದರಲ್ಲಿ ಪತ್ರಕರ್ತರೊಬ್ಬರು ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹೇಳುತ್ತಿದ್ದರು. ಕೆಲವರ್ಷಗಳ ಹಿಂದೆ ಪಾವಗಡ ಸಮೀಪದ ಒಂದು ಹಳ್ಳಿಯ ಎಲ್ಲಾ ಕೆಳವರ್ಗದ ಗಂಡಸರಲ್ಲಿ ಕೆಲವರನ್ನು ಪೋಲೀಸರು ಬಂಧಿಸಿ, ಕೆಲವರನ್ನು ಲಾಠಿಯಿಂದ ತಳಿಸಿ ಊರು ಬಿಡುವಂತೆ ಮಾಡಿದ್ದರಂತೆ. ಅವರೆಲ್ಲಾ ನಕ್ಸಲೈಟ್ಸ್ ಗಳಿಗೆ ಸಪೋರ್ಟ್ ಮಾಡ್ತಿದಾರೆ ಎಂಬ ಕಾರಣಕ್ಕಾಗಿ. ಹೀಗಂತ ಆ ಊರಿನ ಮೇಲ್ವರ್ಗದ ಜಮೀನ್ದಾರ ದೂರು ಕೊಟ್ಟಿದ್ದನಂತೆ. ಈ ಘಟನೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ತಿಳಿದು ಬಂದ ವಾಸ್ತವ ಸಂಗತಿ ಏನೆಂದರೆ. ಆ ಜಮೀನ್ದಾರನ ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆ ಊರಿನ ಕೆಳವರ್ಗದ ಗಂಡಸರು ತಮಗೆ ಕೊಡುವ ಸಂಬಳದಲ್ಲಿ ಹತ್ತು ರೂಪಾಯಿ ಹೆಚ್ಚಿಗೆ ಕೊಡುವಂತೆ ಕೇಳಿದ್ದರಂತೆ. ಆದರೆ ಆ ಜಮೀನ್ದಾರ ಕೊಡಲಿಲ್ಲ ಈ ಕೂಲಿಗಳು ಕೆಲಸಕ್ಕೆ ಹೋಗಲಿಲ್ಲ. ಇದರಿಂದ ಕ್ರುದ್ಧನಾದ ಜಮೀನ್ದಾರ ಇವರೆಲ್ಲಾ ನಕ್ಸಲೈಟ್ಸ್ ಗಳಿಗೆ ಬೆಂಬಲ ಕೊಡ್ತಿದಾರೆ ಎಂದು ಹೇಳಿ ಪೋಲೀಸರಿಂದ ಬುದ್ಧಿಕಲಿಸಲು ಪ್ರಯತ್ನಿಸಿದನಂತೆ, ಈ ಪತ್ರಕರ್ತರಿಗೆ ವಿಷಯ ತಿಳಿದು ಇದನ್ನೆಲ್ಲಾ ಬಯಲು ಮಾಡಿದ್ದರಂತೆ....

ಇದನ್ನು ಏಕೆ ಪ್ರಸ್ತಾಪಿಸಿದೆನೆಂದರೆ, ಮನುಷ್ಯನ ಕ್ರೌರ್ಯದ ಮುಖಗಳು ನಾನಾ ರೀತಿಯಾಗಿರುತ್ತವೆ. ಕೆಲವೊಮ್ಮೆ ಬುದ್ದಿವಂತ ಸಮಾಜವೂ ಕೂಡಾ ಧನಬಲ, ಜಾತಿ ಬಲದ ಸ್ವಹಿತಾಶಕ್ತಿಯ ಸ್ಥಿತಿವಂತರ ಮಾತು ಕೇಳಿ ದಾರಿತಪ್ಪಿ ಬಿಡುತ್ತದೆ. ಹೀಗೆ ದಾರಿತಪ್ಪಿಸುವ ಕೆಲಸವನ್ನು ವ್ಯವಸ್ತಿತವಾಗಿ ಮಾಡಿ ದಮನಿತರನ್ನು ತುಳಿಯುವ ಕೆಲಸ ನಿರಂತರವಾಗಿ ಸಾಗುತ್ತಿರುತ್ತದೆ....

ಕ್ರೌರ್ಯದ ಕುರಿತು ಅರಿವು ಮೂಡಿಸುವ ಲೇಖನ ಬರೆದ ಜಯಸುಧಾರಿಗೆ ಧನ್ಯವಾದಗಳು.... ನಿಮ್ಮ ಪ್ರಯತ್ನಗಳು ಹೀಗೇ ನಿರಂತರವಾಗಿರಲಿ..

MANJUDADA said...

ನಿಜವಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ನಿಂತಿರುವುದು ಸಮಾನತೆಯ ತತ್ವದ ಆಧಾರದ ಮೇಲೆ.ಆ ಸಮಾನತೆಗೆ ಧಕ್ಕೆ ಉಂಟಾದಾಗ ಹೋರಾಟದ ಮೂಲಕ ತಮಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳ ಬಹುದು ಎಂಬ ಉದ್ದೇಶದಿಂದ ಈ ನಕ್ಸಲಿಸಂ ಹುಟ್ಟಿಕೊಂಡಿದ್ದು ನೊಂದ ಜನರಲ್ಲಿ ಒಂದು ಹೊಸ ಉತ್ಸಾಹ ಹೊಮ್ಮುವಂತೆ ಮಾಡಿದ್ದು ನಿಜ.ನನಗೂ ಅದು ಸರಿ ಎನಿಸುತ್ತದೆ.ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ನಕ್ಸಲಿಸಂ ಎಂಬುದು ದೇಶಕ್ಕೆ ಮಾರಕವಾಗಿ ಬೆಳೆದು ನಿಂತಿದೆ.ಈ ಒಂದು ಸಂಘಟನೆಯ ಮೂಲ ಉದ್ದೇಶ ಒಳ್ಳಯದಾದರೂ ಕಾಲಕ್ರಮೇಣ ಈ ಸಂಘಟನೆಯ ದುರುಪಯೋಗಗಳೇ ಹೆಚ್ಚಾಯಿತು.ಜನರಿಗೆ ಒಳ್ಳೆಯದನ್ನು ಮಾಡಲು ಅನೇಕ ಮಾರ್ಗಗಳಿವೆ.ಆದರೆ ಹಿಂಸೆ ಮಾರ್ಗವನ್ನು ಅನುಸರಿಸುತ್ತಿರುವುದು ಸರಿಯಲ್ಲ.ಇತ್ತೀಚೆಗೆ ನಡೆದ ಛತ್ತೀಸ್ ಗರ್ ಶೂಟೌಟ್ ಪ್ರಕರಣದಲ್ಲಿ ಬಲಿಯಾದ ಸಿಆರ್ ಪಿಎಫ್ ಯೋಧರೂ ಕೂಡ ಬಡ ಕುಟುಂಬದಿಂದ ಬಂದವರೇ.ಅವರ ಮಾರಣಹೋಮ ಮಾಡಬೇಕಾದರೆ ಇವರ ಮೂಲ ಉದ್ದೇಶ ನೆನಪಾಗಲಿಲ್ಲವೇ ಎನ್ನುವುದು ನನ್ನ ಪ್ರಶ್ನೆ.ಈ ನಕ್ಸಲರು ಪೊಲೀಸರನ್ನು ವೈರಿಗಳಂತೆ ಕಾಣುವುದು ಸಮಂಜಸವಲ್ಲ ಎಂಬುದು ನನ್ನ ಅಭಿಮತ.ಜಯಸುಧಾರವರ ಜನ ಸಾಮಾನ್ಯರ ಬಗೆಗಿನ ಕಾಳಜಿ ಈ ಲೇಖನದಲ್ಲಿ ಕಾಣಸಿಗುತ್ತದೆ.ಇವರ ಲೇಖನದ ಮೂಲ ಉದ್ದೇಶ ಪ್ರಯೋಜನ ವಿಲ್ಲದ ಕೆಲಸ ಮಾಡಿದರೇನು ಲಾಭ ಎನ್ನುವುದು.MBM.

Unknown said...

nicely articulated with metaphysical dimension.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago