21 April 2010

ನಕ್ಸಲರು


  :: ನಕ್ಸಲರು ::


ಅವರು ಹಿಂಸಾವಾದಿಗಳು ಎಂದು ನಾನು ನನ್ನ ಸ್ನೇಹಿತರೊಡನೆ ಬಹಳಷ್ಟು ಸಲ ವಾದಮಾಡಿದ್ದೇನೆ ಆದರೆ ಅವರಿಂದ ಬರುತ್ತಿದ್ದ  "ರೆಡಿಮೇಡ್" ಉತ್ತರವೆಂದರೆ "ನಕ್ಸಲರು ಅನುಸರಿಸುತ್ತಿರುವ ಮಾರ್ಗ ಕೆಟ್ಟದಿರಬಹುದು ಕಣ್ರೀ... ಆದ್ರೆ ಅವರ ಉದ್ದೇಶ ತುಂಬಾ ಒಳ್ಳೇದು"ಎಂದೇ. ಆದರೆ ಅವರ ಈ ಸಮರ್ಥನೆಯನ್ನು ಹುಸಿಯಾಗಿಸಲು 6ನೇ ಏಪ್ರೀಲ್ 2010 ರಂದು ಸಿ.ಆರ್.ಪಿ.ಎಫ್.ನ 76ಜನ ಯೋಧರ ಮಾರಣಹೋಮವೇ ಆಗಬೇಕಾಯಿತು. ನಕ್ಸಲ್ ವಾದ(ಮಾವೋವಾದ)ವನ್ನು ಸಮರ್ಥಿಸಿಕೊಳ್ಳುವ ಎಷ್ಟೋ ನಕ್ಸಲ್ ಸಮರ್ಥಕರಿಗೆ ನಕ್ಸಲ್ ವಾದ ಅಥವಾ ಮಾವೋವಾದದ ಮುಖ್ಯಗುರಿಯಾಗಲೀ, ಅದರ ಪರಿಣಾಮಗಳಾಗಲೀ ತಿಳಿದಿರುವುದಿಲ್ಲ. ಇನ್ನು ತಿಳಿದವರು ಅದನ್ನು ಮರೆಮಾಚುತ್ತಾರೆ.

ನಕ್ಸಲ್ ವಾದದ ಮುಖ್ಯ ತಿರುಳಿರುವುದು ಸಮತಾವಾದದಲ್ಲಿ(ಕಮ್ಯುನಿಸಂ). ಈ ಕಮ್ಯುನಿಸಂ ಹಲವಾರು ಮುಖಗಳನ್ನು ಹೊಂದಿದ್ದು ಈ ಮಾವೋವಾದ ಅವುಗಳಲ್ಲೊಂದಾಗಿದೆ. ರಷ್ಯನ್ ಕ್ರಾಂತಿಯಲ್ಲಿ ಲೆನಿನ್,ಸ್ಟ್ಯಾಲಿನ್ ಅಧಿಕಾರ ಹಿಡಿಯಲು ಕಾರ್ಮಿಕರನ್ನು ಬಳಸಿಕೊಂಡಂತೆ, ಚೀನಾಕ್ರಾಂತಿಯಲ್ಲಿ ಮಾವೋ ಝೆಡಾಂಗ್ ಸರ್ವಾಧಿಕಾರದ ಸ್ಥಾಪನೆಗೆ ರೈತರನ್ನು ದಾಳವಾಗಿಸಿಕೊಂಡ. ಈ ಸರ್ವಾಧಿಕಾರ ಪಡೆಯಲು ಲಕ್ಷಾಂತರ ಜನರ ರಕ್ತವನ್ನೇ ಹರಿಸಿದ. ಇವನ ಹಿಂಬಾಲಕರೇ ಮಾವೋವಾದಿಗಳು. ಈ ಮಾವೋವಾದಿಗಳ ಮುಖ್ಯಗುರಿ ಸರ್ವಾಧಿಕಾರದ ಸ್ಥಾಪನೆ ಹಾಗೂ ಸ್ಥಾಪಿತ  ಈ ಅಧಿಕಾರವನ್ನು ಬಳಸಿಕೊಂಡು ಅಮೇರಿಕಾ ಮತ್ತು ಅದರ ಜಾಗತೀಕರಣ ನೀತಿಯ ಪ್ರಭಾವವನ್ನು ತಡೆಗಟ್ಟುವುದು ಬಿಟ್ಟರೆ ಇನ್ನಾವುದೇ ಸದುದ್ದೇಶವಿಲ್ಲ.ಈ ಸರ್ವಾಧಿಕಾರದ ಸ್ಥಾಪನೆಗೆ ಮಾವೋಗಳು ತಾವು ಬಡವರಪರ,ಅಭಿವೃದ್ಧಿಪರ ವಹಿಸುವ "ಕ್ರಾಂತಿಕಾರಿಗಳು" ಎಂಬ ಸೋಗನ್ನುಹಾಕಿಕೊಳ್ಳುತ್ತಾರೆ. ತಮ್ಮ ಕಾರ್ಯಸಾಧನೆಗಾಗಿ ಅಭಿವೃದ್ಧಿವಂಚಿತ ಪ್ರದೇಶಗಳನ್ನೇ ಆಯ್ದುಕೊಳ್ಳುತ್ತಾರೆ. ಅದರಂತೆ ಇಂದು ಭಾರತದಲ್ಲಿನ ಮೂಲಸೌಕರ್ಯ ವಂಚಿತ ಪ್ರದೇಶಗಳನ್ನು ತಮ್ಮ ಕಾರ್ಯಕ್ಷೇತ್ರಗಳನ್ನಾಗಿಸಿಕೊಂಡು ಅಲ್ಲಿನ ಅಮಾಯಕ ಆದಿವಾಸಿಗಳನ್ನು,ರೈತರನ್ನು ಪ್ರಜಾಸತ್ತಾತ್ಮಕ  ಸರ್ಕಾರದ ವಿರುದ್ಧ ಸಂಘಟಿಸಿ ಅವರ ಕೈಗೆ ಶಸ್ತ್ರಗಳನ್ನು ಒದಗಿಸಿ ಅವರ ದುಡಿಯುವ ಪ್ರವೃತ್ತಿಯನ್ನೇ ಹೊಸಕಿಹಾಕುತ್ತಿರುವುದು ವಿಷಾದ.
                    
ಭಾರತದಲ್ಲಿ ಮಾವೋವಾದವು 1967ರಲ್ಲಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ ಬಾರಿ ಎಂಬ ಊರಿನಲ್ಲಿ ಚಾರು ಮುಜುಮ್ದಾರ್ ,ಕಾನು ಸನ್ಯಾಲ್,ಜಂಗಲ್ ಸಂತಾಲ್ ಎಂಬ 3 ಮಾವೋವಾದಿಗಳ ನೇತ್ರತ್ವದಲ್ಲಿ ಜಮೀನ್ದಾರಿ ಪದ್ಧತಿಯನ್ನು ವಿರೋಧಿಸಿ ನಡೆದ ದಂಗೆಯಿಂದ ಪ್ರಾರಂಭವಾಗಿ  ನಕ್ಸಲ್ ಬಾರಿ ಉರಿನ ಹೆಸರಿನಿಂದ "ನಕ್ಸಲ್ ವಾದ"ವೆಂದು ಕರೆಯಲ್ಪಡುತ್ತಿದೆ. ಸಂಘಟನಾತ್ಮಕ ಭಿನ್ನಾಭಿಪ್ರಾಯಗಳಿಂದ ದೇಶದ ನಾನಾ ಪ್ರದೇಶಗಳಲ್ಲಿ People's War Group,Communist Party of India(Marxist-Leninist) ಮತ್ತು Marxist Communist Centere ಎಂದು ವಿಂಗಡಿತವಾಗಿದ್ದ ಮಾವೋಗಳು ಸೆಪ್ಟೆಂಬರ್ 2004ನಲ್ಲಿ ಒಗ್ಗೂಡಿ Communist Party of India(Maoist) ಎಂದು ಘೋಷಿಸಿಕೊಂಡಿದ್ದು ಇಂದು ಭಾರತದಲ್ಲಿ 20ರಾಜ್ಯಗಳಲ್ಲಿನ 225 ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದಾರೆ. ಇಂದು 60 ಜಿಲ್ಲೆಗಳು ಸಂಪೂರ್ಣವಾಗಿ ಮಾವೋಗಳ ಹಿಡಿತದಲ್ಲಿವೆ. ತಮ್ಮ ಹತೋಟಿಯಲ್ಲಿರುವ ಪ್ರದೇಶಗಳಲ್ಲಿ ಶಾಲೆ,ಸರ್ಕಾರಿ ಕಛೇರಿಗಳು,ರೇಲ್ವೆ ಟ್ರ್ಯಾಕ್, ಟೆಲಿಕಾಂ ಸ್ಥಾವರಗಳು,ರಸ್ತೆಗಳನ್ನು ಸ್ಫೋಟಿಸಿ ಸರ್ಕಾರ ಮತ್ತು ಜನರ ನಡುವಿನ ಸಂಪರ್ಕವೇ ಇಲ್ಲದಂತೆ ಮಾಡಿದ್ದಾರೆ. ಸರ್ಕಾರದ ಪರವಹಿಸುವ ಯಾರನ್ನೂ ಸಹಿಸದ ಮಾವೋಗಳು ಇಲ್ಲಿನ ಸಾವಿರಾರು ಜನರನ್ನು ಬಲಿತೆಗೆದುಕೊಂಡಿದ್ದಾರಲ್ಲದೇ ಈ ಪ್ರದೇಶಗಳಲ್ಲಿ ತಮ್ಮದೇ ಆದ ಪರ್ಯಾಯ ಸರ್ಕಾರವನ್ನು ನಡೆಸುತ್ತಿದ್ದಾರೆ. ಕ್ರೌರ್ಯಕ್ಕೆ ಹೆಸರಾಗಿರುವ ಮಾವೋಗಳಿಗೆ ಹೆದರಿ ಅಲ್ಲಿನ ಆದಿವಾಸಿಗಳು ಅನಿವಾರ್ಯವಾಗಿ ಮಾವೋಗಳೊಡನೆ ಸೇರಿದ್ದು ಇಂದು ಮಾವೋಗಳ ಸಶಸ್ತ್ರ ಪಡೆ 20,000ಕ್ಕೂ ಮೀರಿದೆ. ಮಾವೋಪಿಡಿತ ಪ್ರದೇಶಗಳ ಮೇಲೆ ಸರ್ಕಾರ ಹಿಡಿತಕಳೆದುಕೊಂಡು ಯಾವಾಗ ಅಧಿಕಾರಹೀನವಾಯಿತೋ ಅಂದು ಎಚ್ಚೆತ್ತ ಸರ್ಕಾರ ಜೂನ್ 22 2009ರಂದು Communist Party of India(Maoists) ಸಂಘಟನೆಯನ್ನು ನಿಷೇಧಿಸಿ ಮಾವೋಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವುದು ಸ್ವಾಗಾತರ್ಹ. 

                            
ಮಾವೋಗಳ ದಮನಕ್ಕೆಂದೇ  ಕೇಂದ್ರ ಸರ್ಕಾರ ನವೆಂಬರ್ 2009ರಿಂದ "ಆಪರೇಷನ್ ಗ್ರೀನ್ ಹಂಟ್" ಎಂಬ ಪೋಲೀಸ್ ಕಾರ್ಯಾಚರಣೆಯನ್ನು ಪ್ರಾರಂಭಸಿದ್ದು, ಪ್ರಧಾನಿ ಮನಮೋಹನ್ ಸಿಂಗ್ ರವರು ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಎಡಪಂಥೀಯ ತೀವ್ರವಾದವನ್ನು ದೇಶದ ಮೊದಲಶತ್ರು ಎಂದು ಘೋಷಿಸಿದ್ದಾರೆ. ಇಷ್ಟೇ ಅಲ್ಲದೇ 2009-10ನೇ ಸಾಲಿನ ಅಂದಾಜು ಪತ್ರದಲ್ಲಿ 4,000ಕೋಟಿ ರೂಗಳ ಮೊತ್ತವನ್ನು ದೇಶದ ಆಂತರಿಕ ರಕ್ಷಣೆಗೆಂದೇ ತೆಗೆದಿರಿಸಲಾಗಿದೆ. ಇಷ್ಟು ಮಾಡಿದರೆ ಮಾವೋವಾದಿಗಳನ್ನು ಸಂಪೂರ್ಣವಾಗಿ ಹತ್ತಿಕ್ಕಬಹುದೇ ? ಇಲ್ಲ. ಸಾಧ್ಯವಿಲ್ಲ. ಮಾವೋವಾದಿಗಳ ಉತ್ಪಾಟನೆಗೆ ಬೇಕಾಗಿರುವ ಮುಖ್ಯ ಅಂಶವೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆ ಮತ್ತು ಸಹಕಾರ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಸರೆರಚಾಟದಲ್ಲಿ ತೊಡಗಿ ನಕ್ಸಲರ ವಿರುದ್ಧ ಹೋರಾಡುತ್ತಿರುವ ಯೋಧರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡುವ ಬದಲು ಅವರಿಗೆ ಆಧುನಿಕ ಆಯುಧ ಮತ್ತು ತರಬೇತಿಯನ್ನು ಒದಗಿಸವುದರ ಜೊತೆಗೆ  ನಕ್ಸಲರಿಗೆ ಆಹಾರ,ಹಣ,ಆಯುಧ,ವೈದ್ಯಕೀಯ ಸೌಲಭ್ಯ ಪೂರೈಕೆಯಾಗದಂತೆ ನೋಡಿಕೊಳ್ಳುವುದರಿಂದ ಈ ಪ್ರದೇಶಗಳ ಮೇಲೆ ಸರ್ಕಾರ ತನ್ನ ಹಿಡಿತವನ್ನು ಸಾಧಿಸಬಹುದಾಗಿದೆ. ಈಗಾಗಲೇ ಮಾವೋವಾದ ಪೀಡಿತ ಪ್ರದೇಶಗಳಲ್ಲಿ ಎಸ್.ಇ.ಝೆಡ್.ಗಳನ್ನು ಸ್ಥಾಪಿಸುವ ಬದಲು ಭೃಷ್ಠಾಚಾರಹಿತ ಎಸ್.ಡಿ.ಝೆಡ್.(ವಿಶೇಷ ಅಭಿವೃದ್ಧಿ ವಲಯ)ಗಳನ್ನು ಸ್ಥಾಪಿಸುವ ಮೂಲಕ ಈ ಪ್ರದೇಶಗಳ ಅಭಿವೃದ್ಧಿಪಡಿಸಬಹುದಾಗಿದೆ. ಇಷ್ಟು ಕೆಲಸವನ್ನು ಸರ್ಕಾರಗಳು  ( ......ಬುದ್ಧಿಜೀವಿಗಳು, ಜ್ಯಾತ್ಯಾತೀತವಾದಿಗಳು, ಮಾನವ ಹಕ್ಕುಗಳ ಹೋರಾಟಗರರು ಹೀಗೆ ಇತ್ಯಾದಿಗಳ ಮಾರುವೇಷದಲ್ಲಿರುವ ಮಾವೋಗಳ ಲಾಬಿಗೆ  ಮಣಿಯದಂತೆ....... ) ಸಾಧಿಸುವುದು, ಅವುಗಳ ಮುಂದಿರುವ ಬಹುಮುಖ್ಯ ಸವಾಲಾಗಿದೆ.



ದತ್ತರಾಜ್

7 comments:

Anamika said...

ಈ 'ವಾದ'ದ ಹಿಂದಿನ Fact ಗಳನ್ನ ತೋರಿಸುವ ಬರಹ. ಮೊದಲ ಪ್ರಯತ್ನದಲ್ಲೇ ಎಲ್ಲರ ಮನಗೆಲ್ಲುವ ದತ್ತರಾಜ್ ಸರಳ ಬರಹ ಶೈಲಿಗೆ ಅಭಿನಂದನೆಗಳು.

- ರೇವಪ್ಪ

ಪರಶು.., said...

ವೆಲ್ ಕಂ ದತ್ತರಾಜ್
ಅರ್ಥ ಪೂರ್ಣ ಬರಹ...
ಛತ್ತೀಸ್ಗಡದ ನಕ್ಸಲ್ ದಾಳಿ ಪ್ರಕರಣದ ನಂತರ ನಮ್ಮ ಸಮಾಜದೊಳಗಿನ ಅದೆಷ್ಟೋ ನಕ್ಸಲ್ ಬೆಂಬಲಿತ ಮುಖಗಳು ತಮ್ಮ ಮುಖವಾಡ ಬದಲಾಯಿಸಿವೆ. ನಕ್ಸಲ್ ಬಗ್ಗೆ ಧ್ವನಿ ಎತ್ತಿ ಮಾತನಾಡುವ 'ಬುದ್ದಿ'ಜೀವಿಗಳ ಧ್ವನಿ ಕುಗ್ಗಿದೆ. ಎಲ್ಲೆಲ್ಲೂ ನಕ್ಸಲ್ ವಾದಿಗಳ ಬಗೆಗಿನ ವಿರೋಧವೇ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲೇ ನಮ್ಮ ಕೇಂದ್ರ ಸರ್ಕಾರ ತನ್ನ 'ಆಪರೇಷನ್ ಗ್ರೀನ್ ಹಂಟ್'ನ್ನು ಚುರುಕುಗೊಳಿಸಿ, ನಕ್ಸಲ್ ಪೀಡಿತ ಪ್ರದೇಶಗಳ ಕಡೆಗೆ ವಿಶೇಷ ನಿಗಾವಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಭದ್ರಗೊಳಿಸಲೆತ್ನಿಸುತ್ತಿರುವ ಈ ಪಿಡುಗಿಗೆ ಅಂತ್ಯ ಹಾಡಬೇಕಿದೆ. ಅಲ್ಲವೇ....

ನಿಮ್ಮ ವಿಷಯ ಗ್ರಹಿಕೆ ಮತ್ತು ಬರಹದ ಭಾಷೆ ಹಿಡಿಸಿತು.... ಹೀಗೇ ಬರೆಯುತ್ತಿರಿ... ಪ್ರಯತ್ನ ನಿರಂತರವಾಗಿರಲಿ


ಪರಶು..,

spandana said...

ಬಹಳ ಅರ್ಥಪೂರ್ಣ ಬರಹ. ನಕ್ಸಲ್ ವಾದ(ಮಾವೋವಾದ)ದ ಬಗ್ಗೆ ನೀವು ಕಲೆಹಾಕಿರುವ ಮಾಹಿತಿ(facts & figures)ಹಾಗೂ ನಿಮ್ಮ ವಿಷಯ ಗ್ರಹಿಕೆ ಚೆನ್ನಾಗಿದೆ. Keep up the good work.

Sudha

ಮಂಜು said...

ಅನಿಸಿಕೆಗಳನ್ನು ಬರವಣಿಗೆಯ ಮೊನಚಿಗೆ ಪೋಣಿಸಲು / ಹೆಣೆಯಲು ಶುರು ಮಾಡಿರುವ ದತ್ತರಾಜ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳೋಣ. ನಾನು ಮೊದಲೇ ಹೇಳಿದಂತೆ ನಿಮ್ಮ ಶೈಲಿ, ಸೂಕ್ಷ್ಮವಾಗಿ ಮಾತನಾಡುವ ರೀತಿ ಚೆನ್ನಾಗಿಯೇ ಇದೆ. ಈ ಬರಹವು ಕೂಡ ನಿಮ್ಮಂತೆ ಸರಳವಾಗಿ ಗಮನ ಸೆಳೆಯುವ ಹಾಗೆ ಇದೆ. ನನಗೆ ಅನ್ನಿಸಿದ್ದು- ನೀವು ನಕ್ಸಲ್ ವಾದವನ್ನು ಒಪ್ಪದ ಪೂರ್ವಗ್ರಹಿತ ಚಿಂತನೆಯಿಂದಲೇ ಮಾಹಿತಿಯನ್ನು ಕಲೆ ಹಾಕಿದಂತೆ ತೋರಿದರು ಇದರ ಬಗ್ಗೆ ಹೆಚ್ಚು ತಿಯರಿಟಿಕಲ್ ಆಗಿ ತಿಳಿಸಿದ್ದೀರಿ.

ಇಲ್ಲಿ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗಿನ ಒಂದು ಮಾತು ಹೇಳಬಯಸುತ್ತೇನೆ: "ಎಲ್ಲಿಯವರೆಗೆ ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಸಮಾನತೆಗಳಿರುವುದಿಲ್ಲವೋ ಅಲ್ಲಿಯ ತನಕ ರಾಜಕೀಯ ಸ್ಥಿರತೆ ಇರುವುದಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಸಮಾನತೆ ಉಂಟಾಗದೇ ಹೋದರೆ ಪರಿಸ್ಥಿತಿ ಅಧೋಗತಿಗೆ ಇಳಿಯುವುದು ಖಂಡಿತ" ಇದು ಅಂಬೇಡ್ಕರ್ ಅವರದ್ದೇ ಅಲ್ಲ ಪ್ರತಿಯೊಬ್ಬ ಪ್ರಜಾಪ್ರಭುತ್ವದ ಆಶಯವನ್ನು ಹೊಂದಿರುವವರ ನಿಲುವು.

ಒಂದು ಮಾತು ರಾಜು; ನಕ್ಸಲ್ ಪೀಡಿತವಲ್ಲದ ಪ್ರಜಾಪ್ರಭುತ್ವ ವ್ಯವಸ್ಥೆಯೇ ಮೂಲವಾಗಿರುವ ಪ್ರದೇಶಗಲ್ಲಿಯೇ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಭೂಮಿ ಕಳೆದುಕೊಂಡಿದ್ದಾರೆ, ಫ್ಯಾಕ್ಟರಿಗಳಲ್ಲಿ ಕೂಲಿಗಳಾಗಿ ದುಡಿಯುತ್ತಲೇ ತಮ್ಮ ಬದುಕನ್ನೇ ಸವೆಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪಭುತನ ಸಾಧಿಸಿರುವವರು ಯಾರು? ನಮ್ಮ ನಮ್ಮಲ್ಲೇ ಭಾಷೆ, ಗಡಿ, ಜನಾಂಗಿಯವಾಗಿ ವಿಂಗಡಿಸಿ ಅಧಿಕಾರಿಶಾಹಿಗಳಾಗಿರುವವರು ಯಾರು? ಬಹುಷಃ ಲೆನಿನ್ ಮಾವೋ ಇವರೆಲ್ಲರೂ ಸರ್ವಧಿಕಾರಿಗಳಾಗಿ ಕಾಣುವ ನಿಮಗೆ ಬುಶ್, ಹಿಟ್ಲರ್, ಬ್ಲೇರ್, ಇವರ್ಯಾರು ಸರ್ವಾಧಿಕಾರಿಗಳಂತೆ ಕಾಣುತ್ತಿಲ್ಲವೇ? ಒಂದಂತು ನಿಜ ಪ್ರಜಾಸತ್ತಾತ್ಮಕ ವ್ಯವಸ್ಥೆಯಿಂದ ಹೊರತಾದ ಯಾವ ಸಂಘಟನೆಯು ಉಳಿಯುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಆಗಿರುವ ಕಷ್ಟವೆಂದರೆ ಒಬ್ಬ ವ್ಯಕ್ತಿಯನ್ನು ಒಂದು ಅಂಶವನ್ನಾಗಿ ಪರಿಗಣಿಸುವ ಬದಲು ಅವನು ಜನ್ಮ ತಾಳಿರುವ ಜನಾಂಗ, ಪಂಗಡವನ್ನು ಒಂದು ಅಂಶವಾಗಿ ಪರಿಗಣಿಸಿರುವುದು. ಅದರಿಂದಲೇ ಪರಸ್ಪರ ಮೇಲಾಟ, ಈರ್ಷೆ, ಕಾದಾಟಗಳು ಹೆಚ್ಚುತ್ತಿರುವುದು. ರಾಜು ನಿಮಗೆ ವಿಷಯ ಸೂಕ್ಷ್ಮಗಳನ್ನು ಗ್ರಹಿಸುವ ಪ್ರಭೆ ನನಗಿಂತಲೂ ಚೆನ್ನಾಗಿದೆ. ಈ ಎಲ್ಲ ಅಂಶಗಳೊಂದಿಗೆ ನಾವಿಬ್ಬರು ಒಂದು ತೌಲನಿಕ ಅಧ್ಯಯನ ನಡೆಸೋಣ. ತಿಳಿದು ತಿಳಿಯಾಗೋಣ- ಒಟ್ಟಿನಲ್ಲಿ ಆಶಯ ಒಂದೇ ಅಲ್ಲವೇ?

-ಮಂಜು.

M.B.Lavanya said...

ತಪ್ಪು ಯಾರಿಂದ ಜರುಗಿದರೂ ತಪ್ಪೇ, ಅದು ಲೆನಿನ್ ಮಾವೋದಿಂದಾಗಲೀ, ಹಿಟ್ಲರ / ಬುಷ್ ರಿಂದಾಗಲೀ.
ವಿಷಯದ ಜೊತೆ ಜೊತೆಗೆ ಪರಿಹಾರೋಪಾಯಗಳನ್ನೂ ನಾನು ನಿರೀಕ್ಷಿಸುತ್ತಿದ್ದೇನೆ.

MANJUDADA said...

ನಾವು ಈ ಹಿಂದೆ ನಕ್ಸಲಿಸಂನ ಮೂಲ ಉದ್ದೇಶ ಮತ್ತು ಅದರ ಅಮಾನವೀಯ ಕೃತ್ಯಗಳ ಬಗ್ಗೆ ಮಾತನಾಡಿದ್ದೀವಿ.ಈ ಲೇಖನದಲ್ಲಿ ದತ್ತರಾಜ್ ರವರು ನಕ್ಸಲಿಸಂನ ಹುಟ್ಟು,ಅದರ ಬೆಳವಣಿಗೆ ಹಾಗೂ ಈ ಸಂಘಟನೆಯ output ಬಗ್ಗೆ ತುಂಬಾ ವಿಷಯ ಕಲೆಹಾಕಿದ್ದಾರೆ.ಶಾಂತಿಪ್ರಿಯರಾದ ನಾವು ಈ ನಕ್ಸಲಿಸಂ ಎಂಬ ಪೆಡಂಭೂತವನ್ನು ಹೋಗಲಾಡಿಸಿ ದೇಶದ ಸುಭದ್ರತೆಯ ಕಡೆ ಗಮನಹರಿಸೋಣ.ಇದು ಕೇವಲ ಸರ್ಕಾರದ ಮಟ್ಟದಲ್ಲಿ ಮಾತ್ರವಲ್ಲದೇ ಪ್ರತಿಯೊಬ್ಬ ಜನ ಸಾಮಾನ್ಯನ ಕರ್ತವ್ಯವೂ ಕೂಡ ಆಗಿದೆ.ನನ್ನ ಪ್ರಕಾರ ಪ್ರಜಾಪ್ರಭುತ್ವಕ್ಕಿಂತ ಒಳ್ಳೆಯ ವ್ಯವಸ್ಥೆ ಯಾವುದೂ ಇರಲಿಕ್ಕಿಲ್ಲ.MBM.

madhu.br said...

ದತ್ತಣ್ಣ ನಿನ್ನ ಲೇಖನ ಸಮಯೋಚಿತ,ಸಮಕಾಲೀನವಾಗಿದೆ...ಛತ್ತೀಸ್ಗಡದಲ್ಲಿನ ನಕ್ಸಲೀಯ ಸಮಸ್ಯೆಯನ್ನು ಮೇಲ್ನೋಟಕ್ಕೆ ಕಾಣುವಂತಹ ವಿಷಯಗಳನ್ನು ಬರೆದಿದ್ದೀಯ ಅದೂ ಸರಿ ಇರಬಹುದು...ಆದರೇ ಅಲ್ಲಿನ ಸಮಸ್ಯೆ ಯಾಕಿಷ್ಟು ಹದಗೆಟ್ಟಿದೆ ಅನ್ನೋದಕ್ಕೂ ನೀನೂ ಇನ್ನು ಬರೆಯುತ್ತ ಇರಬೇಕಾಗುತ್ತದೆ..ಅಲ್ಲಿನ ಆದವಾಸಿಗಳ ಸಮಸ್ಯೆ,ರಾಜಕೀಯ ದೊಂಬರಾಟ,ಸಲ್ವಜುಡುಂ ಇವೆಲ್ಲವೂಗಳ ಬಗ್ಗೆಯ ತಿಳಿಸಬೇಕಾಗುತ್ತದೆ.ಸಮಸ್ಯೆಯ ಮೂಲವನ್ನೆ ಹುಡುಕದೆ ಸಮಸ್ಯೆಯನ್ನು ಬಗೆಹರಿಸುತ್ತೇವೆ ಅನ್ನೋದು ಮೂರ್ಖತನವಾದೀತು..ಕ್ಯಾನ್ಸರ್ ಇರುವವನಿಗೆ ಹೊಟ್ಟೆನೋವು,ತಲೆನೋವಿಗೆ ಮಾತ್ರೆ ಕೊಟ್ಟರಾಗುವುದಿಲ್ಲ ಕ್ಯಾನ್ಸರ್ ಗಡ್ಡೆಯನ್ನೆ ಆಪರೇಷನ್ ಮಾಡಬೇಕಾಗುತ್ತದೆ..ಅಲ್ಲಿನ ಜನರೇ ಪೊಲೀಸರನ್ನು ನಂಬದಿರುವ ಸ್ಥಿತಿಯನ್ನು ಯಾವ ರೀತಿ ಅರ್ಥಮಾಡಿಕೊಳ್ಳಬೇಕು...ನೀನೇಳಿದ ಆಪರೇಷನ್ ಗ್ರೀನ್ ಹಂಟ್ ಕಾರ್ಯಕ್ರಮ ಎಂಬ ಕಾರ್ಯಾಚರಣೆ ಇಲ್ಲವೇ ಇಲ್ಲ ಅಂಥ ಹೇಳ್ತ ಇದೇ ಇದರ ಬಗ್ಗೆ ನಿನ್ ಅಬಿಪ್ರಾಯವೇನು ಅಥವಾ ಇದ್ದರೂ ಇದು ಮಾವೊವಾದಿಗಳ ವಿರುದ್ದವೋ ಇಲ್ಲ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಕ್ಕೋ?
ಕೊನೆಯದಾಗಿ ಪ್ರಜಾವಾಣಿಯಲ್ಲಿ ಈಗಾಗಲೇ ಆರುಂದತಿ ರಾಯ್ ರವರು ಇಂಗ್ಲೀಷ್ ಪತ್ರಿಕೆಗೆ ಬರೆದ ಲೇಖನ ಅನುವಾದಗೊಂಡು ಪ್ರಕಟವಾಗಿದೆ ಆ ಲೇಖನದಲ್ಲಿರುವ ಮೂಲಭೂತ ಪ್ರಶ್ನೆಗಳಿಗಾದರೂ ಪ್ರಸ್ತುತದಲ್ಲಿ ಉತ್ತರ ಸಿಗಬಹುದಾ ಅಂತಾ ಆತ್ಮಾವಲೋಕನ ಮಾಡಿಕೊಳ್ಳೋಣ...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago