15 October 2011

ಮನನ ಅಧ್ಯಯನ ಸಭೆ : ದಿನಾಂಕ: 15.10.2011ರ ನಡವಳಿಗಳು

ಮೊದಲಿಗೆ ಮನನ ತಂಡಕ್ಕೆ ಹೊಸದಾಗಿ ಸೇರ್ಪಡೆಯಾದ ಶ್ರೀ ಆರಾಧ್ಯರವರನ್ನು ಬರಮಾಡಿಕೊಳ್ಳಲಾಯಿತು. ತದನಂತರ ನಮ್ಮನ್ನು ಅಗಲಿದ ಗಜಲ್ ಮಾಂತ್ರಿಕ ಜಗಜಿತ್ ಸಿಂಗ್ ಹಾಗೂ ದಾರ್ಶನಿಕ ಮತ್ತೂರು ಕೃಷ್ಣಮೂರ್ತಿರವರಿಗೆ ಮನನ ತಂಡದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನೇರವಾಗಿ ವಿಷಯವನ್ನು ಪ್ರಸ್ತಾಪಿಸಿದ ಮಂಜುರವರು ರಾಜ್ಯದಲ್ಲಿ ಉದ್ಭವಿಸಿರುವ ವಿದ್ಯುತ್ ಸಮಸ್ಯೆ, ಕಾರಣ, ವಿದ್ಯುತ್ ಖರೀದಿಗಾಗಿ ತಗಲುತ್ತಿರುವ ವೆಚ್ಚ, ಸಂಪನ್ಮೂಲ ಕೊರತೆ, ಇತರೆ ಶಕ್ತಿಗಳಿಂದ ವಿದ್ಯುತ್ ಉತ್ಪಾದನೆ ಕುರಿತ ವಿಷಯದ ಬಗ್ಗೆ ಅಭಿಪ್ರಾಯವನ್ನು ಮಂಡಿಸುವಂತೆ ಸದಸ್ಯರನ್ನು ಕೋರಿದರು.

ಇದಕ್ಕೆ ಸ್ಪಂದಿಸಿದ ನೇತ್ರಾವತಿ ರವರು ತಾವು ಈ ವಿಷಯದ ಬಗ್ಗೆ ಸಿದ್ಧಪಡಿಸಿಕೊಂಡು ಬಂದಿದ್ದ ಟಿಪ್ಪಣಿಯನ್ನು ನೀಡಿದರು ಮತ್ತು ಒಂದೆರಡು ಘೋಷವಾಕ್ಯಗಳನ್ನು ಬಳಸಬಹುದಾಗಿ ಸೂಚಿಸಿದರು.

ನಂತರ ಅಂಕಿಅಂಶಗಳ ಕುರಿತು ಪ್ರಸ್ತಾಪಿಸಿದ ಮಂಜುರವರು ರಾಜ್ಯದಲ್ಲಿ ಒಟ್ಟಾರೆಯಾಗಿ 160 ಮಿಲಿಯನ್ ಯೂನಿಟ್ ಗಳ ಬೇಡಿಕೆಯಿದ್ದು ಪ್ರಸ್ತುತ 136 ಮಿ.ಯೂ. ಲಭ್ಯವಿರುತ್ತದೆ. ಅದರಲ್ಲಿ 50 ಮಿಲಿಯನ್ ಯೂನಿಟ್ ಜಲವಿದ್ಯುತ್ ಮೂಲದಿಂದ ಬಂದರೆ ಸುಮಾರು 26 ಮಿ.ಯೂ. ಉಷ್ಣ ವಿದ್ಯುತ್ ಮೂಲದಿಂದ ಹಾಗೂ ಬಾಕಿ 60 ಮಿ.ಯೂ. ಹೊರರಾಜ್ಯ ಮತ್ತು ಕೇಂದ್ರ ಗ್ರಿಡ್ ನಿಂದ ಖರೀದಿಸಲಾಗುತ್ತಿದೆ. ರಾಜ್ಯ ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿದ್ಯುತ್ ಖರೀದಿಗಾಗಿ ಮಾಡಿರುವ ವೆಚ್ಚವನ್ನು ಗಮನಿಸಿದರೆ 2008-09ರಲ್ಲಿ ಒಟ್ಟು 1,962 ಮಿ.ಯೂ. ವಿದ್ಯುತ್ ಖರೀದಿಸಲಾಗಿದ್ದು ಅದಕ್ಕೆ ತಗುಲಿದ ವೆಚ್ಚ 1,326 ಕೋಟಿ ರೂಪಾಯಿಗಳು. 2009-10ನೇ ಸಾಲಿನಲ್ಲಿ ಮತ್ತೆ 1,798 ಮಿ.ಯೂ.ಗಳನ್ನು ಖರೀದಿಸಿದ್ದು ಅದರ ವೆಚ್ಚ 1,152 ಕೋಟಿ ರೂ.ಗಳ ಮತ್ತು 2010-11ನೇ ಸಾಲಿನಲ್ಲಿ ಅತ್ಯಧಿಕ ಅಂದರೆ 3,937 ಕೋಟಿ ರೂಪಾಯಿ ವೆಚ್ಚದಲ್ಲಿ 7,815 ಮಿ.ಯೂ. ವಿದ್ಯುತ್ ಖರೀದಿ ಮಾಡಲಾಗಿದೆ. ಬಿಡ್ ಮೂಲಕ ಖರೀದಿಸಲಾದ 200 ಮೆ.ವ್ಯಾ. ವಿದ್ಯುತ್ ಅನ್ನು ಪ್ರತಿ ಯೂನಿಟ್ಟಿಗೆ 3.72ರಂತೆ ಉಳಿದ 10 ಮೆ.ವ್ಯಾ. ಅನ್ನು ರೂ.4.26 ಪ್ರತಿ ಯೂನಿಟ್ಟಿಗೆ ತಗಲುವ ವೆಚ್ಚದಲ್ಲಿ ಖರೀದಿಸಲಾಗಿದೆ. ಪೀಕ್ ಹವರ್ (ರಾತ್ರಿ ವೇಳೆ)ನಲ್ಲಿ ರೂ.5.39ರ ಪ್ರತಿ ಯೂನಿಟ್ಟಿನ ವೆಚ್ಚದಂತೆ ಹಾಗೂ 50 ಮೆ.ವ್ಯಾ. ವಿದ್ಯುತ್ ಅನ್ನು ಎನ್.ಇ.ಟಿ.ಎಸ್.ನಿಂದ 7.07 ರೂ.ಗಳ ಪ್ರತಿ ಯೂನಿಟ್ಟಿನ ಬೆಲೆ ತೆತ್ತು ಖರೀದಿಸಲಾಗಿದೆ ಎಂಬ ಅಂಕಿ ಅಂಶಗಳನ್ನು ಸಭೆಯ ಮುಂದೆ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಂತರಾಮ್ ರವರು ಬೇಡಿಕೆಯ ಆಧಾರದಲ್ಲಿ ಅಂದರೆ ನಗರ ಪ್ರದೇಶಗಳಲ್ಲಿ ತಲೆಯೆತ್ತುತ್ತಿರುವ ಮಾಲ್ ಗಳು ಹಾಗೂ ಅಪಾರ್ಟ್ ಮೆಂಟ್ ಗಳು ಮತ್ತು ಕಾರ್ಖಾನೆಗಳಿಗೆ ಅನಿವಾರ್ಯವಾಗಿ ಪೂರೈಸಲೇಬೇಕಾದ ಹೆಚ್ಚುವರಿ ವಿದ್ಯುತ್ ನಿಂದ ಈ ಸಮಸ್ಯೆ ಉಂಟಾಗುತ್ತಿದ್ದು 2004ರವರೆಗೆ ಪ್ರತಿ ಯೂನಿಟ್ಟಿಗೆ 3.72ರಂತೆ (10 ವರ್ಷಗಳವರೆಗೆ) ಮತ್ತು ತದನಂತರದ ವರ್ಷಗಳಲ್ಲಿ ರೂ.4.26 ಪ್ರತಿ ಯೂನಿಟ್ಟಿಗೆ ತಗಲುವ ವೆಚ್ಚದಲ್ಲಿ ಖರೀದಿ ಮಾಡುತ್ತಿರುವ ಒಪ್ಪಂದ ಸರ್ಕಾರದಲ್ಲಿದೆ ಎಂದು ತಿಳಿಸಿದರು.
ಅತ್ಯಂತ ಉಪಯುಕ್ತ ಮಾಹಿತಿಯನ್ನು ಒದಗಿಸಿದ ಶಾಂತರಾಮ್ ರವರು ವಿವಿಧ ಮೂಲಗಳಿಂದ ಉತ್ಪಾದಿಸುತ್ತಿರುವ ವಿದ್ಯುತ್ ಗಾಗಿ ತಗಲುವ ವೆಚ್ಚವನ್ನು ವಿವರಿಸಿದರು:
1. ಜಲವಿದ್ಯುತ್ ನಿಂದ ಪ್ರತಿ ಯೂನಿಟ್ಟಿಗೆ ಸುಮಾರು 4.00 ರೂ.ವೆಚ್ಚ
2. ಪವನಶಕ್ತಿಯಿಂದ ಪ್ರತಿ ಯೂನಿಟ್ಟಿಗೆ ಸುಮಾರು 6.00 ರೂ. ವೆಚ್ಚ
3. ಬಯೋ ಸಂಪನ್ಮೂಲದಿಂದ ಪ್ರತಿ ಯೂನಿಟ್ಟಿಗೆ 8.00 ರೂ. ವೆಚ್ಚ
4. ಕಚ್ಚಾ ಕಸದಿಂದ ಪ್ರತಿ ಯೂನಿಟ್ಟಿಗೆ ರೂ.9.00ಗಳ ವೆಚ್ಚ
ಇವೆಲ್ಲಾ ಅಂಶಗಳನ್ನು ಒಳಗೊಂಡಂತೆ ಅಧಿಕಾರ ಹೊಂದಿದವರ ಇಚ್ಛಾ ಶಕ್ತಿಯ ಕೊರತೆ, ತಡೆರಹಿತ ವಿದ್ಯುತ್ ಸೋರಿಕೆ, ಸೂಕ್ತ ಕ್ರಮದಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸದೇ ಇರುವುದು ಇನ್ನೂ ಹಲವು ಅಂಶಗಳು ಇಂದು ರಾಜ್ಯದಲ್ಲಿ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಕಾರಣವೆಂದೂ ಸಹ ಶಾಂತರಾಮ್ ಅಭಿಪ್ರಾಯ ಪಟ್ಟರು.

ಇದಕ್ಕೆ ಪೂರಕವಾಗಿ ಮಾತನಾಡಿದ ಗುರುಸ್ವಾಮಿರವರು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಬಯಲು ಸೀಮೆಯ ಪ್ರದೇಶಗಳ ಜಮೀನುಗಳಿಗೆ ನೀರು ಹಾಯಿಸುವ ಸಲುವಾಗಿ ನಿರ್ಮಿಸುವ ಪಂಪ್ ಸೆಟ್ ಗಳು ಸಮರ್ಪಕವಾದ ನಿರ್ವಹಣೆಯಿಂದ ಮತ್ತು ಸೂಕ್ತ ಕಾಲದಲ್ಲಿ ಒದಗಿಸದ ವಿದ್ಯುತ್ ವ್ಯವಸ್ಥೆಯಿಂದ ಹಾಳಾಗಿದ್ದು ಯೋಜನೆಯೇ ನಿಷ್ಪ್ರಯೋಜನೆಯಾಗುವ ಉದಾಹರಣೆಗಳು ಬಹಳಷ್ಟಿವೆ ಎಂದು ಅಭಿಪ್ರಾಯಪಟ್ಟರು. ಒಂದು ಪಂಪ್ ಸೆಟ್ ಗೆ 25.ಕೆ.ವಿ. ವಿದ್ಯುತ್ ಬೇಕಾದಲ್ಲಿ ಸುಮಾರು 13 ಸಾವಿರ ಕೊಳವೆಬಾವಿಗಳು ಅದಕ್ಕೆ ಒದಗಿಸಿರುವ ಪಂಪ್ ಸೆಟ್ ಗಳ ಸೂಕ್ತ ಕಾರ್ಯನಿರ್ವಹಣೆಯಿಲ್ಲದ ಕಾರಣಕ್ಕಾಗಿಯೇ ಖೋತಾ ಆಗಿರುವ ಉದಾಹರಣೆಗಳು ಬಹಳಷ್ಟಿವೆ ಎಂದು ತಿಳಿಸಿದರು. ಇದಕ್ಕೆ ಮುಖ್ಯವಾಗಿ ಇಲಾಖೆಗಳ ನಡುವಿನ ಹೊಂದಾಣಿಕೆ ಇಲ್ಲದಿರುವುದೂ ಬಹಳ ಮುಖ್ಯಕಾರಣವೆಂದು ಅಭಿಪ್ರಾಯಪಟ್ಟರು. ಹಾಗೆಯೇ ವಿದ್ಯುತ್ ಇಲಾಖೆ, ಜಿಲ್ಲಾಪಂಚಾಯತ್, ಜಲಸಂಪನ್ಮೂಲ ಇಲಾಖೆ ಎಲ್ಲವೂ ಹೊಂದಾಣಿಕೆಯಲ್ಲಿ ಕೆಲಸ ನಿರ್ವಹಿಸಿದಲ್ಲಿ ಪೋಲಾಗುತ್ತಿರುವ ಅಥವಾ ವ್ಯರ್ಥವಾಗುತ್ತಿರುವ ವಿದ್ಯುತ್ ಅನ್ನು ಉಳಿಕೆ ಮಾಡಬಹುದಾಗಿ ಅಭಿಪ್ರಾಯಪಟ್ಟರು.

ಗುರುಪ್ರಕಾಶ್ ರವರು ನಾವು ಇತರೆ ಸಂಪನ್ಮೂಲಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಯೋಜನೆಗಳನ್ನು ರೂಪಿಸುತ್ತಿದ್ದು, ಅತ್ಯಂತ ಯಥೇಚ್ಚವಾಗಿ ಮತ್ತು ಸುಲಭವಾಗಿ ಸಿಗುವ ಸೌರವಿದ್ಯುತ್ ಬಗ್ಗೆ ಉತ್ತಮವಾದ ಮತ್ತು ಉಪಯುಕ್ತವಾದ ಯೋಜನೆಗಳನ್ನು ರೂಪಿಸಿ ಕಾರ್ಯಾನುಷ್ಟಾನಕ್ಕೆ ತರುವುದು ಈಗಿರುವ ಪರಿಸ್ಥಿತಿಯಲ್ಲಿ ಉತ್ತಮ ಮಾರ್ಗೋಪಾಯವೆಂದು ತಿಳಿಸಿದರು. ಸದಸ್ಯರು ಸಹ ಈ ಅಂಶವನ್ನು ಸಹಮತಿಸಿದರು.

ಆರಾಧ್ಯರವರು ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ವ್ಯವಸಾಯದ ಉದ್ದೇಶಗಳಿಗಾಗಿ ಬಳಸಲಾಗುತ್ತಿರುವ ವಿದ್ಯುತ್ ಪ್ರಮಾಣಕ್ಕಿಂತ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಐಷಾರಾಮಿ ಜೀವನಕ್ಕಾಗಿ ಬಳಸುವ ವಿದ್ಯುತ್ ಹೆಚ್ಚಿನದಾಗಿದ್ದು ಈ ವ್ಯತ್ಯಯವನ್ನು ಸಹ ನೀಗಬೇಕು ಮತ್ತು ಆದ್ಯತೆಯ ವಿಷಯಗಳನ್ನು ಮನಗಂಡು ಅದಕ್ಕೆ ಪೂರಕವಾಗಿ ಸಂಪನ್ಮೂಲ ಒದಗಿಸುವ ಅವಶ್ಯಕತೆ ಇರುವುದಾಗಿ ತಿಳಿಸಿದರು.

ದತ್ತರಾಜ್ ರವರು ವಿದ್ಯುತ್ ಉಳಿತಾಯದ ಬಗ್ಗೆ ನಾವು ಕಾರ್ಯಪ್ರವೃತ್ತರಾಗಿ ಆದಷ್ಟು ಮಿತವ್ಯಯಗೊಳಿಸುವ ಕಾರ್ಯಕ್ಕೆ ಬದ್ಧರಾಗಿರಬೇಕೆಂದು ತಿಳಿಸಿದರು.

ಮುಂದುವರೆದು ಮಂಜುರವರು ಮನನ ತಂಡದ ವತಿಯಿಂದ ಕಳೆದ ಸಭೆಯಲ್ಲಿ ತಿಳಿಸಿದಂತೆ ನಮ್ಮ ಕಾರ್ಯಕ್ಷೇತ್ರದಲ್ಲಿ ಬಳಸಲಾಗುತ್ತಿರುವ ವಿದ್ಯುತ್ ಬಗ್ಗೆ ಅಧ್ಯಯನ ಮಾಡಿ ವರದಿ ಮಂಡಿಸುವಂತೆ ಕೋರಲಾಯಿತು. ಮತ್ತು ಉಳಿದ ಸದಸ್ಯರು ಸಹಕರಿಸಬೇಕೆಂದು ಸಹ ಕೋರಲಾಯಿತು.
ಮನನ ತಂಡದ ಸದಸ್ಯರು ಅಧ್ಯಯನ ಸಭೆಗೆ ತಪ್ಪದೆ ಹಾಜರಾಗುವಂತೆ ಹಾಗೂ ಅಧ್ಯಯನಕ್ಕೆ ತೆಗೆದುಕೊಳ್ಳುವ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದು ಟಿಪ್ಪಣಿಗಳನ್ನು ಸಿದ್ಧಪಡಿಸಿ ನೀಡಬೇಕೆಂದು ಮತ್ತು ಇತರ ಸದಸ್ಯರಿಗೂ ತಿಳಿಸಬೇಕೆಂದು ಎಲ್ಲರನ್ನೂ ಕೋರುತ್ತಾ ಎಲ್ಲರಿಗೂ ವಂದಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಸಭೆಯಲ್ಲಿ ಭಾಗವಹಿಸದ ಸದಸ್ಯರು ಈ ವಿಷಯದ ಕುರಿತು ತಮ್ಮ ಬಳಿ ಹೆಚ್ಚಿನ ಮಾಹಿತಿ ಇದ್ದರೆ ದಯಮಾಡಿ ಮನನ ತಂಡಕ್ಕೆ ನೀಡುವಂತೆ ಕೋರಿದೆ.
 
 ನೇತ್ರಾವತಿರವರು ನೀಡಿರುವ ಘೋಷವಾಕ್ಯ: 
* ಉಳಿಸಿದ ವಿದ್ಯುತ್ ಉತ್ಪಾದನೆಗೊಂಡ ವಿದ್ಯುತ್ ಗೆ ಸಮ
* ವಿದ್ಯುತ್ ಪೂರೈಕೆ ಪರಿಮಿತವಾದುದು, ಅದನ್ನು ಬುದ್ಧಿವಂತಿಕೆಯಿಂದ ಉಳಿಸಿ.

ಭಾಗವಹಿಸಿದ್ದ ಸದಸ್ಯರು : ನೇತ್ರಾವತಿ.ಕೆ.ಬಿ., ಗುರುಪ್ರಕಾಶ್, ಆರಾಧ್ಯ, ಗುರುಸ್ವಾಮಿ, ಮಂಜು, ದತ್ತರಾಜ್, ಶಾಂತರಾಮ್


No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago