27 October 2010

ಜಾತಿ ಪದ್ಧತಿ : ರೇವಪ್ಪನ ಅವಲೋಕನ


ನಮಸ್ತೆ ...
ಭಾಳ ದಿನಗಳ ನಂತರ ನಿಮ್ಮೆದುರಿಗೆ ಬರ್ತಿದೀನಿ. ಏನೋ ಹಾಗೇ ಸುಮ್ಮನೆ ಗೀಚೋ ಮನಸಾಯ್ತು.. ಬರೀತಿದೀನಿ. ಅದೇನೋ ಗೊತ್ತಿಲ್ಲ " ಜಾತಿ ಪದ್ಧತಿಯ ಬಗ್ಗೆ ನನ್ನ ಅನಿಸಿಕೆಗಳೇನು ? " ಅಂತ ಯೋಚನೆ ಮಾಡೋ ಮನಸಾಯ್ತು. ಮಾಡಿದೆ. ಬರೆಯೋ ಮನಸಾಯ್ತು. ಬರೀತಿದೀನಿ. ಈಗ ಇಲ್ಲಿ ಬರೆದಿರೋದು ಸಂಪೂರ್ಣ ನನ್ನ ತಿಳುವಳಿಕೆಗಳು. ಅವು ತಪ್ಪಿರಲೂಬಹುದು - ಸರಿ ಇರಲೂಬಹುದು. ನಾನು ಕಂಡಂತೆ ಮತ್ತು ನನ್ನ ಬುದ್ಧಿಗೆ ದಿನೇ ದಿನೇ ತಿಳುವಳಿಕೆ ಮೂಡುತ್ತಾ ಬಂದ ಹಾಗೆ ನಾನು ತಿಳಿದುಕೊಂಡಂತೆ ಜಾತಿ ವ್ಯವಸ್ಥೆಯ ಒಂದು 'ಪದ-ಬಂಧ' ಇಲ್ಲಿದೆ. ಈ ಲೇಖನದ ಮೂಲಕ ನಾನು ಹೀಗೆಲ್ಲಾ ವಿಚಾರ ಮಾಡ್ತೀನಿ, ನೀವೂ ಮಾಡಿ ಅಂತಾಗಲಿ ಅಥವಾ ನಿಮ್ಮ ವಿಚಾರಸರಣಿ ನನಗಿಂತ ಕೆಳಗಿದೆ ಅಂತಾಗಲಿ  ಯಾವ ಹಂತದಲ್ಲೂ ಹೇಳಲು ಹೊರಟಿಲ್ಲ. ಬದಲಿಗೆ ನಾನು ಕಂಡಂತೆ ಜಾತಿ ವ್ಯವಸ್ಥೆ ಅಥವಾ ನನ್ನ ದೃಷ್ಟಿಯಲ್ಲಿ ಜಾತಿ ವ್ಯವಸ್ಥೆ ಅನ್ನುವ ನಿಬಂಧ ರೂಪದಲ್ಲಿ ಮಾತ್ರ ಬರೆದಿದೀನಿ. ತನ್ಮೂಲಕ ಯಾರನ್ನೂ ನೋಯಿಸುವ ಮೂರ್ಖತನ ಮಾಡದ ಹಾಗೆ ನನ್ನ ಶಬ್ದಬಳಕೆ ಇರಲಿ ಅಂತ ತಾಯಿ ಸರಸ್ವತಿಗೆ ಕೇಳಿಕೊಳ್ತೀನಿ :

ಚಿಕ್ಕಂದಿನಲ್ಲಿ ನನ್ನ ತಿಳುವಳಿಕೆ ಹೇಗಿತ್ತು ?

ಚಿಕ್ಕಂದಿನಲ್ಲಿ, ಅಂದ್ರೆ 10ನೇ ಕ್ಲಾಸಿನವರೆಗೆ ಅಂತ ಅರ್ಥ, ಮೇಲ್ನೋಟಕ್ಕೆ ನಮ್ಮ ಶಾಲೆಯ & ಓರಗೆಯ  ಇತರ ಮಕ್ಕಳಂತೆ ನನ್ನಲ್ಲಿ & ನಮ್ಮ ನಡುವೆ ಯಾವ ಭೇದವೂ ಇರದೇ ಇದ್ದದ್ದು ಶತಪ್ರತಿಶತ ನಿಜವಾದರೂ , ನಮ್ಮಗಳಲ್ಲಿ ಜಾತಿ ಭೇದಕ್ಕಿಂತ ಧರ್ಮಭೇಧದ ತಿಳುವಳಿಕೆ ಇತ್ತು ಎನ್ನಬಹುದು. ನಮ್ಮೂರಲ್ಲಿ ಹಿಂದೂ ಮುಸ್ಲಿಂ ಎಂಬ ಎರಡು ಧರ್ಮಗಳು ಮಾತ್ರ ಇದ್ದು ಅವೆರಡರ ತಿಳುವಳಿಕೆ ಮಾತ್ರ ನಮ್ಮಗಳಿಗಿತ್ತು.  ಪಠ್ಯಪುಸ್ತಕಗಳ ಮೂಲಕ ಜಗತ್ತಿನ ವಿವಿಧ ಧರ್ಮಗಳ ಪರಿಚಯವಿದ್ದರೂ ಮುಖತಃ ಅವುಗಳ ಯಾವುದೇ ಪರಿಚಯವಿಲ್ಲದೇ ಆ ಧರ್ಮಗಳ ಸ್ವರೂಪ ತಿಳಿಯುವುದಿಲ್ಲ ಅಂತ ನನ್ನ ಅನಿಸಿಕೆ.

ಇನ್ನು ನನ್ನ ಸ್ವಂತ ಜಾತಿಯ ಬಗ್ಗೆ ಹೇಳಬೇಕಂದ್ರೆ : ಪ್ರತಿ ಮನೆಯ ಅಮ್ಮನ ಹಾಗೆ ನನ್ನಮ್ಮನೂ ನಮ್ಮ ಜಾತಿ ಒಳ್ಳೆಯದೆಂದೇ ಹೇಳಿದ್ದರು. ಆದರೆ ಇವತ್ತಿಗೂ ನನಗೆ ನಮ್ಮ ಜಾತಿಯ / ಜಾತಿಯ ಹೆಸರಿನ ನಿಜ ಅರ್ಥ  ಏನು ಅಂತ ಗೊತ್ತಿಲ್ಲ ಅಂದ್ರೆ ನೀವು ನಂಬಬೇಕು. ಗೊತ್ತು ಮಾಡಿಕೊಳ್ಳುವ ಗೋಜಿಗೂ ಹೋಗಿಲ್ಲ ಬಿಡಿ.

ಸಂಪೂರ್ಣ ಮೇಲ್ಜಾತಿಯ ಮನೆಗಳನ್ನ ಹೊರತುಪಡಿಸಿ, ಇನ್ನುಳಿದೆಲ್ಲ ಜಾತಿಯ ಮನೆಗಳಲ್ಲಿ ತಮಗಿಂತ ಕೆಳಗಿರುವ ಮನೆಗಳನ್ನ ಮನಸಲ್ಲಿಟ್ಟುಕೊಂಡು ತಮ್ಮ ಜಾತಿಯ ಮೇಲ್ಗುಣಗಳನ್ನ ಅಮ್ಮಂದಿರು ಅವರ ಮಕ್ಕಳಿಗೆ ಪ್ರಸಾರ ಮಾಡಿಯೇ ಇರುತ್ತಾರೆ. ಜೊತೆಗೆ ಮೇಲಿನವರ ಬಗೆಗಿನ ಸಣ್ಣ ಅಸಹನೆಯೂ ಪ್ರಸಾರವಾಗಿದ್ದರೂ ಆಶ್ಚರ್ಯವಿಲ್ಲ. ಇದು ಜಾತಿ ವ್ಯವಸ್ಥೆಯ ಅರಿವಿರುವ - ಅನುಭವಿಸಿರುವ ಪ್ರತಿ ಭಾರತೀಯ ಮನೆಯ ಅನುಮೋದಿತ ನಡವಳಿ ಎಂದು ನನ್ನ ತಿಳುವಳಿಕೆ. 

ಇಂತಿಪ್ಪ ನನ್ನ ಸ್ವಯಂ ಜಾತಿಯ ಪ್ರಾಥಮಿಕ ತಿಳುವಳಿಕೆಯ ಮೇಲೆ 
ಮೇಲಿನವರ ಬಗ್ಗೆ ಕೊಂಚ ಅಸಮಾಧಾನ 
ಕೆಳಗಿನವರ ಬಗೆಗೆ ಕೊಂಚ ಅಸಡ್ಡೆ 
ಇಟ್ಟುಕೊಂಡಿದ್ದಂತೂ ಮನಃಸಾಕ್ಷಿಯಾಗಿ ನಿಜ.

------------------------------

ಇದಿಷ್ಟು
ಕುವೆಂಪುರವರ ವಿಶ್ವ ಮಾನವ ಕಲ್ಪನೆ ಎಂದರೆ ಏನು ?
ಅಂತ ಅರಿಯದೇ ಇದ್ದಾಗಿನ ನನ್ನ ಮನಸ್ಥಿತಿಯ ಚಿತ್ರಣ.

------------------------------
 

ಕಾಲೇಜು ದಿನಗಳಲ್ಲಿ ನನ್ನ ತಿಳುವಳಿಕೆಯ ವಿವಿಧ ಹಂತಗಳು :

ಕಾಲೇಜು ಸೇರಿದ ಮೊದಲ ಎರಡು ವರ್ಷಗಳಲ್ಲಿ ಪಿಯು ಸೈನ್ಸ್ ಮಾಡಿದ ಇತರ ವಿಧ್ಯಾರ್ಥಿಗಳಿಗಿರುವ ಅಭ್ಯಾಸದ ಧಾವಂತದ ನಡುವೆ ಇಂಥ ಚಿಂತನೆಗಳಿಗೆ ಸಮಯ ಇದ್ದಿಲ್ಲದಿರುವುದು ನಿಜ ಅಂತ ಒಪ್ಪಿಕೊಳ್ಳುವುದಾದರೆ ಚಿಕ್ಕಂದಿನ ತಿಳುವಳಿಕೆಗಳೇ ಮುಂದುವರೆದಿದ್ದನ್ನೂ ಒಪ್ಪಿಕೊಳ್ಳಬೇಕು. ಆಮೇಲೆ ಇಂಜಿನಿಯರಿಂಗ್ ಎಂಬ ಕಾರ್ಖಾನೆ ಸೇರದೇ ಪ್ಯೂರ್ ಸೈನ್ಸ್ ಎಂಬ ವಿರಾಮಶಾಲೆ ಸೇರಿದ ನನಗೆ ಇಂಥ ಎಲ್ಲ ವಿಚಾರಗಳ ಕಡೆಗೆ ಗಮನ ಹರಿಸಲು ಗಳಿಸಿ ಉಳಿಸಿದಷ್ಟು ಸಮಯ ಸಿಕ್ಕಿತ್ತು. ಅದೇ ದಿನಗಳಲ್ಲಿ ವೀರೇಶ್ ಎಂಬ ನನಗಿಂತ ಮೇಲ್ವರ್ಗದ ಸ್ನೇಹಿತನೊಬ್ಬ ಆಪ್ತನಾದದ್ದು ನಾನೂ Upgrade ಆದ ಅನುಭವ ನೀಡಿದ್ದು ಸುಳ್ಳಲ್ಲ. ಬಹಳ ದಿನಗಳವರೆಗೆ ಆ ಭ್ರಮೆ ಮುಂದುವರೆಯಿತು ಕೂಡ. ಆ ದಿನಗಳಲ್ಲಿ ನಮ್ಮಿಬ್ಬರಲ್ಲಿ ಜಾತಿ ಪದ್ಧತಿಯಲ್ಲಿದ್ದ ಎರಡು ಪಂಗಡಗಳೆಂದರೆ : General Merit  ಜನ ಮತ್ತು Reservation Claim ಮಾಡುವ ಜನ. ನನ್ನದೇ ಜಾತಿಯ ಇತರರನೇಕರು ನಮ್ಮ ಜಾತಿಗೆ ಸರ್ಕಾರ ನೀಡಿ 'ಗೌರವಿಸಿದ್ದ' Reservation ಎಂಬ Previliege ಅನ್ನ ಪಡೆದಿದ್ದರೂ, ನನ್ನ ತಂದೆಯ ಔದಾಸೀನ್ಯವೋ ಅಥವಾ ಜಾತಿ ಪದ್ಧತಿಯ ಬಗೆಗಿನ ತಿರಸ್ಕಾರವೋ ಅಥವಾ ಅವರ ವರ್ಷದ ಆದಾಯ, ನಮ್ಮನ್ನ ಜಾತಿ ಪದ್ಧತಿಯಿಂದ ಹೊರಗಿಡಲು ಸಾಕಷ್ಟಾಯ್ತು, ಎಂಬ ಸರ್ಕಾರದ ನಿಯಮವೋ .. ಯಾವುದೋ ಒಂದು ಕಾರಣಕ್ಕೆ ನಾನು General Merit Student ಅಡಿಯಲ್ಲಿ ದಾಖಲಾಗಿದ್ದೆ. ಹೀಗಾಗಿ Reservation ಪಡೆಯುವ ವರ್ಗದ ಮೇಲೆ ತಿರಸ್ಕಾರ, ಅಸಮಾಧಾನ .. ಇತ್ಯಾದಿಗಳು ಬೆಳೆಯಲು ಕಾರಣವಾಯಿತು. ನನ್ನ ಪದವಿ ಮುಗಿಯುವವರೆಗೂ ಇದೇ ಯೋಚನಾ ಲಹರಿ ನನ್ನಲ್ಲಿ ಸದಾ ತುಂಬಿತ್ತು. ನಂತರ ಅದ್ಯಾವ ಗಳಿಗೆಯಲ್ಲಿ ನನ್ನ ತಲೆಯಲ್ಲಿ ಅದೇನು ಕಿಡಿ ಹೊತ್ತಿತೋ ಗೊತ್ತಿಲ್ಲ. ಸುಮಾರು ಮೂರು ವರ್ಷದ ಕಾಲಘಟ್ಟದಲ್ಲಿ ( 2007-2010) ನನ್ನಲ್ಲಿ ಜಾತಿ ಪದ್ಧತಿಯ ಬಗೆಗಿನ ದೃಷ್ಟಿಕೋನಗಳೇ ಬದಲಾದವು. ಬದಲಾಗಿವೆ. ಬದಲಾಗ್ತಿದಾವೆ. ಬದಲಾಗುತ್ವೆ. ಆದರೆ ಇವತ್ತಿನ ದಿನದ ಲೆಕ್ಕವನ್ನೇ ನೀಡುವುದಾದರೆ : ಗಾಂಧೀಜಿಯವರಂತೆ ಎಲ್ಲರನ್ನೂ ಸಮಾನರಾಗಿ ಕಾಣುವ ದಿವ್ಯತೆ ನನ್ನಲ್ಲಿ ಇನ್ನೂ ಮೂಡಿಲ್ಲ. ಆದರೆ ಹಾಗೆ ಮೂಡಿಸುವ ನಿಟ್ಟಿನಲ್ಲಿ ನೈಜ & ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಅಪ್ಪಟ ನಿಜ.



ಹಾಗಿದ್ದಲ್ಲಿ ಬದಲಾದ ಸನ್ನಿವೇಶದಲ್ಲಿ ನನ್ನಲ್ಲಿರುವ ಜಾತಿ ಪದ್ಧತಿಯ ಬಗೆಗಿನ ದೃಷ್ಟಿಕೋನವೇನು ?

------------------

( ಈ ಮುಂದೆ ಬರೆಯುವ ಸಾಲುಗಳು ನನ್ನ Hypothesis ನ ಡೈರಿಯಿಂದ ಹೆಕ್ಕಿದ ಸಾಲುಗಳು & 
ಅವು ನನ್ನ ವಿಚಾರಸರಣಿಯ Copyright ಹೊಂದಿದ್ದು, ಅವುಗಳ ಮೇಲೆ ನನ್ನ ಹಕ್ಕಿಲ್ಲ ಬದಲಿಗೆ ಹೆಮ್ಮೆಯಿದೆ. 
ಯಾಕಂದ್ರೆ ಅಧ್ಯಯನ  - ಪರಾಮರ್ಶೆ - ಅವಲೋಕನ ಇತ್ಯಾದಿಗಳಿಂದ ನಾನೇ ನೀಡಿರುವ ವ್ಯಾಖ್ಯಾನಗಳಿವು !!  )

ಮನುಷ್ಯ ಅನಾಗರಿಕತೆಯನ್ನ ತೊಡೆದು ನಾಗರಿಕನಾದ ನಂತರ, ಇಂದಿಗೂ ಇರುವ ಹಾಗೆ, ಅಂದೂ ಜಾಣ & ಕೋಣ ಎಂಬ ಎರಡು ರೀತಿಯ ಜನರಿದ್ದಿರಬಹುದು. ಅವರಲ್ಲಿ ಜಾಣರು ಮುನ್ನಡೆದರು & ಮುನ್ನಡೆಸಿದರು. ಉಳಿದ  ಕಡಿಮೆ ಬುದ್ದಿಮತ್ತೆಯವರು ಅವರನ್ನ ಹಿಂಬಾಲಿಸಿದರು. ಈ ಹಂತದಲ್ಲಿ ಇವತ್ತಿನ ದಿನ ಕೆಳವರ್ಗದಲ್ಲಿರುವವರೆಲ್ಲಾ ಕೋಣರು ಎಂಬ ಅತಿ ಜಾಣತನದ ನಿರ್ಧಾರಕ್ಕೆ ಯಾರೂ ಬರಕೂಡದು ಎಂದು ನನ್ನ ವಿನಂತಿ. ಯಾಕಂದ್ರೆ ಅಂದು ಜಾಣತನ ತೋರಿಸಿ ಇಂದು ಕೋಣರಾಗಿ ಅಲೆದಾಡುತ್ತಿರುವವರು ಇರಬೇಕಾದರೆ ಅಂದು ಹಿಂದುಳಿದು ಇಂದು ಮುಂದೆ ಬಂದಿರುವವರೂ ಇದ್ದಾರೆ. ಜೊತೆಗೆ ಇದೊಂದು Hypothesis ಮಾತ್ರ. ಹಾಗೆ ಹೆಚ್ಚು ಬುದ್ಧಿಮತ್ತೆಯುಳ್ಳವರು ಅಕ್ಷರ - ಅಭ್ಯಾಸ ಅಂತ ಮಾಡಿಕೊಂಡಿದ್ದರೆ ಉಳಿದವರು Unskilled & ಅಕ್ಷರಾಭ್ಯಾಸ ಅವಶ್ಯಕತೆ ಇರದ ಕೆಲಸಗಳಲ್ಲಿ ಮಗ್ನರಾದರು. ಬಹುಶಃ ಮುಂದೊಂದು ದಿನ ತಾವೇ ಸೃಷ್ಟಿಸಿಕೊಂಡ ಈ ಅಂತರ ಅಳಿಸಲು ಸಹಸ್ರಮಾನಗಳೇ ಸಂದು ಹೋಗುತ್ತವೆ ಎಂಬ ಅರಿವಿದ್ದರೆ ನಮ್ಮ ಪೂರ್ವಜರ್ಯಾರೂ ಅಂಥ ಆಲಸ್ಯತನ ತೋರಿಸುತ್ತಿರಲಿಲ್ಲ ಅನಿಸುತ್ತದೆ. ಇಂದಿಗೂ ಹಾಗೇ ತಾನೇ ? ಕಾಲೇಜು ದಿನಗಳಲ್ಲಿ ಆಲಸ್ಯತನ ತೋರಿಸಿ ಅಕ್ಷರಾಭ್ಯಾಸದಲ್ಲಿ ಹಿಂದೆ ಉಳಿದು, ಕೆಲಸ ಹುಡುಕುವ ಸಮಯದಲ್ಲಿ ಇರುಬರುವ ಸಮಸ್ಯೆಗಳನ್ನೆಲ್ಲ ಮೈಮೇಲೆ ಎಳೆದುಕೊಂಡು Spoken English - Leadership Skills - Seminars .. ಎಂಬ ನೂರಾ ಎಂಟು ಕಸರತ್ತು ಮಾಡುವುದನ್ನ ನಾವು ಕಾಣಬಹುದು. ಅಂತೆಯೇ ಆಗಲೂ ಆಗಿದೆ. ಅಂದಿನ ಆಲಸ್ಯ ಮುಂದೊಮ್ಮೆ ಬೃಹದಾಕಾರದ ದಾಸ್ಯವಾಗಿ ಪರಿಣಮಿಸಿದೆ. ಅಂದಿನ ಪುರೋಹಿತಶಾಹಿ ವರ್ಗ ಕೆಳಗಿನವರಿಗೆ ಓದಿಗೆ ಅವಕಾಶ ನೀಡಲಿಲ್ಲ ಎಂಬ ಬಾಲಿಶ ವಾದ ಯಾರೂ ಮಾಡಬೇಡಿ. ಯಾಕಂದ್ರೆ ನಾನೀಗ ಮಂಡಿಸಿರುವುದು - ಅಂಥ ಪುರೋಹಿತಶಾಹಿ ವರ್ಗ ಓದಿಕೊಂಡು, ಪುರೋಹಿತಶಾಹಿ ವರ್ಗ ಅನಿಸಿಕೊಳ್ಳುವ ಮುಂಚಿನ ದಿನಗಳದ್ದು. ಆಗ ಎಲ್ಲರಿಗೂ ಸಮಾನ ಅವಕಾಶಗಳಿರಲಿಕ್ಕೂ ಸಾಕಲ್ವೇ ?

ಹೀಗೆ ಸೃಷ್ಟಿಯಾದ ಅಂತರಗಳು ವಿವಿಧ ಹಂತಗಳನ್ನ ದಾಟಿ ನಾಲ್ಕು ವರ್ಗವಾಗಿ ವಿಂಗಡನೆ ಯಾದದ್ದು ನಿಮಗೂ ತಿಳಿದಿದೆ. ನಮ್ಮ ಜಾನಪದದಲ್ಲಿ ತಿಳಿದವರಿಗೆ ಗೌರವ ನೀಡಿ ಅವರ ನಡೆ-ನುಡಿಗಳನ್ನ ಹೇಗೆ ಪಾಲಿಸುತ್ತಿದ್ದರೋ ಅಂತೆಯೇ - " ತಿಳಿದವರು ಮನುಕುಲವನ್ನ ನಾಲ್ಕು ಪಂಗಡಗಳಾಗಿ ವಿಂಗಡಿಸಿರಬೇಕಾದರೆ ನಾವೂ ನಮ್ಮೊಳಗೇ ನಾಲ್ಕಾರು ಪಂಗಡಗಳನ್ನ ವಿಂಗಡಿಸಿಕೊಳ್ಳೋಣ " ಎಂಬ ಊಹೆ ಮೂಡಿರಲಿಕ್ಕೂ ಸಾಕು. ಆ ಊಹೆಗೆ ಇನ್ನಿಲ್ಲದ ಮಾನ್ಯತೆ ಸಿಕ್ಕು ಇಂದಿನ ಅಗಣಿತ ಜಾತಿಗಳು ಆ ಊಹೆಯ Brain Child ಗಳಾದವು.

ಪೌರೋಹಿತ್ಯದ ಮೂಲಕ ಪಾರಮಾರ್ಥಿಕ ಲೋಕದ ವ್ಯಾಪಾರಗಳಿಗೆ ಸಾಮಾನ್ಯರು & ಪರಮಾತ್ಮನ ನಡುವಿನ ಕೊಂಡಿಯಂತಿರುವವ ಬ್ರಾಹ್ಮಣ - ಯುದ್ಧ ಕಲೆ ಕಲಿತು ದೇಶ ರಕ್ಷಣೆ ಮಾಡುವವ ಕ್ಷತ್ರಿಯ - ವ್ಯಾಪಾರ ವೃತ್ತಿಯ ಮೂಲಕ ಸರ್ವರಿಗೂ ದಿನನಿತ್ಯದ ಲೌಕಿಕ ಬೇಡಿಕೆಗಳನ್ನ ಪೂರೈಸುವವ ವೈಶ್ಯ - ತನಗರಿವಿಲ್ಲದೆಯೇ, ದೇವರು ಅತಿಯಾಗಿ ಮೆಚ್ಚುವ, ನಿಸ್ವಾರ್ಥ ಸೇವೆಯ ಮೂಲಕ ಸರ್ವರ ಹಿತಕ್ಕಾಗಿ ಅವರ ಬೇಡಿಕೆಗಳ ಬಹುಪಾಲನ್ನು ಪೂರೈಕೆ ಮಾಡುವವ ಶೂದ್ರ.

ಎಂದು ಜ್ಞಾನಿಗಳು ವಿಂಗಡಿಸಿರಬೇಕಾದರೆ

ಪೌರೋಹಿತ್ಯದ ಸಮಯದಲ್ಲಿ ವಿಷ್ಣುವನ್ನ ಆರಾಧಿಸುವ ವೈಷ್ಣವ - ಐದು ದೇವತೆಗಳ ಸಾರಭೂತ ಸಂಯೋಜನೆಯಲ್ಲಿ ನಂಬಿಕೆಯಿಟ್ಟವರು ಸ್ಮಾರ್ತ ರೆಂದೂ ವಿಂಗಡನೆಯಾದರು. ಕ್ಷತ್ರಿಯರೂ ತಮ್ಮ ಕ್ಷಾತ್ರತೆಯನುಸಾರ ತಮ್ಮನ್ನೇ ತಾವು ವಿಂಗಡಿಸಿಕೊಂಡರು. ವೈಶ್ಯರೂ ತಾವು ವಿಕ್ರಯ ಮಾಡುವ ಪದಾರ್ಥದ ಆಧಾರದ ಮೇಲೆಯೇ ತಮ್ಮನ್ನ ತಾವು ವಿಂಗಡಿಸಿಕೊಂಡರು. ಶೂದ್ರರೂ ಮೇಲಿನವರನ್ನೇ ಅನುಸರಿಸಿದರು.

ಮೇಲ್ಕಂಡಂತಿರುವ ಜಾತಿ ಪದ್ಧತಿಯನ್ನ ಗಮನಿಸಿದಾಗ- ಒಂದು ಪಂಗಡದವರು ಇನ್ನೊಂದು ಪಂಗಡದವರ ವಿಂಗಡನೆಗೆ ಮುಂದಾಗಿರುವುದನ್ನ ನಂಬಲಿಕ್ಕೆ ಸಾಧ್ಯವಿಲ್ಲ ಅಲ್ಲವೇ ? ಬ್ರಾಹ್ಮಣರನ್ನ ಶೂದ್ರರು ವಿಂಗಡಿಸಿರಲಿಕ್ಕೆ ಸಾಧ್ಯವಿಲ್ಲ. ಅಂತೆಯೇ ವೈಶ್ಯರನ್ನ ಕ್ಷತ್ರಿಯರು. ಹೀಗಿರುವಾಗ ಯಾರೋ ಪ್ರಾಜ್ಞರು ತಮ್ಮ ಬುದ್ಧಿಮತ್ತೆ ಬಳಸಿ ಸಮಸ್ತ ಹಿಂದೂ ಧರ್ಮ ಪರಿಪಾಲಕರನ್ನ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿದರೆ, ನಂತರ ಬಂದ ಪ್ರಾ-ಪ್ರಾಜ್ಞರು ತಮ್ಮನ್ನೇ ತಾವು ಇನ್ನೂ ವಿಭಜಿಸಿಕೊಂಡರು. ಇಂದು ನಾವು ಮುಟ್ಟಿರುವ ಸ್ಥಿತಿ ನೋಡಿದರೆ ವಿಭಜಿಸಲು ಈಗ ಉಳಿದುಕೊಂಡಿರುವುದು ನಮ್ಮ ಕೈಕಾಲುಗಳು - ಕಿವಿಮೂಗುಗಳು ಮಾತ್ರ ಅನಿಸುತ್ತದೆ ಅಲ್ಲವೇ ?

ಹೀಗೆ ಬೆಳೆದು ಬಂದಿರುವ ಜಾತಿ ಪದ್ಧತಿಯಲ್ಲಿ :

ವಿಂಗಡನೆ ಮೂಲಕ ಬ್ರಾಹ್ಮಣನಾಗಿರುವವ - ಬ್ರಾಹ್ಮಣ ಪದದ ಅರ್ಥ ಪಾಲಿಸದೇ ತಾನು ಮೇಲ್ವರ್ಗದವ ಎಂದು ಬೀಗಿದರೆ ಅರ್ಥವಿದೆಯೇ ? ಅಂತೆಯೇ ಶೂದ್ರನಾಗಿರುವವ - ತಾನು ಎಲ್ಲ ಸುಸಂಸ್ಕೃತ ನಡವಳಿಕೆಗಳನ್ನ ರೂಢಿಸಿಕೊಂಡಿದ್ದರೂ ತನ್ನ ಪೂರ್ವಜರ ಕಾಣಿಕೆಯಾಗಿ ಬಂದಿರುವ ಶೂದ್ರತನದ ಹಣೆಪಟ್ಟಿ ಇಟ್ಟುಕೊಂಡು ಅಲೆದಾಡುವುದು ತಪ್ಪಲ್ಲವೇ ? ಹಿಂದೆ ಮುತ್ತಜ್ಜ ಯಾವುದೋ ವ್ಯಾಪಾರ ಮಾಡುತ್ತಿದ್ದ ಎಂಬ ಕಾರಣಕ್ಕೆ ತಾನೊಂದು ಜಾತಿಗೆ ಸೀಮಿತವಾಗಿ, ಇಂದು ಆ ವ್ಯಾಪಾರವೇ ಇಲ್ಲವಾಗಿ ಶತಮಾನ ಕಳೆದಿದ್ದರೂ ಅದೇ ಜಾತಿಯಲ್ಲೇ  ಬೇರು ಇಳಿಬಿಟ್ಟುಕೊಂಡು, ಅದೇ ನನ್ನ Identity ಎನ್ನುವುದು ಸಮಂಜಸವೇ ?

" ಇದೆಲ್ಲ ಮಾತಾಡುವುದಕ್ಕೆ ಚೆಂದ. ನಿಜಜೀವನದಲ್ಲಿ ಪಾಲನೆ ಕಷ್ಟ. ಬಂದ ಇವನು ಹೇಳೊದಕ್ಕೆ. ಹೋಗಲೇ .. ? " ಅಂತ ನಿಮ್ಮಲ್ಲಿ ಯಾರಾದರೂ Temper ಕಳೆದುಕೊಂಡಿದ್ದರೆ...

ನಿಮ್ಮ ಇಂದಿನ ಈ 21ನೇ ಶತಮಾನದ ಇದೇ ವರ್ಷದ ಒಂದು ದಿನದ ಕಾರ್ಯಕಲಾಪಗಳನ್ನ ಸೂಕ್ಷ್ಮವಾಗಿ ಅವಲೋಕಿಸಿ. ಹಾಗೆ ಅವಲೋಕಿಸಿದ ದಿನದ ಯಾವ ಯಾವ ಭಾಗದಲ್ಲಿ ನಿಮ್ಮ ಜಾತಿ ನಿಮ್ಮನ್ನ ಇತರರಿಂದ ಪ್ರತ್ಯೇಕಿಸಿತು ಎಂಬುದನ್ನ ಗುರುತು ಮಾಡಿಟ್ಟುಕೊಳ್ಳಿ. ಆಗ ಬಹುಶಃ ನನ್ನ ವಾದ ನಿಮಗೆ ಸಮಂಜಸ ಅನ್ನಿಸಬಹುದು.
  • ಬೆಳಿಗ್ಗೆ ಎದ್ದು ಸ್ನಾನ ಮಾಡುವವರೆಗೆ ಜಾತಿಯ ಅಡೆ ತಡೆ ಇಲ್ಲ. 
  • ನಂತರ ಬರುವ ಪೂಜಾ ವಿಧಾನ ಅತಿ ಪ್ರಮುಖ ಜಾತಿ ಬಿಂಬಕ ವಾದ. (ಸದ್ಯಕ್ಕೆ ಇದನ್ನ ವಿಲೇ ಇಡೋಣ)
  • ನಂತರದ ತಿಂಡಿ. ಅಲ್ಲಿ ಇಣುಕುವುದು ಜಾತಿಯ ಆಹಾರವಲ್ಲ. ಬದಲಿಗೆ ಭೌಗೋಳಿಕ ವೈವಿಧ್ಯತೆ & ಹಣಕಾಸಿನ ಸಂಪನ್ನತೆ ಬಿಂಬಿಸುವ ಆಹಾರ. ಉಳಿದೆಡೆ ಮೀನೆಂದರೆ ಮೂಗು ಮುರಿಯುವ ಬ್ರಾಹ್ಮಣ ಕರಾವಳಿಯಲ್ಲಿ  ಹೊಳೆಬಾಳೇಕಾಯಿ ಹೆಸರಲ್ಲಿ ತಿನ್ನುವುದಿಲ್ಲವೇ ? ಸಂಪತ್ತು ಕ್ರೂಢೀಕರಿಸಿರುವ ಇಂದಿನ ಶೂದ್ರ Identity ಯ ಅಧಿಕಾರಿಯೊಬ್ಬ ಸಂಪ್ರದಾಯ ಪೂರಿತ ಅಚ್ಚುಕಟ್ಟಾದ ಆಹಾರ ಸೇವಿಸಿದರೆ ಬಡವನಾಗಿರುವ ಕ್ಷತ್ರಿಯನೊಬ್ಬ ತಂಗಳನ್ನವನ್ನೂ ತಿನ್ನಬಹುದು. ಇಲ್ಲಿ ಜಾತಿಯನ್ನ ಹೇಗೆ ಗುರುತಿಸೋಣ ? 
  • ನಂತರ ಬರುವುದು : ಕಚೇರಿ ಕೆಲಸ ಕಾರ್ಯಗಳು - ಶಾಲಾ ಕಾಲೇಜು ಶಿಕ್ಷಣ. 
  • ಈ ಶತಮಾನದ ಶಾಲೆಯ ಚಟುವಟಿಕೆಗಳಲ್ಲಿ ಜಾತಿಯನ್ನ ಗುರುತಿಸುವವ ಮೂರ್ಖನ ಗುರು. 
  • ಇನ್ನು ಕಚೇರಿಯ ಕೆಲಸಗಳನ್ನ ಸಾಮಾನ್ಯವಾಗಿ ಅವರವರ ವಿದ್ಯಾರ್ಹತೆ & ವ್ಯಕ್ತಿತ್ವದ ಸಾಮರ್ಥ್ಯಕ್ಕನುಗುಣವಾಗಿ ನಿರ್ವಹಿಸುತ್ತಿದ್ದಾರೆ. ಇಲ್ಲಿ ಮೀಸಲಾತಿ ಬಳಸಿಕೊಂಡು ವಿದ್ಯಾರ್ಹತೆಯಲ್ಲಿಯೂ ಮಾಫಿ ಪಡೆದು ಕೆಲವರು ಮುಂದೆ ಬಂದಿದಾರೆ ಅಂತ ಹಲವರು ಅಲವತ್ತುಕೊಂಡರೆ ಅವರನ್ನ ಸಂತೈಸಬಹುದು. ಹೇಗಂದ್ರೆ 
ಜಾತಿ ಪದ್ಧತಿ ರೂಪುಗೊಂಡು, ಸ್ವಾತಂತ್ರ್ಯ ಬಂದು ಸಂವಿಧಾನ ಅಂಗೀಕರಿಸುವವರೆಗೆ  ಏನಿಲ್ಲವೆಂದರೂ 3000 ವರ್ಷಗಳ ಅಂತರವಿದೆಯೆನ್ನುವುದನ್ನ ನಾವುಗಳು ಒಪ್ಪಿಕೊಳ್ಳಬೇಕು. ಹಾಗಿರುವಾಗ ಮೇಲಿನ ಪ್ಯಾರಾದಲ್ಲಿ ಅಲವತ್ತುಕೊಂಡವರು 3000 ವರ್ಷಗಳ ವರೆಗೆ ಅನುಭವಿಸಿದ ಮೇಲ್ತನದ ಸುಖ ಸರಿ, ಈಗ ಇವರು 60 ವರ್ಷಗಳಿಂದ ಅನುಭವಿಸುತ್ತಿರುವ ಸೌಕರ್ಯ ತಪ್ಪು ಎಂದರೆ ಯಾವ ನ್ಯಾಯ. 50 ಪಟ್ಟು ವ್ಯತ್ಯಾಸ ಬರುತ್ತಲ್ರೀ ??
" ಗುರುಗಳೇ, ಆಗ ನಾವಿರಲಿಲ್ಲ. ನಮ್ಮ ಅಜ್ಜಂದಿರು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಬೇಕಾ ? ಜೊತೆಗೆ ಇದು 21ನೇ ಶತಮಾನ. ಹಿಂದೆ ಆದದ್ದು ಆಗಿ ಹೋಯಿತು. ನಾವಿಂದು ಸಮಾನತೆ ಸಾರುತ್ತಾ ಎಲ್ಲರೂ ಒಟ್ಟಿಗೆ ಬಾಳೋಣ. ಅದು ಬಿಟ್ಟು Reservation Support ಮಾಡಿದರೆ ತಪ್ಪು ತಾನೇ ? "  ಅಂತ ನಿಮ್ಮ ಪ್ರಶ್ನೆಯಾದರೆ, ಖಂಡಿತ ಹೌದು ಎಂಬುದೇ ಸಮಂಜಸ ಉತ್ತರವಾದೀತು.
ಹೌದು. ಇಂದು ಜಾತಿಯ ವಿಷಯವನ್ನ ಮುಂದಿಟ್ಟುಕೊಂಡು ಮೀಸಲಾತಿ ಪದ್ಧತಿ ಸರಿ-ತಪ್ಪು ಎಂದು ಪುಸ್ತಕದಲ್ಲಿ ವಿಮರ್ಶೆ ಮಾಡುವ ಕಾಲವಲ್ಲ. ಬದಲಿಗೆ ನಿಜಜೀವನದಲ್ಲಿ ಜಾತಿ ಎಂಬ ಅಂಶದ ಗೌಣತೆಯನ್ನ ಅಕ್ಷರಸ್ತರಿಗೆ, ಅನಕ್ಷರಸ್ತರಿಗೆ & ಮುಖ್ಯವಾಗಿ ಅಕ್ಷರಸ್ತ ಅನಕ್ಷರಸ್ತರಿಗೆ ಮನದಟ್ಟಾಗುವಂತೆ ತಿಳಿಹೇಳುವ ಕೆಲಸವಾಗಬೇಕಿದೆ. ( ತನ್ನಿಮಿತ್ತವೇ ಈ ಲೇಖನ ಅನ್ನುವುದನ್ನ ಪಾಠಕ ಮಹಾಶಯ ಗಮನಿಸಬೇಕು. ) ಈ ಕೆಲಸವನ್ನ ಮಾಡಬೇಕಿರುವುದು, ಮೇಲಿನ ಪ್ಯಾರಾದಲ್ಲಿರುವ ಪ್ರಶ್ನೆಯ ಮನೋಭಾವ ಹೊಂದಿರುವವರು. ಪ್ರತಿ ಹತ್ತು ವರ್ಷಗಳಿಗೊಮ್ಮೆ ಸಂವಿಧಾನ ಪ್ರದತ್ತವಾಗಿರುವ ಜಾತಿ ಆಧಾರದ ಮೀಸಲಾತಿಯನ್ನ ಅಳಿಸುವ ಇಲ್ಲಾ ಉಳಿಸುವ ಅಧಿಕಾರವನ್ನ ನಮ್ಮ ಸಂಸತ್ತಿಗಿದೆ ಅಂತ ಹೇಳಿ, ರಾಜಕಾರಣಿಗಳು ಈ ದಶಕದಲ್ಲಿ ಮಾಡಿಯಾರು ಮುಂದಿನ ದಶಕದಲ್ಲಿ ಮಾಡಿಯಾರು ಅಂತ ಚಾತಕ ಪಕ್ಷಿಯಂತೆ ಕಾಯುತ್ತಾ 6 ದಶಕಗಳೇ ಸಂದುವಲ್ರೀ ? ಪ್ರಶ್ನೆ ಮಾಡುವ ಮನೋಭಾವವಿದ್ದಲ್ಲಿ ಆ ರಾಜಕಾರಣಿಗಳಿಗೆ ಹೋಗಿ ಪ್ರಶ್ನೆ ಮಾಡಬಹುದಲ್ಲಾ ? " ಯಾಕೆ ಸ್ವಾಮಿ ? ಈ ದಶಕದಲ್ಲೇ ಜಾತಿ ಪದ್ಧತಿಗೆ ಅಂತ್ಯ ಹಾಡುವ ಅವಕಾಶವನ್ನ ಯಾಕೆ ಕಳೆದುಕೊಂಡ್ರಿ ? "  ಅಂತ. ಅದಾಗಲ್ಲಾ ಅಲ್ಲ ? ಹಾಗಿದ್ದರೆ ಬರುವ 10 ವರ್ಷಗಳಲ್ಲಿ ಜಾತಿ ಪದ್ಧತಿ ಎಂದರೆ ಎಷ್ಟು ಬಾಲಿಶ ಪದ್ಧತಿ ಮಾಡಬೇಕಂದ್ರೆ ಯಾರಾದರೂ ತಾನು ಈ ಜಾತಿಯವ ಅಂತ ಹೇಳಿಕೊಳ್ಳಲು ತಾನೊಬ್ಬ ನಪುಸಂಕ ಅಂತ ಹೇಳುವಾಗ ಇರುವ ತುಮುಲಗಳು ಬರಬೇಕು ಅವನ ಮನಸಲ್ಲಿ !!! ಮಾಡ್ತೀರಾ ? ಆ ಹುಮ್ಮಸ್ಸಿದೆಯಾ ?

ಒಳ್ಳೇದು. ಹುಮ್ಮಸಿದ್ದರೆ ಅದಕ್ಕಿಂತ ಖುಷಿ ಇನ್ನೊಂದಿದೆಯಾ ? ಸರಿ. ಎಲ್ಲಿದ್ವಿ ನಾವು ?

  • ಆಫೀಸ್ ಕೆಲಸ ಮುಗೀತು. ಸಂಜೆಯ Walk ನಲ್ಲಿ ಸ್ವಜಾತಿ ಯವರೊಂದಿಗೆ ಮಾತ್ರ ನಿಮ್ಮ walk-talk ಇದ್ರೆ ಅದು ನಿಮ್ಮ ವೈಯಕ್ತಿಕ ಸಂಕುಚಿತತೆಯೇ ಹೊರತು ಸಾಮಾನ್ಯೀಕರಿಸಬಹುದಾದ ವಾದವಲ್ಲ.
  • ಇನ್ನು ಸಂಜೆಯ ಅತಿ ಮುಖ್ಯ ಕಾರ್ಯಕ್ರಮವಾಗಿರುವ ದೂರದರ್ಶನ ವೀಕ್ಷಣೆ. ಇಲ್ಲಿ ನೀವು Bay Watch ಆದ್ರೂ ನೋಡಿ. KingFisher Calendar Making ಆದ್ರೂ ನೋಡಿ. ಕಡೆಗೆ ಮಹಾತ್ಮರ ಮಹಾತ್ಮೆ ಸಾರುವ ಆಧ್ಯಾತ್ಮಿಕ ಧಾರಾವಾಹಿಯಾದ್ರೂ ನೋಡಿ. ಅಲ್ಲೇನು ಜಾತಿ ಬಿಂಬನ ಆಗುತ್ಯೇ ? ನಮ್ಮ ಪುಣ್ಯ ಅಂದ್ರೆ ಜಾತಿ ಆಧಾರಿತ ಟಿವಿ ಚಾನೆಲ್ ಗಳು ಇನ್ನೂ ಬಂದಿಲ್ಲ.
  • ನಿದ್ರೆಗ್ಯಾವ ಜಾತೀರೀ .. ?!!

ಇವೆಲ್ಲ ಅಂಶಗಳನ್ನ ಗಮನಿಸಿದಾಗ... ನಮ್ಮ ದಿನದ ಕಾರ್ಯಕಲಾಪಗಳಲ್ಲಿ ಮೇಲೆ ವಿಲೇ ಇಟ್ಟಿರುವ ದಿನದ 15 ನಿಮಿಷದ ಕಲಾಪವಾದ ಪೂಜಾವಿಧಾನವೊಂದರ ಮೂಲಕ ನಮ್ಮ ಜಾತಿಯನ್ನ ನಾವಿಂದು ಜೀವಂತವಾಗಿರಿಸಿಕೊಂಡಿದೀವಿ ಅಂತಾಯ್ತು ತಾನೇ ? ಹಾಗಿದ್ರೆ, ನಿತ್ಯ ಪೂಜೆಯನ್ನ ನಮ್ಮ ಧಾಟಿಯಲ್ಲೇ ಮಾಡುವ ಸಲುವಾಗಿ ಮಾತ್ರ ನಮ್ಮ ಜಾತಿಯ ಸೊಸೆಯನ್ನ ಆರಿಸಿದಂತಾಗುವುದಿಲ್ಲವೇ ? ಎಂಥ Wrong Calculation ಇದು. ಇನ್ಫಿ , ವಿಪ್ರೋ ದಲ್ಲಿ ಕೆಲಸ ಮಾಡುವ ಅನೇಕರೂ ಜಾತಿ ಲೆಕ್ಕದಲ್ಲಿ ಮಡದಿಯರನ್ನ ಕಟ್ಟಿಕೊಂಡು ತಮ್ಮ ಎದುರಿಗೆ ಇದ್ದ Fabulous ಅವಕಾಶಗಳನ್ನ ಕಳೆದುಕೊಂಡಿರುವವರು ಇತ್ತಕಡೆ ಗಮನ ಹರಿಸಬೇಕು. ಇಂಥದೇ Wrong Estimation ಅನ್ನ ತಮ್ಮ Project ಗಳಲ್ಲಿ ಎಂದಾದ್ರೂ ಅವರು ಮಾಡಿದ್ರಾ ? ಮಾಡ್ತಾರಾ ? ಇಲ್ಲ ತಾನೇ ? " ಮತ್ತೇಕೆ ಜೀವನವೆಂಬ ಅತಿ ಮಹತ್ವದ Project ನಲ್ಲಿ ತಪ್ಪು Calcutation ಮಾಡಿದ್ರಿ ಸ್ವಾಮಿ ? " ಅಂತ ಕೇಳಬಹುದು ತಾನೇ ?

ಹೀಗಿರುವ ಜಾತಿ ವ್ಯವಸ್ಥೆ ನಮಗೆ ಬೇಕೇ ? ಅನ್ನೋದು ಇಂದಿನ ಪ್ರಶ್ನೆ. ಆದರೆ ನಗ್ನಸತ್ಯಗಳು ಬೇರೆಯೇ ಇವೆ. ಅವನ್ನ ಎದುರಿಸೋದು ಲೇಖನ ಬರೆದಷ್ಟು ಸುಲಭ ಅಲ್ಲ ಅಂತ ನನಗೂ ಗೊತ್ತು. ಆದರೆ " ನನ್ನೊಬ್ಬನಿಂದ ಏನು ಮಾಡಲು ಸಾಧ್ಯ ? " ಎನ್ನುವ ಋಣಾತ್ಮಕ ಚಿಂತನೆಯನ್ನ ಬಿಟ್ಟು " ನನ್ನಿಂದ ಏನೇನು ಮಾಡಲು ಸಾಧ್ಯ " ಅಂತ ಧನಾತ್ಮಕವಾಗಿ ಯೋಚಿಸಿ ಕಾರ್ಯಪರರಾಗುವುದಕ್ಕೆ ಇದು ಸಕಾಲ. ಇಂದಿನ ತಂದೆಗೆ ಜಾತಿ ವ್ಯವಸ್ಥೆಯ ಬಗ್ಗೆ ಅಕ್ಕರೆಯಿದ್ದರೆ ಮಗನೂ ಅದಕ್ಕೆ ನೀರೆರೆಯಬೇಕು ಅಂತ ನಿಯಮ ಮಾಡಿಕೊಂಡರೆ, ಅದು ತಪ್ಪು. ಮಗನಾದವನು ಅವನಿಗೆ ತಿಳಿ ಹೇಳುವ ಸಾಹಸಕ್ಕೆ ಕೈಹಾಕುವ ಬದಲು ತಾನು ಆ ಜಾತಿ ವ್ಯವಸ್ಥೆಗೆ ಕೊನೆ ಹಾಡಬಹುದಲ್ಲಾ ?

ತಾನು ಮೊದಲ ನೋಟದಲ್ಲೇ ಇಷ್ಟಪಟ್ಟ ಹುಡುಗಿಯ ಜಾತಿ ವಿಚಾರಿಸಿ ಇಷ್ಟಪಟ್ಟಿರುವುದಿಲ್ಲ. ನಂತರ ಮನೆಯವರು ಒಪ್ಪುವುದಿಲ್ಲ ಎಂಬ ಕಾರಣಗಳು ಇತ್ತೀಚಿನ ದಿನಗಳಲ್ಲಿ  ಕರಗುತ್ತಿದ್ದರೂ ಹುಡುಗನ ಜಾತಿ ಯಾವುದೆಂದು ಮುಂಚೆಯೇ ತಿಳಿದು ಅವನಿಗೆ ಗಾಳ ಹಾಕಿದ ಹುಡುಗಿಯರ / ಹುಡುಗರ ಉದಾಹರಣೆಗಳನ್ನೂ ನಾನು ಕಂಡಿದೀನಿ. ಇವಕ್ಕೂ ಮಿಗಿಲಾಗಿ : ಒಂದು ಹುಡುಗ ಮೇಲ್ವರ್ಗದ ಹುಡುಗಿಯನ್ನ ಇಷ್ಟಪಟ್ಟು ಮದುವೆಯಾಗಿದ್ದರೆ, ಹುಡುಗ ಅಂತರ್ಜಾತಿ ವಿವಾಹ ಆದಂತೆ ಭಾಸವಾಗೋದೇ ಇಲ್ಲ ಅನೇಕರಿಗೆ. ಬದಲಿಗೆ ಹುಡುಗಿಯದು ಮಾತ್ರ ಅಂತರ್ಜಾತಿ ವಿವಾಹ. ಅವರ ಲೆಕ್ಕದಲ್ಲಿ ಮೇಲ್ವರ್ಗದವರು ಕೆಳವರ್ಗದವರೊಂದಿಗೆ ಮದುವೆ ಆದರೆ ಅದು ಮಾತ್ರ ಅಂತರ್ಜಾತಿ  ವಿವಾಹ. Reverse Equation ಕೆಲಸ ಮಾಡೋದಿಲ್ಲ ಅವರ ಮನಸಲ್ಲಿ. ಜಾತಿ ಮರೆತು ಇಷ್ಟಪಟ್ಟು ಕೊನೆವರೆಗೂ ಸುಖವಾಗಿರುವ ಉದಾಹರಣೆಗಳೂ ನಮ್ಮ ಮುಂದಿರಬೇಕಾದರೆ ನಾವೇಕೆ ಹಿಂಜರಿಯಬೇಕು. ಇದಕ್ಕೂ ಹೆಚ್ಚಾಗಿ ಯಶಸ್ಸಿನ ಉದಾಹರಣೆಗಳನ್ನ ಇಟ್ಟುಕೊಂಡೇ ಒಂದು ಕೆಲಸಕ್ಕೆ ಕೈ ಹಾಕೋದು ಎಂಥ ಮೂರ್ಖತನ.
ಹಿಂದೊಮ್ಮೆ ಒಂದೇ ತರಹದ ಎಲೆ ಬಳಸಿ ಮಾನ ಮುಚ್ಚಿಕೊಂಡು ತಿರುಗಾಡುತ್ತಿದ್ದ ನಮ್ಮಲ್ಲಿ ಈ ವ್ಯತ್ಯಾಸ ಬಂದಿದ್ದೆಲ್ಲಿಂದ ? ಬುದ್ಧಿಮತ್ತೆಯ ವ್ಯತ್ಯಾಸವೊಂದೇ ಈ ಮಟ್ಟದ ಅಂತರಗಳನ್ನ ಸೃಷ್ಟಿಸಿದ್ದು ನಿಜವಾಗಿದ್ದಲ್ಲಿ, ಹಿಂದಿನ ತಲೆಮಾರಿನ ಭಾರತೀಯರಲ್ಲಿ ಬುದ್ಧಿಮತ್ತೆಯ ಜೊತೆಗೆ ಮಿಳಿತವಾಗಿದ್ದ ಮಾನವೀಯತೆ ಇಂದಿನ ಭಾರತೀಯರಲ್ಲಿ ಕಡಿಮೆಯಾಗುತ್ತಾ ಬಂದಿದೆ. ಅಂದರೆ ಮುಂಬರುವ ಪೀಳಿಗೆ ಯಾವ ಮಟ್ಟದ ಅಂತರ ಸೃಷ್ಟಿಸಿಕೊಂಡು ಜೀವಿಸಬಹುದು ?? ಜಾತಿ ಪದ್ಧತಿ ಕಳೆದು ಇನ್ಯಾವ ಪದ್ಧತಿ ಶುರುವಾಗಬಹುದು ? ಇದಕ್ಕೆ ಉತ್ತರವನ್ನ Google ನಲ್ಲೇ ಹುಡುಕಬೇಕು.
------------------

ಇದಿಷ್ಟು ಜಾತಿ ಪದ್ಧತಿಯ ಬೇರು ಬಿಳಲುಗಳನ್ನ ನಾನು ಅರ್ಥೈಸಿರುವ ಪರಿ. ಮೇಲ್ಕಂಡ ವಾದಗಳನ್ನ ಓದುಗರನ್ನ ಆರೋಪಿ ಸ್ಥಾನದಲ್ಲಿಟ್ಟು ನಾನು ನ್ಯಾಯಾಧೀಶರ ಹಾಗೆ ತಿಳಿಹೇಳುತ್ತಿಲ್ಲ. ಬದಲಿಗೆ ಮೇಲಿನ ಪ್ರತಿ ಸಾಲೂ ನನ್ನ ಮನಸಲ್ಲಿ ನಡೆದ ವಾದ ವಿವಾದಗಳ Hearing ನಂತರ ನಾನೇ ಸಿದ್ಧಪಡಿಸರುವ ವಿಚಾರಣಾ ವರದಿಯಿಂದ ಹೆಕ್ಕಿದ್ದು. ಇಲ್ಲಿ ನಾನೇ ಆರೋಪಿ - ನಾನೇ ವಕೀಲ - ನಾನೇ ನ್ಯಾಯಾಧೀಶ. ಇವಿಷ್ಟೂ ಜಾತಿ ಪದ್ಧತಿಯ ಬಗೆಗಿನ ನನ್ನ ಇವತ್ತಿನ(As On Today) ನಿಲುವು (Stand) ಗಳು. ಇಷ್ಟೆಲ್ಲಾ ಮಾತಾಡಿದ ನಾನೇನೂ ಸಾಚಾ ಅಲ್ಲ. ಯಾವತ್ತೂ ಜಾತಿ ವಿಚಾರ ಮಾತಾಡೇ ಇಲ್ಲ ಅಂತ ಅಲ್ಲ. ಅನೇಕ ಸಾರಿ ನನ್ನ ಮನಸಲ್ಲಿ ಅದು ಸುಳಿದು ಹೋಗಿದೆ. ಆದರೆ ತಿಳುವಳಿಕೆ ಬೆಳೆದ ಹಾಗೆ ಅದನ್ನ ಕಡಿಮೆ ಮಾಡಿಕೊಳ್ಳುತ್ತಾ ಬಂದಿದೀನಿ. ತೀರ ನಿನ್ನೆ ಮಧ್ಯಾನ್ಹವೂ ಏನೋ ಒಂದು ವಿಷಯಕ್ಕೆ ಸ್ನೇಹಿತನ ಹತ್ತಿರ ಯಾರದೋ ಬಗ್ಗೆ ಜಾತಿಯ ವಿಚಾರವಾಗಿ ಹಗುರವಾಗಿ ಮಾತಾಡಿದ್ದೆ. ಆದರೆ ಸಂಜೆ ನನ್ನ ಮನಕ್ಕೆ ನಾಟುವ ಹಾಗೆ ನನ್ನ ಆಪ್ತರೊಬ್ಬರು ನನಗೇ ನೀಡಿದ Shock Treatment ನಿಂದ ಎಚ್ಚೆತ್ತುಕೊಂಡು ನನ್ನ ಜಾತಿ ಯಾವುದೆಂದು ಖಚಿತಪಡಿಸಿಕೊಳ್ಳುವ ಸಲುವಾಗಿ ಚಿಂತನೆ ಮಾಡಬೇಕಾಯಿತು. ಚಿಂತನೆಯ ಕೊನೆಯಲ್ಲಿ ಮೇಲು ಕೀಳಿಲ್ಲದ ಮನುಷ್ಯ ಜಾತಿಗೆ ಸೇರುವ ನಿರ್ಧಾರ ಮಾಡಿದೆ.  ಈ ಲಹರಿ ಆ ವಿಚಾರಮಂಥನದ ಉಧೃತ ಭಾಗವಷ್ಟೇ. ಇವೆಲ್ಲಕ್ಕೂ ಮಿಗಿಲಾಗಿ ಈ ಉದ್ದಾಮ ಲೇಖನದ ಕೊನೆಯ ಸಾಲುಗಳನ್ನ ಬರೆಯುತ್ತಿರುವ ಈ ಹೊತ್ತಿನಲ್ಲೂ ನನ್ನಲ್ಲಿ ಅನೇಕ ಉತ್ತರವಿಲ್ಲದ ಪ್ರಶ್ನೆಗಳಿದಾವೆ. ಉತ್ತರವಿಲ್ಲ ಅಂದ್ರೆ ರೇವಪ್ಪನ ಬಳಿ ಇಲ್ಲ ಅಂತ. ಬೇರೆ ಯಾರೋ ತಿಳಿದವರು ಆ ಪ್ರಶ್ನೆಗಳಿಗೆ ಈಗಾಗಲೇ ಉತ್ತರಗಳನ್ನ ನೀಡಿರಲೂಬಹುದು. ಮತ್ತು ನನಗೆ ಅವು Readymade ಆಗಿ ಸಿಗಲೂಬಹುದು. ಆದರೆ, ನಾನು ನನ್ನ ಜೀವನದಲ್ಲಿ ಎದುರಾಗುವ ಬಹುಪಾಲು ಸಮಸ್ಯೆಗಳಿಗೆ & ಪ್ರಶ್ನೆಗಳಿಗೆ ನಾನೇ ಖುದ್ದಾಗಿ ವಿಮರ್ಶಿಸಿ ಉತ್ತರ ಹುಡುಕಬೇಕೆಂಬ ಪ್ರಾಮಾಣಿಕ ಪ್ರಯತ್ನಕ್ಕೆ ಕಟ್ಟುಬಿದ್ದಿದ್ದೇನೆ. ಮುಖ್ಯವಾಗಿ 'ಜೀವನ' ಎಂಬ ಮೂರಕ್ಷರದ ಪದ್ಯವನ್ನ ನನ್ನ ತಿಳುವಳಿಕೆಗೆ ನಿಲುಕುವ ಹಾಗೆ ಅರ್ಥೈಸಿಕೊಂಡು ಓದುವ ಪ್ರಯತ್ನದಲ್ಲಿದ್ದೇನೆ. ಯಾರೋ ವಿಮರ್ಶಿಸಿ ಅರ್ಥೈಸಿ ಬಿಟ್ಟು ಹೋಗಿರುವ ಜೀವನದ ಅಚ್ಚಿನಲ್ಲಿ ( " ಮತ್ತೇನಕ್ಕೆ ಮೇಲೆ ಕುವೆಂಪು ಅವರ ವಿಶ್ವಮಾನವನ ಉಲ್ಲೇಖ ? "  ಅಂತ ನಿಮ್ಮ ಪ್ರಶ್ನೆಯಾದರೆ ,  ನನ್ನ ಉತ್ತರ : " ಮೇಲಿನದೆಲ್ಲಾ ನಾನಾಗಿಯೇ ಕಂಡುಕೊಂಡಿರುವ ಪಾಠಗಳು. ನಂತರದ ದಿನಗಳಲ್ಲಿ ಕುವೆಂಪು ಅವರ ವಿಶ್ವಮಾನವ ಸಂದೇಶವೂ ಇದೇ ಧಾಟಿಯಲ್ಲಿದೆ ಅಂತ ನನಗೆ ಅನಿಸಿತು. ಅವರ ಕಲ್ಪನೆಯಲ್ಲಿ ಜಾತಿಯಷ್ಟೇ ಅಲ್ಲ ಧರ್ಮಗಳು ಸೃಷ್ಟಿಸಿರುವ ಅಂತರಗಳನ್ನೂ ಗಾಳಿಗೆ ತೂರಿದ್ದಾರೆ. ಅವರ ವಿಚಾರ ವೈಶಾಲ್ಯತೆ ನನ್ನಂಥ ಅಲ್ಪನಲ್ಲಿ ಮೂಡುವುದು ಕಷ್ಟಸಾಧ್ಯ. ಜೊತೆಗೆ ನಾನು ಅವರ ವಿಶ್ವಮಾನವ ಕಲ್ಪನೆಯ ಬಗೆಗೆ ಹೇಳಿಕೊಳ್ಳುವಷ್ಟೇನೂ ಓದಿಕೊಂಡಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ನನ್ನ ವಿಚಾರಗಳನ್ನ ಅವರ ವಿಚಾರಗಳೊಂದಿಗೆ ಸಮೀಕರಿಸುವುದು ಬಾಲಿಶವಾದೀತು. ನಾನೆಲ್ಲಿ ? ಅವರೆಲ್ಲಿ ? "  ) ನಮ್ಮ ಜೀವನವನ್ನೂ ಸವೆಸುವುದು ನನಗ್ಯಾಕೋ ಸರಿ ಅನ್ನಿಸಲಿಲ್ಲ, ಅದಕ್ಕೆ. ಅಂತೆಯೇ , Why Should We Cast Ousrselves Into This Cast System. Lets Try Honestly To Cast Out Caste System From INDIA, our motherland.


{ ಇಷ್ಟೆಲ್ಲಾ Space ಬಳಸಿ ನಾನು ಬರೆದ ನಂತರ ನಿಮಗೆ ಜಾಗ ಇಲ್ಲ ಅನ್ನೋಕಾಗುತ್ತದೆಯೇ ? ಈ ಲಹರಿಯನ್ನೋದಿದ ಯಾರೇ ಆಗಲಿ ನಿಮ್ಮ ಅನಿಸಿಕೆ - ಅಭಿಪ್ರಾಯ - ಲಹರಿ .. ಯಾವತ್ತೂ ಬರಹಗಳನ್ನ ಕಳುಹಿಸಿಕೊಡಲು ಹಿಂಜರಿಯಬೇಡಿ. ನಿಮ್ಮ ಬರಹಗಳನ್ನ ಈ ವಿಳಾಸಕ್ಕೆ ಕಳುಹಿಸಿ : revappa@gmail.com }

ಕೊನೆಯದಾಗಿ : ಸಂಜೆ 8 ಗಂಟೆಗೇ ನಿದ್ರೆ ಬರುತ್ತಿದ್ದರೂ, ನಂತರದಲ್ಲಿ ಸತತ ನಾಲ್ಕು ಗಂಟೆ ಪಟ್ಟಾಗಿ ಕೂತುಕೊಂಡು ಲೇಖನ ಬರೆದು ಮುಗಿಸುವಷ್ಟು 'ಸ್ಫೂರ್ತಿ' ನೀಡಿದ ನನ್ನ ಆಪ್ತರಿಗೆ, ನನ್ನ & ಈ ಲೇಖನವನ್ನ ಓದುತ್ತಿರುವ ನಿಮ್ಮ ಪರವಾಗಿ ಧನ್ಯವಾದಗಳು.

ಪ್ರೀತಿಯಿಂದ,
- ರೇವಪ್ಪ

3 comments:

ಪರಶು.., said...

ಶಬ್ಬಾಸ್ ರೇವಪ್ಪಾ..
ಸಮಾಜ ಕಂಟಕ ಜಾತಿ ಪದ್ದತಿ ಬಗ್ಗೆ ನಿಮ್ಮ ನಿಲುವನ್ನು ನವಿರು ಬರಹದ ಮೂಲಕ ಅರ್ಧಪೂರ್ಣವಾಗಿ ವಿವರಿಸಿದ್ದೀರ. ನಿಮ್ಮ ಬರಹದ ಪ್ರಬುದ್ಧತೆ ಇಷ್ಟ ಆಯ್ತು...

"ಮಾನವಕುಲಂ ತಾನೊಂದೆ ವಲಂ" ಅಂದ ಪಂಪ.
"ಆಗು ನೀ ಅನಿಕೇತನ" ಅಂತ ವಿಶ್ವ ಮಾನವ ಸಂದೇಶವನ್ನೇ ವಿಶ್ವಕ್ಕೆ ನೀಡಿದರು ಕುವೆಂಪು.
"ಎಲ್ಲರ ಮೈಯಲ್ಲಿ ಹರಿಯೋದೂ ಕೆಂಪು ರಕ್ತಾನೇ" ಅನ್ನುತ್ತಲೇ ಜಾತಿಯ ಕೊಚ್ಚೆಯಲ್ಲೇ ಹೊರಳುತ್ತಾ ಬದುಕುತಿದ್ದಾನೆ ಇಂದಿನ ಶ್ರೀಸಾಮಾನ್ಯ.

ಕಾಯಕದ ಆಧಾರದ ಮೇಲೆ ರೂಪುಗೊಂಡ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವರ್ಗ ತದನಂತರದಲ್ಲಿ ಜಾತಿ ವ್ಯಸ್ಥೆಯಾಗಿ ಪರಿವರ್ತನೆಗೊಂಡು ಹಿಂದೂ ಧರ್ಮದೊಳಗೇ ರೂಪಿಸಿದ ಅಂತರವಿದೆಯಲ್ಲಾ ಅದು ಅತ್ಯಂತ ಹೀನಕರವಾದದ್ದು. ಈ ಕಾರಣದಿಂದಾಗಿಯೇ ಹಿಂದೂ ಧರ್ಮ ಮತ್ತು ಅದನ್ನು ಪ್ರತಿನಿಧಿಸುತ್ತಿದ್ದ 'ಹಿಂದೂ ಸ್ಥಾನ' ತುಸು ಅಸ್ಥಿರ ಗೊಂಡಿರುವುದು ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ಇಂತಿಪ್ಪ ಜಾತಿ ಪದ್ದತಿ ಬಗ್ಗೆ ನಮ್ಮ ನಮ್ಮಲ್ಲೇ ಇಂತಹ ಆರೋಗ್ಯಕರ ಅವಲೋಕನ ನಡೆಯುವುದು ನಮ್ಮೊಳಗಿನ ಸಂಕುಚಿತತೆಯನ್ನು ತೊಲಗಿಸಬಲ್ಲದು ಎಂಬುದು ನನ್ನ ಅಭಿಮತ.

ಚರ್ಚೆ ಮುಂದುವರೆಯಲಿ,...

ಮಂಜು said...

ಲೇಖನ ಬರೆದುದಕ್ಕಾಗಿ ರೇವಪ್ಪ ನಿಮಗೆ ಅಭಿನಂದನೆಗಳು.

ಭಾರತದ ಶಕ್ತಿ ಮತ್ತು ಸೌಂದರ್ಯವೇ ಬಹುಸಂಸ್ಕೃತಿ. ಭಿನ್ನ ಸಂಸ್ಕೃತಿಗಳನ್ನು ಆಯಾ ಆಚಾರ ವಿಚಾರಗಳನ್ನು ಗೌರವಿಸುವುದೇ ನಮ್ಮ ಅತ್ಯಂತ ಪ್ರಬಲ ತತ್ವವಾಗಬೇಕು. ಎಲ್ಲರೂ ಒಂದೇ ಎನ್ನುವ ಏಕತೆ ಬಹುಶಃ ಜಾತ್ಯಾತೀತದ ಬೇರೆಯೇ ಅರ್ಥವನ್ನು ಕಲ್ಪಿಸಬಹುದು. ಪರಸ್ಪರ ನಮ್ಮ ಆಚರಣೆಗಳನ್ನು ಗೌರವಿಸುವುದೇ ಅವುಗಳನ್ನು ಸದಾ ಸಾವಯವ ಸಂಬಂಧದಲ್ಲಿ ಉಳಿಯುವಂತೆ ಮಾಡಲು ಸಾಧ್ಯ.

ವಿಶ್ವದಾದ್ಯಂತ ಇರುವ ಜಾತ್ಯತೀತ ಕಲ್ಪನೆಯನ್ನು ಮತ್ತು ಅದರ ಪಾಲನೆಯನ್ನು ನಾವು ಹೆಚ್ಚು ಅಧ್ಯಯನಕ್ಕೆ ಒಳಪಡಿಸಿದ್ದೇ ಆದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ನಾವು 'ಜಾತಿ ಪದ್ಧತಿ'ಯನ್ನು ಅರ್ಥೈಸಲು ಸಾಧ್ತವಾಗಬಹುದು.

-ಮಂಜು

Unknown said...

Hi.
ರೇವಪ್ಪ ನೀವು ಬರೆದಿರುವ ಲೇಖನ ತುಂಬ ಚೆನ್ನಾಗಿದೆ. ಇದರಿಂದ ನಮ್ಮಲ್ಲಿ ಎಷ್ಟೊಂದು ಜಾತಿ ಻ನ್ನುವುದು ಬೇರೂರಿದೆ ಅಂತ ಗೊತ್ತಾಗುತ್ತೆ... ಜಾತಿ ಪದ್ದತಿಯನ್ನ ನಿಮೂ೵ಲನೆ ಮಾಡಬೇಕು ಅಂದ್ರೆ ರಿಜವೇ೵ಶನ್ ಕೋಟಾ ತೆಗೆಯಲೇಬೇಕು. ರಿಜರ್ವೇಶನ ಕೋಟಾ ಇಲ್ಲ ಅಂದ್ರೆ ನಾವೆಲ್ಲರೂ ಒಂದೇ ಅನ್ನುವ ಭಾವನೆ ಬರಬಹುದು....ಮೇಲು, ಕೀಳು ಅನ್ನೋ ಭಾವನೆ ಹೋಗಲಾಡಿಬಹುದು. ಅಲ್ವಾ? ಈ ನಿಮ್ಮ ಲೇಖನ ಸರ್ಕಾರದವರೆಗೂ ತಲುಪುವಂತಾಲಿ...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago