18 January 2010

ಆಘಾತ

ಮೊನ್ನೆ ಪರಶುರಾಮ್ ಬರೆದ ಕಥೆಯನ್ನ ಪ್ರಕಟಿಸದೇ ಇರೋದಕ್ಕೆ ಎರಡು ಮೂರು ದಿಕ್ಕಿನಿಂದ ವಿರೋಧ ವ್ಯಕ್ತವಾದದ್ದನ್ನ ಕೇಳಲ್ಪಟ್ಟೆ..ಅದಕ್ಕೆ ನನ್ನ ಸಮರ್ಥನೆ ಹೇಳ್ತೀನಿ ಕೇಳಿ ::

ನಾವುಗಳು, ಅಂದ್ರೆ ಇಲ್ಲಿ ಲೇಖನ/ ಬರಹ ಬರೆಯೋರು ನಮ್ಮಲ್ಲಿರೋ ಸಾಮರ್ಥ್ಯವನ್ನ ಒರೆಗೆ ಹಚ್ಚಿಕೊಳ್ಳುವುದಕ್ಕೋಸ್ಕರ ಬರೀತೀವಿ - ಈ ಬ್ಲಾಗಲ್ಲಿ. ಆ ಒರೆ ಅಂದ್ರೆ ನಿಮ್ಮ ಪ್ರತಿಕ್ರಿಯೆ.

ಇನ್ನೊಂದು Case ಹೇಳ್ತೀನಿ ಕೇಳಿ :: ನಾವು ನಾಡಿನ ಪ್ರಖ್ಯಾತ ಪತ್ರಿಕೆಗಾಗಿ ಬರೆದು ಅಲ್ಲಿ ಪ್ರಕಟವಾದ್ರೆ ಅದೇ ಒಂದು ಸಂತೋಷ. ಆಗ ಯಾರೊಬ್ಬರೂ ಯಾವುದೇ ಓದುಗನ ಪ್ರತಿಕ್ರಿಯೆಗಾಗಿ ಹಪಹಪಿಸುವುದಿಲ್ಲ. ಕೋಟಿ ಸಂಖ್ಯೆಯಲ್ಲಿ ಪ್ರಸಾರವಿರುವ ಆ ಪತ್ರಿಕೆಯಲ್ಲಿ ಪ್ರಕಟವಾದದ್ದೆ ನೆಮ್ಮದಿಯ ವಿಚಾರ. ಜೊತೆಗೆ ತಕ್ಕ ಸಂಭಾವನೆ ಕೂಡ ದೊರೆತಿರುತ್ತದೆ.

ಆದರೆ ಇಲ್ಲಿ ಹಾಗಲ್ಲ. ನಮ್ಮ ಪ್ರಸಾರ ಸಂಖ್ಯೆ 50 ಅನ್ಕೋಳೋಣ. ಅಂಥದ್ದರಲ್ಲಿ ಇದನ್ನ ಓದೋರು ಎಷ್ಟು ಜನ ಅಂತ ಲೆಕ್ಕ ಹಾಕೋದು ಅವರು ನೀಡೋ ಪ್ರತಿಕ್ರಿಯೆಗಳ ಸಂಖ್ಯೆಯಿಂದ ಬಿಟ್ರೆ ಬೇರೆ ಯಾವ ಮಾರ್ಗವೂ ಇಲ್ಲ. ವಿಚಾರ ಹೀಗಿರ್ಬೇಕಾದ್ರೆ ಒಬ್ಬ ಹವ್ಯಾಸಿ ಲೇಖಕ ಬರೆದ ಬರಹಕ್ಕೆ ಸೊನ್ನೆ ಪ್ರತಿಕ್ರಿಯೆಗಳು ಬಂದಲ್ಲಿ ನಾನು ಬರೆದದ್ದು ಯಾರ ಗಮನಕ್ಕೂ ಬರದೇ ಹೋಯ್ತಲ್ಲ ಅನ್ನೋ ಬೇಜಾರು ಮನಸಲ್ಲಿ ಮೂಡೋದು ಖಂಡಿತ. ಇಲ್ಲಿ ಕೆಲವು ಬುದ್ಧಿಜೀವಿಗಳು ಹವ್ಯಾಸಿ ಲೇಖಕ ಅನ್ನೋ ಪದವನ್ನ ಹಿಡ್ಕೊಂಡು ವಾದಕ್ಕಿಳೀಬಹುದು : " ಹವ್ಯಾಸಿ ಲೇಖಕ ಅಂತ ನೀನೇ ಹೇಳ್ತೀಯಾ. ಆಗ ಅವನು ಬರೆಯೋದು ತನ್ನ ಹವ್ಯಾಸಕ್ಕಾಗಿ - ಬರೆಯೋ Passion ಗಾಗಿ. So, ಅವನು ಪ್ರತಿಕ್ರಿಯೆ ಬಯಸೋ ಗೋಜಿಗೇ ಹೋಗ್ಬಾರ್ದು.... Etc. "

ನೋಡಿ ಬಾಸ್ ... ಹವ್ಯಾಸಿ ಲೇಖಕ ತನ್ನ Passion ಗಾಗಿ ಬರೆಯೋದಾದ್ರೆ ತನ್ನ ಸ್ವಂತ ಡೈರಿಯಲ್ಲಿ ಯಾ ತನ್ನ ಮನಸಲ್ಲಿ ಬರೆದು ಕೂತ್ಕೋತಾನೆ. ಅದೆಲ್ಲ ಹೊರತುಪಡಿಸಿ ಈ ಥರ ಬ್ಲಾಗ್ ಥರದ ವೇದಿಕೆಗಳಲ್ಲಿ ನಮ್ಮ ಸ್ನೇಹಿತರು ಓದಲಿ ; ನನ್ನ ಮಟ್ಟವನ್ನ ಒರೆ ಹಚ್ಚಿ ಸಲಹೆ ಸೂಚನೆ ನೀಡಲಿ ಅಂತ ಬರೀತಾನೇ ಹೊರತು Passion ಗಾಗಿ ಬರೆದು ಕಣ್ಮುಚ್ಚಿ ಕೂತ್ಕೋಳೋದಿಲ್ಲ. Public ಅಲ್ಲಿ ಪ್ರೇಯಸಿಯನ್ನುದ್ದೇಶಿಸಿ ಬರೆದ ಬರಹಗಳಿಗೇ Comment ಸಂಪಾದಿಸಿ ಬೀಗುವ ಕಾಲದಲ್ಲಿ ಚಂದದ ಕಥೆ ಬರೆದ ಪರಶು ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಕ್ರಿಯೆ ಇರಲಿ ಅಂತ ನಾನು ಹಟ ಮಾಡಿದ್ದು ಸಮರ್ಥನೀಯ ಅಂತ ನಂಗನ್ನಿಸ್ತಪ್ಪ.

------------------------------------------------------------

ಆಘಾತ

ಮಾಘ ಮಾಸದ ಚಳಿಗಾಲವಾದ್ದರಿಂದ ಹೊರಗೆ ಇಬ್ಬನಿ ಮುಂಜಾವಿನಲ್ಲಿ ಸುರಿಯುತ್ತಿರುವ ಸೋನೆ ಮಳೆಯೇನೋ ಎಂಬಂತೆ ಬೀಳುತ್ತಿತ್ತು. ಹೊರಗೆ ಬಂದು ಇಣುಕಿದರೂ ಮುಖ ಕೈಗಳಿಗೆ ಚಳಿ ರಪ್ಪನೆ ತಾಕಿದಂತಾಗಿ ಕರುಳಿನಾಳದಿಂದ ನಡುಕದ ಅಲೆಯನ್ನು ಎಬ್ಬಿಸುವಂತಿತ್ತು. ಇಂತಹ ಚಳಿಯಲ್ಲೇ ಕೋಳಿ ಕೂಗುವ ಜಾವದಲ್ಲೇ ಎದ್ದ ಕರಿಯಪ್ಪ, ಚೌಡಪ್ಪರಿಬ್ಬರೂ ಕಣದಲ್ಲಿ ರಾತ್ರಿಯೇ ತುಂಬಿಸಿಟ್ಟಿದ್ದ ಭತ್ತದ ಚೀಲಗಳೊಂದೊಂದನ್ನೇ ಹೊತ್ತು ಎತ್ತಿನ ಗಾಡಿಗೆ ಹಾಕಿದರು. ಆದಷ್ಟು ಬೇಗೆ ಪೇಟೆಗೆ ಹೋಗಿ ಭತ್ತ ಒಡೆಸಿ, ಅಕ್ಕಿ ಮಾಡಿಸಿಕೊಂಡು ಹೊತ್ತು ನೆತ್ತಿಗೆ ಏರುವುದರೊಳಗೆ ವಾಪಸ್ಸು ಬರಬೇಕು ಎಂಬುದು ಒಂದು ಉದ್ದೇಶ ಹಾಗೂ ಪೇಟೆಗೆ ಹೋಗುತ್ತೇವಲ್ಲಾ ಎಂಬ ಉತ್ಸಾಹದಿಂದಾಗಿ ಅವರಿಗೆ ಇಂತಹ ಚಳಿಯ ಯಾವ ಘೋರ ಪ್ರಭಾವವೂ ಉಂಟಾಗುವಂತಿರಲಿಲ್ಲ. ಆದರೆ ಎತ್ತುಗಳನ್ನು ಬಲವಂತವಾಗಿ ಎಳೆದು ತಂದು ಗಾಡಿಗೆ ಕಟ್ಟಲೆತ್ನಿಸಿದಾಗ ಅವು ಪ್ರತಿಭಟಿಸಿದವು. ಕರಿಯಪ್ಪನ ಎತ್ತುಗಳು ಯಾವ ತೊಂದರೆಯನ್ನು ಕೊಡಲಿಲ್ಲವಾದರೂ, ಚೌಡಪ್ಪನ ಒಂದು ಕರಿ ಎತ್ತಂತೂ ಬೆಳ್ಳಂಬೆಳಿಗ್ಗೆ ಭಾರ ಹೊರಲು ಸುತಾರಾಂ ಒಪ್ಪದೆ ಮೇಲೇಳಲೇ ಇಲ್ಲ. ಬೇರೆ ವೇಳೆಯಲ್ಲಾದರೆ ಚೌಡಪ್ಪ "ಮ್.. ಮ್... ಹ್ಹ...ಹ್ಹ..ಹ್ಹ" ಎಂದು ಚಿಟಿಕೆ ಹೊಡೆದ ತಕ್ಷಣ 'ಗುಡುಗ್' ಎಂದು ಎದ್ದು ನಿಲ್ಲುತ್ತಿದ್ದ ಎತ್ತನ್ನು ಈಗ ಎಬ್ಬಿಸಲು ಚೌಡಪ್ಪ ಬಾರುಕೋಲಿನಿಂದ 'ಫಟಾರ್' ಎಂದು ಶಬ್ದ ಮಾಡಲೇ ಬೇಕಾಯ್ತು. ಅಂತೂ ಒಡೆಯನ ಚಳಿಬಿಡಿಸುವ ಆಯುಧದ ಶಬ್ದ ಕೇಳಿದ ಕರಿ ಎತ್ತು ಮನದಲ್ಲೇ ಒಡೆಯನನ್ನು ಶಪಿಸಿ ಎದ್ದು ನಿಂತು ತನ್ನ ದೇಹವನ್ನು ನೆಟ್ಟಗೆ ಮಾಡಿ ಲಟಿಗೆ ಮುರಿದು ಚೌಡನೊಂದಿಗೆ ನಡೆಯಿತು.


ಎತ್ತುಗಳ ಕೊರಳಿಗೆ ಗಾಡಿನೊಗವನ್ನಿಟ್ಟು ಗಾಡಿಯ ಮೂಕಿನ ಬದಿಯಿಂದ ಹಾರಿ ಹತ್ತಿಕುಳಿತ ಇಬ್ಬರೂ " ಹೈ.... ಹೈ..." ಎಂದು ಎತ್ತುಗಳು ಮುಂದೆಹೋಗಲು ಸೂಚನೆ ಕೊಟ್ಟರು. ಇವರೆಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಚೌಡಪ್ಪನ ಕಿರಿಮಗಳು ಮುದ್ದಿನಿಂದ ಸಾಕಿದ ಕಂತ್ರಿ ನಾಯಿ ಬಸವ ಪಟ್ಟಣಕ್ಕೆ ಹೋಗುವ ಆಸೆಯಿಂದ ಗಾಡಿಗಳನ್ನು ಹಿಂಬಾಲಿಸಲು ಬಯಸಿತಾದರೂ ಚಳಿಯ ತೀಕ್ಷಣತೆಗೆ ಅಂಜಿ ಬೂದಿಗುಡ್ಡೆಯ ಮೇಲಿನ ವೃತ್ತಾಕಾರದ ತನ್ನ ಶಯನ ಮುದ್ರೆಯನ್ನು ಮತ್ತಷ್ಟು ಬಿಗಿಗೊಳಿಸಿ ನಿದ್ರೆಗೆ ಜಾರಿತು.


ಕಲ್ಲಿನ ರಸ್ತೆಯಲ್ಲಿ ಗಡ-ಗಡ ಉರುಳುವ ಗಾಡಿಯ ಶಬ್ದದಿಂದಾಗಿ ಚೌಡ-ಕರಿಯಪ್ಪರಿಗೆ ಪರಸ್ಪರ ಮಾತನಾಡಲಾಗದಿದ್ದರೂ ಎತ್ತುಗಳಿಗೆ ಹಾ.... ವೂ.... ಎನ್ನುತ್ತ ಹೋಗುತ್ತಿದ್ದರು. ಅಲ್ಲಲ್ಲಿ ಮಣ್ಣಿನ ರಸ್ತೆಯಲ್ಲಿ ಗಾಡಿಯ ಹಳಿ ಸುಯ್ಯನೆ ಉರುಳುವಾಗ ಇಬ್ಬರಿಗೂ ಸುಮ್ಮನಿರಲಾಗುತ್ತಿರಲಿಲ್ಲ. ಕರಿಯಪ್ಪನೇನೋ ಕ್ಷಣಕ್ಕೊಂದು 'ಗಣೇಶ'ನ್ನ ಸುಟ್ಟು ಚಳಿ ಓಡಿಸುತ್ತಿದ್ದ. ಆದರೆ ಈ ಚಟಗಳಿಲ್ಲದ ಚೌಡಪ್ಪನಿಗೆ ಮಾತನಾಡಿ ಚಳಿ ಓಡಿಸದೆ ಗತ್ಯಂತರವಿರಲಿಲ್ಲ. ಹೀಗಾಗಿ ಕರಿಯನನ್ನು " ಈ ತರ ಇಬ್ನಿ ಬಿದ್ರೆ ಈ ವರ್ಸ ಸಂಪು ಮಳೆ ಆಕ್ತೈತಿ ನೋಡು" ಎಂದು ಮಾತಿಗೆಳೆದರೆ, ಕರಿಯನೂ " ಇಬ್ನಿ ಬಿಳ್ಲಿ, ಬಿಳ್ದೆ ಇರ್ಲಿ ಮಲ್ನಾಡಲ್ಲಿ ಮಳಿಗೇನು ಕಮ್ಮಿ" ಎಂದು ಮಾತಿಗಿಳಿದ. ಹೀಗೆ ಶುರುವಾದ ಅವರ ಮಾತು ಊರಿನ ಗೌಡ-ಗೌಡರ ನಡುವಿನ ಒಳಜಗಳದ ಬಗ್ಗೆ, ಕಡೇ ಮನೆ ಕರಿಸ್ವಾಮಿ ಮಗಳು, ಸಣ್ಣ ಗೌಡರ ಮಗ ನಾಗರಾಜನೊಡನೆ ಓಡಿ ಹೋದುದರ ಬಗ್ಗೆ, ನಂತರದ ಆಗು-ಹೋಗುಗಳ ಬಗ್ಗೆ. ಅಂಗಡಿ ನಾಗಶೆಟ್ಟಿಯ ರಸಮಯ ಮಾತಿನ ಹಿಂದಿರುವ ಅವನ ಅಪಾರ ಅನುಭವಗಳ ಬಗ್ಗೆ... ಹೀಗೆ ಮಾತಿಗೊಂದು 'ಗತಿ' ಎಂಬುದಿರದೆ ಊರಿನ ಎಲ್ಲಾ ಸಂಗತಿಗಳ ಬಗ್ಗೆಯೂ ಮುಂದುವರಯುತ್ತಿತ್ತು. ಕರಿಯಪ್ಪನೇನೋ ಎತ್ತಿನ ಪಾಡಿಗೆ ಗಾಡಿಯನ್ನು ಬಿಟ್ಟು ಭತ್ತದ ಚೀಲಗಳಿಗೆ ಒರಗಿ ಮುದುಡಿ ಕುಳಿತಿದ್ದ. ಆದರೆ ಚೌಡಪ್ಪ ಮಾತ್ರ ತನ್ನ ಕರಿ ಎತ್ತಿನ ಹಿಕಮತ್ತಿನಿಂದಾಗಿ ಆಗಾಗ ರಸ್ತೆಯ ಅಂಚಿಗೆ ಹೋಗುತ್ತಿದ್ದ ಗಾಡಿಯನ್ನು ನಡುರಸ್ತೆಗೆ ತರುತ್ತಾ ಜಾಗೃತನಾಗಿಯೇ ಇದ್ದ.


ಹೀಗೆ ಆರೇಳು ಮೈಲಿ ಕ್ರಮಿಸುವಷ್ಟರಲ್ಲಿ ದೂರದ ಬೆಟ್ಟಗಳ ಸಂದಿಯಿಂದ ಕಪ್ಪನೆಯ ಇಬ್ಬನಿಯ ಹೊದಿಕೆಯನ್ನು ಕಷ್ಟಪಟ್ಟು ಸರಿಸುತ್ತಾ ದಿನಕರ ಮೇಲೇಳಲು ಪ್ರಯತ್ನಿಸುತ್ತಿದ್ದ. ಹೊನ್ನಿನ ಬಣ್ಣದ ರಶ್ಮಿಗಳು ಬಾನಂಚಿನಲ್ಲಿ ಓಕುಳಿ ಚೆಲ್ಲುತ್ತಿದ್ದಂತೆ ಹೆದರಿದಂತೆ ಕಂಡ ಚಳಿರಾಯ ನಿಧಾನವಾಗಿ ಓಡಲಾರಂಭಿಸಿದ. ಕೌದಿಯಂತೆ ಕಪ್ಪಗೆ ಕಾಣುತ್ತಿದ್ದ ಇಬ್ಬನಿಯ ದಟ್ಟ ಮಂಜು ಕ್ರಮೇಣ ಸೊಳ್ಳೆ ಪರದೆಯಂತಾಗಿ ಹತ್ತಿರ ಹತ್ತಿರ ಹೋದಂತೆ ಮಾಯವಾಗಲಾರಂಬಿಸಿತು. ನಿಚ್ಚಳವಾಗಿ ಸೂರ್ಯನ ಕಿರಣ ಮೈಗೆ ತಾಗುವ ವೇಳೆಗಾಗಲೇ ಚೌಡ-ಕರಿಯರು ಅಕ್ಕಿ ಗಿರಣಿಯ ಬಾಗಿಲಲ್ಲಿ ಗಾಡಿ ನಿಲ್ಲಿಸಿದರು.

.....................................

ಗಿರಣಿ ಶುರುವಾಗುವುದು ಇನ್ನೂ ತಡವಿದ್ದುದರಿಂದ ಇಬ್ಬರೂ ಪಕ್ಕದಲ್ಲೇ ಇದ್ದ ಹೋಟೆಲನ್ನು ಹೊಕ್ಕು ಹೊಟ್ಟೆ ಬಿರಿಯುವಷ್ಟು ಮಸಾಲೆ ದೋಸೆ, ರವೆ ಇಡ್ಲಿ ತಿಂದರು. ಹೊಟ್ಟೆ ತುಂಬಾ ತಿಂದು ಹೊರಬಂದ ಮೇಲೂ ಕರಿಯಪ್ಪ ಅವುಗಳ ಸವಿಯನ್ನು ನೆನಪಿಸಿಕೊಂಡು "ನನ್ನ ಹೆಂಡ್ತಿಗ್ಯಾಕೆ ಈ ತರ ಅಡ್ಗೆ ಮಾಡಾಕ್ ಬರಾದಿಲ್ಲ" ಎಂದು ಮನದಲ್ಲೇ ಪ್ರಶ್ನಿಸಿಕೊಂಡನು. ಅಕ್ಕಿರೊಟ್ಟಿ, ಮುಳುಗಾಯಿ ಚಟ್ನಿ, ಕೆಸುವಿನ ಸಾರು, ಹಲಸಿನ ಬೀಜದ ಪಲ್ಯ ಮಾಡಾದು ಬಿಟ್ರೆ ಮತ್ಯಾವ ಅಡ್ಗೆ ಮಾಡಾಕೂ ಬರಾದಿಲ್ಲ. ಹೀಂಗೆ ಇಡ್ಲಿ ಮಾಡೇ ಅಂದ್ರೆ ಕಲ್ಲಿನಂಗೆ ಮಾಡ್ತಾಳೆ.! ದ್ವಾಸೆ ಮಾಡಿದ್ರೆ ತೂತೇ ಇರಾದಿಲ್ಲ" ಎಂದು ಮನದಲ್ಲೇ ಗೊಣಗಿಕೊಂಡನು. ಜೊತೆಗೆ "ನಾನು ಮದ್ವೆ ಆಗ್ವಾಗ್ಲೇ ಯೋಚ್ನೆ ಮಾಡಿ ಒಳ್ಳೆ ಅಡ್ಗೆ ಬಲ್ಲವಳ್ನೇ ಮದ್ವೆ ಆಗಿದ್ರೆ ಇನ್ನೂ ದಷ್ಟ ಪುಷ್ಟವಾಗಿ, ಗುಂಡುಕಲ್ಲಿನಂಗೆ ಇರಬೌದಿತ್ತು' ಎಂದೂ ಯೋಚಿಸಿದನು. 'ಆಗಿದ್ದಾಗೋಯ್ತು ಇನ್ನು ವಾರಕ್ಕೊಂದ್ಸಾರಿನಾದ್ರೂ ಪೇಟಿಗೆ ಬಂದೋದ್ರಾತು' ಎಂದು ತನ್ನೊಳಗೇ ತಾನು ಸಮಾಧಾನ ತಂದುಕೊಂಡು ಚೌಡನ ಹಿಂದೆ ಗಿರಣಿಯ ಒಳಹೊಕ್ಕು ಭತ್ತದ ಮೂಟೆಗೊರಗಿ ಕುಳಿತುಕೊಂಡನು.


ಅದಾಗಲೇ ಅಕ್ಕಿಗಿರಣಿ ತನ್ನ ಮಾಮೂಲಿ ಶಬ್ದದೊಂದಿಗೆ ಕೆಲಸ ಆರಂಭಿಸಿತ್ತು. ನಿನ್ನೆಯೇ ಬೇರೆ ಬೇರೆ ಊರುಗಳಿಂದ ಬಂದ, ಅಕ್ಕಿಯಾಗದೇ ಹಾಗೇ ಉಳಿದಿದ್ದ ಕೆಲವು ಭತ್ತದ ಮೂಟೆಗಳ ಸರದಿಯ ನಂತರವೇ ಚೌಡ-ಕರಿಯರ ಭತ್ತಕ್ಕೆ ಅಕ್ಕಿಯಾಗುವ ಸೌಭಾಗ್ಯ ದೊರೆಯಬೇಕಾಗಿತ್ತು. ಹಾಗಾಗಿ ಅಕ್ಕಿಗಿರಣಿಯ ಅದಮ್ಯ ಧೂಳನ್ನೂ ಲೆಕ್ಕಿಸದೆ ಅವರು ಗಿರಣಿಯ ಒಂದು ಮೂಲೆಯಲ್ಲಿ ರಾಶಿ ಹಾಕಿದ ಮೂಟೆಗಳ ಮೇಲೊರಗಿ ಕುಳಿತಿದ್ದರು. ಸ್ವಲ್ಪ ಸಮಯದಲ್ಲೇ ಕರಿಯ "ಇಲ್ಲೇ ಪೇಟೆಕಡೆ ಹೋಗಿ ಬರ್ತ್ನಿ" ಎಂದು ಚೌಡನ ಬಳಿ ಹೇಳಿ ತನ್ನ ಹೊಟ್ಟೆಯ ಮೇಲೆ ಕೈ ಆಡಿಸುತ್ತಾ ಹೊರನಡೆದನು. ಚೌಡನೊಬ್ಬನೇ ಕುಳಿತು ಬೇಸರ ಕಳೆಯಲು ಅಲ್ಲಲ್ಲಿ ಉದುರಿದ ಭತ್ತದ ಕಾಳುಗಳೊಂದೊನ್ನೇ ಹೆಕ್ಕಿ ತೆಗೆದು. ಅಂಗೈಯಲ್ಲಿ ಹೊರಳಿಸಿ, ಕಡೆ ಹಲ್ಲಲ್ಲಿ ಕಡಿಯುತ್ತಾ ಭತ್ತವನ್ನು ಬೆತ್ತಲುಗೊಳಿಸಿ ಅಕ್ಕಿಯನ್ನಾಗಿಸುವ ಗಿರಣಿಯ ಚಮತ್ಕಾರವನ್ನು ನೋಡುತ್ತಾ ಕುಳಿತಿದ್ದನು. ಆಗ ತನ್ನ ಇಳಿಬಿಟ್ಟ ಕಾಲ ಬಳಿಯಲ್ಲೇನೋ ಪಂಚೆ ಜಗ್ಗಿದಂತಾಯ್ತು.! ಬಗ್ಗಿ ನೋಡಿದರೆ ಒಂದು ಪುಟ್ಟ ಬೆಕ್ಕಿನ ಮರಿ.!! ಹಳದಿ ಮಿಶ್ರಿತ ಕಂದು ಬಣ್ಣ ಹೊಂದಿದ, ಥೇಟು ಹುಲಿ ಮರಿಯನ್ನೇ ಹೋಲುವ ಅದು ಚೀಲಗಳ ಸಂದಿಯಿಂದ ನುಸುಳಿಬಂದು ಚೌಡಪ್ಪನ ಪಂಚೆ ಜಗ್ಗಿತ್ತು. ಚೌಡಪ್ಪ ತಕ್ಷಣ ಅದನ್ನು ನೋಡಿದಾಗ 'ತಪ್ಪಾಯ್ತು' ಎಂಬಂತೆ ಇನ್ನೂ ಚಿಗುರಬೇಕಿದ್ದ ಎಳೆ ಮೀಸೆಗಳನ್ನು ಹೊಂದಿದ್ದ ತನ್ನ ತುಟಿಯನ್ನಗಲಿಸಿ ಪುಟ್ಟ ಬಾಯಿಂದ "ಮ್ಯಾಂವ್" ಎಂದಿತು. ಚೌಡಪ್ಪ ಹಿಡಿಯಲೆತ್ನಿಸಿದರೂ ತಪ್ಪಿಸಿಕೊಳ್ಳಲು ಯತ್ನಿಸದ ಅದನ್ನು ಚೌಡಪ್ಪ ಸುಲಭವಾಗಿ ಹಿಡಿದು ತನ್ನ ತೊಡೆಯಮೇಲೆ ಕೂರಿಸಿಕೊಂಡು ಬೆನ್ನಿನಮೇಲೆ ನಯವಾಗಿ ನೀವುತ್ತಾ ಮುದ್ದಿಸತೊಡಗಿದನು. ಇವನ ಮುದ್ದಾಟಕ್ಕೆ ಮನಸೋತ ಬೆಕ್ಕು ಅವನ ಕೈಯನ್ನು ತನ್ನ ಗರಗತ್ತಿಯಂತಹ ನಾಲಿಗೆಯಿಂದ ನೆಕ್ಕುತ್ತಾ ತನ್ನ ಪ್ರೀತಿ ವ್ಯಕ್ತಪಡಿಸಿತು. ಅಲ್ಪ ಸಮಯದಲ್ಲೇ ಈ ಚೌಡಪ್ಪ ಅಪಾಯಕಾರಿಯಲ್ಲ ಎಂಬುದನ್ನು ಮನಗಂಡ ಬೆಕ್ಕು ಅವನೊಡನೆ ಚಿನ್ನಾಟವಾಡತೊಡಗಿತು. ' ಈ ಬೆಕ್ಕಿನ ಸಹವಾಸ ಕರಿಯಪ್ಪನಿಗಿಂತಲೂ ವಾಸಿ' ಎಂದರಿತ ಚೌಡಪ್ಪ ಅದರೊಡನೆ ಬಹಳ ಹೊತ್ತು ಕಳೆದನು. ಕರಿಯಪ್ಪ ಬಂದಮೇಲೂ ಈ ಬೆಕ್ಕು ಚೌಡಪ್ಪನ ಆಸುಪಾಸಿನಲ್ಲೇ ಸುಳಿಯುತ್ತಿತ್ತು.


ಚೌಡಪ್ಪನಿಗೆ ಈ ಪ್ರಾಣಿಗಳ ಸಹವಾಸ ಹೊಸದೇನೂ ಅಲ್ಲ. ಅವರ ಅಜ್ಜನ ಕಾಲದಲ್ಲೂ ನಾಯಿ-ಬೆಕ್ಕು ಮೊದಲಾದ ಸಾಕುಪ್ರಾಣಿಗಳಲ್ಲದೆ, ಮೊಲ, ಜಿಂಕೆ, ಕೋತಿಯಂತಹ ಕಾಡು ಪ್ರಾಣಿಗಳನ್ನೂ ಸಾಕುತ್ತಿದ್ದುದು ಈಗಲೂ ಅವನ ಮಿದುಳಿನಲ್ಲಿ ಹಸಿ ಹಸಿಯಾಗಿಯೇ ನೆನಪಿದೆ. ಈಗಲೂ ಸಹ ಅವನ ಮನೆಯಲ್ಲಿ ಅವನ ಮೂವರು ಹೆಣ್ಣುಮಕ್ಕಳೂ ಒಂದೊಂದು ನಾಯಿಮರಿ ಸಾಕಿದ್ದಾರೆ. ತಂಗಿ ಹಾಕಿದ ಅನ್ನವನ್ನು ಅಕ್ಕನ ನಾಯಿತಿಂದಿತೆಂದೋ, ಅಕ್ಕ ಹಾಕಿದ ತಿಂಡಿಯನ್ನು ತಂಗಿಯ ನಾಯಿ ತಿಂದಿತೆಂದೋ ದಿನಕೊಮ್ಮೆಯಾದರೂ ಕಿತ್ತಾಡುತ್ತಿರುತ್ತಾರೆ. ವಿಚಿತ್ರವೆಂದರೆ ಆ ನಾಯಿಗಳು ಮಾತ್ರ ಕಿಂಚಿತ್ತೂ ಕಿತ್ತಾಡದೇ ಹಂಚಿ ತಿಂದು ಸಾಮರಸ್ಯ ಉಳಿಸಿಕೊಂಡಿವೆ. ನಾಯಿಗಳು ಮಕ್ಕಳವಾದರೆ ತಾನೊಂದು ಬೆಕ್ಕನ್ನು ಸಾಕಬೇಕೆಂಬ ಹಂಬಲ ಚೌಡಪ್ಪನಿಗಿದೆಯಾದರೂ ಅವನ ಹೆಂಡತಿ ಮಾಲಕ್ಷ್ಮಿ ಮಾತ್ರ ಇದಕ್ಕೆ ಅವಕಾಶ ಕೊಡುತ್ತಿಲ್ಲ. ನಾಯಿಗಳಂತೆ ಬೆಕ್ಕು ಮನೆಯ ಹೊರಗಿರದೆ ಮನೆಯೊಳಗೆಲ್ಲಾ ಸುತ್ತಾಡುತ್ತಾ, ಇಲಿ, ಹಲ್ಲಿ ಮೊದಲಾದ ಕ್ಷುಲ್ಲಕ ಪ್ರಾಣಿಗಳನ್ನು ಬೇಟೆಯಾಡಿ, ಕಚ್ಚಿತಿಂದು, ಅದೇ ರಕ್ತಸಿಕ್ತ ಬಾಯಿಯನ್ನು ಹಾಲಿನ ತಪ್ಪಲೆಯೊಳಗೆ ಹಾಕಿ ಕಣ್ಣುಮುಚ್ಚಿ ಹಾಲು ಕುಡಿಯುವ ಅದರ ಕಳ್ಳಚಾಳಿ ಮಾಲಕ್ಷ್ಮಿಗೆ ಸುತಾರಾಂ ಒಪ್ಪಿಗೆಯಾಗುವುದಿಲ್ಲ. ಅಷ್ಟೇ ಅಲ್ಲದೆ ಅಕ್ಕಿಗೂಡು, ತೌಡಿನ ಡಬ್ಬಗಳಲ್ಲೆಲ್ಲಾ ಕಕ್ಕ ಮಾಡಿ ಮುಚ್ಚಿಡುವ ಮಾರ್ಜಾಲ ಮಹಾಶಯನನ್ನು ಮಡಿವಂತ ಮಾಲಕ್ಷ್ಮಿ ಹೇಗೆ ತಾನೇ ಸಹಿಸಿಕೊಂಡಾಳು..? ಹೀಗಾಗಿ ಹೆಂಡತಿಯ ಬೆದರಿಕೆಯಿಂದ ಬೆಕ್ಕು ಸಾಕುವ ಕೈಂಕರ್ಯಕ್ಕೆ ಚೌಡಪ್ಪ ಇದುವರೆಗೆ ಇಳಿದಿಲ್ಲವಾದರೂ ಒಳ್ಳೆಯ ಬೆಕ್ಕಿನ ಮರಿ ಸಿಕ್ಕರೆ ಕಟ್ಟಿಸಾಕಿಯಾದರೂ ಮುದ್ದಿಸಬೇಕೆಂಬ ಆಸೆ ಅವನ ಮನಸಿನ ಮೂಲೆಯಲ್ಲಿ ಇದ್ದೇ ಇದೆ.


***



ಚೌಡ-ಕರಿಯರ ಸರದಿ ಬಂದ ನಂತರ ಮೂಟೆಗಳನ್ನೆಲ್ಲಾ ಬಾಯಿ ಬಿಚ್ಚಿ ಗಿರಣಿಯ ಬುಡದ ಗುದ್ದಿಗೆ ಸುರಿದರು. ಒಂದೆಡೆ ಸುರಿದ ಭತ್ತ ಕ್ಷಣಾರ್ಧದಲ್ಲಿ ಗಿರಣಿಯ ಯಂತ್ರದ ಸಂದು-ಗೊಂದು ಗಳಲ್ಲೆಲ್ಲಾ ಸುತ್ತಾಡಿ ಇನ್ನೊಂದೆಡೆ ಬೆತ್ತಲಾಗಿ ಬುಳಬುಳನೆ ಬೀಳುತ್ತಿತ್ತು. ಉತ್ತಮ ಪಾಲಿಶ್ ಅಕ್ಕಿ ಒಂದೆಡೆ, ನುಚ್ಚು ಒಂದೆಡೆ, ತೌಡು ಒಂದೆಡೆ, ಕಲ್ಲು-ನೆಲ್ಲು ಒಂದೆಡೆ ಹೀಗೆ ಎಲ್ಲವೂ ಗಿರಣಿಯ ಒಳಗೇ ಯಂತ್ರದ ಒಂದೊಂದು ನಳಿಗೆಯಿಂದ ಹೊರಬರುತ್ತಿದ್ದರೆ, ಭತ್ತದ ಹೊಟ್ಟು ಮಾತ್ರ ಅದೆಲ್ಲೋ ದೂರದಲ್ಲಿ ಹೊರಗೆ ಹೋಗುತ್ತಿತ್ತು. ಚೌಡ-ಕರಿಯರು ಭತ್ತದ ಉತ್ಪನ್ನಗಳನ್ನು ಬೇರೆ ಬೇರೆ ಚೀಲಗಳಲ್ಲೇ ತುಂಬಿಕೊಂಡು ಗಾಡಿಗೆ ಹೇರಿದರು. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಕರಿಯಪ್ಪನಿಗೆ ಏನೋ ಜ್ಞಾನೋದಯವಾದಂತಾಗಿ " ಇರು ಒಂದ್ನಿಮಿಸ, ಮಕ್ಳಿಗೆ ಒಂದಿಸ್ಟು ತಿಂಡಿ ತರ್ತೀನಿ" ಎಂದನು. ಚೌಡಪ್ಪನೂ, ತನಗೂ ಸ್ವಲ್ಪ ಕಟ್ಟಿಸಿಕೊಂಡು ಬರುವಂತೆ ಹೇಳಿ, ದುಡ್ಡುಕೊಟ್ಟು ತಾನು ಅಕ್ಕಿ ಮೂಟೆಗಳನ್ನು ಕಾಯುತ್ತಾ ಗಾಡಿಯ ಮೂಕಿಯ ಮೇಲೆ ಕುಳಿತನು. ಮತ್ತೆ ಅದೆಲ್ಲಿತ್ತೋ ಆ ಬೆಕ್ಕಿನ ಮರಿ ಗಿರಣಿಯೊಳಗಿನಿಂದ ಓಡಿ ಬಂದು ಚೌಡನ ಕಾಲಿನ ಸಂದಿಯೊಳಗಿನಿಂದ ನುಸುಳಿ ಅವನೆದುರು ಬಂದು ನಿಂತಿತು. ಅರೆಕ್ಷಣ ಅದರ ಗಾಜಿನ ಕಣ್ಣುಗಳನ್ನೇ ನೋಡಿದ ಚೌಡಪ್ಪ ಅದನ್ನೆತ್ತಿಕೊಂಡು ಆಡಿಸತೊಡಗಿದನು. ಎರಡೂ ಕೈಗಳಲ್ಲೆತ್ತಿ ಹಾರಿಸಿ ಹಾರಿಸಿ ಕುಣಿಸಾಡಿದನು. ಬೆಕ್ಕು 'ಮ್ಯಾಂವ್ ಮ್ಯಾಂವ್ ಮ್ಯಾಂವ್' ಎಂದು ಕೂಗತ್ತಲೇ ತನ್ನ ಸಂತಸವನ್ನೂ ವ್ಯಕ್ತಪಡಿಸುತ್ತಿತ್ತು.



ಆ ಬೆಕ್ಕು ಅಕ್ಕಿಗಿರಣಿಯ ಮಾಲೀಕನ ಅಥವಾ ರೈಟರನ ಪ್ರೀತಿಯಿಂದಾಗಿ ಅಲ್ಲಿರುವುದಂತೂ ಖಂಡಿತಾ ಅಲ್ಲ. ದಿನಾಲು ಭತ್ತದ ಮೂಟೆಗಳನ್ನು ತೂತು ಕೊರೆದು ಕೇಜಿಗಟ್ಟಲೆ ಧವಸ ಹಾಳು ಮಾಡುತ್ತಿದ್ದ ಇಲಿಗಳ ಶಮನಕ್ಕಾಗಿ ಅದನ್ನು ರೈಟರನೇ ತಂದು ಗಿರಣಿಯಲ್ಲಿ ಸಾಕಿಕೊಂಡಿದ್ದನು. ರೈಟರನು ಒಮ್ಮೆ ತನ್ನ ಹಳ್ಳಿಗೆ ಹೋದಾಗ ನೆನಪಿನಿಂದ ಮೂರು ಬೆಕ್ಕಿನ ಮರಿಗಳನ್ನು ತಂದು ಗಿರಣಿಯೊಳಗೆ ಬಿಟ್ಟುಕೊಂಡಿದ್ದನು. ಪಕ್ಕದಲ್ಲೇ ಅವನ ಮನೆ ಇದ್ದುದರಿಂದ ಅವನ ಹೆಂಡತಿಯೇ ಅವಕ್ಕೆ ಹಾಲು ಅನ್ನ ಹಾಕುತ್ತಿದ್ದಳು. ಅನ್ನ ಹಾಕಿದರೆ ಇಲಿ ಹಿಡಿಯಲಾರವು, ತಂದ ಉದ್ದೇಶ ವ್ಯರ್ಥವಾಗುತ್ತದೆ ಎಂಬ ಸತ್ಯವನ್ನರಿತು ಇತ್ತೀಚೆಗೆ ಆಕೆ ಹಾಲು ಅನ್ನದ ಪೂರೈಕೆಯನ್ನೂ ನಿಲ್ಲಿಸಿದ್ದಳು. ಇದನ್ನರಿತ ಎರಡು ಮರಿಗಳು 'ನಮಗಿನ್ನು ಇದು ಸೂಕ್ತ ಜಾಗವಲ್ಲ' ಎಂಬ ವಾಸ್ತವವನ್ನರಿತು ಮೂರೇ ದಿನಕ್ಕೆ ಗಿರಣಿಯಿಂದ ಕಾಲ್ತೆಗೆದು ಬಿಟ್ಟವು. ಆದರೆ ಈ ಒಂದು ಮರಿಮಾತ್ರ ಅವುಗಳಂತೆ ಯೋಚಿಸದೆ ಒಡತಿಯಣತಿಯನ್ನು ತಿಳಿದು ಇಲಿ ಹಿಡಿಯುವ ಪ್ರಯತ್ನ ಮಾಡುತ್ತಾ ಇಲ್ಲೇ ಉಳಿಯಿತು. ಉಳಿದೆರಡನ್ನು ಯಾರೋ ಕದ್ದಿದ್ದಾರೆಂದು ರೈಟರ್ ಭಾವಿಸಿದ್ದನು. ಆದರೆ ಅವನ ಹೆಂಡತಿಗೆ ನಿಜಾಂಶ ಗೊತ್ತಾಗಿ ಇದೂ ಎಲ್ಲಾದರೂ ಓಡಿ ಹೋದೀತೆಂಬ ಭಯದಿಂದ ಮತ್ತೆ ಹಾಲಿನ ಪೂರೈಕೆ ಆರಂಭಿಸಿದ್ದಳು. ಬೆಕ್ಕೂ ಸಹ ಹಸಿವಿಗೆ ಸಾಧ್ಯವಾದರೆ ಇಲಿ ಹಿಡಿದು ತಿಂದು, ಬಾಯಾರಿಕೆಗೆ ಹಾಲು ಕುಡಿಯುವುದನ್ನು ರೂಢಿಮಾಡಿಕೊಂಡಿತು.


ಇಂದು ಬೆಕ್ಕಿಗೆ ಹಾಲೆರೆಯಲು ಬಂದ ರೈಟರನ ಹೆಂಡತಿ ಮ್ಯಾಂವ್.. ಮ್ಯಾಂವ್... ಎಂದು ಗಿರಣಿಯ ತುಂಬಾ ಬೆಕ್ಕನ್ನು ಕೂಗಿದಳು. ಅವಳ ಕೂಗು 'ಗಿರಣಿಯ ಶಬ್ದದಿಂದಾಗಿ ಬೆಕ್ಕಿಗೆ ಕೇಳಿಸದು' ಎಂದರಿತ ಅವಳ ಗಂಡ ಗಿರಣಿಯ ತುಂಬೆಲ್ಲಾ ಹುಡುಕಾಡಿದನು. ಭತ್ತದ, ಅಕ್ಕಿಯ ಮೂಟೆಗಳ ಸಂದಿ-ಗೊಂದಿಯನ್ನೆಲ್ಲಾ ಇಣುಕಿ ಇಣುಕಿ ನೋಡಿದನು. ಈ ಮೂರು ಬೆಕ್ಕುಗಳನ್ನು ಹಳ್ಲಿಯಿಂದ ತರಲು ತಾನು ಪಟ್ಟ ಪಡಿಪಾಟಲುಗಳೆಲ್ಲಾ ಅವನಿಗೆ ನೆನಪಾಗಿ "ದರಿದ್ರದ್ದು ಎಲ್ಲಿ ಹಾಳ್ಬಿತ್ತೋ, ಹಗ್ಲೆಲ್ಲಾ ಕಟ್ಟಾಕ್ಬೇಕಿತ್ತು" ಎಂದು ಗೊಣಗುತ್ತಾ ಹೊರಬಂದು ನೋಡಲು, ಬೆಕ್ಕಿನ ಮರಿಗಳನ್ನು ಎರಡೂ ಕೈಗಳಿಂದ ಅವುಚಿಕೊಂಡ ಚೌಡನು, ಕರಿಯ ಬಂದನೇನೋ ಎಂದು ನೋಡಲು ಹತ್ತು ಹಜ್ಜೆ ಮುಂದೆ ರಸ್ತೆಯ ಕಡೆಹೋಗಿ ಇಣುಕುತ್ತಿದ್ದ. ಕರಿಯಪ್ಪ ಬರುತ್ತಿದ್ದುದು ನಿಚ್ಚಳವಾಗಿ ಕಾಣುವಷ್ಟರಲ್ಲಿ ಗಿರಣಿ ಕಡೆಯಿಂದ ವೇಗವಾಗಿ ಓಡಿ ಬಂದ ರೈಟರ್ " ಬೋ... ಮಗನೇ ಬೆಕ್ ಕದ್ಕೊಂಡು ಹೋಗೋಕ್ ನೋಡ್ತೀಯಾ" ಎನ್ನುತ್ತಲೇ ಚೌಡನ ಬೆನ್ನಿಗೆ ಬಲವಾಗಿ ಗುದ್ದಿದನು. ಅವನ ಗುದ್ದಿನ ರಭಸಕ್ಕೆ ಚೌಡನ ಕೈಯಲ್ಲಿದ್ದ ಬೆಕ್ಕು ಕೆಳಗೆ ಬಿದ್ದು ಮ್ಯಾಂವ್ ಗುಡುತ್ತಾ ಗಾಬರಿಯಿಂದ ಓಡಲಾರಂಭಿಸಿತು. ಏನು, ಎತ್ತ ಎನ್ನುತ್ತಾ ಚೌಡ ತಿರುಗುವುದರೊಳಗೆ ರೈಟರನ ಕೈ 'ಫಟಾರ್' ಎಂಬ ಶಬ್ದದೊಡನೆ ಅವನ ಕೆನ್ನೆ ಸವರಿತು. ಇದನ್ನು ದೂರದಿಂದಲೇ ಗಮನಿಸಿದ ಕರಿಯ ಓಡಿ ಬರುವುದರೊಳಗೆ ಸುತ್ತ-ಮುತ್ತಲಿನ ಜನರೆಲ್ಲಾ ಸೇರಿದರು. "ಸೂ.... ಮಗ ಬಿಟ್ಟಿ ಸಿಕ್ತು ಅಂತ ಬೆಕ್ಕು ಕದ್ದು ಹೋಗಾಕ್ ನೋಡ್ತಾನೆ. ಇವರಪ್ಪ ಹಾಲು-ಅನ್ನ ಹಾಕಿ ಸಾಕಿದ್ನಾ..?" ಎಂದು ಏದುಸಿರು ಬಿಡುತ್ತಾ ರೈಟರ್ ಬಯ್ಯುತ್ತಿದ್ದುದರಿಂದಲೇ ಗಲಾಟೆಯ ಕಾರಣ ನೆರೆದವರಿಗೆ ತಿಳಿಯಿತು. ಚೌಡಪ್ಪನಿಗೆ ಮಾತೇ ಹೊರಡದಂತಾಗಿ, ನಿಜ ಸಂಗತಿ ಹೇಳಲು ತಡವರಿಸತೊಡಗಿದನು. ರೈಟರ್ ಬಯ್ಯು ಬಯ್ಯುತ್ತಲೇ ಇದ್ದನಾದರೂ, ಅವನ ಹೆಂಡತಿ ಹತ್ತಿರ ಬಂದು "ಬರ್ರೀ ಸಾಕು" ಎಂದಾಗ ಹೆಂಡತಿಯ ಮಾತಿಗೆ ಬೆಲೆಕೊಡುವವನಂತೆ ಗಿರಣಿಯ ಒಳಹೊಕ್ಕನು. ನೆರೆದ ಜನರು " ಇಂತಹ ಬಡ್ಡಿ ಮಕ್ಳೂ ಇರ್ತಾರಾ..?" ಎರಡು ತದಕಿದ್ದು ಸರಿ ಆಯ್ತು, ಇವತ್ತು ಇದ್ನ ಕದಿತಾರೆ, ನಾಳೆ ಇನ್ನೊಂದು ಕದಿತಾರೆ" ಎಂದು ಗೊಣಗುತ್ತಾ ಚದುರಿದರು. ಕರಿಯನಿಗೆ ಚೌಡನ ಮುಖನೋಡಲೂ ಅಸಹ್ಯವಾದಂತಾಗಿ "ನಿಮ್ಮಂತೋರ್ನ ಕಟ್ಕೊಂದು ಬಂದ್ರೆ ನಮ್ ಮರ್ಯಾದೀನೂ ತೆಗಿತೀರಲ್ಲ" ಎಂದು ಚುಚ್ಚುತ್ತಾ ಚೌಡನಿಗಾಗಿ ತಂದಿದ್ದ ತಿಂಡಿ ಪೊಟ್ಟಣವನ್ನು ಅವನ ಗಾಡಿಗೆ ಎಸೆದು, ಎತ್ತಿನ ಕೊರಳಿಗೆ ನೊಗವನ್ನಿಟ್ಟು ಹತ್ತಿ ಕುಳಿತನು. ಚೌಡನೂ ಏನೊಂದೂ ಹೇಳಲು ಅಸಾಹಯಕನಾದವನಂತೆ ಗತ್ಯಂತರವಿಲ್ಲದೆ ಅವನ ಗಾಡಿಯನ್ನು ಹಿಂಬಾಲಿಸಿದನು. ಬಹಳ ದೂರದವರೆಗೆ ಹೋದರೂ ಯಾರೊಬ್ಬರೂ ಮಾತನಾಡಲಿಲ್ಲ. ಆದರೂ ಚೌಡ ಮನಸ್ಸಿನಲ್ಲೇ ಮಾತನಾಡಿಕೊಳ್ಳಿತ್ತಿದ್ದನು. ಅವನ ಮನಸ್ಸೆಂಬ ಸಾಗರದೊಳಗೆ ಸಾವಿರಾರು ಸುನಾಮಿಗಳು ಬೋರ್ಗರೆಯುತ್ತಿದ್ದವು. ತನ್ನನ್ನೇ ತಾನು ಹಳಿದುಕೊಳ್ಳುತ್ತಿದ್ದನು. " ಎಲ್ಲಾ ನನ್ನ ಗ್ರಾಚಾರ"ಎಂದು ವಿಮುಖನಾಗುತ್ತಿದ್ದನು. "ಅದ್ಯಾವ ಗಳಿಗೆಯಲ್ಲಿ ಎದ್ದು ಬಂದಿದ್ನೋ ಏನೋ, ಕರಿ ಎತ್ತು ಹೊರ ಬರಲು ಹಿಂದೇಟು ಹಾಕಿದಾಗಲೇ ಅರ್ಧತಾಸು ಕುಳಿತಾದ್ರೂ ಬರ್ಬೇಕಿತ್ತು" ಎನಿಸಿತು ಅವನಿಗೆ. "ಬೋ... ಮಗ ತಳ ಬುಡ ವಿಚಾರಿಸ್ದೆ ಹೊಡುದ್ನಲ್ಲಾ" ಎಂಬ ನೋವು ಪದೇ ಪದೇ ಅವನನ್ನು ಕಾಡುತ್ತಿತ್ತು. ಎತ್ತಿನ ಗಾಡಿಗಳ ಏಕತಾನತೆಯ ಸದ್ದನ್ನು ಬಿಟ್ಟರೆ ಉಳಿದಂತೆ ಮೌನವಾಗಿ ಚಲಿಸುವ ಆ ಸನ್ನಿವೇಶದಲ್ಲಿ ಮರ,ಗಿಡ, ಪಶು, ಪಕ್ಷಿಗಳಿಂದೊಡಗೂಡಿದ ಈ ಪರಿಸರವೇ ತಿರಸ್ಕಾರ ಭಾವದಿಂದ ತನ್ನನ್ನು ನೋಡುತ್ತಿರುವಂತೆ ಅವನಿಗೆ ಭಾಸವಾಯಿತು. ಕರಿಯ ಈ ಘಟನೆಯನ್ನು ಊರಿನಲ್ಲಿ ಎಲ್ಲರಿಗೂ ಹೇಳಿದರೆ ತನ್ನ ಮರ್ಯಾದೆ ಏನಾಗಬೇಕು..? ಊರಿನಲ್ಲಿ ಕಳ್ಳನೆಂಬ ಹಣೆಪಟ್ಟಿ ಧರಿಸಿ ಮುಖವೆತ್ತಿ ತಿರುಗುವುದಾದರೂ ಹೇಗೆ..? ಎಂಬ ಪ್ರಶ್ನೆ ಎದುರಾಗಿ ಒಂದು ಕ್ಷಣ ಬೆವರಿದನು. ತನಗರಿವಿಲ್ಲದಂತೆ "ಕರಿಯಾ ಗಾಡಿ ನಿಲ್ಸು" ಎಂದು ಕೂಗಿದನು. ಇಲ್ಲಿಯವರೆಗೆ ಚೌಡನೇ ಮಾತನಾಡಲೆಂದು ಸುಮ್ಮನಿದ್ದ ಕರಿಯ "ಕೆರೆ ಹತ್ರ ನಿಲ್ಸಾನ" ಎಂದಷ್ಟೇ ಹೇಳಿ, ಅರ್ಧತಾಸಿನೊಳಗೆ ಕೆರೆಯ ಬಳಿ ಬಂದ ಬಳಿಕ ಗಾಡಿ ನಿಲ್ಲಿಸಿದನು, ಇಬ್ಬರೂ ಎತ್ತುಗಳ ಕೊರಳು ಬಿಟ್ಟು ಕೆರೆಯ ಅಂಗಳಕ್ಕೆ ಇಳಿದರು. ಎತ್ತಿನ ಮೈ ತಿಕ್ಕುವಾಗ ಚೌಡ ನಡೆದ ಎಲ್ಲಾ ಸಂಗತಿಯನ್ನು ಕರಿಯನಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳಿದ. ಊರಿನಲ್ಲಿ ಯಾರೊಡನೆಯೂ ಬಾಯಿ ಬಿಡಬಾರದೆಂದು ಅಂಗಲಾಚಿದನು. ಮುಂದಿನ ಮಳೆಗಾಲದ ನಟ್ಟಿ ಗದ್ದೆಗೆ ಉಚಿತವಾಗಿ ನಾಲ್ಕು ಗಳೇವು ಬರುವುದಾಗಿ ಆಶ್ವಾಸನೆ ಕೊಟ್ಟ. ಚೌಡಪ್ಪ ಹೀಗೆ ದೈನ್ಯನಾಗಿರುವುದು ಈ ಸಮಯದಲ್ಲಿ ಕರಿಯನ ಪ್ರತಿಷ್ಠೆಯನ್ನು ಹೆಚ್ಚಿಸಿತು. "ಆಯ್ತು ಬಿಸ್ಲೇಳ್ತಾ ಐತಿ, ಬಾ ಗಾಡಿ ಕಟ್ಟು ಹೋಗಾನ" ಎಂದಷ್ಟೇ ಹೇಳಿ ತನ್ನ ಎತ್ತುಗಳನ್ನು ಕೆರೆಯಂಗಳದಿಂದ ಎಳೆದು ತಂಬಕ್ಕೆ ತಂದು ಅವುಗಳ ಕುತ್ತಿಗೆಗೆ ಗಾಡಿಯ ನೊಗವನ್ನಿಟ್ಟನು. ಚೌಡನೂ ತನ್ನ ಗಾಡಿಯ ಹೂಡಿ, ಅದರ ಮೇಲೆ ಹಾರಿ ಕುಳಿತು ಹೊರಟನಾದರೂ ಅವನ ಮನಸ್ಸಿನ ಮೂಲೆಯಿಂದ ಆತಂಕ, ಅನುಮಾನ, ಶಂಕೆ ಮೊದಲಾದವು ಹೊರಡಲಿಲ್ಲ. ಮುಂದಿನ ಕಲ್ಲು ಹಾದಿಯಲ್ಲಿ ದಡ್ ದಡ್ ಎಂದು ಗಾಡಿಯ ಚಕ್ರಗಳು ಕಲ್ಲಿನಿಂದ ಕಲ್ಲಿಗೆ ನೆಗೆಯುತ್ತಾ ಮನೆ ತಲುಪುವುದರೊಳಗೆ ಸಂಜೆಯ ಸೂರ್ಯ ಬಾನಂಗಳದಲ್ಲಿ ಇಳಿಯಲು ಬಹಳ ಹೊತ್ತು ಇರಲಿಲ್ಲ. ಮನೆಗೆ ಬಂದೊಡನೆ ಗಂಡನ ಮುಖ ಸಪ್ಪಗಿರುವುದನ್ನು ಮಾಲಕ್ಷ್ಮಿ ಕಂಡಳಾದರೂ ಕಾರಣ ಕೇಳಲು ಹೋಗದೆ 'ದೂರದಿಂದ ಬಂದಿದ್ದರಿಂದ ಸುಸ್ತಾಗಿರಬಹುದು' ಎಂದು ಕೊಂಡಳು. ಮಕ್ಕಳು ಯಾವುದನ್ನೂ ಗಮನಿಸಿದೆ ತಿಂಡಿ ಪೊಟ್ಟಣಕ್ಕೆ ಮುಗಿಬಿದ್ದವು.


***



ಒಂದು ವಾರ ಕಳೆದರೂ ಕರಿಯ ಯಾರೊಡನೆಯೂ ಹೇಳದೆ ತನ್ನ ಮಾನ ಕಾಪಾಡಿದ್ದು ಚೌಡನಿಗೆ ಸಮಾಧಾನ ತಂದಿತಾದರೂ ಯಾರಾದರೂ ಇಬ್ಬರು-ಮೂವರು ಸೇರಿ ಮಾತನಾಡುವಾಗ ತನ್ನ ವಿಷಯವೇನೋ ಎಂದು ಕಿವಿಗೊಡುವುದು ತಪ್ಪಿರಲಿಲ್ಲ. ಕರಿಯನಾದರೂ ಅಷ್ಟೇ ಬಹುದಿನಗಳ ವರೆಗೆ ಈ ವಿಷಯವನ್ನು ತನ್ನ ಅಂತರಾಳದಲ್ಲಿಟ್ಟುಕೊಳ್ಳಲು ಬಹಳ ತ್ರಾಸು ಪಡುತ್ತಿದ್ದನು. ಅವನ ಜಾಯಮಾನವೇ ಅಂತಹದ್ದು. ಯಾವ ಗೌಪ್ಯ ಸಂಗತಿಯೂ ಅವನ ಮನಸ್ಸಿನಲ್ಲಿರುತ್ತಿರಲಿಲ್ಲ. ಅಥವಾ ಮನಸ್ಸಿಗಿಳಿಯುತ್ತಲೇ ಇರಲಿಲ್ಲ. ತುದಿ ನಾಲಿಗೆಯಲ್ಲೇ ಕುಳಿತು ಬಹುಬೇಗ ಇನ್ನೊಬ್ಬರ ಕಿವಿಗೆ ಹಾರುತ್ತಿತ್ತು. ಚೌಡನ ಸಂಗತಿಯನ್ನೂ ಕೆಲವೊಮ್ಮೆ ಹೇಳಿಬಿಡುವ ಮನಸ್ಸಾದರೂ ಚೌಡನಿಂದ ಬರುವ ಸಕಲ ಸೌಲತ್ತನ್ನು ಪಡೆದು ಅನಂತರ ಹೇಳೋಣವೆಂಬ ದೂರಾಲೋಚನೆಯಿಂದ ಸುಮ್ಮನಿದ್ದನು. ಆದರೂ ಒಂದು ದಿನ ನಾಗಶೆಟ್ಟಿಯ ಅಂಗಡಿಯಲ್ಲಿ ಒಬ್ಬನೇ ಕುಳಿತು ಅವನು ಕೊಟ್ಟ ಖಾರ, ಈರುಳ್ಳಿ, ಕೊಬ್ಬರಿ ಎಣ್ಣೆ ಹಾಕಿ ಕಲೆಸಿದ ಗರಿಗರಿ ಮಂಡಕ್ಕಿಯನ್ನು ಮೆಲ್ಲುತ್ತಿದ್ದಾಗ ಚೌಡ ಬೆಕ್ಕು ಕದ್ದು ಸಿಕ್ಕಿ ಬಿದ್ದ ಪ್ರಸಂಗವನ್ನು ಎಳೆಎಳೆಯಾಗಿ ಹೇಳಿಬಿಟ್ಟನು. ನಾಗಶೆಟ್ಟಿಯ ಬರಡು ಬಾಯಿಗೆ ಮೆಲುಕು ಹಾಕಲು ಕರಿಯನಿಂದ ಒಳ್ಳೆಯ ಸರಕು ಸಿಕ್ಕಂತಾಯ್ತು.



ನಾಗಶೆಟ್ಟಿಯು ಶ್ರೀ ಲಕ್ಷ್ಮೀ ಕಿರಾಣಿ ಅಂಗಡಿಯ ಮಾಲೀಕ. ಯಾವಾಗಲೂ ಅಂಗಡಿಯ ಗಲ್ಲಿಯ ಮೇಲೆ ಕುಳಿತಿರುವ ಇವನಿಗೆ ಹಾಳು ಮೂಳು ವಿಚಾರಗಳನ್ನು ರಸವತ್ತಾಗಿ ವರ್ಣಿಸುತ್ತಾ ಹರಟೆ ಹೊಡೆಯುವುದೇ ಒಂದು ಕೆಲಸ. ಊರಿನ ಹರೆಯದ ಹುಡುಗರ ಪ್ರೇಮ ಪ್ರಕರಣವಿರಲಿ, ಯಾರದೋ ಮನೆಯ ಗಂಡ-ಹೆಂಡಿರ, ಅತ್ತೆ-ಸೊಸೆಯರ ಜಗಳವಿರಲಿ, ಅತೃಪ್ತ ಮನಸ್ಸುಗಳ ಅನೈತಿಕ ಸಂಬಂಧಗಳಿರಲಿ ಅವೆಲ್ಲವೂ ಇವನ ನಾಲಿಗೆಯ ತುದಿಯಲ್ಲಿ ಸುಳಿದಾಡುತ್ತಿದ್ದವು. ರಸಿಕ ಬುದ್ದಿಯ ನಾಗಶೆಟ್ಟಿ ಬೇರೆಯವರ ವಿಷಯಗಳನ್ನು ಉಪ್ಪುಖಾರ ಸೇರಿಸಿ ಬಂದವರೆದುರಿಗೆಲ್ಲಾ ಹಂಚುತ್ತಿದ್ದನೇ ಹೊರತು, ತನ್ನ ಆಂತರಿಕ ವಿಷಯಗಳನ್ನೆಂದೂ ಯಾರೆದುರೂ ಬಹಿರಂಗಗೊಳಿಸಿಕೊಂಡಿದ್ದವನಲ್ಲ. ಆದರೂ ಇವನ ಚಪಲ ಬುದ್ದಿ ಊರಿನ ಕೆಲ ಹೆಂಗಸರಿಗೆ ಗೊತ್ತಿಲ್ಲದ್ದೇನಲ್ಲ. ನಾಗಶೆಟ್ಟ ತನ್ನ ದಪ್ಪ ಗಾಜಿನ ಕನ್ನಡಕದ ಹಿಂದೆ ಅಡಗಿರುವ ಕಪ್ಪನೆಯ ಕಣ್ಣುಗಳಿಂದ ವ್ಯವಹಾರಕ್ಕೆ ಅಂಗಡಿಗೆ ಬರುವ ತರುಣಿಯರ ಸದೃಡ ಮೈಕಟ್ಟಿನ ಉಬ್ಬುತಗ್ಗುಗಳನ್ನು ಅಳೆಯುವುದು ಬಹಳಷ್ಟು ಹುಡುಗಿಯರ ಗಮನಕ್ಕೂ ಬಂದಿತ್ತು. ನಾಟಿಗದ್ದೆ, ಭತ್ತದ ಕೋಯ್ಲಿನ ಸಂದರ್ಭಗಳಲ್ಲೆಲ್ಲಾ ಚರ್ಚಿತವೂ ಆಗಿತ್ತು.


ಇಂತಹ ನಾಗಶೆಟ್ಟಿಗೆ ಚೌಡನ ವಿಷಯ ಗೊತ್ತಾಗುತ್ತಿದ್ದಂತೆ ಅಂಗಡಿಯಲ್ಲಿ ಬಂದು ಹರಟೆಗೆ ಕುಳಿತವರೆದುರು "ಹೌದೇ ಹಿಂಗಂತೆ..?" ಎಂದು ಚೌಡನ ಕಳ್ಳತನದ ಕಥೆಯನ್ನು ಹೇಳುತ್ತಿದ್ದನು. ನಾಗಶೆಟ್ಟಿಯ ಮಾತು ಒಬ್ಬನ ಕಿವಿಯಿಂದ ಒಬ್ಬನಿಗೆ ಹರಡಿ ಚೌಡನ ಕಿವಿಯನ್ನು ತಲುಪಲು ಬಹಳ ಸಮಯ ಹಿಡಿಯಲಿಲ್ಲ. ಮರುದಿನ ಬೆಳಿಗ್ಗೆ ಅವನು ಮುಖ ತೊಳೆಯುವುದರೊಳಗೆ ಚೌಡನಿಗೆ ವಿಷಯ ತಿಳಿದಿತ್ತು. ನಾಗಶೆಟ್ಟಿಯ ಮಾತುಗಳಿಂದ ಕೆರಳಿದ ಚೌಡ ಆಗಲೇ ಅವನ ಅಂಗಡಿಗೆ ಹೋಗಿ ಅವನನ್ನು ಹೊರಗೆಳೆದು ನಾಲ್ಕು ಬಾರಿಸಿಯೇ ಬಿಟ್ಟನಲ್ಲದೇ ಬಾಯಿಗೆ ಬಂದಂತೆ ಬಯ್ಯಲಾರಂಭಿಸಿದನು. ಮೂರನೆಯವರಾರ ಮಧ್ಯಪ್ರವೇಶವಿಲ್ಲದಿದ್ದುದರಿಂದ ಗಲಾಟೆ ತಣ್ಣಗಾಯಿತು. ಬಹಳ ವರ್ಷದ ನಂತರ ತನಗೆ ಈ ತರದ ಕೋಪ ಬಂದಿದೆಯೆಂಬುದು ಚೌಡನಿಗೆ ಗೊತ್ತಾಗುತ್ತಿತ್ತು. ಕರಿಯ ಹೇಳಿದ ಸಂಗತಿಯಷ್ಟನ್ನೇ ನಾಗಶೆಟ್ಟಿ ಹೇಳಿದ್ದರೆ ಚೌಡನಿಂದ ಹೀಗೆ ಬೈಯಿಸಿಕೊಳ್ಲುವ, ಹೊಡೆಸಿಕೊಳ್ಳುವ ಪ್ರಮೇಯ ಅವನಿಗೆ ಬರುತ್ತಿರಲಿಲ್ಲವೇನೋ, ಆದರೆ ನಾಗಶೆಟ್ಟಿ ಹೀಗೆ ಯೋಚಿಸಿದ್ದ 'ಚೌಡ ಕೇವಲ ಬೆಕ್ಕು ಮುಟ್ಟಿದ್ದರಿಂದ ರೈಟರ್ ಯಾಕೆ ಹೊಡಿತಾನೆ. ಪಕ್ಕದಲ್ಲೇ ಅವನ ಮನೆ ಇದ್ದುದರಿಂದ ಚೌಡನೇನೋ ಅವನ ಹೆಂಡತಿಯೊಡನೆ ಕಿತಾಪತಿ ಮಾಡಿದ್ದಾನೆ, ಅದಕ್ಕೇ ಸರಿಯಾಗಿ ಬಿಗಿದಿದ್ದಾನೆ'. ಎಂದು ಊಹಿಸಿಕೊಂಡಿದ್ದ, ಚೌಡನ ಕತೆ ಹೇಳುವಾಗಲೆಲ್ಲಾ ಕೊನೆಗೆ "ಚೌಡ ರೈಟರನ ಹೆಂಡ್ತಿಗೆ ಕೈ ಸನ್ನೆ ಮಾಡಿದ್ನಂತೆ" ಎಂದು ಸೇರಿಸಿಯೇ ಹೇಳಿದ್ದನು. ಇದರಿಂದ ಚೌಡನ ಪಿತ್ತ ನೆತ್ತಿಗೇರಿದ್ದರಲ್ಲಿ ಆಶ್ಚರ್ಯವಿರಲಿಲ್ಲ. ಮೊದಲೇ ಅವಮಾನದಿಂದ ನೊಂದ ಅವನ ಮನಸ್ಸನ್ನು ನಾಗಶೆಟ್ಟಿಯ ಮಾತುಗಳು ಕೋಪದ ತುದಿಗೇರಿಸಿಬಿಟ್ಟಿದ್ದವು.


ಜಗಳ ಕಾಯ್ದು ಮನೆಗೆ ಹೊರಟ ಚೌಡ, ಕರಿಯನ ಮನೆಗೆ ಹೋದರೆ ಅಲ್ಲಿ ಅವನಿರಲಿಲ್ಲ. ಗದ್ದೆಯಲ್ಲೆಲ್ಲಾ ಸುತ್ತಾಡಿ ಮನಸ್ಸಿನಲ್ಲಿ ಏನೇನನ್ನೋ ಯೋಚಿಸಿ ಮನೆಕಡೆ ಬಂದ ಅವನು ಹೆಂಡತಿ ಮಾಲಕ್ಷ್ಮಿಯ ಯಾವ ಮಾತಿಗೂ ಉತ್ತರಿಸದೆ ನೀರು ಕುಡಿದು ಮಕಾಡೆ ಮಲಗಿದನು. ನೊಂದ ಮನಸ್ಸಿನಿಂದ ಮಲಗಿದ ಅವನ ಎದೆಯೊಳಗೆ ಅವಮಾನದ ನೋವೊಂದು 'ಛಳಕ್' ಎಂದು ಎದ್ದು ಕೂತಂತಾಯ್ತು.


ಮಧ್ಯಾಹ್ನ ಎಚ್ಚರಾಗುವ ವೇಳೆಗೆ ಚೌಡನ ಮನೆಗೆ ಓಡೋಡಿ ಬಂದ ಗೌಡರ ಆಳು ಬೈರ "ಚೌಡಣ್ಣ ಪಂಚಾಯ್ತಿ ಕಟ್ಟಿಗೆ ಬರಬೇಕಂತೆ" ಎಂದಷ್ಟೇ ಹೇಳಿ ಬಂದ ವೇಗದಲ್ಲೇ ವಾಪಸ್ಸಾದನು. ಚೌಡ ಅಲ್ಲಿಗೆ ಹೋಗುವಷ್ಟರಲ್ಲಿ ಊರ ಜನರೆಲ್ಲಾ ಹಳ್ಳಿಯ ಅರಳಿಕಟ್ಟೆಯ ಬಳಿ ಪಂಚಾಯಿತಿಗೆ ಸೇರಿದ್ದರು. ಚೌಡನಿಂದ ಹೊಡೆಸಿಕೊಂಡ ನಾಗಶೆಟ್ಟಿ, ಚೌಡನನ್ನು ಮತ್ತೂ ಅವಮಾನಪಡಿಸಬೇಕೆಂಬ ದುರುದ್ದೇಶದಿಂದ ಪಂಚಾಯಿತಿ ಸೇರಿಸಿದ್ದನು. ಪಂಚಾಯಿತಿ ಮಾಡುವ ಪಂಚರೆದುರು ನಾಗಶೆಟ್ಟಿ ಮತ್ತು ಚೌಡರು ಹೇಳಬೇಕಾದದ್ದನ್ನೆಲ್ಲಾ ಹೇಳಿದ ಮೇಲೆ ನಾಗಶೆಟ್ಟಿಗೆ ಚೌಡನ ವಿಷಯ ಹೇಳಿದ ಕರಿಯಪ್ಪನನ್ನು ಕರೆತರಲು ಊರಲ್ಲೆಲ್ಲಾ ಹುಡುಕಿದರು. ಕೊನೆಗೆ ಆತ ತನ್ನ ತಂಗಿಯ ಮನೆಯಲ್ಲೋಗಿ ಅಡಗಿ ಕುಳಿತಿದ್ದು ತಿಳಿದು ಅಲ್ಲಿಂದ ಎಳೆದು ತಂದರು. ಪಂಚಾಯ್ತಿ ಕಟ್ಟೆಯಲ್ಲಿ ಕರಿಯ ತನಗೆ ತಿಳಿದಿದ್ದೆಲ್ಲವನ್ನೂ ಹೇಳಿ "ಚೌಡ ಬೆಕ್ಕು ಕದ್ದದ್ದು ಹೌದು, ರೈಟರ್ ಹೊಡೆದದ್ದೂ ಹೌದು. ಆದ್ರೆ ರೈಟರನ ಹೆಂಡ್ತಿಗೆ ಅವ್ನು ಕೈಸನ್ನೆ ಮಾಡಿದ್ದು ಸುಳ್ಳು. ನಾನು ಹಂಗೆ ಹೇಳ್ಲೇ ಇಲ್ಲ, ಅವುನೇ ನಾಗ್ ಶೆಟ್ಟಿ ಹಿಂಗ್ಯಲ್ಲಾ ಸೇರಿಸಿ ಹೇಳ್ಯಾನೆ' ಎಂದು ನಾಗಶೆಟ್ಟಿಯೆಡೆ ಕೈ ತೋರಿದನು. ಎಲ್ಲವನ್ನೂ ಕೇಳಿ ತಿಳಿದ ಹಿರಿಯರು 'ಪಟ್ನಕ್ಕೆ ಹೋದಲ್ಲಿ ಕದಿಯೋ ಚಾಳಿ ಮಾಡಿದ್ದು ಚೌಡನದೂ ತಪ್ಪು, ಹಾಗೆಯೇ ನಾಗಶೆಟ್ಟಿ ಏನೇನೋ ಹೇಳಿ ಚೌಡನ ಮರ್ಯಾದೆ ಕಳೆಯಲು ಹೋಗಿದ್ದೂ ತಪ್ಪೆಂದು ತಿರ್ಮಾನಿಸಿ ಇಬ್ಬರಿಗೂ ದಂಡ ಹಾಕಿದರು. ಪಂಚಾಯಿತಿ ಮುಗಿದು ಚದುರಿದ ಜನರಲ್ಲಿ ಕೆಲವರು "ಚೌಡನಿಗೇಕೆ ಇಂತ ಕದಿಯೋ ದುರ್ಬುದ್ದಿ ಬಂತೋ" ಎನ್ನುತ್ತ ನಡೆದರೆ, ಇನ್ನೂ ಕೆಲವರು "ಚೌಡ ಹಂಗೆಲ್ಲ ಮಾಡೋ ಮನ್ಸನೇ ಅಲ್ಲ" ಎಂದು ತಮ್ಮ ತಮ್ಮಲ್ಲೇ ಮಾತಾಡ್ತ ಮುಂದುವರೆದರು.


ಪಂಚಾಯಿತಿ ಕಟ್ಟೆಯಿಂದ ಹೊರಬಂದ ಚೌಡ ನೇರವಾಗಿ ತನ್ನ ಗದ್ದೆಯ ಕಡೆ ನಡೆದನು. ಸರ್ಕಾರ ನಿರ್ಮಿಸಿಕೊಟ್ಟಿದ್ದ 'ಕೃಷಿ ಹೊಂಡದ' ಏರಿಯ ಮೇಲೆ ಕುಳಿತನು. ಯೋಚನೆಗಳ ದಟ್ಟಣೆ ಮನಸ್ಸಿನಲ್ಲಿ ಹೆಚ್ಚಾದಂತೆ 'ಆತ್ಮ ಹತ್ಯೆ ಮಾಡಿಕೊಳ್ಳಲೇ' ಎಂದೂ ಯೋಚಿಸಿದನು. ಸಾಯಲು ಬಯಸಿ ಸಾಯದೇ ಬದುಕುಳಿದರೆ ಅದು ಇನ್ನೂ ಅವಮಾನವೆನಿಸಿತು. ಎದೆಯಲ್ಲಿ ಸಣ್ಣಗೆ ಏನೋ ಚುಚ್ಚುತ್ತಿರುವಂತೆನಿಸಿ. ತನ್ನ ದೇಹದಲ್ಲಿ ತನಗರಿವಿಲ್ಲದೇ ಯಾವುದೋ ಕ್ರಿಯೆ ನಡೆಯುತ್ತಿರುವುದು ಭಾಸವಾಯಿತು. ಬಹಳ ಹೊತ್ತು ಯೋಚನೆಗಳ ಆಳದಲ್ಲಿ ಮುಳುಗಿ ಸುಮ್ಮನೇ ಕುಳಿತಿದ್ದನು. ಸುತ್ತಲೂ ಕತ್ತಲು ಮುಸುಕಲಾರಂಭಿಸಿದಾಗ 'ಆದದ್ದಾಗಲಿ' ಎಂದು ಮನೆಗೆ ಹೋಗಲು ಹಿಂದೆ ತಿರುಗಿದರೆ, ಮಾಲಕ್ಷ್ಮಿ ಅಳುತ್ತಾ ಬರುತ್ತಿರುವುದು ಮಸುಕಾಗಿ ಕಾಣಿಸಿತು. ಹತ್ತಿರ ಬಂದ ಅವಳೊಡನೆ ಒಂದೂ ಮಾತನಾಡದೆ ಅವಳ ಕೈ ಹಿಡಿದು ಮನೆಗೆ ಹೋದನು. ಮಕ್ಕಳೊಡನೆ ಕುಳಿತು ಹೊಟ್ಟೆತುಂಬಾ ಊಟ ಮಾಡಿದನು. ಊಟದ ವೇಳೆ ಒಂದೂ ಮಾತನಾಡದೆ ಗಂಡ ಈ ಪರಿ ಉಂಡಿದ್ದನ್ನು ಮಾಲಕ್ಷ್ಮಿಯೇ ಇದುವರೆಗೆ ನೋಡಿರಲಿಲ್ಲ.!


ಉಂಡವನು ಮಕ್ಕಳನ್ನು ಮಗ್ಗುಲಲ್ಲವಚಿ ಮಲಗಿದನು. ಅರ್ಧತಾಸಿನಲ್ಲಿ ಅವೂ ನಿದ್ರೆಗೆ ಜಾರಿದವು. ತಾನೂ ಏನೊಂದೂ ಮಾತನಾಡದೆ ಕಂಬಳಿ ಹೊದ್ದು ಮಲಗಿದನು. ಊರಿನ ಜನರೆಲ್ಲಾ ಆಡಿದ ಮಾತು, ಮಾಡಿದ ಅವಮಾನ ಈಗಷ್ಟೇ ನೋಡಿದ ಸಿನಿಮಾದ ರೀತಿಯಲ್ಲಿ ನೆನಪಾಗುತ್ತಿದ್ದಂತೆ ಎದೆಯ ಗೂಡೊಳಗಿನ ಚಳಕು ಕ್ಷಣ ಕ್ಷಣಕ್ಕೂ ತೀವ್ರಗೊಳ್ಳತೊಡಗಿತು. ಬಹಳ ಹೊತ್ತಿನ ವರೆಗೆ ನಿದ್ರೆ ಬರಲಿಲ್ಲ. ದೇವರ ಪೋಟೋದ ಕೆಳಗೆ ಹಚ್ಚಿಟ್ಟ ಹಣತೆಯೊಂದು ಮಾತ್ರ ಆ ನೀರವತೆಯಲ್ಲಿ ಮಿಣಿಮಿಣಿ ಬೆಳಗುತ್ತಿತ್ತು. ಆ ದೀಪ ಯಾವಾಗ ಆರಿತೋ.. ಅದ್ಯಾವ ಗಳಿಗೆಯಲ್ಲಿ ಅವನಿಗೆ ನಿದ್ರೆ ಬಂತೋ ಅವನಿಗೇ ತಿಳಿಯಲಿಲ್ಲ..!


ಬೆಳಗಾಗುತ್ತಿದ್ದಂತೆ ಚೌಡನ ಹೆಂಡತಿ, ಮಕ್ಕಳ ರೋಧನ, ಚೀರಾಟ ಅಕ್ಕಪಕ್ಕದವರ ಕಿವಿಗೆ ಬಿದ್ದುದರಿಂದ ಗಾಬರಿಯಿಂದ ಜನ ಚೌಡನ ಮನೆಕಡೆ ಓಡಿ ಬಂದರು. ಕ್ಷಣದಲ್ಲಿ ಕಿಕ್ಕಿರಿದ ಜನರೆಲ್ಲರೂ "ಏನಾಯ್ತು..? ಹೇಗಾಯ್ತು..?" ಎಂದು ಕೇಳುತ್ತಿದ್ದರಾದರೂ ಯಾರಿಗೂ ಏನಾಯ್ತೆಂದು ತಿಳಿಯಲಿಲ್ಲ. ಆದರೆ ಊರವರ ಕೊಂಕುಮಾತು, ಚುಚ್ಚು ನುಡಿಗಳಿಂದಾಗಿ ಮುಖವೆತ್ತಲಾಗದೆ, ಅವಮಾನ ನಿಂದನೆಗಳನ್ನು ತಡೆದುಕೊಳ್ಳುವ ಶಕ್ತಿ ಇಲ್ಲದೆ. ಚೌಡ ಕಣ್ಮುಚ್ಚಿ, ಮುಖತಿರುಗಿಸಿ ಮಲಗಿರುವನೇನೋ ಎಂಬಂತೆ ಅವನ ದೇಹ ಮಾತ್ರ ನಿಶ್ಚಲವಾಗಿ ಮಲಗಿತ್ತು...

*******

6 comments:

Anamika said...

Excellent....

ಇನ್ನೇನೂ ಶಬ್ದ ಇಲ್ಲ ನನ್ನ ಹತ್ರ.ಈ ಹಿಂದೆ ಬರೆದಿರುವ ಎಲ್ಲ ಕತೆಗಳಿಗಿಂತ ಬೃಹತ್ ಕತೆಯಾಗಿರುವುದರ ಜೊತೆಗೆ ನವಿರಾದ ನಿರೂಪಣೆ ಮನಸೂರೆಗೊಂಡಿತು.

ಶಭಾಷ್..!!

ಈ ಕಥೆಯಲ್ಲಿ ಈ ಕೆಲವು ಸಾಲುಗಳು ನಿಮಗೆ ನಾನು ಶಭಾಷ್ ಹೇಳಲಿಕ್ಕೆ ಪ್ರಥಮ ಕಾರಣಗಳು ಅನ್ಬಹುದು ::

" ಊರಿನ ಜನರೆಲ್ಲಾ ಆಡಿದ ಮಾತು, ಮಾಡಿದ ಅವಮಾನ ಈಗಷ್ಟೇ ನೋಡಿದ ಸಿನಿಮಾದ ರೀತಿಯಲ್ಲಿ ನೆನಪಾಗುತ್ತಿದ್ದಂತೆ ..."

" ಆ ದೀಪ ಯಾವಾಗ ಆರಿತೋ.. ಅದ್ಯಾವ ಗಳಿಗೆಯಲ್ಲಿ ಅವನಿಗೆ ನಿದ್ರೆ ಬಂತೋ ಅವನಿಗೇ ತಿಳಿಯಲಿಲ್ಲ..! "

ನಿಮ್ಮವ,
ರೇವಪ್ಪ

Unknown said...

Very Nice....
ಕಥೆ ತುಂಬಾ ಚೆನ್ನಾಗಿದೆ.ಪ್ರೌಢ ಬರವಣಿಗೆ.ಹಳ್ಳಿಯ ಜನರ ಜೀವನದ ಘಟನೆಗಳ ನೈಜ ಚಿತ್ರಣ.ನೀವು ಒಳ್ಳೆ ಬರಹಗಾರರು ಅಂತ ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ,ನಿಮ್ಮ ಬರವಣಿಗೆ ಕೃಷಿ ಹೀಗೆ ಮುಂದುವರಿಯಲಿ....Wish you Good Luck.

Unknown said...

ತಮ್ಮ ಬರಹಕ್ಕೆ ಪ್ರತಿಕ್ರಿಯೆ ವ್ಯಕ್ತವಾಗದಿದ್ದರೆ ಬರಹಗಾರನಿಗೆ ತನ್ನ ಮೇಲಿನ ನಂಬಿಕೆಯೆ ಕಡಿಮೆಯಾಗಬಹುದೇನೋ....
ಹೀಗಾಗಿ ನಾವು ಓದಿದ ಬರಹ ನಮಗೆ ಇಷ್ಟ ಆದಾಗ ಮೆಚ್ಚುಗೆ ವ್ಯಕ್ತಪಡಿಸುವುದು ನಮ್ಮ ಕರ್ತವ್ಯ.ಇದರಿಂದ ಬರಹಗಾರನ ಆತ್ಮವಿಶ್ವಾಸವನ್ನ ಸ್ವಲ್ಪ ಮಟ್ಟಿಗಾದರೂ ಹೆಚ್ಚಿಸಿ ಆತನ ಮುಂದಿನ ಬರವಣಿಗೆಗೆ ಪ್ರೋತ್ಸಾಹಿಸಿದಂತಾಗುತ್ತದೆ.

yashavanth said...

ಪ್ರಿಯ ಪರಶು,
ಕತೆಯ ನಿರೂಪಣೆ ಚೆನ್ನಾಗಿದೆ, ಭಾಷೆ ಸೊಗಸಾಗಿದೆ ಮತ್ತು ಕತೆ ಹೇಳುವ ವಿಧಾನ ನಿಮಗೆ ಸಿದ್ಧಿಸಿದೆ
ಆದರೆ ಕತೆಯಲ್ಲಿನ ವಿಷಯ....? ಚೌಡ ಒಮ್ಮೆ ರೈಟರ್‍ನಿಂದ ನಂತರ ಶೆಟ್ಟಿ ಹಾಗೂ ಗೌಡನ ದೌರ್ಜನ್ಯಕ್ಕೆ ಒಳಗಾಗಿ ಜೀವ ಕಳೆದುಕೊಳ್ಳೋದು ವ್ಯವಸ್ಥೆಯ ದುರಂತವೆಂದೇ ಇಟ್ಟುಕೊಳ್ಳೋಣ ಆದರೆ ಇವತ್ತಿನ ಪರಿಸ್ಥಿತಿಗೆ ಇದು ಪ್ರಸ್ತುತವೇ..?
ಪಂಚಾಯ್ತಿ ವಿಚಾರಕ್ಕೆ ಬಂದರೆ ಅಂಗಡಿಗೆ ಬರುವ ಹುಡುಗಿಯರನ್ನು ಕಣ್ಣಲ್ಲೇ ತೂಗುವ ಮಾತುಗಾರ ಶೆಟ್ಟಿಯ ಮಾತಿನ ಮೇಲೆ ಪಂಚಾಯ್ತಿ ನಡೆಸಲು ಒಬ್ಬ ಮೂರ್ಖ ಗೌಡ, ಅವನು ಕರೆದಾಕ್ಷಣ ಕೈ ಕಟ್ಟಿ ನಿಲ್ಲುವ ಮತ್ತೊಂದಿಷ್ಟು ಮೂರ್ಖರು .
ನೀವು ಕತೆಯ ಕಾಲಘಟ್ಟ ತಿಳಿಸಿದ್ದರೆ ಚೆನ್ನಾಗಿತ್ತು ಆದರೆ ಇದು ಪ್ರಸ್ತುತ ಗ್ರಾಮ್ಯಚಿತ್ರಣವಂತೂ ಅಲ್ಲವೇ ಅಲ್ಲ...
ಏನ್ರೀ ವ್ಯವಸ್ಥೆಯನ್ನು ಪ್ರತಿಭಟಿಸುವ ಸಾಹಿತ್ಯ ಬಂದೇ ಮೂರು ದಶಕ ಕಳೆದಾಯ್ತು, ನೀವು ಮತ್ತೆ ಏಕೆ ಹಿಂದಕ್ಕೆ ಹೋಗಿ ಯೋಚಿಸ್ತೀರಾ...?
ಇವೆಲ್ಲ ನನಗೆ ಅನ್ನಿಸಿದ ಖಾಸಗಿ ಅಭಿಪ್ರಾಯಗಳು ಹೊರತು ಕತೆಯ ವಿಮರ್ಶೆಯಂತೂ ಅಲ್ಲ.
ಪ್ರೀತಿಯಿಂದ
ಯಶವಂತ್

sakkath sacchi.blogspot.com said...

parashu , katheya modala kantannu odi naanu sakaladalli pratikriyisidde. innuliddu katheyannu (atava poorti katheyannu)adu sudheergavaagiruvudarinda "print" tagedukondu odi aanantara pratikriyisuttene(illave ninage mail maaduttene)
nim sacchi

ಪರಶು.., said...

ಹಾಯ್ ಫ್ರೆಂಡ್ಸ್ ಕತೆಗೆ ಪ್ರತಿಕ್ರಿಯಿಸಿದ ನಿಮಗೆಲ್ಲಾ ನನ್ನ ಅಭಿನಂದನೆಗಳು..
ಹಾಗೆಯೇ ಯಶವಂತ್ ರ ಮೂಲಭೂತ ಪ್ರಶ್ನೆಗಳಿಗೆ ನನ್ನ ಸಮಜಾಯಿಷಿ ಇಷ್ಟು.
ಡಿಯರ್ ಯಶವಂತ್,
ನಿಮ್ಮ ಅಭಿಪ್ರಾಯಗಳಬಗ್ಗೆ ನನ್ನ ತಕರಾರಿಲ್ಲ. ನಿಜ ಹೇಳಬೇಕೆಂದ್ರೆ ಈ ಕಥೆಯ ತಿರುಳು ಏನಿದೆಯೋ ಅದೊಂದು ನೈಜ ಘಟನೆ ಸುಮಾರು ನಾಲ್ಕಾರು ವರ್ಷಗಳ ಹಿಂದಷ್ಟೇ ನಡೆದಂತಹ ಘಟನೆ. ನಮ್ಮ ಸಾಗರ ತಾಲ್ಲೂಕಿನ ಪಕ್ಕದ ಸೊರಬದಲ್ಲಿ ಒಂದು 'ಮಿಡಿನಗರ' ಎಂಬ ಹಳ್ಳಿ ಇದೆ. ಅಲ್ಲಿನ ರೈತ ಚೌಡನ ದಾರುಣ ಸಾವಿನ ಸ್ಥಿತಿ ಇದು. ಕೆಲವು ವರ್ಷಗಳ ಹಿಂದೆ ನಾನು ಒಂದು ಹಳ್ಳಿಯಲ್ಲಿ ಕಾಲೇಜು ಓದುತ್ತಿದ್ದೆ (ಎಲ್ಲರೂ ಪಟ್ಟಣದಲ್ಲೇ ಕಾಲೇಜು ಓದೋದು ಅನ್ಕೋಬೇಡಿ, ನಾನು ಓದಿದ ಕಾಲೇಜು ಹಳ್ಳಿಯಲ್ಲೇ ಇತ್ತು, ಅಲ್ಲಿನ ಹಾಸ್ಟೇಲಿನಲ್ಲಿ ನಾನು ಓದುತ್ತಿದ್ದೆ. ಆ ದಿನಗಳಲ್ಲಿ ಅದು ಸ್ವಲ್ಪ ಮುಂದುವರೆದ ಹಳ್ಳಿ, ಈಗಲೂ ಮುಂದುವರೆಯುತ್ತಲೇ ಇದೆ.!) ನಾನು ಓದಿ ಬೆಳೆದ ನನ್ನ ಆ ಹಳ್ಳಿಯಲ್ಲಿ ನನಗೊಬ್ಬ ಗೆಳೆಯನಿದ್ದ. ಅವನ ಅಕ್ಕನನ್ನು ಕೆಲವರ್ಷಗಳ ಹಿಂದಷ್ಟೆ ಈ ಮಿಡಿನಗರದ ಚೌಡನಿಗೆ ಮದುವೆ ಮಾಡಿ ಕೊಡಲಾಗಿತ್ತು. ನಾನು ನನ್ನ ಓದಿನ ನಂತರ ಆ ಹಳ್ಳಿಯನ್ನೂ ಬಿಟ್ಟು, ಒಂದೆರಡು ವರ್ಷಗಳ ನಂತರ ಆ ಹಳ್ಳಿಗೆ ಹೋದಾಗ ಆ ಗೆಳೆಯ ಆ ಹಳ್ಳಿಯಲ್ಲಿರಲಿಲ್ಲ. ಅವನು ಅವನ ಅಕ್ಕನ ಮನೆಯಲ್ಲಿ ಅವಳಿಗೆ ಆಸರೆಯಾಗಿ ನೆಲೆಸಿದ್ದ ಎಂಬ ಸತ್ಯ ತಿಳಿಯಿತು. ಕಾರಣ ತಿಳಿಯಲು ಹೊರಟಾಗ ಈ ಕಥೆಯ ಎಳೆ ಬಿಚ್ಚಿಕೊಂಡಿತು..
ಇಲ್ಲಿನ ಕೆಲವು ಪಾತ್ರಗಳು ನನ್ನ ಕಲ್ಪನೆಗಳಿರಬಹುದು ಆದರೆ ಕಥೆಯ ತಿರುಳು ಮಾತ್ರ ನೈಜವೇ...

ವ್ಯವಸ್ಥೆಯನ್ನು ಪ್ರತಿಭಟಿಸುವ ಮನೋಸ್ಥಿತಿ ಬಂದು, ಆ ತರಹದ ಸಾಹಿತ್ಯ ಪ್ರಕ್ರಿಯೆಯೂ ಜರುಗುತ್ತಿದ್ದು ಮೂರು ದಶಕಗಳಾಗಿರಬಹದು ಆದರೆ ಇಂದಿಗೂ ನಮ್ಮ ಅದೆಷ್ಟೋ ಹಳ್ಳಿಗಳು, ಅಲ್ಲಿನ ಜನತೆ ಈ ರೀತಿಯ ಮಾನಸೀಕ ದೌರ್ಜನ್ಯವನ್ನು ಅನುಭವಿಸುತ್ತಲೇ ಇದ್ದಾರೆ. ನಾವು ಹಳ್ಳಿಗಳಲ್ಲಿ ವಿಕೇಂದ್ರೀಕರಣದ ಹೆಸರಿನಲ್ಲಿ ರಾಜಕೀಯವನ್ನು ನುಸುಳಿಸಿ, ಅಲ್ಲಿನ ಜನತೆಯ ಸಂಬಂಧವನ್ನೇ ಪಕ್ಷ-ಪಕ್ಷಗಳಿಗೆ ಹಂಚುತ್ತಾ, ಕಟ್ಟೆ ಪಂಚಾಯಿತಿಗಳಲ್ಲಿ ಮುಗಿಯುತ್ತಿದ್ದ ವ್ಯಾಜ್ಯಗಳೆಲ್ಲಾ ಕೋರ್ಟ್ ಕಟ-ಕಟೆಯವರೆಗೆ ಬರುವಂತೆ ಮಾಡಿ, ಅದನ್ನೆಲ್ಲಾ ದೂರದಿಂದಲೇ ನೋಡಿ ಈಗ ಹಳ್ಳಿಗಳೆಲ್ಲಾ ಉದ್ದಾರ ಆಗಿವೆ ಜನರು ಬುದ್ದಿವಂತರಾಗಿದ್ದಾರೆ ಎಂದು 'ಅಗುಳು ಬೆಂದ ಮಾತ್ರಕ್ಕೆ ಅನ್ನ ಬೆಂದಿದೆ' ಎಂಬ ಸಾರ್ವತ್ರಿಕ ತೀರ್ಮಾನಕ್ಕೆ ಬಂದುಬಿಡುವುದು ತಪ್ಪು ಎನಿಸುತ್ತಿದೆ. ಇಂದಿಗೂ ನಮ್ಮ ಹಳ್ಳಿಗಳಲ್ಲಿ ಅವಮಾನಕ್ಕೆ ಅಂಜುವ ಜೀವಿಗಳಿದ್ದಾರೆ. ಸಾಲದ ಅವಮಾನಕ್ಕೆ ಅಂಜಿ ಸಾವು ಕಾಣುವ ರೈತರಿದ್ದಾರೆ. ಅಂತಹದೇ ರೀತಿಯ ಆದರೆ ಅದಕ್ಕಿಂತಲೂ ವಿಭಿನ್ನ ರೀತಿಯ ಅವಮಾನದ ಸಾವು ಈ ಕತೆಯ ನಾಯಕನದ್ದು.

ಇನ್ನು ಕತೆಯ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ನನ್ನ ಸಮಜಾಯಿಷಿ ಇಷ್ಟು:
ರೈಟರನ ಹೆಂಡತಿಯೇ ಪಂಚಾಯಿತಿ ಕಟ್ಟೆಗೆ ಬರಬೇಕಿತ್ತು, ಅವನೇ ದೂರು ಕೊಡಬೇಕಿತ್ತು ಎಂಬುದು ನಿಮ್ಮ ಅನಿಸಿಕೆಯಾದರೆ ಅದು ಹೇಗೆ ಸಾಧ್ಯ. ರೈಟರನಿರುವುದು ಪಟ್ಟಣದಲ್ಲಿ, ಮುಂದಿನ ಕಥೆ ನಡೆದದ್ದು ಹಳ್ಳಿಯಲ್ಲಿ. ಘಟನೆಗೆ ಪ್ರಮುಖ ಸಾಕ್ಷಿದಾರನಾದ ಕರಿಯನನ್ನೆ ಮೊದಲು ವಿಚಾರಿಸಿದಾಗ ನಾಗಶೆಟ್ಟಿ ಹೇಳಿದ್ದು ಸುಳ್ಳು ಎಂದು ಅವನಿಂದಲೇ ತಿಳಿದ ಮೇಲೆ ರೈಟರ್ ನನ್ನು ಕರೆಸುವ ಅಗತ್ಯವೇನಿದೆ.
ಮರಿ ಬೆಕ್ಕು ಅಸಲಿಗೆ ಕದ್ದು ಒಯ್ಯುವ ವಸ್ತುವೇ...? ಎಂಬುದು ನಿಮ್ಮ ಪ್ರಶ್ನೆ. ನಿಜವಾಗಿಯೂ ಚೌಡನು ಅದನ್ನು ಕದ್ದು ಒಯ್ಯಲೆತ್ನಿಸಲಿಲ್ಲ. ಮುದ್ದಿನಿಂದ, ಅಥವಾ ಅಗತ್ಯಕ್ಕಾಗಿ ಸಾಕಿದ ಆ ಪ್ರಾಣಿಯನ್ನು ಅವನು ಕದ್ದು ಒಯ್ಯುತ್ತಿದ್ದಾನೆಂದು ರೈಟರ್ ಭಾವಿಸಿದನಷ್ಟೇ..ಇದಕ್ಕೆ ಕಾರಣ ಈಗಾಗಲೇ ಅವನು 2 ಮರಿಗಳನ್ನು ಮಿಸ್ ಮಾಡಿಕೊಂಡಿದ್ದ.. ನಿಮ್ಮಕಡೆ ಸಾಕಿದ ಬೆಕ್ಕನ್ನೂ ಅಥವಾ ಅಂತಹ ಮುದ್ದಿನ ಪ್ರಾಣಿಯನ್ನೂ ಕೊಂಡುಹೋದ್ರೆ ಸಾಕು ಅನ್ನೋ ದಾರಾಳಿಗಳೂ ಇದಾರಾ ಯಶವಂತ್..!! ಸುಮ್ನೆ ಕೇಳಿದೆ. ಅಂತಹವರಿರುವುದು ಅಪರೂಪ ಅಲ್ವಾ..?

ಕತೆಯ ಕಾಲಘಟ್ಟದ ಬಗ್ಗೆ ಎದ್ದ ನಿಮ್ಮ ಪ್ರಮುಖ ಪ್ರಶ್ನೆಗೆ ನನ್ನ ಉತ್ತರವಿಷ್ಟೇ... ಸಾಮಾನ್ಯವಾಗಿ ಯಾವುದೇ ಕತೆಯನ್ನು ಇಂತದ್ದೇ ಕಾಲಘಟ್ಟದ್ದು ಎಂದು ಹೆಸರಿಸಲು ಬರುವುದಿಲ್ಲ. ಈ ಕಾಲ ಮುಗಿದು ಹೋಗಿದೆ ಅದಕ್ಕೇ ಏಕೆ ಹೊರಳಬೇಕು ಅನ್ನೋದು ಸಮಂಜಸವಲ್ಲ ಅನಿಸುತ್ತೆ. ರಾಮಾಯಣ, ಮಹಾಭಾರತಗಳು ಜರುಗಿ (ನಡೆದಿವೆ ಎಂಬ ಕಲ್ಪನೆಯಿಂದ) ಎಷ್ಟೋ ವರ್ಷಗಳು ಕಳೆದಿವೆ. ಆದರೂ ಆ ಬಗ್ಗೆ ನಾವು ಈಗಲೂ ಬರೆಯುತ್ತಿಲ್ಲವೇ..?
ನಾನು ಕುವೆಂಪುರವರ 'ಮಲೆಗಳಲ್ಲಿ ಮದುಮಗಳು' ಓದುವಾಗ ಅದು ಅವರ ಕಾಲಘಟ್ಟದ ಕಲ್ಪನೆ ಎಂದೇ ಭಾವಿಸಿದ್ದೆ ಆದರೆ ಅವರು ಕೊನೆಯಲ್ಲಿ 'ಅತ್ತ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮವನ್ನು ಕುರಿತು ಮಾತನಾಡುತ್ತಿದ್ದಂತಹ ಸಂದರ್ಭದಲ್ಲೇ ಇತ್ತ ಮಲೆ ನಾಡಿನ ಈ ಪುಟ್ಟ ಹಳ್ಳಿಯಲ್ಲಿ ಇಂತಹ ಘಟನೆ ಜರುಗುತ್ತಿತ್ತು ಎಂದಾಗ' ಅವರೂ ನೂರಾರು ವರ್ಷಗಳಷ್ಟು ಹಿಂದಿನದ್ದನ್ನು ಯೋಚಿಸಿ ಇಂದಿನ, ಮುಂದಿನ ಜನತೆಗೆ ನೀಡಿದ್ದಾರೆ ಎನಿಸಿತು.

ಮತ್ತೋಂದು ಮಾತು ನಮಗೆಲ್ಲಾ ಹಿಂದೆ ಕತೆಗಳನ್ನು ಹೇಳುತ್ತಿದ್ದುದು ಮತ್ತು ನಾವು ಕೇಳುತ್ತಿದ್ದುದು 'ಒಂದಾನೊಂದು ಕಾಲದಲ್ಲಿ....' ಎಂದೇ ಪ್ರಾರಂಭವಾಗುತ್ತಿದ್ದ ಕತೆಗಳನ್ನು. ಅಂದರೆ ಕತೆಗಳೆಲ್ಲಾ ಸಾಮಾನ್ಯವಾಗಿ ಹಿಂದೆ ಜರುಗಿದ ಘಟನೆಗಳೇ ಅನ್ನೋದು ಬಹುಪಾಲು ನಿಜ ಅಲ್ಲವೇ... ಇದೂ ಹಾಗೇ ಅಂತ ಭಾವಿಸಿಕೊಳ್ಳಿ ಯಶವಂತ್....


ಕತೆಯ ಹುಟ್ಟಿನ ಬಗೆಗೆ ನಾನೇ ವಿವರಿಸುವಂತೆ ಪ್ರೇರೇಪಿಸಿದ ನಿಮ್ಮ ಪ್ರತಿಕ್ರಿಯೆಗಳಿಗೆ ಮತ್ತೊಮ್ಮೆ ಅಭಿನಂದನೆಗಳು...

ನಿಮ್ಮ
ಪರಶು..,

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago