25 August 2009

ಕಟ್ಟೆ ಮ್ಯಾಲಿನ ಮಾತು 3

( ಪ್ರಿಯ ಓದುಗರೆ, ಕೆಲವು ದಿನಗಳ ಬಿಡುವಿನ ನಂತರ ನಮ್ಮ 'ಕಟ್ಟೆ ಮ್ಯಾಲಿನ ಮಾತು' ಮತ್ತೆ ಮುಂದುವರೆಯುತ್ತಿದೆ... ಬರೆಯುವವನಿಗೆ 'ದಾರಿಹೋಕ' ಎಂಬ ಹೆಸರು ತುಂಬಾ ಅಪರಿಚಿತವಾಯಿತೇನೋ ಎಂದೆನಿಸಿದ್ದರಿಂದ ಹೆಸರನ್ನು ಸಹ ಬದಲಾಯಿಸಿ 'ಕಟ್ಟೇಶ' ಎಂದು ಮರು ನಾಮಕರಣ ಮಾಡಲಾಗಿದೆ.. ಜೊತೆಗೆ ನಿಮ್ಮ ಟೀಕೆ-ಟಿಪ್ಪಣಿ, ಸಲಹೆ-ಸೂಚನೆಗಳಿಗೆ ಅನುವಾಗಲೆಂದು -ಮೇಲ್ ವಿಳಾಸ kattematu@gmail.com ಸಹ ನೀಡಲಾಗಿದೆ... ಓದಿ ಅನಿಸಿದ್ದನ್ನು ತಿಳಿಸಿ...)



ದೇವ್ರು ಮನುಸ್ರುನ್ನ ಕಡಿಮೆ ಮಾಡಾಕೆ ಪ್ಲಾನ್ ಹಾಕಿರಬೌದಾ.....!?



ಆರಿದ್ರ-ಆಶ್ಲೇಷ ಮಳೆಗಳು ಎಡಬಿಡದೆ ಸುರಿದಿದ್ದರಿಂದ ಹೊಲದ ಕೆಲಸಗಳೆಲ್ಲವೂ ಸರಾಗವಾಗಿ ಮುಗಿದು ಎಲ್ಲರಲ್ಲೂ ಸಂತೋಷ ನೆಲೆಗೊಂಡಿತ್ತು. ಆದರೆ ಇತ್ತೀಚೆಗೆ ಬೀಡಿ ಬಸ್ಯನ ಒಂದು ಎತ್ತು ಅಕಾಲಿಕ ಮರಣಕ್ಕೆ ಈಡಾದದ್ದು, ಎಲ್ಲರಲ್ಲೂ ಚಿಂತೆಯನ್ನೂ ತಂದಿತ್ತು. ಎಲ್ಲೇ ನಾಲ್ಕು ಜನ ಗುಂಪುಗೂಡಿದರೂ ಎತ್ತಿನ ವಿಷಯವನ್ನೇ ಎತ್ತಿ ಮಾತನಾಡುವುದು ಸಾಮಾನ್ಯವಾಗಿತ್ತು.ಅಂತೆಯೇ ಇಂದೂ ಸಹ ರತ್ನಕ್ಕನ ಚಹಾದಂಗಡಿಯ ಕಟ್ಟೆಯಮೇಲೆ, ಕಣ್ಣಾ ಮುಚ್ಚಾಲೆಯಾಡುತ್ತಿದ್ದ ಕುಡಿ ಬಿಸಿಲಿಗೆ ಬೆನ್ನು ಮಾಡಿ ಕುಳಿತು ಎಲ್ಲರೂ ಬಸ್ಯನ ಎತ್ತಿ ಸಾವಿನ ವಿಷಯವನ್ನೇ ಪ್ರಧಾನವಾಗಿಟ್ಟು ಮಾತನಾಡತೊಡಗಿದರು...


ರತ್ನಿ : ಬಸ್ಯಣ್ಣಾ... ಡಾಕ್ಟ್ರು ಬಂದು ಕೋಯ್ಸೆಲ್ಲಾ ನೋಡಿದ್ರಂತಲ್ಲ ಏನಂದ್ರು..?
ಬಸ್ಯ : ಏನಂತಾರೆ ರತ್ನಕ್ಕಾ... ಯಾವ್ದೋ ವಿಚಿತ್ರ ಖಾಯ್ಲೆ ಅಂತೆ... ಅದೇನೋ ಪೋಟೋ-ಗೀಟೋ ತಕ್ಕುಂದು, ಬೆಂಗ್ಳೂರಿಗೆ ಕಳುಸ್ತೀವಿ ಅಂದ್ರು...
ಸೋಮ
: ಬೆಂಗ್ಳೂರಿಗೆ ಕಳ್ಸೇನು ಬದುಕ್ಸಿ ಕೊಡ್ತಾರಂತಾ...?
ಡೋಂಟಿ
: ಸತ್ತೋಗಿದ್ನ ಬದುಕ್ಸಾಕಾದಾತಾ...? ಮತ್ತೆಲ್ಲಾದ್ರೂ ಇಂತ ಕಾಯ್ಲೆ ಬಂದ್ರೆ ಮೆಡಿಸಿನ್ ಕಂಡುಹಿಡಿಯಾಕೆ ಹಂಗ್ ಮಾಡ್ತಾರೆ.... ಡಾಕ್ಟ್ರ ಡ್ಯೂಟಿನೇ ಅದು...
ಸೀತೆ
: ಬಸ್ಯಣ್ಣಾ ಎಲ್ಲೋ ಹುಳಾ-ಗಿಳಾ ಮುಟ್ಟಿರಬೈದಾ...?
ಬೀರ
: ಛೇ.. ಛೇ ಇಲ್ಲ ಬಿಡು, ನಾನೇ ಮೂಗು-ಬಾಯಿ ಹತ್ರೆಲ್ಲಾ ನೋಡಿದೀನಿ.... ಹುಳಾ ಮುಟ್ಟಿದ್ರೆ ಬಾಯಾಗೆ ನೊರೆ ಬರೋದು... ಸೀತೆ : ಪಾಪ ಬಸ್ಯಣ್ಣನ ಬಲಗೈ ಮುರುದಂಗಾತು...
ಬಸ್ಯ : ಹೌದು ಸೀತಕ್ಕಾ... ಎಂತಾ ಎತ್ತು ಅಂತೀಯಾ ಅದು. ಮಕ್ಳು-ಮರಿ ಮಗ್ಲಾಗೆ ಮನಿಗಿದ್ರೂ ಏನೂ ಮಾಡ್ತಿರ್ಲ... ಬಸವಣ್ಣ ಅಂದ್ರೆ ಬಸವಣ್ಣ ಆಗಿತ್ತು...
ಸಣ್ಣೀರ : ಬಸ್ಯಣ್ಣಾ ಅದ್ಕೆ ಲೋನ್ ಮಾಡ್ಸಿದ್ಯಾ..?
ಬಸ್ಯ
: ಹ್ಞೂಂ ಮಾಡ್ಸಿದೀನಿ...
ಡೋಂಟಿ
: ಹೋಗ್ಲಿ ಬಿಡು, ಅದರಪ್ಪನಂತ ಎತ್ತು ತರಾನ...
ರತ್ನಿ
: ಎತ್ತು-ಎಮ್ಮಿಗೆ ಹಿಂಗಾದ್ರೇ ತರಬೈದು ಡೋಂಟೀ... ಮನುಸ್ರಿಗೇ ಆದ್ರೆ...?
ಸಣ್ಣೀರ
: ಮನುಸ್ರಿಗೂ ಆಗ್ತೈತಿ ರತ್ನಕ್ಕಾ... ಹೋಗಿ ಟೀವಿ, ರೇಡಿಯೋ ವಾರ್ತೆ ಕೇಳು... ಹಂದೀಜ್ವರ ಅನ್ನೋ ಖಾಯ್ಲೆಗೆ ಬೆಂಗ್ಳೂರಂತಾ ಪಟ್ಣದಾಗೆ ದಿನಕ್ಕೊಬ್ರು ಸಾಯ್ತಿದಾರೆ ಗೊತ್ತಾ..?
ರತ್ನಿ
: ಹೌದೌದು.. ನಾನೂ ಕೇಳ್ದೆ, ಅದೇನದು ಹಂದಿಜೊರ...?
ಬೀರ
: ಯಾವ್ದೋ ಚಳಿ-ಜೊರದಂತದಿರಬೇಕು.. ಅದ್ನೇ ಪಟ್ಣದವು ದೊಡ್ದು ಮಾಡ್ತಾವು...
ಸಣ್ಣೀರ
: ಅಲ್ಲ ದೊಡಪ್ಪಾ... ಬರೀ ಚಳಿಜ್ವರ ಅಲ್ಲ. ಹಂದಿಯಿಂದ ಬಂದಿರೋ ಹೊಸ ರೋಗ...!
ಸೀತೆ
: ಹಂದಿಯಿಂದ ಬಂತಾ..!? ಅದ್ಯಂಗೆ ಬಂತೂ...!?
ಸಣ್ಣೀರ
: ಹ್ಞೂಂ ಹಂದಿಯಿಂದಲೇ ಬಂದುದ್ದು... ಜ್ವರ ತರೋ ಕ್ರಿಮಿ ಮೊದ್ಲು ಹಂದಿ ಒಳಗೆ ಇತ್ತಂತೆ.. ಹೊರದೇಶದವರು ಹಂದೀನ ಹಸಿ-ಬಿಸಿ ಬೇಯ್ಸಿ ತಿಂದು ಅದು ಮನುಸ್ರು ಒಳಗೂ ಸೇರಿ ರೋಗ ತಂತಂತೆ....!
ರತ್ನಿ
: ಆಮೇಲೆ...!?
ಸಣ್ಣೀರ
: ಆಮೇಲೆ ಮನುಸ್ರಿಂದ ಮನುಸ್ರಿಗೆ ಹರಡ್ತಾ.. ಹರಡ್ತಾ... ಈಗ ನಮ್ ದೇಶದ ಜನ್ರಿಗೂ ಬಂದೈತಿ....
ಸೀತೆ
: ಇದು ಸುಳ್ಳು ಬಿಡು...
ಸಣ್ಣೀರ
: ಯಾಕೆ ಸೀತಕ್ಕಾ...!!?
ಸೀತೆ : ಅಲ್ಲ ಮತ್ತೆ.... ಅರ್ಧಂಬರ್ಧ ಬೇಸಿದ ಹಂದೀನ ಮನುಸ್ರು ತಿಂದ್ರು, ಅದ್ರಿಂದ ಮನುಸ್ರಿಗೆ ಬಂದಿರಬೈದು... ಆದ್ರೆ ಮನುಸ್ರಿಂದ ಮನುಸ್ರಿಗೆ ಹ್ಯಾಂಗೆ ಬಂತು...? ಏನು ಮನುಸ್ರೇ, ಮನುಸ್ರುನ್ನ ಹಸಿ-ಬಿಸಿ ಬೇಸಿ ತಿಂದ್ರಾ...?
ಡೋಂಟಿ : (ಆಹ್ಹಾ ಹ್ಹಾ ಹ್ಹಾ..) ಒಳ್ಳೆ ಕ್ವಶ್ಚನ್ ಕೇಳ್ದೆ ಸೀತಕ್ಕಾ.... ಒಳ್ಳೆ ತಲೆ ಐತಿ ನಿಂಗೆ..
ರತ್ನಿ
: ಒಳ್ಳೆ ತಲೆ ಇದ್ದುದುಕ್ಕೇ ಸೋಮಪ್ಪನ ಎರಡೂ ಕಿಂವಿ ಹಿಡಿದು ಬಗ್ಸಿರೋದು...!
ಸೀತೆ
: ಅದಿರ್ಲಿ .. ಮನುಸ್ರಿಂದ ಮನುಸ್ರಿಗೆ ಹಂದಿರೋಗ ಹ್ಯಾಂಗೆ ಬಂತು...?
ಸಣ್ಣೀರ
: ಸೀತಕ್ಕಾ ಕೇಳು ಹೇಳ್ತ್ನಿ.. ಹಂದಿ ಒಳಗಿನ ಕ್ರಿಮಿ ಅದ್ಯಾರಿಗೋ ಹಂದಿಯಿಂದ ಬಂದ್ವಾ..? ಅವು ಒಂದು ವಾರದೊಳಗೆ ಮನುಸ್ರು ಒಳಗೂ ಬೆಳ್ದು ಬೆಳ್ದು ಅವ್ರಿಗೆ ವಿಪರೀತ ಜ್ವರ ತಂದ್ವು... ಅವ್ರು ಕೆಮ್ಮಿದಾಗ, ಕ್ಯಾಕರಿಸಿದಾಗ, ಸೀನಿದಾಗ ಅವರ ಪಕ್ಕದಲ್ಲಿ ಇದ್ದೋರಿಗೂ ಗಾಳ್ಯಾಗೆ, ಎಂಜಲಾಗೆ ಹೋಗಿ ಶರೀರ ಸೇರಿದ್ವು... ಮತ್ತೆ ಅವರ ಶರೀರದಾಗೂ ಬೆಳ್ದು ಹೀಂಗೇ ಇನ್ನೊಬ್ರ ಶರೀರಕ್ಕೂ ಸೇರಿದ್ವು... ಒಬ್ರಿಂದೊಬ್ರಿಗೆ ದಾಟಿ ದಾಟಿ ಬರ್ತಾನೇ ಇದಾವೆ.... ತಿಳೀತಾ..?
ಸೋಮ
: ಓಹೋ ಇದೊಂತರ ಅಂಟ್ರೋಗ... ಇದ್ದಂಗೆ.
ಡೋಂಟಿ
: ಎಸ್ ಎಗ್ಜಾಕ್ಟ್ ಲೀ ಕರೆಕ್ಟ್...
ಬಸ್ಯ
: ಅಲ್ಲ ಚಿತ್ರ-ವಿಚಿತ್ರ ರೋಗ ಯಾಕೆ ಬರ್ತಾವು ಅಂತಾ...?!
ಬೀರ
: ಸುಮ್ನೆ ಮನುಸ್ರು ಬೆಳದಂಗೆ ರೋಗೂ ಬೆಳಿತಾವೆ...!
ಡೋಂಟಿ
: ಯಸ್ ಚಿಗಪ್ಪಾ.... ಆದ್ರೂ ನಂಗ್ಯಾಕೋ ಡೌಟು.. ದೇವ್ರು ಮನುಸ್ರುನ ಕಡಿಮೆ ಮಾಡಾಕೆ ಪ್ಲಾನ್ ಹಾಕಿರಬೈದಾ...? ಅಂತ.
ಸೀತೆ
: ಯಾಕೇ ?
ಡೋಂಟಿ
: ನೋಡು ಸೀತಕ್ಕಾ ಭೂಮಿಮ್ಯಾಲೆ, ಮನುಸ್ರಂತ ಇತ್ರೆ ದೊಡ್ಡು ಪ್ರಾಣಿಗೆ ಹೋಲ್ಸಿದ್ರೇ ಮನುಸ್ರೇ ಜಾಸ್ತಿ ಐದಾರೆ... ಅದ್ಕೇ ಅವ್ರುನ್ನೆಲ್ಲಾ ಕಡಿಮೆ ಮಾಡಾಕೆ ದೇವ್ರು ಯೋಚ್ನೇ ಮಾಡ್ಯಾನೆ ಅನುಸ್ತೈತಿ......!?
ಸಣ್ಣೀರ : ಅದ್ಯಂಗೆ ಹೇಳ್ತೀಯಾ...?
ಡೋಂಟಿ : ನೋಡು ಸಣ್ಣೀರಾ ನಾವು ಚಿಕ್ಕೋರಿದ್ದಾಗ ಸಿಡುಬು-ದಢಾರ ಅಂತ ರೋಗ ಇದ್ವು.... ಅದಕ್ಕೂ ಮೊದ್ಲೆ ಚಿಗಪ್ಪಾರು ಸಣ್ಣೋರಿದ್ದಾಗ ಯಾವ್ದೋ ಕಾಯ್ಲೆ ಇತ್ತಲ್ಲ....... ಯಾವ್ದು ಚಿಗಪ್ಪಾ ಅದು..?
ಬೀರ : ನಾನು ಚಿಕ್ಕೋನಿದ್ದಾಗಲಾ...!? ಹೌದೌದು ಗುದ್ದಮ್ಮನ ಕಾಯ್ಲೆ ಅಂತ ಇತ್ತು...!
ಡೋಂಟಿ : ಹ್ಞೂ ಅದೇ ಒಂದೇ ಗುದ್ದಿಗೆ ನಾಕು-ಐದು ಹೆಣಾ ಹಾಕೋರಂತಲ್ಲಾ...!?
ಬೀರ : ಅಸ್ಟೇ ಅಲ್ಲ; ಬೆಳ್ಗೆ ಅಪ್ಪುನ ಹೆಣ ಹಾಕಿ ಬಂದ ಮಗ ರಾತ್ರಿಗೆ ಅವುನೇ ಹೆಣ ಆಗಿರೋಂವ...! ಹೆಣ ಎತ್ತಿ ಹಾಕಾಕೇ ಜನ ಹೆದರಾರು...!! ನಾನೂ ಸಾಮಾನ್ಯಕ್ಕೆ ದೊಡ್ಡುಕೇ ಇದ್ದೆ. ಆಗ್ಲೇ ನಮ್ಮಪ್ಪ, ನನ್ನ-ಅವ್ವುನ್ನ ಕರ್ಕುಂದು ಊರು ಬಿಟ್ಟು ಊರಿಗೆ ಬಂದುದ್ದು...
ಸಣ್ಣೀರ : ಗುದ್ದಮ್ಮನ ಕಾಯ್ಲೇ ಅಂದ್ರೆ ಅದು ಪ್ಲೇಗು ರೋಗ ಅಲ್ವೇ !!
ಡೋಂಟಿ : ಯಸ್ ರಿಯಲಿ ಕರೆಕ್ಟ್...ಪ್ಲೇಗೇ... ಪ್ಲೇಗಿಗೆನೋ ಔಸ್ಧಿ ಕಂಡಿಡಿದ್ರು... ಆಮ್ಯಾಲೆ ಕ್ಯಾನ್ಸರು ಬಂತು, ಅದಕ್ಕೂ ಅಷ್ಟು-ಇಷ್ಟು ಕಂಡು ಹಿಡುದ್ರು... ಆಮೇಲೆ ಸಿಡುಬು, ದಢಾರ, ಮೈಲಿ ಅಂತ ಬಂದ್ವು, ಅವ್ನೂ ಏನೋ ಮಾಡಿ ತಡುದ್ರು. ಆಮೇಲೆ ಏಡ್ಸ್ ಅಂತ ಬಂತು.. ಅದನ್ನಂತೂ ಕೇಳೋದೇ ಬ್ಯಾಡ ಬಿಡು. ಹೋದ್ ವರ್ಷ, ಆಚೆ ವರ್ಷ ಹಕ್ಕಿಜೊರ, ಕೋಳಿಜೊರ, ಡೆಂಗೀಜೊರ, ಚಿಕನ್ ಗುನ್ಯಾ.. ಒಂದಾ ಎರಡಾ.. ಒಂದ್ರ ಹಿಂದೆ ಒಂದು ಬರ್ತಾನೇ ಐದಾವು..... ಈಗ ಬ್ಯಾರೆ ಹಂದೀ ಜೊರ, ಇನ್ನೂ ಯಾವ್ಯಾವು ಬರ್ಬೇಕೋ..? ಇವ್ನೆಲ್ಲಾ ನೋಡಿದ್ರೇ ದೇವ್ರು ಮನುಸ್ರುನ ಕಡಿಮೆ ಮಾಡಾಕೆ ಯೋಚ್ನೆ ಮಾಡ್ಯಾನೆ ಅನ್ಸೊಲ್ವಾ...?..?


No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago