06 November 2009

The Biggest Ever Story of ' Namma Blog '

[ಮೊದಲೇ ಹೇಳಿ ಬಿಡ್ತೀನಿ. ಇದು ನಾಲ್ಕು ವರ್ಷದ ಹಿಂದೆ ಬರೆದದ್ದು, ಮೊನ್ನೆ ದೀಪಾವಳಿಗೆ ಊರಿಗೆ ಹೋದಾಗ ಮನೆಯಲ್ಲಿ ಹಳೆಯ ಪುಸ್ತಕದ ಬಂಡಲೊಂದರಲ್ಲಿ ಏನನ್ನೋ ಹುಡುಕುತ್ತಿದ್ದೆ. ಹಿಂದೊಮ್ಮೆ ನಾನೇ ಬರೆದಿಟ್ಟಿದ್ದ, ನನ್ನದೇ ಕೈ ಬರಹದ ಒಂದು ನೋಟುಪುಸ್ತಕ ಕೈಗೆ ಸಿಕ್ಕಿತು. ಅದರಲ್ಲಿ ಇದೇ ರೀತಿಯ ನಾನೇ 'ಕತೆ' ಎಂದು ಹೆಸರಿಸಿಕೊಂಡ 3 ಬರಹಳಿದ್ದವು. ಅಂದಿನ ನನ್ನ ಮನೋಸ್ಥಿತಿಯ ಅನುಭವ ಮಟ್ಟದಲ್ಲೇ ಬರದಂತವುಗಳವು. ಅವುಗಳಲ್ಲಿ ಎರಡನ್ನು ಅವುಗಳಿರುವ ಸ್ಥಿತಿಯಲ್ಲೇ ನಿಮ್ಮೆದುರಿಗಿಡುತ್ತಿದ್ದೇನೆ. ಈ 'ಮುಸುಕು' ಮೊದಲನೆಯದ್ದು, ಓದಿ ಅನಿಸಿದ್ದನ್ನು ಖಂಡಿತಾ ತಿಳಿಸಿ.
- ಪರಶು.]
ಮಸುಕು

ಬೆಳಿಗ್ಗೆಯಿಂದ ಬಿಡುವಿಲ್ಲದೆ ಕೆಲಸ ಮಾಡಿದ ಬಾನುಗೆ ಭಾನುವಾರ ಯಾಕಾದ್ರೂ ಬರುತ್ತೋ ಏನೋ ಅನ್ನಿಸಿ ಬಿಟ್ಟಿತ್ತು. ಬಾಕಿ ದಿನಗಳಲ್ಲಾದರೆ ಕಾಲೇಜಿಗೆ ಹೋಗಿ-ಬರುವುದರಲ್ಲಿಯೇ ಸಮಯ ಕರಗಿ ದಿನಗಳುರುಳಿ ಹೋಗುತ್ತವೆ. ಆದರೆ ಇಂದು ಮಾತ್ರ ಗಡಿಯಾರವೇ ನಿಶ್ಚಲವಾದಂತೆ ಕಾಣುತ್ತಿತ್ತು. ಅಮ್ಮ ಬೇಗಂ ಬೆಳಿಗ್ಗೆ ಬೇಗ ಎದ್ದವಳೇ ಸಾಗರಕ್ಕೆ ಹೋಗಿದ್ದರೆ, ಅಣ್ಣ ಹಮೀದ ಏನೋ ಮೀಟಿಂಗ್ ಇದ್ದಿದ್ದರಿಂದ ಮಸೀದಿ ಕಡೆ ಹೋಗಿದ್ದ. ಅತ್ತಿಗೆಯಂತೂ ತವರು ಮನೆ ಸೇರಿ ಮೂರ್ನಾಲ್ಕು ದಿನಗಳೇ ಕಳೆದಿದ್ದವು. ಇವೆಲ್ಲವುಗಳಿಂದಾಗಿ ಬಾನು ಒಬ್ಬಳೇ ಇಂದು ಮನೆಯ ಹೊಣೆ ಹೊತ್ತಿದ್ದಳು. ಎದ್ದಾಗಿನಿಂದ ಕೆಲಸದ ಹಿಂದೆ ಕೆಲಸ ಮಾಡುತ್ತಾ ಬಂದಿದ್ದರೂ ಒಂದೂ ಮುಗಿದಂತೆ ಕಾಣಲಿಲ್ಲ. ಇಡೀ ಮನೆಯೆಂಬ ಮನೆಯೇ ಬಣಗುಡುತ್ತಿದ್ದುದರಿಂದ ಹೊರೆ ಕೆಲಸದ ನಡುವೆಯೂ ಏನೋ ಅವ್ಯಕ್ತ ಬೇಸರ ಮೂಡುತ್ತಿತ್ತು.

ಹೊತ್ತು ಹತ್ತಾಗುವ ವೇಳೆಗೆ "ಸಾಕಪ್ಪಾ ಮನೆಗೆಲಸದ ಸಹವಾಸ" ಎಂದು ಗೊಣಗುತ್ತಾ ಬಂದ ಬಾನು ಮಂಚದ ಮೇಲೆ ಕುಳಿತಳು. ಸುಮ್ಮನೆ ತೆಪ್ಪಗೆ ಮನೆಯ ಮೂಲೆಯಲ್ಲಿ ಕುಳಿತಿದ್ದ ಟಿ.ವಿ. ಸ್ವಿಚ್ಚು ಅದುಮಲು ಅದು ತನ್ನ ಭಾವಾಭಿನಯದ ಠೀವಿಯಿಂದಲೇ 'ತೇರಾ ಮೇರಾ ಬೀಚುಮೆ ಕೈಸಾ ಹೈಯೇ ಬಂಧನ್......' ಎಂದು ಶುರುಹಚ್ಚಿಕೊಳ್ಳುತ್ತಿದ್ದಂತೆ ಕರೆಂಟು 'ಟುಸ್' ಎಂದು ಹೋಯಿತು. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಮನಸ್ಸಿನಲ್ಲಿ ಇನ್ನಷ್ಟು ಬೇಸರ ಬೆಳೆಯುತ್ತಾ ಹೋಯಿತು. ಗೆಳತಿ ಉಷಾಳೊಂದಿಗಾದರೂ ಮಾತನಾಡಿ ರಿಲ್ಯಾಕ್ಸ್ ಆಗೋಣ ಎಂದು ಪಕ್ಕದಲ್ಲಿದ್ದ ಫೋನನ್ನೆತ್ತಿ ನಂಬರ್ ಒತ್ತಿದರೆ ಅಲ್ಲೂ ಅದೇ ಅಪಸ್ವರ " ನೀವು ಡಯಲ್ ಮಾಡಿದ ಮಾರ್ಗವು ತುಂಬಾ ಬ್ಯುಸಿಯಾಗಿದೆ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಪೋನನ್ನಿಡಿದು ಕುಟ್ಟ ಬೇಕೆನಿಸಿತು ಬಾನುಗೆ, ಆದರೆ ನಿರ್ಜೀವ ವಸ್ತುವಿಗೆ ಶಿಕ್ಷೆ ಕೊಟ್ಟು ಪ್ರಯೋಜನವಿಲ್ಲ ಎಂಬ ತಿಳಿವು ಹೊಳೆದು ಎಡಗೈಯಲ್ಲಿ ಹಿಡಿದಿದ್ದ ರಿಸೀವರನ್ನೊಮ್ಮೆ ನೋಡಿದಳು ಅದು ಆಕೆಯನ್ನೇ ನೋಡಿ ನಕ್ಕಂತೆ ಭಾಸವಾಯಿತು. ಅದರ ನೋಟದಿಂದ ತಪ್ಪಿಸಿಕೊಳ್ಳಲು ಅದನ್ನು ಅದರ ಸ್ವ-ಸ್ಥಾನದಲ್ಲಿಟ್ಟಳು. ಆಗಲೂ ಅದು 'ಫಟ್' ಎಂದು ನಕ್ಕಿತು.

ಇಂದು ಮನೆಯಲ್ಲಿರುವ ವಸ್ತುಗಳಿಗೆಲ್ಲಾ ಇಂದೇನೋ ಅಗೋಚರ ಜೀವ ಬಂದಿದೆ. ಅದಕ್ಕೇ ಅವು ತನ್ನನ್ನು ಅಣಕಿಸುತ್ತಿವೆ. ಅವುಗಳ ಗೊಡವೆಯೇ ತನಗೆ ಬೇಡವೆಂದು ಬಾನು ಹಾಗೇ ಮಂಚದ ತುದಿಗೊರಗಿ ಕುಳಿತಳು. ಆಗಲೂ ತಿಂಗಳಿಗೊಂದೊಂದು ವಸ್ತ್ರವ ಬದಲಿಸುವಂತೆ ಪುಟ ತಿರುಗಿಸಿ ನಳನಳಿಸುತ್ತಾ ಗೋಡೆಯ ಮೇಲೆ ನೇತಾಡುತ್ತಿದ್ದ ಕ್ಯಾಲೆಂಡರ್ ಅವಳ ಗಮನ ಸೆಳೆಯಿತು. ಅದನ್ನು ಮುದ್ದಿನಿಂದೆತ್ತಿ ತೊಡೆಯ ಮೇಲಿಟ್ಟುಕೊಂಡು ಒಂದೊಂದೇ ಹಾಳೆಯನ್ನು ತಿರುವುತ್ತಾ ಮುಂಬರುವ ದಿನಗಳನ್ನು ತನ್ನ ಕಣ್ಮುಂದೆ ತಂದುಕೊಂಡಳು. ಹೀಗೆ ನೋಡುತ್ತಿದ್ದಾಗ ರಂಜಾನು ಹಬ್ಬಕ್ಕೆ ಇನ್ನೆರಡೇ ತಿಂಗಳುಗಳಿವೆ ಎಂಬುದು ತಿಳಿದು ಮನಸ್ಸು ಉಲ್ಲಸಿತವಾಯಿತು. ರಂಜಾನು ಹಬ್ಬದ ಸಡಗರ ಸಂಭ್ರಮಗಳೆಲ್ಲಾ ಮನಸ್ಸಿನಲ್ಲಿ ಹಸಿ-ಹಸಿಯಾಗಿ ಮೂಡತೊಡಗಿದವು. ಹಬ್ಬಕ್ಕೆ ಬರುವ ನೆಂಟರಿಷ್ಟರು, ಹಬ್ಬದ ನೆವದಲ್ಲಾದರೂ ಬರುವ ಅಕ್ಕಂದಿರು, ತಮ್ಮ ಪುಟ್ಟ ಪುಟ್ಟ ಕಾಲ್ಗಳಲ್ಲಿ ಪಟಪಟನೆ ಓಡಾಡುತ್ತಾ ಮುದ್ದು ಮಾತಿನಿಂದ ಇಡೀ ಮನೆಯನ್ನೇ ಗಿಜಿಗುಡಿಸುವ ಅವರ ಮಕ್ಕಳು, ಹಬ್ಬಕ್ಕಿಂತಲೂ ಮೊದಲೇ ಹತ್ತುಬಾರಿ ಶುಭಾಷಯ ಕೋರುವ ಕೃಪಾ, ಶುಭಾ, ಉಷಾ ಮೊದಲಾದ ಗೆಳತಿಯರು, ಹೀಗೆ ಎಲ್ಲವೂ ಒಮ್ಮೆಗೇ ನೆನಪಾದವು. ಇವೆಲ್ಲಾ ನೆನಪಿನಿಂದ ಮನಸ್ಸು ಉಡುಗೆ-ತೊಡುಗೆಯ ಕಡೆ ಹರಿದು ಬಾರಿ ಹಬ್ಬಕ್ಕೆ ಹೇಗಾದರೂ ಮಾಡಿ ಒಂದು ಒಳ್ಳೆಯ ಚೂಡಿ ತರಿಸಲೇಬೇಕು ಎನಿಸಿತು. ಹೀಗೆ ತನ್ನ ಬಟ್ಟೆಯ ಬಗ್ಗೆ ಯೋಚನೆ ಹರಿದದ್ದೇ ತಡ ಕಳೆದ ಹದಿನೈದು ದಿನಗಳಿಂದಲೂ ತೊಳೆಯದೇ ಹಾಗೇ ನೇತಾಕಿದ್ದ ತನ್ನ ಬಟ್ಟೆಗಳ ನೆನಪಾಗಿ ಧಡಕ್ಕನೆ ಹೊರಗೋಗಿ ಸೂರ್ಯನನ್ನೊಮ್ಮೆ ದಿಟ್ಟಿಸಿದಳು. ನೆತ್ತಿಯ ಮೇಲೆ ಮೇಲೆ ಹತ್ತಲೆತ್ನಿಸುತ್ತಿದ್ದ ಸೂರ್ಯನ ಬಿಸಿಲು ಭೂಮಿಯ ಬಣ್ಣವನ್ನೇ ಬದಲಾಯಿಸುವಂತಿತ್ತು. ತೊಳೆದು ಹಾಕುತ್ತಿದ್ದಂತೆ ಬಟ್ಟೆಗಳು ಒಣಗುವುದು ಗ್ಯಾರಂಟಿ, ಹಾಗೇನೆ ಇಸ್ತ್ರೀನೂ ಮಾಡ ಬಹುದು ಎಂದೆಣಿಸಿ ನಾಲೆಯ ಮೇಲೆ ಜೋತು ಬಿದ್ದಿದ್ದ ಕೆಲವು ಚೂಡಿಗಳನ್ನು ಒಂದೆರಡು ನೈಟಿಗಳನ್ನು ಬಗಲಿಗವುಚಿಕೊಂಡು ಕೈಯಲ್ಲಿ ಒಂದು 'ಸುಂದರಿ'ಯನ್ನಿಡಿದು ಬಚ್ಚಲು ಮನೆಕಡೆ ನಡೆದಳು.

ಬಾನು ಒಂದೊಂದೇ ಚೂಡಿಯನ್ನು ನೆನೆಸಿ ಸೋಪು ಹಚ್ಚುತ್ತಿದ್ದಂತೆ ಅದನ್ನು ತರಲು ತಾನು ಪಟ್ಟ ಪರಿಶ್ರಮಗಳೆಲ್ಲಾ ಮಿದುಳಿನಾಳದಲ್ಲಿ ಅನಾವರಣಗೊಳ್ಳುತ್ತಿದ್ದವು. ಅಣ್ಣನ ಮದುವೆಯಲ್ಲಿ ಮನೆಯವರು ಸ್ವ-ಇಚ್ಚೆಯಿಂದ ಎರಡು ಚೂಡಿ ತಂದಿದ್ದು ಬಿಟ್ಟರೆ ಉಳಿದೆಲ್ಲವೂ ತಾನು ಕಾಡಿ-ಬೇಡಿ ತರಿಸಿಕೊಂಡಂತಹವೇ ಆಗಿದ್ದವು. ಹೀಗೆ ನಾನಾ ನೆನಪುಗಳೊಂದಿಗೆ ಎಲ್ಲವನ್ನೂ ತೊಳೆದು ಕೊನೆಯಲ್ಲಿ ತನಗೆ ಅಚ್ಚು ಮೆಚ್ಚೆನಿಸಿದ ಪಳಪಳನೆ ಹೊಳೆವ ಕೆಂಪು ಚೂಡಿಯನ್ನು ತೊಳೆಯಲು ಕೈಯಲ್ಲಿ ಹಿಡಿಯುತ್ತಿದ್ದಂತೆ ಎದೆ ಒಡೆಯುವಂತಹ ಆಘಾತವಾಯಿತು. ಕಳೆದೊಂದು ವಾರದಿಂದ ತೊಡದೇ ಹಾಗೇ ಇಟ್ಟಿದ್ದ ಚೂಡಿಯನ್ನು ಇಲಿ ಎಂಬೋ ಪ್ರಾಣಿ ತನಗೆ ಮನಬಂದಂತೆ ಕಚ್ಚಿ-ಕಡಿದು ಹಾಕಿತ್ತು. ಬರೋಬ್ಬರಿ ಅಂಗೈ ಅಗಲದಷ್ಟನ್ನಾದರೂ ತುಂಡು ಮಾಡಿತ್ತು.! ಅರೆಕ್ಷಣ ಬಾನೂಗೆ ಏನು ಮಾಡಲೂ ತೋಚದಾಯಿತು. ಇಲಿ ಎಲ್ಲಿಯಾದರೂ ಸಿಕ್ಕಿದರೆ ಸುಟ್ಟು ಬೂದಿ ಮಾಡುವಷ್ಟು ಕೋಪ ನೆತ್ತಿಗೇರಿತು. ಆದರೂ ತನ್ನ ಅಸಹಾಯಕತೆಯ ಅರಿವಾಗಿ ಅಳುವುದೊಂದೇ ಬಾಕಿಯುಳಿಯಿತು. ಇಡೀ ಚೂಡಿಯನ್ನು ಎತ್ತಿ ತನ್ನ ಮೈ ಗೆ ಆನಿಸಿ ಹಿಡಿದಳು- ಪ್ಯಾಚುಮಾಡಿ ಧರಿಸಬಹುದೇನೋ ಎಂಬ ಆಸೆಯಿಂದ. ಆದರೆ ಇಲಿ ಚೂಡಿಯ ಹಿಂಬಾಗದ ಸೊಂಟದ ಭಾಗವನ್ನೇ ತುಂಡರಿಸಿಬಿಟ್ಟಿತ್ತು. 'ಪ್ಯಾಚು' ಮಾಡಿ ತೊಟ್ಟರೂ ಅಸಹ್ಯವಾಗಿ ಕಾಣುವಂತಿತ್ತು. ಅದರ ವೇಲೂ ಸಹ ಅದನ್ನು ಮುಚ್ಚುವಂತಿರಲಿಲ್ಲ.

ಅದಾಗಲೇ ಬಿಸಿಲ ಝಳದಿಂದ ಬಳಲಿ ಬಂದ ಬೇಗಂ ಒಳಗಡಿ ಇಡುತ್ತಿದ್ದಂತೆ ಬಾನು ಕುಡಿಯಲು ತಣ್ಣನೆಯ ನೀರು ತಂದುಕೊಟ್ಟಳು, ಜೊತೆಗೆ ಇಲಿಕಡಿದ ಚೂಡಿಯನ್ನು ತಂದು ತೋರಿಸಿ ತನ್ನ ಅಳಲನ್ನು ತೋಡಿಕೊಂಡಳು. ಎಲ್ಲವನ್ನೂ ಗಮನಿಸಿದ ಬೇಗಂ ನಿರ್ಲಿಪ್ತತೆಯಿಂದ "ಹ್ಞಾ.. ನಂ ಬಗ್ಗೆ ನಮಿಗೆ ಜವಾಬ್ದಾರಿಲ್ಲಾಂದ್ರೆ ಹೀಂಗೇ ಆಗೋದು, ಬಟ್ಟೆನಾದ್ರೂ ಅಷ್ಟೇ ಬಾಳಾದ್ರೂ ಅಷ್ಟೇ" ಎಂದಾಗ ಬಾನುಗೆ ತಾಯಿಯ ಮಾತಿನ ತಳ ಬುಡ ಅರ್ಥವಾಗಲಿಲ್ಲ. " ನಂಗೆ ಅದೆಲ್ಲಾ ಗೊತ್ತಾಗೊಲ್ಲಮ್ಮ, ನನ್ನ ಬಂಗಾರದಂತ ಡ್ರೆಸ್ ಇಲಿ ತಿಂದು ಹಾಕಿದೆ. ನನಗೀಗ ಇನ್ನೊಂದು ಡ್ರೆಸ್ ಕೊಡುಸ್ತೀಯೋ ಇಲ್ವೋ..? " ಎಂದು ಸ್ವಲ್ಪ ಬಿರುಸಾಗಿಯೇ ಕೇಳಿದಳು ಬಾನು. "ನನ್ನ ಬಳಿ ನಯಾ ಪೈಸೆನೂ ಇಲ್ಲಮ್ಮಾ ಬೇಕಾದ್ರೆ ನಿಮ್ಮಣ್ಣನ ಕೇಳ್ಕೋ ಹೋಗ್" ಎಂದೇಳಿ ಮುಖ ತಿರುಗಿಸಿದರೂ ಬೆನ್ನು ಬಿಡದ ಬಾನು " ಪ್ಲೀಸ್ ಅಮ್ಮಾ, ಈಗ ಬೇಡಮ್ಮಾ, ಇನ್ನೆರಡು ತಿಂಗಳಲ್ಲಿ ರಂಜಾನ್ ಬರುತ್ತೆ ಆಗ ಕೊಡ್ಸಮ್ಮಾ" ಎಂದು ಅನುನಯವಾಗಿ ಬೇಡಿಕೊಂಡಾಗ ಬೇಗಂಗೆ 'ಇಲ್ಲ' ಎನ್ನಲಾಗಲಿಲ್ಲ. 'ನೋಡೋಣ' ಎಂದಷ್ಟೇ ಹೇಳಿ ಅಡುಗೆ ಮನೆ ಒಳಹೊಕ್ಕಳು.

ರಾತ್ರಿ ಮಲಗಿದಾಗಲೂ ಕೂಡಾ ಬಾನು ಗೆ ತನ್ನಚೂಡಿಯ ನೆನಪು ಕಾಡುತ್ತಿತ್ತು. ! ಜೊತೆಗೆ ಇಲಿಗಳ ಬಗೆಗಿನ ಕೋಪವೂ ಇಮ್ಮಡಿಸುತ್ತಿತ್ತು. ತಾನು ಮಲಗಿದ ಮಂಚದಡಿಯಲ್ಲಿ ಹಲ್ಲಿಯೋ ಜಿರಲೆಯೋ, ಸರಕ್ಕೆಂದರೂ ಸಹ ದೀಪ ಹಾಕಿ ತಳ-ಬುಡ ಸೋಸುತ್ತಿದ್ದಳು. ಏನೂ ಕಾಣದಿದ್ದರೂ ಸಹ ದಿನಾಲು ಇಲಿಹುಡುಕುವುದ ಬಿಡುತ್ತಿರಲಿಲ್ಲ. ಇನ್ನುಳಿದ ಚೂಡಿಗಳಿಗೂ ಅಂತಹ ದುರ್ಗತಿ ಒದಗದಿರಲೆಂದು ಒಂದೆರಡು ರಾತ್ರಿ ಪಕ್ಕದ ಮನೆಯ ಬೆಕ್ಕನ್ನು ತಂದೂ ಸಹ ಹಾಲೆರೆದು ತನ್ನ ಬಳಿ ಇಟ್ಟುಕೊಂಡಳು. ಆದರೆ ಅವಳಿಗೆ ನಿದ್ರೆ ಹತ್ತುತ್ತಿದ್ದಂತೆ ಅದು ಒಡತಿಯ ಮನೆ ಸೇರಿರುತ್ತಿತ್ತು!

ಬಾನು ಕಾಲೇಜಿಗೆ ಹೋದಾಗಲೂ ಸಹ ತನ್ನ ಗೆಳತಿಯರೊಡನೆ ತನ್ನ ಗತಿಸಿದ ಚೂಡಿಯ ವರ್ಣನೆ ಮಾಡಿದ್ದೇ ಮಾಡಿದ್ದು. ತನ್ನ ವ್ಯಥೆಯನ್ನು ಹೇಳಿದ್ದೇ ಹೇಳಿದ್ದು. ಯಾರ ಕೆಂಪನೆಯ ಡ್ರೆಸ್ ಕಂಡರೂ ಬಾನುಗೆ ತನ್ನ ಚೂಡಿಯ ನೆನಪು ಬರುತ್ತಿತ್ತು. ಇನ್ನೊಂದು ಬಂದು ಅದರ ಸ್ಥಾನ ತುಂಬಿ ಅವಳ ಮೈ ಅಲಂಕರಿಸುವವರೆಗೂ ಅವಳ ಮನಸ್ಸು ಗತ ಚೂಡಿಯ ನೆನಪಿನಿಂದ ಹೊರಬರಲು ಸಾಧ್ಯವಿರಲಿಲ್ಲ. ಹೊಸದನ್ನು ತರಿಸಿಕೊಳ್ಳಲು ಬಾಯ್ಬಿಟ್ಟು ಅಣ್ಣನೊಡನೆ ಕೇಳುವ ಧೈರ್ಯವೂ ಆಕೆಗಿರಲಿಲ್ಲ.

ಮೊದಲೆಲ್ಲಾ ಆಗಿದ್ದರೆ ಬಾನು ಅಣ್ಣನೊಡನೆ ನೇರವಾಗಿ ಮಾತನಾಡುತ್ತಿದ್ದಳು. ತಮಾಷೆ ಮಾಡುತ್ತಿದ್ದಳು. ಹರಟೆ ಹೊಡೆಯುತ್ತಿದ್ದಳು. ಜೋಕ್ ಹೇಳಿ ನಗಿಸುತ್ತಿದ್ದಳು. ಅವನೂ ಅಷ್ಟೇ ತಂಗಿಯೊಡನೆ ಬಹಳ ಪ್ರೀತಿಯಿಂದಲೇ ಮಾತನಾಡುತ್ತಿದ್ದ. ತಾನು ಏನೇ ತಂದರೂ ತಂಗಿಗೆ ಮೊದಲು ತೋರಿಸುತ್ತಿದ್ದ. ಅವಳು ಏನೇ ಕೇಳಿದರೂ 'ಇಲ್ಲ' ಎನ್ನದೆ ತಂದು ಕೊಡುತ್ತಿದ್ದ. ಆದರೆ ಅವನ ಮದುವೆ ಯಾವಾಗ ಆಯ್ತೋ ಆಗಿನಿಂದ ಅವನ ವರ್ತನೆಗಳು ಬದಲಾದವು. ತಂಗಿ ಏನೇ ಕೇಳಿದರೂ ಗದರಿಸುವ ದನಿಯಲ್ಲೇ ಅವನ ಮಾತುಗಳಿರುತ್ತಿದ್ದವು. ಮೊದಮೊದಲು ಬಾನು, ಅಣ್ಣನ ಪ್ರೀತಿಯಲ್ಲಿ ಅತ್ತಿಗೆ ಪಾಲು ಪಡೆದಿದ್ದರ ಪರಿಣಾಮವಿದು ಅಂದುಕೊಂಡಳಾದರೂ ಪ್ರೀತಿಯಲ್ಲಿ ಪಾಲು ಮಾಡಲಾಗದೆಂಬುದು ಅರಿವಾಗುತ್ತಿದ್ದಂತೆ ತನ್ನನ್ನು ನಿಯಂತ್ರಿಸಲು ಅಣ್ಣ ಬಳಸುತ್ತಿರುವ ಅಸ್ತ್ರವಿದು ಎಂದು ಮನವರಿಕೆಯಾಯಿತು.

ಬಾನು ಹೈಸ್ಕೂಲು ಮುಗಿಸಿ ಕಾಲೇಜು ಸೇರುವುದೂ ಸಹ ಅಣ್ಣ ಹಮೀದನಿಗೆ ಇಷ್ಟವಿರಲಿಲ್ಲ. ಅವಳ ತಾಯಿ ಮತ್ತು ಅವಳ ಮೇಲೆ ಅತೀವ ಪ್ರೀತಿ ಹೊಂದಿದ್ದ ತಂದೆಯಿಂದಾಗಿ ಬಾನು ಕಾಲೇಜು ಮೆಟ್ಟಿಲು ಹತ್ತುವಂತಾಗಿತ್ತು. ಆದರೆ ವಿಧಿಗೆ ಏನನ್ನಿಸಿತೋ ಏನೋ ಬಾನು ಪ್ರಥಮ ಪಿ.ಯು.ಸಿ. ಮುಗಿಸುವಷ್ಟರಲ್ಲಿ ಅವಳ ತಂದೆ ವಿಧಿವಶರಾದರು. ಅಂದಿನಿಂದ ಅವಳ ಅಂತಃಸತ್ವವೇ ಅಡಗಿಹೋದಂತಾಯಿತು. ಈಗ ತಾಯಿಯ ಬೆಂಬಲವೊಂದರಿಂದಲೇ ಕಾಲೇಜಿಗೆ ಹೋಗುತ್ತಿರುವಳಾದರೂ ಬೆಂಬಲದ ಶಕ್ತಿ ಕ್ಷಣಿಕವಾದದ್ದು ಎಂಬುದರಲ್ಲಿ ಅನುಮಾನವಿರಲಿಲ್ಲ. ಅಪ್ಪನ ಮರಣದ ನಂತರ ಮನೆಯ ಜವಾಬ್ದಾರಿ ಅಣ್ಣನ ಹಿಡಿತದಲ್ಲಿದ್ದುದರಿಂದ ಹಾಗೂ ಅಣ್ಣನ ಕೈಗಳೇ ತಮ್ಮ ಹೊಟ್ಟೆಯನ್ನೂ ತುಂಬಿಸುತ್ತಿದ್ದುದರಿಂದ ಬಾನು ಮತ್ತು ಬೇಗಂ ಹಮೀದನ ಅಣತಿಯಂತೆ ನಡೆಯುವುದು ಅನಿವಾರ್ಯವಾಗಿತ್ತು. ಹೀಗಾಗಿ ಬಾನು ಅಣ್ಣನೆದುರಿಗೆ ಗಟ್ಟಿಯಾಗಿ ಮಾತನಾಡುತ್ತಿರಲಿಲ್ಲ. ತತ್ಪರಿಣಾಮವಾಗಿ ಅತ್ತಿಗೆಯೊಡನೆಯ ಮಾತೂ ಅಷ್ಟಕಷ್ಟೆ. ಏನಾದರೂ ಕೇಳಿದರೆ ಹಾಂ, ಹೂಂ ಎಂದಷ್ಟೇ ಉತ್ತರ. ಎಲ್ಲಿ ಅತ್ತಿಗೆಯೊಡನೆ ಅತಿ ಸಲುಗೆಯಿಂದ ವರ್ತಿಸಿದರೆ ಅಣ್ಣ ಬಯ್ಯುತ್ತಾನೋ ಎಂಬ ಅಂಜಿಕೆ. ಇಂತಹ ಸ್ಥಿತಿಯಲ್ಲಿ ಬಾನು ಹೇಗೆ ತಾನೇ ಅಣ್ಣನ ಬಳಿ ಧೈರ್ಯದಿಂದ ಕೇಳಿ ತನ್ನ ಬೇಡಿಕೆ ಈಡೇರಿಸಿಕೊಂಡಾಳು.? ಅದಕ್ಕಾಗಿಯೇ ಬಾನು ತನ್ನ ತಾಯಿಯ ಮೂಲಕ ಒತ್ತಡ ತಂದು ತನ್ನ ಆಸೆ ಪೂರೈಸಿಕೊಳ್ಳುತ್ತಿದ್ದಳು.

********

ರಂಜಾನು ಹಬ್ಬಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಅಕ್ಕಂದಿರು ಅವರ ಮಕ್ಕಳೆಲ್ಲಾ ಜಮಾಯಿಸಿದರು. ಮನೆಯ ಯಾವ ಮೂಲೆಯಲ್ಲಿ ನೋಡಿದರೂ ಹಬ್ಬದ ವಾತಾವರಣ. ಸದಾ ಬಣಗುಡುತ್ತಿದ್ದ ಮನೆಯಲ್ಲಿ ಪುಟ್ಟ ಮಕ್ಕಳ ಕಲರವ. ಮಕ್ಕಳು ಕಳೆದ ವರ್ಷ ತನ್ನ ಟಾಲ್ಕಂ ಪೌಡರನ್ನು ನೀರಿನಲ್ಲಿ ಅದ್ದಿ ಮುದ್ದೆ ಮಾಡಿದ್ದು ಬಾನುಗೆ ನೆನಪಾಗಿ ಈಗ ಅವುಗಳ ಕೈಗೆ ಏನೂ ಸಿಗದಂತೆ ಎಚ್ಚರಿಕೆ ವಹಿಸಿದಳು. ತಾನೂ ಸಹ ಕಾಲೇಜಿಗೆ ರಜೆ ಹಾಕಿ ಎಲ್ಲರೊಡಗೂಡಿ ರಂಜಾನು ಆಚರಿಸಿದಳು. ಬಹುದಿನಗಳಿಂದ ಒತ್ತಡ ತಂದಿದ್ದರ ಫಲಶೃತಿ ಎಂಬಂತೆ ಹಬ್ಬಕ್ಕೊಂದು ಚೂಡಿಯೂ ಬಂದಿತ್ತು. ಅದು ಇಲಿ ಕಡಿದು ಹಾಳಾದ ಚೂಡಿಯನ್ನು ಹೋಲುತ್ತಿರಲಿಲ್ಲವಾದರೂ ಹೊಸದಾದುದರಿಂದ ಅದು ಚೆನ್ನಾಗಿಯೇ ಇತ್ತು. ಆಸೆ ಪಟ್ಟಂತೆ ಬಾನು ಹೊಸ ವಸ್ತ್ರತೊಟ್ಟು ಹಬ್ಬ ಆಚರಿಸಿದಳು, ಖುಷಿಪಟ್ಟಳು, ಸಂಭ್ರಮಿಸಿದಳು.

ಹಬ್ಬ ಮುಗಿದ ಒಂದು ವಾರಕ್ಕೇ ಅಕ್ಕಂದಿರೆಲ್ಲಾ ತಂತಮ್ಮ ಊರಿಗೆ ಹೊರಟು ಹೋಗುತ್ತಿದ್ದಂತೆ ಮನೆ ಬಣಗುಡಲಾರಂಭಿಸಿತಾದರೂ ನಾಳೆಯಿಂದ ಕಾಲೇಜಿಗೆ ಹೋಗಬೇಕೆಂಬ ಸಂತಸವೂ ಬಾನುವಿನ ಮನಸ್ಸಿನಾಳದಲ್ಲಿ ಮೇಳೈಸಿದ್ದರಿಂದ ಅದರ ಪರಿಣಾಮ ಬಾನುವಿಗಾಗಲಿಲ್ಲ.

ನವ ಚೈತನ್ಯದಿಂದೆಂಬಂತೆ ಬೆಳಿಗ್ಗೆ ಎದ್ದು ಹೊಸ ಚೂಡಿಯನ್ನು ತೊಟ್ಟು ಕಾಲೇಜಿಗೆ ಹೊರಡಲು ಅಣಿಯಾಗುತ್ತಿದ್ದ ಬಾನುಳ ಬಳಿ ಬಂದ ಬೇಗಂ " ಬೇಬೀ ತಗೋ, ಇವತ್ನಿಂದ ಇದನ್ನೂ ಹಾಕೊಂಡೋಗು" ಎಂದು ಒಂದು ಕಪ್ಪನೆಯ ಕವರನ್ನು ಮಗಳ ಕೈಗಿತ್ತಳು. ಬಾನು ಆಶ್ವರ್ಯಾಭರಿತ ಕುತೂಹಲದಿಂದ ಬಿಚ್ಚಿದಾಕ್ಷಣ ಹೃದಯವೇ ಒಮ್ಮೆ ನಿಂತು ಹೋದಂತೆನಿಸಿತು. "ಬು...ರು...ಖಾ.... ಯಾರಿಗಮ್ಮಾ.. ಇದು" ತೊದಲುತ್ತಲೇ ನುಡಿದಳು ಬಾನು. " ನಿನ್ಗೇ ಕಣಮ್ಮಾ... ಮೊನ್ನೇನೆ ನಿಮ್ಮಣ್ಣ ತಂದಿಟ್ಟಿದ್ದ. ಇನ್ಮೇಲೆ ನೀನೆಲ್ಲಿಗೇ ಹೋಗೋದಾದ್ರೂ ಇದ್ನ ಹಾಕೊಂಡೇ ಹೋಗ್ಬೇಕಂತೆ" ತನ್ನಾಜ್ಞೆಯಲ್ಲವಿದು ಎನ್ನುವ ರೀತಿಯಲ್ಲಿ ಬೇಗಂ ಹೇಳುತ್ತಿದ್ದರೂ ಬಾನುಗೆ ತನ್ನಮ್ಮನೂ ಕೂಡಾ ತನ್ನ ಸ್ವಾತಂತ್ರ್ಯದ ಸಂಹಾರ ಮಾಡುತ್ತಿರುವಂತೆ ತೋರಿತು. " ಯಾಕಮ್ಮಾ ಇದು ? ನಾನೇನು ಇಷ್ಟು ದಿನ ಹಾಗೇ ಹೋಗಿ ಬರಲಿಲ್ವಾ..? ಮಾತು ಮಾತಿಗೂ ಬಾನೂಳ ದ್ವನಿ ಗದ್ಗಧಿತವಾಗುತ್ತಿತ್ತು. ಇಷ್ಟು ದಿನ ತನ್ನಣ್ಣನ ಅನುಮಾನದ ಪಹರೆಯನ್ನು ಸಹಿಸಿದ್ದಳು. ಕಿಂಚಿತ್ತೂ ಅನುಮಾನ ಬರದಂತೆ ನಡೆದಿದ್ದಳು ಕೋಡಾ. ಆದರೂ ತನ್ನಣ್ಣ ತನ್ನ ಸೌಂದರ್ಯ ಮುಚ್ಚುವ ಪ್ರಯತ್ನ ಮಾಡಿದ್ದು ಅವಳಲ್ಲಿ ಅತೀವ ದು: ತಂದಿತು. ಇಡೀ ತರಗತಿಯಲ್ಲಿ ಒಬ್ಬಳೇ ಇರುವ ತಾನು ಬುರುಖಾ ಧರಿಸಿ ಕುಳಿತುಕೊಳ್ಳುವುದನ್ನು ನೆನಪಿಸಿಕೊಳ್ಳಲೂ ಅವಳಿಂದ ಸಾಧ್ಯವಾಗಲಿಲ್ಲ. ಕಂಬನಿ ತುಂಬಿದ ಕಂಗಳಿಂದಲೇ " ಇಲ್ಲ, ಆಗೊಲ್ಲಮ್ಮ; ನನ್ನಿಂದ ಖಂಡೀತಾ ಸಾಧ್ಯವಿಲ್ಲ. ಕಾಲೇಜಿಗೆ ಹೋಗೋದನ್ನೇ ಬಿಡು ಅನ್ನು, ಬಿಡ್ತೀನಿ. ಆದ್ರೆ ಮುಸುಕಾಕ್ಕೊಂಡು ಕಾಲೇಜಿಗೆ ಹೋಗು ಅಂತ ಖಂಡಿತಾ ಹೇಳ್ಬೇಡಾ" ಎನ್ನುತ್ತಾ ಗೋಡೆಗೆ ತಲೆಕೊಟ್ಟು ರೋಧಿಸಲಾರಂಭಿಸಿದಳು. ಮಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಳಾದರೂ ಬೇಗಂ " ಹಾಂಗೆಲ್ಲ ಹಠ ಮಾಡ್ಬಾರ್ದಮ್ಮ. ನಮ್ಮ ರಕ್ಷಣೆಗೆ ನಾವಿದನ್ನು ಹಾಕೊಳ್ಲೇ ಬೇಕು. ನಾನು ನಿನ್ ಗಿಂತ ಸಣ್ಣೋಳಿದ್ದಾಗ್ಲೇ ಹಾಕ್ತಿದ್ದೆ. ಇದು ನಂ ಧರ್ಮದ ಸಂಪ್ರದಾಯ" ಎಂದರೂ ಬಾನು ಅವಳಾವ ಮಾತಿಗೂ ಕಿವಿಕೊಡದಂತೆ ರೋಧಿಸುತ್ತಲೇ " ಬರೀ ಬಟ್ಟೆ ನಮ್ಮ ಜೀವನಾನೇ ರಕ್ಷಿಸುತ್ತಾ..? ಇದಾವುದೂ ಇಲ್ದೆ ಇರೋ ನನ್ನ ಗೆಳತಿಯರಿಲ್ವಾ..? ಅವರದೂ ಜೀವ ಅಲ್ವಾ..? ಎಂದೆಲ್ಲಾ ಪ್ರಶ್ನಿಸಿದಳು. ಮಗಳ ಪ್ರಶ್ನೆಗಳಿಗೆ ಉತ್ತರ ಕಾಣದ ಬೇಗಂ ಒದ್ದೆ ಕಣ್ಣುಗಳಿಂದಲೇ ಒಳ ಹೋದರು. ಅಲ್ಲೇ ಕುಸಿದು ಕುಳಿತ ಬಾನು ಅಗಿನ್ನೂ ಕಾಲಡಿಯೇ ಬಿದ್ದಿದ್ದ ಬುರುಕಾವನ್ನು ಬೀಸಿ ಎಸೆದು, ತನ್ನ ಮೊಣಕಾಲುಗಳೆರಡನ್ನೂ ಕೈಗಳಿಂದ ಬಂಧಿಸಿ, ನಡುವೆ ತಲೆ ಹುದುಗಿಸಿ ಮುಸಿ-ಮುಸಿ ಅಳುತ್ತಾ ಕುಳಿತಳು. ಕುಳಿತ ಬಾನೂಳ ತಲೆಯಲ್ಲಿ ಸಾವಿರಗಟ್ಟಲೆ ಯೋಚನೆಗಳು ಹರಿದಾಡಿದವು. ನಡು ನಡುವೆ ಎರಡು ಬಾರಿ ಮಗಳನ್ನು ಸಮಾಧಾನಿಸಲು ಬಂದ ಬೇಗಂ ಅದು ಸಾಧ್ಯವಾಗದೇ ಕೈಚೆಲ್ಲಿ ಗುರುವಾರದ ಸಂತೆಗೆಂದು ಸಾಗರಕ್ಕೆ ಹೋದರು.

ಮಧ್ಯಾಹ್ನ ಊಟಕ್ಕೆ ಬಂದ ಹಮೀದ ಹೆಂಡತಿಯಿಂದ ಮನೆಯ ಪರಿಸ್ಥಿತಿಯನ್ನರಿತ ನಂತರ " ಇನ್ಮೇಲೆ ಬುರುಖಾ ಹಾಕದೆ ಹೊಸಲು ದಾಟಬಾರದು" ಎಂದಿದ್ದು, ಬಾನೂಳ ಕಿವಿಗೂ ಕೇಳಿ ಅನುರಣನಗೊಳ್ಳತೊಡಗಿತು. 'ಇನ್ನು ಮುಂದೆ ಪ್ರತಿದಿನವೂ ನನಗೆ ಭಾನುವಾರವೇ' ಎಂದು ಮನದಲ್ಲೇ ದುಃಖಿಸುತ್ತಾ ಬಾನು ಕುಳಿತಿದ್ದಾಗಲೇ ಅವಳಿಗೇ ಅರಿವಿಲ್ಲದೆ ಅಲ್ಲೇ ಮಂಪರು ಹತ್ತಿ ನಿದ್ದೆ ಬಂದು ಬಿಟ್ಟಿತ್ತು.! ಎಚ್ಚರವಾದಾಗ ಸಂಜೆಯಾಗಿತ್ತು. ಒಮ್ಮೆಗೇ ಕಣ್ಣು ಬಿಟ್ಟಾಗ ಎದುರಿಗೆ ತಾನೇ ಎಸೆದಿದ್ದ ಬುರುಕಾದ ಅಡಿಯಲ್ಲಿ ಇಲಿ ಕಡಿದು ಹಾಳು ಮಾಡಿದ್ದ ತನ್ನ ಕೆಂಪು ಚೂಡಿ ಸಿಕ್ಕಾಕಿಕೊಂಡಿರುವುದು ಮಸುಕು ಮಸುಕಾಗಿ ಕಾಣುತ್ತಿತ್ತು. ತನ್ನ ಆಸೆ, ಆಕಾಂಕ್ಷೆ, ಭಾವನೆಗಳ ರೂಪದಲ್ಲಿ ಚೂಡಿ ಬಿದ್ದಿದೆಯೇನೋ ಅನ್ನಿಸಿ ಕಿಟಕಿ ಸಂದಿಯಿಂದ ಹೊರಗೆ ನೋಡಿದರೆ ಬಾನಂಚಿನಲ್ಲಿ ಮೋಡದ ಮುಸುಕಿನಿಂದ ಮುಚ್ಚಲ್ಪಟ್ಟ ಸೂರ್ಯ ಮಸುಕು ಮಸುಕಾಗಿ ಕಾಣುತ್ತಿದ್ದ..!!

ಪರ್ಶು..,
renukatanaya@gmail.com

3 comments:

Anamika said...

Excellent ...

ಅತ್ಯುತ್ತಮ...

ಭಾಷೆ ... ಶಬ್ದಗಳು.. ಸಂದರ್ಭ ... ಒಂದೂ ಎಲ್ಲಿಯೂ ಹಳಿ ಬಿಟ್ಟಿಲ್ಲ...

ಇಂಥ ನೂರು ಕತೆ ನಿಮ್ಮಿಂದ ಬರಲಿ ಅಂತ ಹಾರೈಸ್ತೀನಿ..

ನಿಮ್ಮವ,
ರೇವಪ್ಪ

Anamika said...

ಸಂದರ್ಭ ಅಂದ್ರೆ ಕತೆಯ PLOT ಅನ್ನೋಕೋದೆ Actually....

yashavanth said...

ಹಾಯ್... ಪರಶು....
ಕತೆ ಚೆನ್ನಾಗಿದೆ, ಬಾನು ವಿನ ವ್ಯಕ್ತಿ ಸ್ವಾತಂತ್ರ ಮತ್ತು ಇಷ್ಟದ ಕೆಂಪು ಡ್ರೆಸ್ಸು , ಧಾರ್ಮಿಕ ಆಚರಣೆ ಮತ್ತು ಇಲಿಯ ದಾಳಿಗೆ ಬಲಿಯಾದದ್ದನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದೀರ.
ತಮ್ಮ ತಮ್ಮ ಭಾವನೆಗಳನ್ನ ಗೌರವಿಸಿ ಕಾಪಾಡಿಕೊಳ್ಳೋದು ವ್ಯಕ್ತಿ ಸ್ವಾತಂತ್ರದ ಮೂಲಾಂಶ,ಪರ್ದಾವನ್ನು ಗೌರವಿಸಿ ಆಚರಿಸೋದು ಅಥವ ಧಿಕ್ಕರಿಸೋದು ಎರಡೂ ವ್ಯಕ್ತಿ ಸ್ವಾತಂತ್ರದ ಮೂಲಾಂಶವೇ ಎಂಬುದು ನನ್ನ ಅಭಿಪ್ರಾಯ. ಇಲ್ಲಿ ಅವರವರ ನಂಬಿಕೆ ಮತ್ತು ಭಾವನೆಗಳೇ ಮುಖ್ಯ .
ಆದರೆ ದೌರ್ಜನ್ಯ&ಹೇರಿಕೆಗಳನ್ನು ಪ್ರತಿಭಟಿಸುವ ಮನೋಭಾವನೆಯನ್ನು ನಮ್ಮ ಜನ ರೂಢಿಸಿಕೊಳ್ಳಬೇಕು

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago