19 June 2009


.
ಪಟ್ಣದ ಜೀವ್ನ ತುಂಬಾ ಕಷ್ಟಪ್ಪಾ...




ಎರಡ್ಮೂರು ದಿನದಿಂದ ಎಡೆಬಿಡದೆ ಸುರಿದ ಮಳೆ ಇಂದು ಸ್ವಲ್ಪ ಹನಿಕಡಿದಿತ್ತು. ವಿಶಾಲವಾದ ಬಟಾ ಬಯಲು

ಗದ್ದೆಯೆಲ್ಲಾ ಕೆಂಪಾದ ನೀರಿನಿಂದ ತುಂಬಿತ್ತು. ಗದ್ದೆಯ ಕಡೆಗೊಮ್ಮೆ. ಆಕಾಶದ ಕಪ್ಪು ಮೋಡದ ಕಡೆಗೊಮ್ಮೆ

ಕಣ್ಣಾಯಿಸಿದ ಬೀರ ನಿಧಾನವಾಗಿ ರತ್ನಿಯ ಚಹಾದಂಗಡಿಯ ಕಡೆ ಹೆಜ್ಜೆ ಹಾಕತೊಡಗಿದ. ಬೀರ ರತ್ನಿಯ ಅಂಗಡಿ ಕಡೆ

ಹೊರಟಿದ್ದನ್ನು ದೂರದಲ್ಲಿ ಕಳ್ಳಸೋಮನೊಡನೆ ಮಾತನಾಡುತ್ತಾ ಮೋಟು ಕಟ್ಟೆಯ ಮೇಲೆ ಕುಳಿತು 'ದಂ'

ಎಳೆಯುತ್ತಿದ್ದ ಬೀಡಿ ಬಸ್ಯನೂ ಕಂಡು, ಅರೆ ಸೇದಿದ್ದ ಕೊರೆ ಬೀಡಿಯನ್ನು ನೆಲಕ್ಕೆಸೆದು, ಕಾಲ ಹೆಬ್ಬೆರಳಿನಿಂದ ಹೊಸಕಿ

ಮೇಲೆದ್ದ. ಇಬ್ಬರೂ ಪಂಚೆ ಸರಿಪಡಿಸಿಕೊಳ್ಳುತ್ತಾ ಬೀರನನ್ನು ಹಿಂಬಾಲಿಸಿದರು. ತನ್ನ ಚಹಾದಂಗಡಿಯ

ಹೊರಚಾವಡಿಯಲ್ಲಿ ಸೀತೆಯ ಹೇನು ಹೆಕ್ಕುತ್ತಾ ಕುಳಿತ ರತ್ನಿಯೂ ಬೀರನ ಆಗಮನಕ್ಕೆ ಹಿಗ್ಗಿ ಕಟ್ಟೆಯ ಮೇಲಿದ್ದ ಕಸ

ಗುಡಿಸತೊಡಗಿದಳು.

ಬೀರ: ಏಯ್ ರತ್ನಿ ಸಾಕು ಬಿಡು ಅದೇನ್ ಗುಡುಸ್ತೀಯೆ..? ನೀನು ಎಷ್ಟು ಗುಡುಸಿದ್ರೂ ಅಷ್ಟೇ... ಮಳೆ ಬಂತಂದ್ರೆ ಮತ್ತೆ ರಾಡಿ ಆಗಾದೇ... ಬೇಗ ನಾಕು ಲೋಟ ಚಾ ಮಾಡು.

ರತ್ನಿ: ನಾಕು ಲೋಟ ಯಾಕ್ ಮಾವಾ...!?

ಬೀರ: ಅಯ್ಯೋ..! ನನಗೊಬ್ನಿಗೇ ಅಲ್ಲವ್ವಾ..! ಅಲ್ಲಿ ಬರ್ತಿದಾವೆ ನೋಡು ಎಮ್ಮೆ ಹಿಂದೆ ಬಾಲ ಬಂದಂಗೆ ಅವ್ಕೂ ಸೇರಿ..

ಸೀತೆ: ಹ್ಹ ಹ್ಹ ಹ್ಹಾ ಬೀರ್ಮಾವಾ ನಿಜವಾಗ್ಲೂ ಅವು ಎಮ್ಮೆ ಬಾಲಾನೇ....!

ಬೀರ: ಹಾಳಾದವು ಹ್ಯಾಂಗೆ ಬರ್ತಾವೆ ನೋಡು.. ಒಂಚೂರಾದ್ರೂ..... ಹೋಗ್ಲಿ ಬಿಡು. ತಿನ್ನೋದು ತಿರುಗೋದು ಬಿಟ್ರೆ ಮತ್ತೇನೂ ಗೊತ್ತಿಲ್ಲ ಅವ್ಕೆ...

ರತ್ನಿ: ಯಾಕ್ ಮಾವಾ ಎರಡ್ಮೂರು ದಿನ್ದಿಂದ ಕಣ್ಣಿಗೇ ಕಾಣ್ಸುಲ್ಲಾ.....?

ಬೀರ: ಮಳೆ ಹೊರಗ್ ಬರಾಕ್ ಬಿಟ್ರೆ ತಾನೇ...!?

.

.

.

ಸೋಮ: ಏನ್ ದೊಡ್ಡಪ್ಪಾ..ಬಾಳಾ ಯೋಚ್ನೆ ಮಾಡ್ತಾ ಕುಂತೀಯಾ..? ಮಳೆ ಸಾಕೋ...? ಇನ್ನೂ ಬೇಕೋ..?

ಬೀರ: ಹಾಳಾದ್ ಮಳೆ ಈಗ್ಯಾರಿಗೆ ಬೇಕಾಗಿದೆ. ಒಂದ್ ನಾಕುದಿನ ಹೊಳವುಕೊಟ್ರಾಗದು.. ಹಕ್ಲು-ಮಕ್ಕಿಗೆಲ್ಲ ಒಂದಿಷ್ಟು

ಬೀಜ-ಗೀಜ ಹಾಕ್ಬೋದಿತ್ತು... ನೀವ್ ಹೀಂಗೆ ಅಡ್ಡಾಡದೂ ತಪ್ತುತ್ತು.... ಏನ್ ಮಾಡುತ್ತೋ ಏನೋ... ತಾಸ್ ತಾಸಿಗೂ

ಕಪ್ಪುಮಾಡ ಏರ್ತಾನೇ ಐತಿ..!

ಬಸ್ಯ: ಹೋಗ್ಲಿ ಬಿಡು ಚಿಗಪ್ಪಾ... ದೇವ್ರು ನಡೆಸಿದಂಗಾಗ್ತೈತಿ...

ರತ್ನಿ: ದೇವ್ರು ನಡೆಸಿದಂಗಾಗ್ತೈತಿ ಅಂತ ನಾವು ದುಡಿದೇ ಕುಂತ್ರೆ ಆಗ್ತೈತಾ..?

ಬೀರ: ಚೆನ್ನಾಗಂದೆ... ಯಾಸ್ ಗಳ್ಳಿಗೆ ಕೂಸಿನ ಹೆಳೆ ಅನ್ನಾಂಗೆ ಮಕ್ಳ ಸೋಂಬೇರಿತನ್ಕೆ ಮಳೆ ಹೆಳೆ......!

.....ಅದ್ಯಾರೋ

ಅಲ್ಲಿ ಬರ್ತಾ ಇರಂಗಿದೆ...!!?

ಸೋಮ: ಹೌದಲ್ಲಾ...!?

ಬಸ್ಯ: ಒಬ್ನು ನಮ್ ಸಣ್ಣೀರ..... ಇನ್ನೊಬ್ಬ ಯಾರಂವಾ....!?

ಸೀತೆ: ಡೋಂಟಿ ಇರ್ಬೇಕು ಬೀರ್ಮಾಂವಾ....!

ರತ್ನಿ: ಹೌದು... ಅವ್ನೇ ಮಾವಾ....

ಬೀರ: ಅಬ್ಬಬ್ಬಬ್ಬಾ.... ಬಡ್ಡಿಮಗ ಊರು ಬಿಟ್ಟು ಎಷ್ಟು ದಿನಾತು...!?

ರತ್ನಿ: ಹತ್ರತ್ರ ತಿಂಗಳಾಗಿರ್ಬೇಕು...!

ಸೀತೆ: ಈಗೆಲ್ಲೋ ಊರು ನೆನ್ಪಾಗಿರ್ಬೇಕು ಬೀರ್ಮಾಂವಾ...!

ಬೀರ: ಹೀಂಗೇ..... ಮಳೆ ಬಿದ್ಮೇಲೆ ಎಲ್ಲಾ ಮಕ್ಳಿಗೂ ಮನೆಗ್ಯಾನ ಆಗ್ಲೇ ಬೇಕು...!

.

.

ಡೋಂಟ್ವರಿ: ಏನ್ ಚಿಗಪ್ಪಾ...? ಎಲ್ರೂ ಆರಾಮಿದೀರಾ..? ರತ್ನಕ್ಕಾ.. ಒಳ್ಳೆ ಸ್ಪೆಷಲ್ ಚಾ ಮಾಡು. ನಿನ್ನ ಕೈ ಚಾ

ಕುಡಿದೇ ತುಂಬಾ ದಿನಾತು...ಟೇಸ್ಟೇ ಮರತೋದಂಗಾಗಿದೆ...!

ಬೀರ: ಎಲ್ಲಿ ಹಾಳಾಗೋಗಿದ್ಯೋ..? ಊರು-ಕೇರಿ, ಮನೆ-ಮಠ ನೆನಪೈತೋ ಇಲ್ಲೋ..?

ಡೋಂಟ್ವರಿ: ಎಲ್ಲಿಗೋಗೋದು ಚಿಗಪ್ಪಾ... ನಿಮ್ಮನ್ನೆಲ್ಲ ಮರೆತೊಗಾಕಾದಾತಾ..! ಪಾರ್ಟಿ ಪಕ್ಸದ ಕೆಲಸದಾಗೆ ಸ್ವಲ್ಪ ಬ್ಯುಸಿ ಅಷ್ಟೇ..!

ಬೀರ: ಏನ್ ಬಿಸಿನೋ, ತಣ್ಣನೋ... ಎಲ್ಲೆಲ್ಲಿ ತಿರುಗಿ ಬಂದೆ..?

ಸಣ್ಣೀರ: ಬಿಸಿ ಅಲ್ಲ ಚಿಗಪ್ಪಾ.. ಬ್ಯೂಸಿ ಅಂದ್ರೆ ಬಿಡುವಿಲ್ಲದ ಕೆಲಸ ಅಂಥಾ..

ಬೀರ: ಏನೋ.. ಅವ್ನು ಬಾಷೆ ನಿನಿಗೇ ಅರ್ಥಾಗಬೇಕು..!

ಡೋಂಟ್ವರಿ: ಹೀಂಗೇ ಊರು, ಊರು ಅಂಥೇಳಿ, ಬೆಂಗ್ಳೂರಾಗೆ ಒಂದತ್ತು ದಿನ ಇದ್ದು, ಗೆದ್ದಿರೋರ್ನೆಲ್ಲ ಡೆಲ್ಲಿಗೆ

ವಿಮಾನ ಹತ್ಸಿ ಬಂದ್ವಿ ಚಿಗಪ್ಪಾ...

ಬಸ್ಯ: ಓಹೋಹೋ ಮದುವ್ಯಾದ ಹೆಣ್ಣನ್ನ ಮನೆ ತುಂಬಿಸಿ ಬಂದಂಗೆ..!

ಡೋಂಟ್ವರಿ: ಕರೆಕ್ಟ್ ಒಂಥರಾ ಅಂಗೇ ಬಸ್ಯಣ್ಣಾ...!

ಸೀತೆ: ಬೆಂಗ್ಳೂರಾಗೆ ಮಳೆ ಹ್ಯಾಂಗೈತಿ ಡೋಂಟೀ..?

ಡೋಂಟ್ವರಿ: ಏನ್ ಕೇಳ್ತೀಯಾ ಸೀತಕ್ಕಾ.. ನಾನೋದ್ ಮೇಲೆ ಒಂದೇ ಒಂದು ದಿನ ಬಿದ್ದ ಮಳಿಗೆ ಬೆಂಗ್ಳೂರಾಗಿದ್ದ

ಮರ-ಗಿಡ ಎಲ್ಲಾ ಬಿದ್ದು ಆವಾಂತರ ಆಗಿ ಬಿಡ್ತು..!

ಸೋಮ: ಮಳೆ ಬಿದ್ರೆ, ಮರ-ಗಿಡ ಬೀಳ್ತಾವಾ...!!?

ಡೋಂಟ್ವರಿ: ಇಲ್ಲ ಮತ್ತೆ, ಬೆಂಗ್ಳೂರಾಗೇನು ನಮ್ಮೂರಂಗೆ ಹಲಸು-ಹೆಬ್ಬಲಸು, ಬೀಟೆ-ತ್ಯಾಗದ ಮರ ಬೆಳೆಸಿರ್ತಾರಾ..?

ಯಾವುದೋ ಗೂಜಿನ ಜಾತಿ ಮರ ರೋಡ್ ಸೈಡಿಗೆ ಹಾಕ್ತಾರೆ, ಸಣ್ಣ ಮಳೆ ಗಾಳೀಗೂ ಧೊಪ್ಪಂತ ಬೀಳ್ತವೆ..!

ಬಸ್ಯ: ಬಿರುಗಾಳಿ, ಸುಂಟ್ರಗಾಳಿ ಬಂದ್ರೆ ಏನ್ಕಥ್ಯೋ..!?

ಡೋಂಟ್ವರಿ: ಡೋಂಟ್ವರಿ ಬಸ್ಯಣ್ಣಾ ಅಂಗೆಲ್ಲಾದ್ರೂ ಆದ್ರೆ ಮನೆಗಳೇ ಮುರಿದು ಬೀಳ್ತವೆ..!

ಸಣ್ಣೀರ: ಮೊನ್ನೆ ಮಳೀಗೆ ಒಬ್ಬ ಹುಡುಗ ತೇಲೋದ್ನಂತೆ...!?

ಡೋಂಟ್ವರಿ: ತೇಲಿ ಅಲ್ಲ. ಚರಂಡ್ಯಾಗೆ ಕೊಚ್ಕೊಂಡೇ ಹೋದ..!

ರತ್ನಿ: ಅದ್ಯಂಗೇ...!? ದೊಡ್ಡು ಹುಡುಗ್ನಾ..?

ಡೋಂಟ್ವರಿ: ದೊಡ್ಡವ್ನೇ ರತ್ನಕ್ಕಾ.. ನಮ್ಮ ಬಸ್ಯಾನ ಕಿರೇ ಹುಡುಗುನಂಗಿದ್ದ..!

ಸೀತೆ: ಪಾ.....

ಬೀರ: ಯಾರಾದ್ರೂ ದೊಡ್ಡೋರು ಉಳುಸಾಕಾಗುಲ್ವಾ...!?

ಡೋಂಟ್ವರಿ: ಅದ್ಯಾಂಗೆ ಉಳುಸ್ತಾರೆ ಚಿಗಪ್ಪಾ...? ಬೆಂಗ್ಳೂರು ಚರಂಡಿ ಅಂದ್ರೆ ನಮ್ಮೂರ ಚರಂಡಿ ತರ ಅಂತ

ಮಾಡಿದ್ಯಾ ..? ಮಳೆ ಇಲ್ದಾಗ್ಲೇ ಒಂದೊಂದು ಮೋರಿ ನಮ್ಮ ಸಂಗಳ ಹೊಳೆ ಹರ್ದಾಂಗೆ ಹರಿತಾವೆ..! ಇನ್ನು ಮಳೆ

ಬಂದ್ರೆ ನೀನೇ ಯೋಚ್ನೇ ಮಾಡು...!?

ಸೋಮ: ಹೋಗ್ಲಿ ಹುಡುಗುನ ಹೆಣನಾದ್ರೂ ಸಿಕ್ತಾ...?

ಡೋಂಟ್ವರಿ: ಎಲ್ಲಿ ಸಿಕ್ತೈತಿ ಚಿಗಪ್ಪಾ.. ಕೊಚ್ಕೊಂಡ್ ಹೋದ್ ಮ್ಯಾಲೆ ಹೋತು, ಗೌರ್ಮೆಂಟೋರು, ಮಿಲಿಟ್ರಿಯೋರು

ಎಲ್ರೂ ಹುಡುಕಿ ಹುಡುಕಿ, ಹುಡುಕಿ ಇಟ್ರು. ಎಷ್ಟು ಹುಡುಕಿದ್ರೂ ಸಿಗಲೇ ಇಲ್ಲ...!

ಸೀತೆ: ಪಾಪ ಹೆತ್ತೋರೆಷ್ಟು ಸಂಕ್ಟ ಪಟ್ರೋ...?

ರತ್ನಿ: ಸಂಕ್ಟ ಆಗ್ದೆ ಇರ್ತೈತಾ..? ಹೋದ್ ವರ್ಷ ಆದ್ರೆ ಮಳ್ಯಾಗೆ ನಿಂದೊಂದು ಎಮ್ಮೆಕರ ತೇಲೋಗಿದ್ದುಕ್ಕೇ.. ಎಷ್ಟು

ದಿನ ಅತ್ತಿದ್ದೆ ನೀನು..!?

ಬೀರ: ಏನಂದ್ರೂ, ಪಟ್ಣದ ಜೀವ್ನ ತುಂಬಾ ಕಷ್ಟಪ್ಪಾ...

ಸೋಮ: ಅದ್ಕೆ ಸಣ್ಣೀರ ಎರಡೇ ವರ್ಸಕ್ಕೆ ಓಡಿ ಬಂದಿರಾದು...

ಸಣ್ಣೀರ: ಸೋಮಣ್ಣಾ ನಾನೇನು ಪಟ್ಣಕ್ ಹೆದ್ರಿ ವಾಪಸ್ ಬಂದವನಲ್ಲ...

ಡೋಂಟ್ವರಿ: ಡೋಂಟ್ವರಿ ಸಣ್ಣೀರಾ... ಇಟ್ ಈಜ್ ಕಾಮನ್.... ರತ್ನಕ್ಕಾ ಬೇಗ ಚಾ ಕೊಡು... ಇವ್ರುನ್ನ ಹೀಗೇ ಬಿಟ್ರೆ

ಬಿಜೆಪಿ
ಲೀಡ್ರ್ ತರಾ ಕಿತ್ತಾಡ್ತಾರೆ......!!!





-ದಾರಿಹೋಕ

1 comment:

yashavanth said...

ಹಾಯ್.... ದಾರಿಹೋಕ.....
ನಿನ್ನ ಪ್ರಯತ್ನ ಚೆನ್ನಾಗಿದೆ.....
ಆದರೆ ಈ ಪ್ರಾಕಾರದ ಬರಹಗಳಲ್ಲಿ ವ್ಯವಸ್ಥೆಯ ವಿಡಂಬನೆ,ವ್ಯಂಗ್ಯ ಮತ್ತು ಹಾಸ್ಯಗಳೇ ಪ್ರಧಾನ ಪಾತ್ರವಹಿಸುತ್ತವೆ....... ಮಿಕ್ಕವೆಲ್ಲಾ ನಂತರದ್ದು... ಸಂಭಾಷಣೆಯಲ್ಲಿ ಚುರುಕುತನ,ಮೊನಚು ಮತ್ತು ವಿಷಯದ ಹರವಿನ ಬಗ್ಗೆ ಗಮನ ಹರಿಸು......

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago