ಪ್ರವಾಸ ಕಥನ

ಪ್ರಿಯರೇ...
ನಮಗೆ ಕಳೆದತಿಂಗಳು ಅಂದರೆ ಮಾರ್ಚ್ 16 ರಿಂದ 21ರವರೆಗೆ ಕರ್ನಾಟಕ ಸರ್ಕಾರ ಸಚಿವಾಲಯ ತರಬೇತಿ ಸಂಸ್ಥೆಯ ವತಿಯಿಂದ 'ನ್ಯಾಯಾಲಯ ಪ್ರಕರಣಗಳು' ಎಂಬ ವಿಷಯದ ಬಗ್ಗೆ ತರಬೇತಿ ಏರ್ಪಡಿಸಲಾಗಿತ್ತು. ತರಬೇತಿಯಲ್ಲಿ ಹಿರಿಯ ಸಹಾಯಕರು, ಸಹಾಯಕರು, ಕಿರಿಯ ಸಹಾಯಕರು ಭಾಗವಹಿಸಿದ್ದರು.ಅವರಲ್ಲಿ 2007ರ ಬ್ಯಾಚಿನ ನಮ್ಮ ಕಿರಿಯಸಹಾಯಕರ ಸಂಖ್ಯೆಯೇ ದೊಡ್ಡದಿತ್ತು. ನಮ್ಮ ಒತ್ತಾಯದ ಮೇರೆಗೆ ತರಬೇತಿಯ ಕೊನೆಯ ದಿನ ಮಾರ್ಚ್ 21 ಶನಿವಾರ ಮತ್ತು 2
2 ರ ಭಾನುವಾರ ದಂದು ಎರಡು ದಿನದ
ಪ್ರವಾಸ ಏರ್ಪಾಟಾಗಿತ್ತು. ಪೂರ್ವನಿಯೋಜನೆಯಂತೆ ಬೆಂಗಳೂರಿನಿಂದ ಮಡಿಕೇರಿಯವರೆಗೆ ನಮ್ಮ ಪ್ರವಾಸ ಯಾನ ಸಾಗಿತು. ಈ ಬಗ್ಗೆ ನನ್ನದೇ ಶೈಲಿಯಲ್ಲಿ ನಮ್ಮ
ವೇದಿಕೆಯಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ನಾವು ಪ್ರವಾಸಕ್ಕೆ ಅಣಿಯಾಗಿ ಹೊರಟಾಗ ಮಧ್ಯಾಹ್ನವಾಗಿತ್ತು. ಬೆಳಗಿನ ಸಮಯದ ತರಬೇತಿಯನ್ನು ಮುಗಿಸಿ ಪ್ರವಾಸಕ್ಕೆ ಅಣಿಯಾಗಿದ್ದೆವು. 75 ಪ್ರಶಿಕ್ಷಣಾರ್ಥಿಗಳಲ್ಲಿ ಪ್ರವಾಸಕ್ಕೆ ಹೊರಟವರು 37 ಜನ ಇತರ ಅಥಿತಿಗಳನ್ನೂ ಸೇರಿ ಒಟ್ಟು 42 ಮಂದಿ ಬಸ್ಸನ್ನೇರಿದೆವು. ಪ್ರವಾಸಾರ್ಥಿಯೊಬ್ಬರ 26ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಿಹಿ ತಿನ್ನುವುದರೊಂದಿಗೆ ನಮ್ಮ ಪ್ರವಾಸದ ಸವಿಪಯಣ ಪ್ರಾರಂಭವಾಯಿತು. ಜೊತೆಗೆ ಪ್ರವಾಸಾರ್ಥಿಗಳ ಮಂಗಳಕರ ಭಕ್ತಿಗೀತೆಗಳನ್ನಾಲಿಸುತ್ತಾ ಹೊರಟ ನಾವು ಬೆಂಗಳೂರಿನ ಪ್ರಸಿದ್ದ ಘಾಳಿ ಆಂಜನೇಯ ದೇವಸ್ಥಾನದಲ್ಲಿ ಪೂಜೆಯನ್ನು ಮುಗಿಸಿಕೊಂಡು ಮುಂದುವರೆದೆವು. ಬೆಂಗಳೂರಿನ ಧೂಳು, ಹೊಗೆ ಮಿಶ್ರಿತ ವಾಹನ ದಟ್ಟಣೆಯಿಂದ ತಪ್ಪಿಸಿಕೊಂಡು ಮದ್ದೂರು ಕಡೆ ಹೊರಟಾಗಲೇ ಬಾನ ಮೇಲ್ಗಡೆಯಿಂದ ಸೂರ್ಯನಿಳಿಯಲಾರಂಭಿಸಿದ್ದ. ಒಂದೆಡೆ ಬಸ್ಸಿನ ಕಿಟಕಿಗಳಿಂದ ಬಿಸಿಗಾಳಿ ತೂರಿಬರುತ್ತಿದ್ದರೆ, ಒಳಗೆ ಇಂಪಾದ, ತಂಪಾದ ಹಾಡುಗಳೂ, ಅಂತ್ಯಾಕ್ಷರಿ ಸ್ಪರ್ಧೆಯ ಬಿರುಸು ಸ್ವರಗಳೂ ಕೇಳಿ ಬರುತ್ತಿದ್ದವು.
ಮದ್ದೂರು ತಾಲ್ಲೂಕು ಕಛೇರಿ ಭೇಟಿ ::

ಮದ್ದೂರು ತಾಲ್ಲೂಕು ಕಛೇರಿಗೆ ಹೋಗುವಷ್ಠರಲ್ಲಾಗಲೇ ಸಂಜೆಯಾಗಿತ್ತು. ನಾವು ಹೋದ ಸಮಯದಲ್ಲಿ ಅಲ್ಲಿನ ತಹಶೀಲ್ದಾರರು ಇರಲಿಲ್ಲ. ಹಾಗೆಯೇ ಕೆಲವು ನೌಕರರ ಖುರ್ಚಿಗಳೂ ಸಹ ಖಾಲಿಯಾಗಿದ್ದವು. ಇದ್ದವರಲ್ಲಿ ಶಿರಸ್ತೇದಾರ್ ಶೇಖರ್ ಎಂಬುವವರು ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ನಮಗೆ ಕೆಲವು ಮಾಹಿತಿಗಳನ್ನು ನೀಡಿದರು. ನಂತರ ಎಲ್ಲಾ ಶಾಖೆಗಳ ಅಂದರೆ ಖಜಾನೆ ಶಾಖೆ, ಭೂ ದಾಖಲೆಗಳ ಗಣಕೀಕೃತ ವ್ಯವಸ್ಥೆಯ 'ಭೂಮಿ' ಶಾಖೆ, ಮುಜರಾಯಿ ಶಾಖೆಗಳನ್ನೆಲ್ಲಾ ತೋರಿಸಿ ಅಲ್ಲಿನ ಪ್ರಮುಖರಿಂದ ಮಾಹಿತಿ ಕೊಡಿಸಿದರು. ತಾಲ್ಲೂಕು ಕಛೇರಿ ಭೇಟಿಯೇನೋ ಚೆನ್ನಾಗಿತ್ತು ಆದರೆ ಇಡೀ ಕಛೇರಿಯೇ ಅವ್ಯವಸ್ಥೆಯ ಆಗರವಾಗಿತ್ತು. ಎಲ್ಲಾಕಡೆ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಈ ಬಗ್ಗೆ ಶೇಖರ್ ರವರೇ
ಹೇಳಿದ್ದೆಂದರೆ ಕಛೇರಿಯಲ್ಲಿ ದಿನವೊಂದಕ್ಕೆ ಸಾವಿರಕ್ಕಿಂತ ಹೆಚ್ಚು ಟಪಾಲುಗಳನ್ನು ಸ್ವೀಕ
ರಿಸಲಾಗುತ್ತದೆಯಂತೆ, ಆದರೆ ಅವನ್ನು ಎಂಟ್ರಿ ಮಾಡಲು ರಿಜಿಸ್ಟರ್ಗೂ, ಮುಂದಿನಕ್ರಮ ತೆಗೆದುಕೊಳ್ಳಲು ನೋಟ್ ಶೀಟ್, ಫೈಲ್ ವ್ರ್ಯಾಪರ್ ಗಳಿಗೂ ಅಭಾವವಿದೆಯಂತೆ. ಇದನ್ನೆ
ಲ್ಲಾ ಕೇಳಿದಾಗ ಬೆಂಗಳೂರಿನ ನಮ್ಮ ವಿಧಾನ ಸೌಧಕ್ಕೂ, ಮದ್ದೂರಿನ ಮಿನಿ ವಿಧಾನ ಸೌಧಕ್ಕೂ
ಎಷ್ಟೊಂದು ಅಜಗಜಾಂತರ
ವ್ಯತ್ಯಾಸವಿದೆಯಲ್ಲಾ ಅನಿಸಿತು. ಸಮಯದ ಅಭಾವದಿಂದ ತಾಲ್ಲೂಕು ಕಛೇರಿಯ ಭೇಟಿಯನ್ನು ಅವಸರದಲ್ಲೇ ಮುಗಿಸಿ ಶ್ರೀರಂಗ ಪಟ್ಟಣದೆಡೆ ಪಯಣ ಬೆಳೆಸಿದೆ
ವು. ಅಷ್ಟೇನೂ ವಾಹನ ಸಂಚಾರವಿಲ್ಲದ ಹಾಗಂತ ತುಂಬಾ ಪ್ರಶಾಂತವೂ ಆಗಿರದ ರಸ್ತೆಯಲ್ಲಿ ಸಾಗುತ್ತಿತ್ತು ನಮ್ಮ ವಾಹನ. ಬಸ್ಸು ಚಾಲಕನ ಅಣ
ತಿಯಂತೆ ಶ್ರೀರಂಗಪಟ್ಟಣದ ಕಡೆ ಸಾಗುತ್ತಿದ್ದರೆ ಬಸ್ಸಿನೊಳಗೆ ಪ್ರವಾಸಾರ್ಥಿಗಳ ಜೀವನಾನುಭವಗಳ ಮಾತು 'ಅನುಭವ ಮಂಟಪ'ದಲ್ಲಿ ತೆರೆದುಕೊಳ್ಳುತ್ತಿತ್ತು
.
ಅನುಭವ ಮಂಟಪ ::

ಪ್ರವಾಸದ ಸಮಯದಲ್ಲಿ ಏಕತಾನತೆಯನ್ನು ಕಾಪಾಡಿಕೊಳ್ಳಲು ಹಾಡು ಅಂತ್ಯಾಕ್ಷರಿಗಳನ್ನು ಹೇಳಿಸುವಂತೆಯೇ, ಇಲ್ಲಿ ಪ್ರತಿಯೊಬ್ಬರ ಜೀವನಾನುಭವಗಳನ್ನು ಹಂಚಿಕೊಳ್ಳಲು ಆಯೋಜಿಸಿದ ಪರಿಕಲ್ಪನೆಯೇ ಅನುಭವ ಮಂಟಪ. ಇಲ್ಲಿ ಎಲ್ಲರೂ ತಾವು ಇದುವರೆವಿಗೂ ಪಟ್ಟ ಪಾಡನ್ನು, ಬಯಸಿಯೋ ಬಯಸದೆಯೋ ಸಚಿವಾಲಯಕ್ಕೆ ಆಯ್ಕೆಯಾದ ಪರಿಯನ್ನು, ಮುಂದೆ ಸಾಧಿಸಲಿರುವ ಗುರಿಯನ್ನು ತಮ್ಮದೇ ಧಾಟಿಯಲ್ಲಿ ಹಂಚಿಕೊಂಡರು. ನಡು-ನಡುವೆ ರಮೇಶ್ ಸಾರ್ ರವರ ನಿರೂಪಣೆ ಮುಂದಿನವರ ಅನುಭವ ಕೇಳಲು ಅನುವುಮಾಡಿಕೊಡುತ್ತಿತ್ತು. ಎಲ್ಲರ ಅನುಭವಗಳನ್ನು ಕೇಳುವಾಗ ಅನಿಸಿದ್ದು, ನಮ್ಮಲ್ಲಿ ಬಹುತೇಕರು ಕರ್ನಾಟಕದ ಕುಗ್ರಾಮವೊಂದರ ರೈತ ಕುಟುಂಬದಿಂದ ಬಂದವರು. ಸಚಿವಾಲಯ ಎಂದರೇನೆಂದು ಗೊತ್ತಿರದಿದ್ದಾಗಲೇ ಸಚಿವಾಲಯಕ್ಕೆ ಆಯ್ಕೆಯಾಗಿ ವಿಧಾನ ಸೌಧದ ಮೆಟ್ಟಿಲು ಹತ್ತಿದ ಅದೃಷ್ಟವಂತರು.! ಬಯಸದೆ ಭಾಗ್ಯ ಪಡೆದ ಭಾಗ್ಯವಂತರು.!! ನಮ್ಮ ಜೀವನವೇ ಹೀಗೆ ಯಾವುದೂ ನಮ್ಮ ನಿಯಂತ್ರಣಕ್ಕೆ ಸಿಗಲಾರದು ಎಲ್ಲವೂ ಕಾಣದ ವಿಧಿಯ ಅಣತಿಯಂತೆಯೇ ನಡೆಯಬೇಕು. ಈ ಸಂದರ್ಭ
ದಲ್ಲಿ ನನಗೆ ನಮ್ಮ ರಾಷ್ಟ್ರಕವಿ ಕುವೆಂಪುರವರ ಜೀವನದ ಒಂದು ಘಟನೆ ನೆನಪಾಯ್ತು. ಅವರಿದನ್ನು ತಮ್ಮ 'ನೆನಪಿನ ದೋಣಿ'ಯಲ್ಲಿ ದಾಖಲಿಸುತ್ತಾರೆ. ಕುವೆಂಪು ಚಿಕ್ಕವರಿದ್ದಾಗ, ಸುಮಾರು ಆರೇಳು ವರ್ಷದ ಬಾಲಕನಾಗಿದ್ದಾಗ ಒಮ್ಮೆ ಒಂದು ಬಾಳೆಯ ಹಣ್ಣನ್ನು ತಿನ್ನುತ್ತಾ ಹೋಗುತ್ತಿರುತ್ತಾರೆ. ಹಣ್ಣು ತಿಂದಾದ ಮೇಲೆ ಸಿಪ್ಪೆಯನ್ನು ಆಟಿಕೆಯ ಬುದ್ದಿಯಲ್ಲಿ
ಒಂದೆಡೆ ಎಸೆಯುತ್ತಾರೆ. ಅದು ಒಂದು ಪೊದೆಯ ತಳದಲ್ಲಿ ಬೀಳುತ್ತದೆ. ಸ್ವಲ್ಪದೂರ ಹೋದಮೇಲೆ ಆ ಸಿಪ್ಪೆ ಅದರಿಷ್ಟದಂತೆ ಅಲ್ಲೇಕೆ ಬೀಳಬೇಕು..? ನನ್ನಿಷ್ಟದಂತೆ ಬೇರೆಡೆ ಬೀಳಲಿ ಎಂದು ಅದನ್ನು ಎತ್ತಿ ಇನ್ನೊಂದು ಕಡೆ ಎಸೆಯುತ್ತಾರೆ. ಮತ್ತೆ ಓಹೋ ಇಲ್ಲೇ ಬೀಳಬೇಕೆಂಬುದು ಅದರಿಚ್ಚೆಯಾಗಿತ್ತೇನೋ ಅನಿಸುತ್ತದೆ. ಮತ್ತೆ ಇನ್ನೊಂದೆಡೆ ಎಸೆಯುತ್ತಾರೆ. ಹೀಗೆ ಪ್ರತಿ ಬಾರಿ ಒಂದೊಂದೆಡೆ ಎಸೆದಾಗಲೂ ಇದು ಇಲ್ಲೇ ಬೀಳಬೇಕೆಂಬುದು ಪೂರ್ವ ನಿಯೋಜಿತವಾಗಿತ್ತೇನೋ ಅನಿಸುತ್ತದೆ. ಈ ಗೊಂದಲದಲ್ಲೇ ಅಳುತ್ತಾ ಹೋಗುತ್ತಾರೆ. ಇಲ್ಲಿ ಯಾವುದೂ ನಮ್ಮ ಹತೋಟಿಯಲ್ಲಿಲ್ಲ ಪ್ರತಿಯೊಂದೂ ವಿಧಿಲಿಖಿತ ಎನಿಸುತ್ತದೆ. ಆದಿಕವಿ ಪಂಪ ಹೇಳಿದಂತೆ "ಲೋಕದೋಳ್ ವಿಧಿಲಿಖಿತಮಂ ಮೀರಿದಪರುಂಟೇ..?"ಹೀಗೆ ಕೆಲವರ ಅನುಭವ ಹಂಚಿಕೆ ನಡೆಯುತ್ತಿದ್ದಂತೆ ನಮ್ಮ ವಾಹನ
ಶ್ರೀರಂಗಪಟ್ಟಣಕ್ಕೆ ಬಂದು ತಲುಪಿತ್ತು.
ಶ್ರೀರಂಗಪಟ್ಟಣ ಭೇಟಿ ::
ಕರ್ನಾಟಕದ ಹೆಮ್ಮೆಯ ದೊರೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಯ ಕಾಲದ ಐತಿಹಾಸಿಕ ಮಹತ್ವದ ಪಟ್ಟಣವಿದು ಶ್ರೀರಂಗ ಪಟ್ಟಣ. ಸುತ್ತಲೂ ಕೋಟೆ ಕೊತ್ತಲಗಳಿಂದ ಆವೃತವಾದ ಸುಂದರ ತಾಣ. ಸಮಯದ ಅಭಾವದಿಂದ ಇಲ್ಲಿ ನಮಗೆ ಬೇರೇನನ್ನು ನೋಡಲು ಸಾಧ್ಯವಾಗ ದಿದ್ದರೂ ಆದಿರಂಗನಾಥ ಸ್ವಾಮಿ ದೇವಾಲಯವನ್ನು
ನೋಡುವ ಭಾಗ್ಯ ದೊರೆಯಿತು. ಮೈಸೂರು ಸಂಸ್ಥಾನಗಳ್ಲಲಿ ಕಾವೇರಿ ನದಿಯಿಂದುಂಟಾದ ದ್ವೀಪ ಭಾಗಗಳಲ್ಲಿ ಸ್ಥಾಪಿತವಾದ ಮೂರು ದೇವಾಲಯಗಳಲ್ಲಿ ಆದಿರಂಗನಾಥ ಸ್ವಾಮಿ ದೇವಾಲಯವೂ ಒಂದು. ಸಂಪೂರ್ಣ ಕಲ್ಲಿನಿಂದಲೇ ಕಟ್ಟಲ್ಪಟ್ಟ ದೇವಾಲಯದಲ್ಲಿ ರಂಗನಾಥ ಸ್ವಾಮಿಯೊಂದಿಗೆ ರಂಗನಾಯಕಿ ದೇವಿಯವರ ಗರ್ಭಗುಡಿಗಳೂ ಇವೆ. ಈ ದೇವಸ್ಥಾನದಲ್ಲೆಲ್ಲಾ ಪ್ರದಕ್ಷಿಣೆ ಹಾಕಿ ಅದಾಗಲೇ ಮುಸ್ಸಂಜೆಯಾಗುತ್ತಾ ಬಂದಿದ್ದರಿಂದ ಅವಸರದಿಂದಲೇ ಮೈಸೂರಿನ ಕೃಷ್ಣರಾಜ ಸಾಗರದ ಕಡೆ ಪ್ರಯಾಣ ಬೆಳೆಸಿದೆವು. ಯಥಾ ಪ್ರಕಾರ ಅನುಭವಮಂಟಪದ ಮುಂದುವರಿಕೆ ಸಾಗಿತು. ಹೊರಗೆ ಬಾನಂಚಿನಲಿ ಕೆಂಪು ಪ್ರಭೆಯೊಂದಿಗೆ ಸೂರ್ಯ ಜಾರುತ್ತಿದ್ದ, ರಸ್ತೆಯಂಚಿನ ಬೀದಿ ದೀಪಗಳು ಶೃಂಗಾರಗೊಳ್ಳುತ್ತಿದ್ದವು..

ಕೆ.ಆರ್.ಎಸ್. ಭೇಟಿ ::

ನಾವು ಹೋಗುವಷ್ಟರಲ್ಲಾಗಲೇ ತುಂಬಾ ಕತ್ತಲೆಯಾಗಿದ್ದರಿಂದ ಕೆ.ಆರ್.ಎಸ್. ಅಣೆಕಟ್ಟೆಯ ಮನೋಹರ ದೃಶ್ಯ, ಅಗಾಧ ಜಲರಾಶಿಯನ್ನು ನೋಡಲಾಗಲಿಲ್ಲ. ಆದರೂ ಬಣ್ಣಬಣ್ಣದ ವಿದ್ಯುದೀಪದ ಬೆಳಕಿನಲ್ಲಿ ಸಂಗೀತದ ಲಯಕ್ಕೆ ತಕ್ಕಂತೆ ಕುಣಿಯುವ ನೃತ್ಯ ಕಾರಂಜಿಯನ್ನು ನೋಡಲು ಸಾಧ್ಯವಾಯಿತು.
ಜಾತ್ರೆಯೋಪಾದಿಯ ಜನ ಜಂಗುಳಿ ಇದ್ದರೂ ವಾತಾವರಣ ಆಹ್ಲಾದಕರವಾಗಿತ್ತು. ಸುಮಾರು ಏಳು ಅಡಿ ಎತ್ತರದ ಮನುಷ್ಯನೊಬ್ಬ ಮಕ್ಕಳನ್ನೊಳಗೊಂಡಂತೆ ಹಿರಿಯರಿಗೂ ಕುತೂಹಲ ಮತ್ತು ಆಕರ್ಷಣೆಯ ಕೇಂದ್ರವಾಗಿದ್ದ. ಚಂದ್ರನಿಲ್ಲದ ರಾತ್ರಿಯಲ್ಲಿ ಕತ್ತಲೆ ದಟ್ಟವಾಗುತ್ತಿದ್ದರಿಂದ ಮತ್ತು ಸಮಯ ಮೀರುತ್ತಿದ್ದುದರಿಂದ ಊಟದ ಹೋಟೆಲ್ ಗಾಗಿ ತಲಾಶ್ ಮಾಡಿ, ನಂತರ ಊಟ ಮುಗಿಸಿ ಮಡಿಕೇರಿಯ ಕಡೆ ಪ್ರಯಾಣ ಬೆಳೆಸಿದೆವು. ಬಸ್ಸಿನ ಲಯಬದ್ದ ಶಬ್ದವನ್ನನುಸರಿಸಿ ಕೆಲವರು ನಿದ್ರೆಗೆ ಜಾರುತ್ತಿದ್ದರೆ, ಕೆಲವರು ಬಸ್ಸಿನಲ್ಲಿನ ದೂರದರ್ಶನದಲ್ಲಿ ಬರುತ್ತಿದ್ದ 'ಮುಸ್ಸಂಜೆ ಮಾತು' ಚಲನಚಿತ್ರ ನೋಡುತ್ತಿದ್ದರು.

ಹೊರಗಿನ ತಂಪಾದ ಗಾಳಿ ಬಸ್ಸಿನ ವೇಗಕ್ಕನುಗುಣವಾಗಿ ಒಳ ನುಗ್ಗುತ್ತಿತ್ತು. ಮೋಡ ಮುಸುಕಿದ ಗಗನ ಪರದೆಯಲ್ಲಿ ನಕ್ಷತ್ರಗಳಾವುವೂ ಕಾಣುತ್ತಿರಲಿಲ್ಲ. ರಸ್ತೆಯಂಚಿನಲ್ಲಿ ದೂರ ದೂರವಾಗುತ್ತಿದ್ದ ಬೀದಿ ದೀಪಗಳು ನಕ್ಷತ್ರಗಳಂತೆಯೇ ಕಾಣುತ್ತಿದ್ದವು. ಕಗ್ಗತ್ತಲ ರಾತ್ರಿಯಲ್ಲಿಯೂ ಕಾಫಿಯ ಹೂಗಳ ಘಮಲು ವಾಸನೆ ಮೂಗಿಗೆ ರಾಚುತ್ತಿದ್ದಂತೆ, ನಮ್ಮನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಎತ್ತರದ ಕಡಿದಾದ ಜಾಗದಲ್ಲಿ ವಿಶಿಷ್ಟ ಶಬ್ದದೊಂದಿಗೆ ಚಲಿಸುತ್ತಿದ್ದಂತೆ ನಾವು ಮಡಿಕೇರಿಯನ್ನು ಸಮೀಪಿಸಿರಬೇಕೆಂಬ ಅನುಭವವಾಯಿತು. ಮಧ್ಯರಾತ್ರಿಯ ಮಡಿಕೇರಿ ಮಡಿಕೇರಿಯ ರಾಜಾಸೀಟ್

ಬಳಿ ನಮ್ಮ ಬಸ್ಸು ಬಂದು ನಿಂತಾಗ ಮಧ್ಯರಾತ್ರಿಯ ಸಮಯವಾಗಿತ್ತು. ಆ ಕಗ್ಗತ್ತಲ ರಾತ್ರಿಯಲ್ಲಿ ಬೆಟ್ಟದ ತುದಿಯಿಂದ ಕೆಳಗೆ ಕಣ್ಣಾಯಿಸಿದಾಗ ಆಧುನಿಕ ಮಾನವನ ಕುರುಹನ್ನು ತೋರಲೋ ಎಂಬಂತೆ ಬೆಳಗುತ್ತಿದ್ದ ಕೆಂಪು, ಬಿಳಿ ಬಣ್ಣದ ಬೀದಿ ದೀಪಗಳು ಆಕರ್ಷಕವಾಗಿ ಕಾಣುತ್ತಿದ್ದವು. ಬೆಂಗಳೂರಿನ ಯುಟಿಲಿಟಿ ಬಿಂಲ್ಡಿಂಗ್ ಮೇಲೋ, ವಿಶ್ವೇಶ್ವರಯ್ಯ ಗೋಪುರದ ತುತ್ತ ತುದಿಯಲ್ಲೋ ನಿಂತು ಮಧ್ಯರಾತ್ರಿಯಲ್ಲಿ ಬೆಂಗಳೂರನ್ನು ನೋಡಿದಾಗ ಹೇಗೆ ಕಾಣಬಹುದೋ ಅದಕ್ಕಿಂತಲೂ ಮನೋಹರವಾಗಿ ಕಾಣುತ್ತಿತ್ತು ಮಡಿಕೇರಿ. ಮಲೆನಾಡಿನಲ್ಲಿ ಬಿದಿರುವ ಮೆಳೆಗೆ ಮುತ್ತಿಗೆ ಹಾಕುವ ಮಿಂಚುಹುಳುಗಳಂತೆ ಮಡಿಕೇರಿಯ ದಟ್ಟ ಕಾನನದ ನಡುವೆ ಬೆಳಗುತ್ತಿದ್ದ ಬೀದಿದೀಪಗಳು ಕಾಣುತ್ತಿದ್ದವು.
ನಾವು ಮಡಿಕೇರಿಯ ಅಥಿತಿ ಗೃಹವೊಂದರಲ್ಲಿ ಉಳಿದ ರಾತ್ರಿಯನ್ನು ಕಳೆದೆವು.
ಮಡಿಕೇರೀಲಿ ಮಂಜು ::

ಬೆಳಿಗ್ಗೆ ಬೇಗನೆದ್ದು ಪ್ರಾತಃರ್ವಿಧಿಗಳನ್ನು ಮುಗಿಸಿ ಹೊರಗಿನ ಪ್ರಕೃತಿಯನ್ನೊಮ್ಮೆ ನೋಡಿದಾಗ ಮನಸ್ಸು ಪ್ರಫುಲ್ಲವಾಯಿತು. ಮಡಿಕೇರಿಯೆಂಬ ಮಡಿಕೇರಿಯ ದಟ್ಟ ಸಸ್ಯರಾಶಿಯ ಗುಡ್ಡ ಬೆಟ್ಟಗಳೆಲ್ಲಾ ಮಂಜಿನ ನದಿಯಲ್ಲಿ ಮುಳುಗಿವೆಯೋ ಅಥವಾ ಗಿರಿ ಕಂದರಗಳಲ್ಲಿ ಹಿಮದ ನದಿ ಹರಿಯುತ್ತಿದಿಯೋ ಎಂಬಂತೆ ಕಾಣುತ್ತಿತ್ತು. ಈ ಸಮಯದಲ್ಲಿ ಮಡಿಕೇರಿ ದಕ್ಷಿಣದ ಕಾಶ್ಮೀರವೇ ಸರಿ. ಅತ್ತ ಪೂರ್ವದಲ್ಲಿ ಹೊಂಗಿರಣದ ನೇಸರನುದಯಿಸುತ್ತಿದ್ದಂತೆ ಹಿಮದ ದಟ್ಟಣೆ ಕರಗಲಾರಂಭಿಸಿತಾದರೂ ಸಸ್ಯ ಶಾಮಲೆಗೆ ಬಿಳಿಯಾದ ತೆಳು ಹತ್ತಿಯ ಬಟ್ಟೆಯನ್ನು ಹೊದೆಸಿರುವಂತೆ ಕಾಣಿಸುತ್ತಿತ್ತು. ನಾವು ಉಳಿದುಕೊಂಡಿದ್ದ ಅಥಿತಿಗೃಹದ ಮಹಡಿಯ ಮೇಲೆ ಪ್ರಕೃತಿ ವೀಕ್ಷಣೆಗೆ ಸ್ಥಳಾವಕಾಶವಿದ್ದುದರಿಂದ ಅಲ್ಲಿಯೇ ಪ್ರಕೃತಿ ಸೊಬಗನ್ನು ಮನದಣಿಯೆ ನೋಡಿ ಆನಂದಿಸಿದೆವು. ಎಷ್ಟು ನೋಡಿದರೂ ಬೇಸರವೆನಿಸದ ಪ್ರಕೃತಿ ಸೌಂದರ್ಯಕ್ಕೆ ನಮ್ಮ ಮನ ಸೋತಿತು. ಸ್ವರ್ಣ ವರ್ಣದ ದಿನಕರ ಬೆಳ್ಳಿಯ ರಂಗಿಗೆ ಬದಲಾಗುತ್ತಾ ಬಂದಂತೆ ಮಡಿಕೇರಿಯ ಮಂಜಿನ ಸೆರಗು ಸರಿಯಲಾರಂಭಿಸಿತು. ನಾವು ತಲಕಾವೇರಿಗೆ ಹೋಗುವ ಸಲುವಾಗಿ ಮಡಿಕೇರಿಯಲ್ಲೇ ಉಪಹಾರ ಮುಗಿಸಿಕೊಂಡು ಬಸ್ಸನ್ನೇರಿದೆವು.
ತಲಕಾವೇರಿ ಭೇಟಿ ::
ಮಡಿಕೇರಿಯಿಂದ ಮುಂದುವರೆದು ತಲಕಾವೇರಿ, ಭಾಗಮಂಡಲದೆಡೆ ನಮ್ಮ ವಾಹನ ದಟ್ಟಕಾಡಿನ ಹಾವಿನಾಕಾರದ ಅಂಕು-ಡೊಂಕು ರಸ್ತೆಯಲ್ಲಿ ಸಾಗುತ್ತಿದ್ದರೆ, ಹೊರಗೆ ಎತ್ತರೆತ್ತರದ ಮರಗಳ ಬುಡದಲ್ಲಿ ಪುಟ್ಟ ಪುಟ್ಟ ಕಾಫಿಗಿಡಗಳು ಮಲ್ಲಿಗೆಯೋಪಾದಿಯ ಬಿಳಿ ಹೂಗಳೊಂದಿಗೆ ತಮ್ಮದೇ ಆದ ವಾಸನೆ ಬೀರುತ್ತಾ ಕಂಗೊಳಿಸುತ್ತಿದ್ದುದು ಸಾಮಾನ್ಯವಾಗಿತ್ತು. ಇತ್ತ ಬಸ್ಸಿನೊಳಗೆ ಸಿನಿಮಾ ಹಾಡಿಗೆ 'ಸ್ಟೆಪ್ಸ್' ಹಾಕುತ್ತಾ ನಮ್ಮ ಯುವಪಡೆ ಸಂತೋಷಿಸುತಿತ್ತು. ನಾವು ತಲಕಾವೇರಿಯನ್ನು ತಲುಪುವಷ್ಟರಲ್ಲಾಗಲೇ ಸೂರ್ಯನ ಪ್ರಖರತೆ ಹೆಚ್ಚಾಗಿತ್ತಾದರೂ ಅಲ್ಲಿನ ಹಿತವಾದ ವಾತಾವರಣದಿಂದಾಗಿ ಸುಡುವ ಬಿಸಿಲಿನ ಅನುಭವವಾಗುತ್ತಿರಲಿಲ್ಲ. ಗಿರಿಯಂಚಿನಿಂದ ನುಸುಳಿ ಬರುತ್ತಿದ್ದ ಮಂದಗಾಳಿ ಸೂರ್ಯನ ಅಟ್ಟಹಾಸಕ್ಕೆ ಅಡಚಣೆಯಾಗಿತ್ತು. ತಲಕಾವೇರಿಯಲ್ಲಿ ಕನ್ನಡ ನಾಡಿನ ವರನದಿ ಕಾವೇರಿಯ ಉಗಮ ಸ್ಥಾನವನ್ನು ನೋಡಿದೆವು. ಕಾವೇರಿಯ ಕಪ್ಪು ನೀರಿನಲ್ಲಿ ಎಲ್ಲರೂ ಮುಖತೊಳೆದರು. ಕೆಲವರು ಪಕ್ಕದಲ್ಲೇ ಇದ್ದ ಬೃಹತ್ ಎತ್ತರದ ಬ್ರಹ್ಮಗಿರಿ ಬೆಟ್ಟವನ್ನೇರಿದರು. ಕಾವೇರಿಯ ಉಗಮ ಸ್ಥಾನದಲ್ಲಿ ನಿಂತು ಸುತ್ತಲೂ ಕಣ್ಣಾಯಿಸಿದಾಗ
ಸೂರ್ಯನ ಶಾಖಕ್ಕೆ ಗಿರಿಕಾನನದ ಸಸ್ಯರಾಶಿಯೆಲ್ಲಾ ಒಮ್ಮೆಲೇ ಬಾಷ್ಪವಿಸರ್ಜಸುವ ದೃಶ್ಯವಿರಬಹುದೇನೋ ಅದು ಬಿಸಿ ನೀರು ಕುದ್ದಾಗ ಹಬೆಯಾಡುವ ನೀರಾವಿಯಂತೆ ಕಾಣುತ್ತಿತ್ತು..! ದೂರದ ಬೆಟ್ಟಗಳು ಮಸುಕು ಮಸುಕಾಗಿ ಕಾಣುತಿದ್ದವು.

ಭಾಗಮಂಡಲ ವೀಕ್ಷಣೆ ::
ತಲಕಾವೇರಿಯಿಂದ ಬೀಳ್ಕೊಂಡು ವಾಪಸ್ಸು ಭಾಗಮಂಡಲಕ್ಕೆ ಬಂದೆವು. ಅಲ್ಲಿನ ಭಗಂಡೇಶ್ವರ ದೇವಾಲಯಕ್ಕೆ ಬಂದಾಗ ಆಗತಾನೇ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಚಂಡೆ-ಜಾಗಟೆಗಳ ಕಿವಿಗಡಚಿಕ್ಕುವ ಧ್ವನಿ ನಿರಂತರವಾಗಿ ಕೇಳುತ್ತಿತ್ತು. ಜಿಂಕೆಯ ಕೊಂಬಿಗೆ ಚಂಡೆ-ಮದ್ದಳೆಗಳನ್ನು ನೇತು ಹಾಕಿ ಲಯಬದ್ದವಾಗಿ ಬಾರಿಸುತ್ತಿದ್ದುದು ನಮ್ಮ ಪಟ್ಟಣದ ದೇವಾಲಯಗಳಲ್ಲಿ ಎಲೆಕ್ಟ್ರಾನಿಕ್ ವಾದ್ಯಗಳು ಬಾರಿಸುವ ಧ್ವನಿಗಿಂತ ವಿಭಿನ್ನವಾಗಿ ಕೇಳಿಸುತಿತ್ತು. ಅಲ್ಲಿ ಪೂಜೆಯನ್ನು ಮುಗಿಸಿ ವಿಶಾಲ ವರಾಂಡದ ದೇವಾಸ್ಥಾನದಲ್ಲಿ ಸುತ್ತಾಡಿ, ಮಳೆಗಾಲದಲ್ಲಿ ಭಾಗಮಂಡಲವನ್ನು ಇಬ್ಬಾಗ ಮಾಡುವ ಕಾವೇರಿಯನ್ನು ನೋಡಿ ಪುನಃ ಮಡಿಕೇರಿಯತ್ತ ಪ್ರಯಾಣ ಬೆಳೆಸಿದೆವು. ಮಡಿಕೇರಿಯಲ್ಲಿ ಮಧ್ಯಾಹ್ನದ ಊಟ ಮುಗಿಸಿ ಕುಶಾಲನಗರದ ಕಡೆ ನಮ್ಮ ಪ್ರಯಾಣ ಬೆಳೆಸಿದೆವು. ಕುಶಾಲನಗರದ ನಿಸರ್ಗಧಾಮ ನೋಡುವುದು ನಮ್ಮ ಉದ್ದೇಶವಾಗಿತ್ತು.
ನಿಸರ್ಗಧಾಮದ ಕಡೆಗೆ ::
ಆಕಾಶದ ತುಂಬೆಲ್ಲಾ ಕಪ್ಪು ಮೋಡಗಳು ದಟ್ಟೈಸಿ ಮಳೆಬರುವ ಸೂಚನೆ ನೀಡುತ್ತಿದ್ದವು. ಮಾರ್ಗ ಮಧ್ಯದಲ್ಲೆಲ್ಲಾ ದೊಡ್ಡ ದೊಡ್ಡ ಕಾಫಿ ಎಸ್ಟೇಟುಗಳೇ ಕಾಣುತ್ತಿದ್ದವು. ಹಲಸು, ಮಾವು, ನಂದಿ, ಮೊದಲಾದ ಕಾಡು ಮರಗಳ ಬುಡದಲ್ಲೆಲ್ಲಾ ಕಾಫಿಗಿಡಗಳದ್ದೇ ಕಾರುಬಾರು.ನಡುನಡುವೆ ಎತ್ತರದ ಮರಕ್ಕೆ ಸುತ್ತಲೂ ಹಬ್ಬಿನಿಂತ ಎಲೆಬಳ್ಳಿಗಳೂ ಇದ್ದವು. ನಿಸರ್ಗಧಾಮದಲ್ಲಿ ಬಸ್ಸಿಳಿಯುವಷ್ಟರಲ್ಲಾಗಲೇ ತಟತಟ ಮಳೆಹನಿಗಳು ಜಿನುಗಲಾರಂಭಿಸಿದವು. ಆದರೆ ತೊಯ್ದೋಗುವಂತಹ ಮಳೆ ಬರಲಿಲ್ಲ. ನಿಸರ್ಗಧಾಮದ ತೂಗು ಸೇತುವೆ ದಾಟಿ ಒಳ ಹೊಕ್ಕಾಗ ಕಂಡಿದ್ದು ಬಿದಿರು ಮೆಳೆಗಳು. ಎಲ್ಲಿ ನೋಡಿದರಲ್ಲಿ, ಕಣ್ಣು ಹಾಯಿಸಿದಲ್ಲೆಲ್ಲಾ ಬಿದಿರೋ ಬಿದಿರು. ಈಗತಾನೇ ಎಲೆ ಉದುರಿಸಿ ವಸಂತನಿಗಾಗಿ ಎದುರು ನೊಡುತ್ತಾ ನಿಂತ ಬಿದಿರು ಮೆಳೆಗಳ ಮೇಲೆ ಅಲ್ಲಲ್ಲಿ ಕುಟೀರಗಳನ್ನು ಕಟ್ಟಿದ್ದರು. ಪ್ರವಾಸಿಗಳ ವೀಕ್ಷಣೆಗೆ ಒಂದು ಆನೆ, ಹಲವು ಜಿಂಕೆಗಳೂ ಅಲ್ಲಿದ್ದವು. ಮಾನವರ ಭಯವೇ ಇಲ್ಲದೆ ಜಿಂಕೆಗಳು ಕೊಟ್ಟ ಆಹಾರ ತಿನ್ನಲು ಕೈಬಳಿ ಬರುತ್ತಿದ್ದವು. ಇನ್ನೊಂದೆಡೆ ತರಹೇವಾರಿ ಬಣ್ಣದ ಮೊಲಗಳೂ ಕುಪ್ಪಳಿಸುತ್ತಿದ್ದವು. ಎಲ್ಲವೂ ಮಾನವನ ವೀಕ್ಷಣೆಗಾಗಿ ಬಂಧಿಯಾಗಿದ್ದವು. ತೂಗುಸೇತುವೆ ಕೆಳಗೆ ಕಾವೇರಿ ನದಿಯಲ್ಲಿ ಸಾವಿರಾರು ಮೀನುಗಳು ನಿಶಬ್ದವಾಗಿ ಈಜುತ್ತಿದ್ದವು. ಅವುಗಳಿಗೂ ಮಾನವರ ಭಯವಿರಲಿಲ್ಲ. ನಿಸರ್ಗಧಾಮದ ನಂತರ ನಮ್ಮ ಪ್ರಯಾಣ ಸಾಗಿದ್ದು ಬೌದ್ದರ ಸ್ವರ್ಣಮಂದಿರವಿರುವ ಬೈಲುಕುಪ್ಪೆಗೆ.

ಬೈಲುಕುಪ್ಪೆಯಲ್ಲಿ ::
ಅಲ್ಲಿಗೆ ಬಂದಿಳಿಯುತ್ತಿದ್ದಂತೆ ಆಶ್ಚರ್ಯವಾಯಿತು. ನಾವು ಯಾವುದೋ ನಮ್ಮದಲ್ಲದ ದೇಶಕ್ಕೆ ಬಂದಿದ್ದೇವಾ ಎಂದು. ಎತ್ತ ನೋಡಿದರತ್ತ ಬೌದ್ಧ ಬಿಕ್ಕುಗಳೇ ಕಾಣುತ್ತಿದ್ದರು. ಅವರದೇ ಭಾಷೆ, ಅವರದೇ ವೇಷಭೂಷಣ ಅಲ್ಲಿ ಒಬ್ಬನೇ ಒಬ್ಬ ಕನ್ನಡಿಗನನ್ನು ಅಥವಾ ಕನ್ನಡ ಬಲ್ಲವನನ್ನು ಕಾಣುವುದು ಕಷ್ಟವಾಯಿತು. ಕೆಲವೇ ದಶಕಗಳ ಹಿಂದೆ ನಿರಾಶ್ರಿತರಾಗಿ ಬಂದ ಬೌದ್ಧರು ಇಲ್ಲಿ ತಮ್ಮದೇ ಸಾಮ್ರಾಜ್ಯ ಬೆಳೆಸಿ, ಪ್ರಪಂಚದ ಗಮನ ಸೆಳೆವ ಬೃಹತ್ ಬೌದ್ದ ಮಂದಿರಗಳನ್ನು ಕಟ್ಟಿದ್ದಾದರೂ ಹೇಗೆ ಎಂಬುದೇ ಯಕ್ಷಪ್ರಶ್ನೆ. ಬಂಗಾರ ವರ್ಣದ ಬೌದ್ಧ ಮಂದಿರಗಳನ್ನು ತುಂಬಾ ನಾಜೂಕಾಗಿಯೇ ಕಟ್ಟಿದ್ದಾರೆ. ಪ್ರತಿ ಮಂದಿರದ ಗೋಡೆಯಮೇಲೂ ಬೌದ್ಧ ಧರ್ಮದ ಬಗ್ಗೆ ಸಾರುವ ಕಥೆ ಪುರಾಣಗಳ ವರ್ಣ ಚಿತ್ರಗಳನ್ನೆ ಚಿತ್ರಿಸಿದ್ದಾರೆ. ಎಲ್ಲವೂ ಅವರ ಭಾಷೆಯಲ್ಲೇ. ಭಾಷೆ ಬಾರದ ನಮಗೆ ಮಕ್ಕಳಂತೆ ಚಿತ್ರ ನೋಡುವುದಷ್ಟೇ ಕೆಲಸ. ಕೇಳಿ ತಿಳಿಯೋಣವೆಂದರೆ ನಮಗರ್ಥವಾಗುವಂತೆ ತಿಳಿಸುವ ಕನ್ನಡ ಬಲ್ಲ ಬೌದ್ಧರು ಯಾರೂ ಇರಲಿಲ್ಲ. ಮೂರ್ನಾಲ್ಕು ದಶಕಗಳ ಹಿಂದೆಯೇ ಕರ್ನಾಟಕಕ್ಕೆ ನಿರಾಶ್ರಿತರಾಗಿ ಬಂದ ಬೌದ್ದರು ಇಲ್ಲಿನ ನೀರು, ಗಾಳಿ, ಇನ್ನಿತರ ಸೌಲತ್ತನ್ನು ಬಳಸಿಕೊಂಡು ಬೆಳೆದರೇ ವಿನಃ ಇಲ್ಲಿನ ಭಾಷೆ ಬಳಸಲಿಲ್ಲ. ಆದ್ದರಿಂದಲೇ ಇಂದಿಲ್ಲಿ ಕನ್ನಡವೆಂಬುದು ಸಜೀವ ಶವವಾಗಿದೆ..!
ಇಲ್ಲಿನ ಹೋಟೇಲೊಂದಕ್ಕೆ (ಅವರದೇ ಹೋಟೇಲು ಮಾಣಿ ಮಾತ್ರ ಕನ್ನಡಿಗ) ಹೋದಾಗ ವಿಚಿತ್ರವೆನಿಸಿತು. ಅಲ್ಲಿ ಬೌದ್ಧರನೇಕರು ಮಾಂಸ ಭಕ್ಷಣೆ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು..! ಪ್ರಪಂಚಕ್ಕೇ ಅಹಿಂಸೆಯನ್ನು ಸಾರಿದ ಬುದ್ದನ ಅನುಯಾಯಿಗಳು ಮಾಂಸ ತಿನ್ನುವುದಾ..!? ಇವರು ನಿಜವಾದ ಬೌದ್ದರಾ? ಎಂಬ ಅನುಮಾನದ ಪ್ರಶ್ನೆ ಮನಕ್ಕೆ ಹೊಕ್ಕಿತು. ಇಂತಹ ನಾನಾ ಪ್ರಶ್ನೆಗಳೊಡನೆ ಬಸ್ಸನ್ನೇರಿದೆವು. ಬಾನಂಚಿನಲ್ಲಿ ದಿನದ ಕಾರ್ಯವ ಮುಗಿಸಿದ ದಿನಕರ ಹೊರಡಲನುವಾಗಿದ್ದ. ನಾವೂ ನಾಳೆಯ ಕರ್ತವ್ಯವನ್ನೇಲ್ಲಾ ನೆನೆದು ಬೈಲುಕುಪ್ಪೆ ಎಂಬ 'ಪರದೇಶ'ದಿಂದ ಬಿಡುಗಡೆಗೊಂಡು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದೆವು. ಬಸ್ಸಿನಲ್ಲಿ ಬಹುದೂರದ ವರೆಗೆ ಬೈಲುಕುಪ್ಪೆ ಬಗ್ಗೆ, ಅಲ್ಲಿನ ಬೌದ್ದರ ಬಗ್ಗೆ ನಾನಾ ಮುಖದ ಚರ್ಚೆಯಾಯಿತು..

ಪರಶು..,
ಸಿಆಸುಇ (ಆಡಳಿತ-ಸಿ)
1 comment:
ಪರಶು... ನಿನ್ನ ಪ್ರಯತ್ನ ಮೆಚ್ಚಬೇಕು... ತುಂಬಾ ವಿವರವಾಗಿ ಬರದಿದ್ದೀಯ.... ನಿನ್ನ ರಸಾಯನ ತಿಳಿ ಸಾರಿನ ಹಾಗಿದೆ... ನಂ ಹುಡ್ಗರ ಕೀಟಲೇ... ಪ್ರವಾಸದ ದಿನದಲ್ಲಿ ಘಟಿಸಿದ ಕೋಟಲೆಗಳೆಂಬ ಮಸಾಲೆ ಸೇರಿಸಿದ್ರೆ... ಇನ್ನೂ ಚೆನ್ನಾಗಿರೋದು...
ಕೆಲವೇ
ದಶಕಗಳ ಹಿಂದೆ ನಿರಾಶ್ರಿತರಾಗಿ ಬಂದ ಬೌದ್ಧರು ಇಲ್ಲಿ ಬೌದ್ಧರು ಅಂತ ಬಳಸೋದಿಕ್ಕಿಂತ ಟಿಬೆಟಿಯನ್ನರು ಅಂತ ಬಳಸಿದ್ರೆ ಸೂಕ್ತ ಅನ್ನಿಸ್ತು....
ಸೂಕ್ಷ್ಮವನ್ನು ಗ್ರಹಿಸುತ್ತೀಯ ಅಂತ ಭಾವಿಸುವೆ...ಬೌದ್ಧ ಧರ್ಮದಲ್ಲಿ ಮಾಂಸಾಹಾರ ನಿಷಿದ್ಧವಲ್ಲ..... ಪರಿಸರದ ಸರಳ ನಿಯಮಗಳ ಆಧಾರದಲ್ಲೇ ಬುದ್ಧನ ತತ್ತ್ವಗಳಿರುವುದು... ಬುದ್ಧನ ಪ್ರಿಯ ಆಹಾರ 'ಜಿಂಕೆ ಮಾಂಸ'...
ಕನ್ನಡವೆಂಬುದು ಸಜೀವ ಶವವಾಗಿದೆ..!
ನಮಗೆ ಅಸಮಧಾನ ಅಷ್ಟೇ ಸಾಲದು... ಪರಿಹಾರದ ಬಗ್ಗೆ ಚಿಂತಿಸೋಣ...
ನಿನ್ನ ಪ್ರಯತ್ನಕ್ಕೆ ಮತ್ತೊಮ್ಮೆ ಅಭಿನಂದನೆಗಳು.....
Post a Comment